ತುಮಕೂರು : ಪಿಯುಸಿ ಪರೀಕ್ಷೆ ಇಲ್ಲದೆ ಶೇ.100 ಫಲಿತಾಂಶ!

 ತುಮಕೂರು : 

      ಕೋವಿಡ್ ಹಿನ್ನೆಲೆಯಲ್ಲಿ 2020-21ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದರಿಂದ ಅವರ ಹಿಂದಿನ ಶೈಕ್ಷಣಿಕ ಸಾಧನೆಗಳನ್ನು ಆಧರಿಸಿ ಫಲಿತಾಂಶ ಘೋಷಿಸಿದ್ದು,ಜಿಲ್ಲೆಯ 24,029 ಹೊಸ ವಿದ್ಯಾರ್ಥಿಗಳು, 3336 ಪುನರಾವರ್ತಿತರು ತೇರ್ಗಡೆ ಹೊಂದಿ, ಪದವಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

      ತುಮಕೂರಿನ ವಿದ್ಯಾವಾಹಿನಿ, ವಿದ್ಯಾನಿಕೇತನ, ಮಾಸ್ಟರ್ಸ್ ಪಿಯು ಕಾಲೇಜು, ಸರ್ವೋದಯ, ಸಪ್ತಗಿರಿ, ಶಾರದಾಂಬ, ಶ್ರೀ ಚೈತನ್ಯ ಟೆಕ್ನೊ, ವಿದ್ಯಾನಿಧಿ, ಸಿದ್ಧಗಂಗಾ ಮಹಿಳಾ, ದೀಕ್ಷಾ, ವಿಜಯ, ವಿದ್ಯೋದಯ, ಸಿರಾ ಪ್ರೆಸೆಡಿನ್ಸಿ, ಕುಣಿಗಲ್‍ನ ಅರವಿಂದ್ ಪಿ.ಯು ಕಾಲೇಜು ಸೇರಿ ಹಲವು ಕಾಲೇಜಿನ ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ.

      ಎಸ್ಸೆಸ್ಸೆಲ್ಸಿ,ಪ್ರಥಮ ಪಿಯುಸಿ ಹಾಗೂ ಶೈಕ್ಷಣಿಕ ಚಟುವಟಿಕೆಗೆ ನೀಡಿದ ಅಂಕಗಳ ಆಧಾರದಲ್ಲಿ ಫಲಿತಾಂಶ ನಿರ್ಣಯ ಮಾಡಿ ಪರೀಕ್ಷೆಗೆ ಅರ್ಹರಾಗಿದ್ದ 24029 ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದು, ಇವರಲ್ಲಿ 13247 ಬಾಲಕರು, 14118 ಬಾಲಕಿಯರು ಹಾಗೂ 3336 ಪುನರಾವರ್ತಿತ ಅಭ್ಯರ್ಥಿಗಳು ಸೇರಿದ್ದಾರೆ.

      ಕಲಾ ವಿಭಾಗದ 5894 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ 10469 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದ 7666 ವಿದ್ಯಾರ್ಥಿಗಳು ಉತ್ತೀರ್ಣತೆ ಹೊಂದಿದ್ದು, ನಗರ ಭಾಗದ 18112, ಗ್ರಾಮಾಂತರದ 5917 ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಪದವಿಗೆ ಪ್ರವೇಶ ಪಡೆಯುವ ಅವಕಾಶ ಪಡೆದಿದ್ದಾರೆಎಂದು ಪಿಯು ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ತಿಳಿಸಿದ್ದಾರೆ.

 ಫಲಿತಾಂಶ ಒಪ್ಪಿತವಾಗದವರು, ಖಾಸಗಿಯವರಿಗೆ ಆಗಸ್ಟ್ ನಲ್ಲಿ ಪರೀಕ್ಷೆ:

      ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳೂ ಆಗಸ್ಟ್‍ನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯೂಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಈ ವರ್ಷ ದ್ವಿತೀಯ ಪಿಯೂಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಆಗಸ್ಟ್ 19 ರಿಂದ ಸೆ.3ರವರೆಗೆ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ. ಹೊಸಬರು, ಪುನರಾವರ್ತಿತರಿಗೆಗೆ ಪರೀಕ್ಷೆಗೆ ನೊಂದಾಯಿಸಲು ಜು.30 ಕಡೇ ದಿನ. ಖಾಸಗಿಯವರು ಮತ್ತೆ ನೊಂದಾವಣಿ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

ಮೊಬೈಲ್ ಸಂಖ್ಯೆಗೆ ಫಲಿತಾಂಶ ರವಾನೆ:

      ಸಚಿವರು ಫಲಿತಾಂಶ ಘೋಷಿಸಲು ಆರಂಭಿಸುತ್ತಿದ್ದಂತೆಯೇ ಪಿಯು ಮಂಡಳಿಯ ಸ್ಯಾಟ್ಸ್ ಪೋರ್ಟಲ್‍ನಲ್ಲಿ ನೋಂದಾಯಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಅವರ ನೋಂದಾಯಿತ ದೂರವಾಣಿ ಸಂಖ್ಯೆಗೆ ಫಲಿತಾಂಶಗಳು ರವಾನೆಯಾದವು.

ವಿಶೇಷಚೇತನರ ಸಾಧನೆ:

1428 ವಿಕಲಚೇತನ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 84 ಮಂದಿ ಉನ್ನತ ಶ್ರೇಣಿ, 603 ಪ್ರಥಮ ಶ್ರೇಣಿ, 459 ಮಂದಿ ದ್ವಿತೀಯ ಶ್ರೇಣಿ ಮತ್ತು 310 ಮಂದಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ನೋಂದಾಯಿಸದವರಿಗೂ ಮತ್ತೆ ಅವಕಾಶ:

      ಈ ಬಾರಿಯ ದ್ವಿತೀಯ ಪಿಯೂಸಿ ತರಗತಿಗಳಿಗೆ ನೋಂದಾಯಿಸಿದ್ದರೂ ಪಿಯೂಸಿ ಪರೀಕ್ಷೆಗೆ ನೋಂದಾಯಿಸದೇ ಇದ್ದ 762 ಮಕ್ಕಳು ಆಗಸ್ಟ್‍ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡು ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಫಲಿತಾಂಶದ ಪ್ರಮುಖಾಂಶಗಳು:

 * ಜಿಲ್ಲೆಯ ಪರೀಕ್ಷೆಗೆ ನೋಂದಾಯಿಸಿದ 27365 ಮಂದಿ ತೇರ್ಗಡೆ
* ಫಲಿತಾಂಶ ಒಪ್ಪದವರು, ಖಾಸಗಿಯವರಿಗೆ ಆಗಸ್ಟ್‍ನಲ್ಲಿ ವಾರ್ಷಿಕ ಪರೀಕ್ಷೆ
* ಎಸ್ಸೆಸ್ಸೆಲ್ಸಿ,ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟ
* 600ಕ್ಕೆ 600 ಅಂಕ ಪಡೆದವರ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಟಾಪ್, ಯಾದಗಿರಿಗೆ ಕಡೆಯಸ್ಥಾನ.
* ಪುನರಾವರ್ತಿತ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯದೆ ತೇರ್ಗಡೆ ಭಾಗ್ಯ.

      ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಪಿಯೂಸಿ ಉತ್ತೀರ್ಣರಾಗುವ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಪದವಿ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲು ಕಾಲೇಜು ಶಿಕ್ಷಣ ಇಲಾಖೆ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳಿಗೆ ಅವಕಾಶ ಕಲ್ಪಿಸಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ ಅವರೂ ಸಹ ಭರವಸೆ ನೀಡಿದ್ದಾರೆ.

-ಎಸ್.ಸುರೇಶ್‍ಕುಮಾರ್, ಶಿಕ್ಷಣ ಸಚಿವರು.

      ಎಸ್ಸೆಸ್ಸೆಲ್ಸಿ ಅಥವಾ ಇತರೆ ಮಂಡಳಿಗಳ 10ನೇ ತರಗತಿಯಲ್ಲಿ ಪಡೆದ ವಿಷಯವಾರು ಅಂಕಗಳಲ್ಲಿ ಶೇ. 45ರಷ್ಟು ಅಂಕಗಳು, ಪ್ರಥಮ ಪಿಯೂಸಿಯಲ್ಲಿ ಪಡೆದಿರುವ ಶೇ. 45ರಷ್ಟು ಅಂಕಗಳು, ದ್ವಿತೀಯ ಪಿಯೂಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚುಟುವಟಿಕೆಗಳಿಗೆ ಶೇ. 10ರಷ್ಟು ಅಂಕಗಳು ಮತ್ತು ಪ್ರಥಮ ಪಿಯೂಸಿಯಲ್ಲಿ ಪಡೆದ ಅಂಕಗಳಿಗೆ ಶೇ. 5 ಅಂಕಗಳನ್ನು ಸಿದ್ಧಪಡಿಸಿ ಫಲಿತಾಂಶವನ್ನು ನಿರ್ಣಯಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ರದ್ದಾದ ಸಂದರ್ಭದಲ್ಲೇಪಾಸ್ ಆಗುತ್ತೇವೆಂದು ತಿಳಿದಿದ್ದರೂ ಪರ್ಸೆಟೆಂಜ್ ಎಷ್ಟು ಬಂದಿದೆ ಎಂಬ ತಿಳಿಯುವ ಕುತೂಹಲ ಇದ್ದೇ ಇತ್ತು. ಮಂಗಳವಾರ ಮೊಬೈಲ್‍ಗೆ ಫಲಿತಾಂಶದ ಮೆಸೇಜ್ ಬಂದ ಕೂಡಲೇ ತಮ್ಮ ಪೋಷಕರು, ಸ್ನೇಹಿತರಿಗೆ ಶೇರ್ ಮಾಡಿ ಖುಷಿ ಪಡುತ್ತಿದ್ದರು. ಫೇಸ್‍ಬುಕ್, ವಾಟ್ಸಪ್ ಸ್ಟೇಟಸ್ ಡಿಪಿಗಳಲ್ಲೂ ರಿಸಲ್ಟ್ ಶೀಟ್‍ಗಳದ್ದೆ ಚಿತ್ರಗಳು ರಾರಾಜಿಸುತ್ತಿದ್ದವು.

600ಕ್ಕೆ 600 ಫಲಿತಾಂಶ ಪಡೆದ ಮಕ್ಕಳು 

      ರಾಜ್ಯದ ಎಲ್ಲ 32 ಶೈಕ್ಷಣಿಕ ಜಿಲ್ಲೆಗಳ ಪೈಕಿ 600ಕ್ಕೆ 600 ಅಂಕಗಳನ್ನು 2239 ಫ್ರೆಶ್ ವಿದ್ಯಾರ್ಥಿಗಳು ದಾಖಲಿಸಿದ್ದು, ಅವರಲ್ಲಿ ತುಮಕೂರಿನ ವಿದ್ಯಾವಾಹಿನಿ ಪ.ಪೂ ಕಾಲೇಜಿನ ಎಚ್.ಕೆ.ಕೃತಿಕಾ, ಎಸ್.ತರುಣ್, ಟಿ. ವಿಕಾಸ್ ಹಾಗೂ ಮಾಸ್ಟರ್ಸ್ ಪಿಯು ಕಾಲೇಜಿನ ಜಾಹ್ವವಿ, ನಿಧಿ.ಎಸ್.ರಾಯ್, ಬಿ.ಎಂ.ರಕ್ಷಿತಾ, ಡಿ.ಎಂ.ಸಂಜನಾ, ಎಚ್.ಎಲ್.ಶ್ವೇತಾ, ವಿ. ಸ್ನೇಹಾ ಇತರರು ಸೇರಿದ್ದಾರೆ.ಜಿಲ್ಲಾವಾರು600ಕ್ಕೆ 600 ಅಂಕ ಪಡೆದವರ ಪೈಕಿ ದಕ್ಷಿಣ ಕನ್ನಡದವರು ಮೊದಲ ಸ್ಥಾನದಲ್ಲಿದ್ದರೆ, ಚಾಮರಾಜನಗರ, ಯಾದಗಿರಿ ಕಡೇ ಸ್ಥಾನದಲ್ಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap