ತುಮಕೂರು:
ಕಳೆದ ಒಂದು ವರ್ಷದಿಂದ ವಿದ್ಯುತ್ ಹೆಚ್ಚು ಪ್ರವಹಿಸುತ್ತಾ ಮನೆಯ ಎಲೆಕ್ಟ್ರಿಕ್ ಉಪಕರಣಗಳು ಹಾನಿಯಾಗುತ್ತಿರುವ ಪ್ರಸಂಗ ಚಿಕ್ಕಪೇಟೆಯ ಗಾರ್ಡನ್ ರಸ್ತೆಯ ಸುತ್ತಮುತ್ತ ವರದಿಯಾಗಿದೆ.
ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದಿಂದ ಮಾರುತಿ ಸರ್ಕಲ್‍ವರೆಗಿನ ಸುತ್ತಮುತ್ತ ಮನೆಗಳವರು ಇದರಿಂದ ತೀವ್ರ ರೋಸಿ ಹೋಗಿದ್ದಾರೆ. ಆ ಭಾಗದಲ್ಲಿರುವ ವಿದ್ಯುತ್ ಪರಿವರ್ತಕವು ಈ ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಸ್ಫೋಟಗೊಂಡಿದೆ. ಇದನ್ನು ಸರಿಪಡಿಸುವ ಗೋಜಿಗೆ ವಿದ್ಯುತ್ ಇಲಾಖೆ ಹೋಗದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚಿನ 6 ತಿಂಗಳ ಅವಧಿಯಲ್ಲಿ ವಿದ್ಯುತ್ ಹೆಚ್ಚು ಪ್ರವಹಿಸಿ ಸುಮಾರು ಮನೆಗಳ ಟಿವಿಗಳು ಹಾಳಾಗಿವೆ. ಫ್ರಿಜ್‍ಗಳು ಕೆಟ್ಟು ಹೋಗಿವೆ. ಮೀಟರ್ ಬೋರ್ಡ್‍ಗಳು ಸುಟ್ಟು ಹೋಗಿವೆ. ಯಾವಾಗಲೊ ಒಮ್ಮೆ ದಿಢೀರ್ ಹೆಚ್ಚು ವಿದ್ಯುತ್ ಪ್ರವಹಿಸುವ ಪರಿಣಾಮ ಈ ರೀತಿಯ ಅವಘಡಗಳು ಉಂಟಾಗುತ್ತಿದ್ದು, ಜನತೆ ಭಯಭೀತರಾಗಿದ್ದಾರೆ.
ಸ್ಥಳೀಯ ಮುಖಂಡರು ಈ ಸಮಸ್ಯೆಗಳನ್ನು ವಿನಾಯಕ ನಗರದಲ್ಲಿರುವ ಬೆಸ್ಕಾಂ ಶಾಖಾ ಕಚೇರಿಗೆ ವರದಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಲ್ಲಿ ಹೋಗಿ ಸಮಸ್ಯೆ ಹೇಳಿಕೊಂಡರೆ ಲೈನ್‍ಮನ್ ನಂಬರ್ ಕೊಡುತ್ತಾರೆ. ಅವರು ಸ್ಥಳಕ್ಕೆ ಬರುವುದಿಲ್ಲ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಸುತ್ತಾಡಿಸುತ್ತಾರೆ. ಸಾರ್ವಜನಿಕರ ಉಪಯೋಗದ ಕೆಲಸ ಕಾರ್ಯಗಳನ್ನು ಈ ರೀತಿ ನಿರ್ಲಕ್ಷಿಸಿದರೆ ಹೇಗೆ ಎನ್ನುತ್ತಾರೆ ಅಲ್ಲಿನ ಸಾರ್ವಜನಿಕರು.
ಈ ಬಗ್ಗೆ ‘ಪ್ರಜಾಪ್ರಗತಿ’ ಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ರಾಜಕುಮಾರ್ ಅವರು ನನ್ನದೇ ಮನೆಯಲ್ಲಿ ಎರಡು ಬಾರಿ ಮೀಟರ್ ಬೋರ್ಡ್ ಸುಟ್ಟು ಹೋಗಿದೆ. ಒಂದು ವರ್ಷದಲ್ಲಿ ನನಗೆ ಒಂದು ಲಕ್ಷ ರೂ.ಗಳಷು ಹಾನಿಯಾಗಿದೆ. ಮನೆಯ ಸಿಸಿ ಕ್ಯಾಮರಾಗಳು, ಟಿವಿ, ಫ್ರಿಜ್ ಸುಟ್ಟು ಹೋಗಿವೆ. ನಮ್ಮ ಒಂದೇ ಮನೆಯಲ್ಲ ಇತರೆ ಮನೆಗಳಿಗೂ ಇದೇ ರೀತಿಯ ಹಾನಿಯಾಗಿದೆ. ಅಧಿಕಾರಿಗಳಿಗೆ ಹೇಳಿದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಟ್ರಾನ್ಸ್‍ಫಾರ್ಮರ್ ಮೂರು ಬಾರಿ ಸುಟ್ಟು ಹೋಗಿದ್ದು, ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿಲ್ಲ. ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಇದೊಂದೇ ಪ್ರದೇಶವಲ್ಲ, ತುಮಕೂರಿನ ಬಹಳಷ್ಟು ಕಡೆ ಇಂತಹ ಅವಘಡಗಳು ಸಂಭವಿಸಿದಾಗ ಇಲಾಖೆಯವರು ಕೂಡಲೇ ಸ್ಪಂದಿಸಬೇಕು. ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ಗಮನ ಹರಿಸಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಒಂದು ಲಕ್ಷ ರೂ. ಹಾನಿ
ಕಳೆದ 6 ತಿಂಗಳ ಅವಧಿಯಲ್ಲಿ ನನ್ನ ಮನೆಯಲ್ಲಿ ಎರಡು ಬಾರಿ ಹೆಚ್ಚು ವಿದ್ಯುತ್ ಪ್ರವಹಿಸಿ ಒಂದು ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ಸಿಸಿ ಟಿವಿ, ಫ್ರಿಜ್, ಟಿವಿ, ಮೀಟರ್ ಬೊರ್ಡ್ ಸುಟ್ಟು ಹೋಗಿವೆ. ಪದೆ ಪದೆ ಹೀಗೆ ನಷ್ಟ ಉಂಟಾದರೆ ನಾವು ಏನು ಮಾಡಬೇಕು? ಇಲಾಖೆಯ ಅಧಿಕಾರಿಗಳ ಬಳಿ ಹೋಗಿ ಸಮಸ್ಯೆ ಹೇಳಿಕೊಂಡರೆ ಯಾರಿಗೋ ಹೇಳುತ್ತಾರೆ. ಅವರು ಬರುವುದೇ ಇಲ್ಲ. ಇಷ್ಟೊಂದು ನಿರ್ಲಕ್ಷ್ಯ ಏಕೆ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಜಕುಮಾರ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ