ತುಮಕೂರು : ರೈಲ್ವೇಸ್ಟೇಷನ್ ರಸ್ತೆ ಮಧ್ಯದ ಮರಗಳ ತೆರವಿಗೆ ನಿರ್ಧಾರ

ತುಮಕೂರು : 

      ನಗರದ ರೈಲ್ವೇ ನಿಲ್ದಾಣ-ಉಪ್ಪಾರಹಳ್ಳಿ ಗೇಟ್ ಫ್ಲೈಓವರ್‍ವರೆಗಿನ ರಸ್ತೆಯ ಮಧ್ಯದಲ್ಲಿರುವ ಮರಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಿಸಿ, ಅಭಿವೃದ್ಧಿ ಮಾಡಲು ಸ್ಥಳೀಯ ನಾಗರೀಕ ಮುಖಂಡರ ಒಪ್ಪಿಗೆ ಪಡೆದು ವಿವಿಧ ಇಲಾಖೆ ಅಧಿಕಾರಿಗಳು ತೀರ್ಮಾನ ಮಾಡಿದರು.

      ಬುಧವಾರ ವಿದ್ಯಾನಿಕೇತನ ಶಾಲೆಯಲ್ಲಿ ನಗರಪಾಲಿಕೆ ಆಯುಕ್ತರಾದ ರೇಣುಕಾ, ಸದಸ್ಯೆ ಗಿರಿಜಾ ಧನಿಯಾಕುಮಾರ್, ಸ್ಮಾರ್ಟ್ ಸಿಟಿ ಕಾರ್ಯಪಾಲಕ ಇಂಜಿನಿಯರ್ ಚೆನ್ನವೀರಯ್ಯ ಸೇರಿದಂತೆ ಅರಣ್ಯ ಇಲಾಖೆ, ಪೊಲೀಸ್, ನಗರಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು.

      ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸಿ.ಜಯರಾಮರಾವ್, ವನ್ಯಜೀವಿ ಜಾಗೃತಿ ನಿಸರ್ಗ ಸಮಿತಿ ಸಲಹೆಗಾರ ಟಿ.ವಿ.ಎನ್.ಮೂರ್ತಿ, ಮುಖಂಡರಾದ ಧನಿಯಾಕುಮಾರ್, ದಿನೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಈ ರಸ್ತೆ ಪರಿಸ್ಥಿತಿ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.

      ತುಮಕೂರು ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ರಸ್ತೆಗಳಲ್ಲಿ ಸಂಚಾರ ಒತ್ತಡ ಹೆಚ್ಚಾಗುತ್ತಿದೆ. ಹಾಗೇ ರೈಲ್ವೆನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ರೈಲ್ವೇನಿಲ್ದಾಣ ರಸ್ತೆಯು ಎಸ್.ಎಸ್.ಪುರಂ, ಎಸ್‍ಐಟಿ, ಉಪ್ಪಾರಹಳ್ಳಿ ಸೇರಿದಂತೆ ಐದಾರು ವಾರ್ಡ್‍ಗಳ ಪ್ರದೇಶಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಜೊತೆಗೆ ಈ ರಸ್ತೆಯಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೆ. ಸುಮಾರು ಒಂದು ಸಾವಿರ ಮಕ್ಕಳು ಇರುವ ವಿದ್ಯಾನಿಕೇತನ ಶಾಲೆ ಇದೆ. ವಿದ್ಯಾರ್ಥಿನಿಲಯಗಳಿವೆ. ಇಲ್ಲಿ ನಿತ್ಯ ಸಾರ್ವಜನಿಕ ವಾಹನಗಳು, ಶಾಲಾಕಾಲೇಜುಗಳ ಬಸ್‍ಗಳು ಓಡಾಟವಿರುತ್ತದೆ. ಹಾಲಿ ಈ ರಸ್ತೆ ಕಿರಿದಾಗಿದ್ದು, ಈಗಲೇ ಇಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗುವ ಕಾರಣಕ್ಕೆ ಈ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆ ಇದೆ. ಈ ರಸ್ತೆಯಲ್ಲಿ ನಗರ ಸಾರಿಗೆ ಬಸ್ ಸೇವೆ ಒದಗಿಸಬೇಕಾಗಿರುವುದರಿಂದ ರಸ್ತೆಯನ್ನು ವಿಸ್ತಾರಗೊಳಿಸಬೇಕಾಗ ಅಗತ್ಯವಿದೆ ಎಂದು ಅಧಿಕಾರಿಗಳು ಮುಖಂಡರ ಗಮನಕ್ಕೆ ತಂದರು.

      ಈ ಹಿನ್ನೆಲೆಯಲ್ಲಿ ಈ ರಸ್ತೆಯ ಮಧ್ಯದಲ್ಲಿ ಇರುವ ಮರಗಳನ್ನು ತೆರವು ಮಾಡಿ, ರಸ್ತೆಯನ್ನು ವಿಶಾಲಗೊಳಿಸಬೇಕಾಗಿದೆ ಎಂದು ತಿಳಿಸಿದರು. ಬೆಳೆದ ಮರಗಳನ್ನು ಕಡಿಯುವುದು ಉತ್ತಮ ಬೆಳವಣಿಗೆಯಲ್ಲ. ಆದರೂ, ಸಾರ್ವಜನಿಕ ಉದ್ದೇಶಕ್ಕೆ, ನಾಗರೀಕರ ಅನುಕೂಲದ ದೃಷ್ಟಿಯಿಂದ ಮರಗಳನ್ನು ತೆಗೆಯಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ನಾಗರೀಕ ಮುಖಂಡರು ಸಮ್ಮತಿಸಿದರು. ಮರಗಳ ತೆರವಿಗೆ ಒಪ್ಪಿಗೆ ಸೂಚಿಸಿದರು. ಆದರೆ, ತೆರವು ಮಾಡಿದ ಮರಗಳಿಗೆ ಪರ್ಯಾವಾಗಿ ಗಿಡಗಳನ್ನು ನೆಟ್ಟು ಬೆಳೆಸುವಂತೆ ಸಲಹೆ ಮಾಡಿದರು.

     ಇದಕ್ಕೆ ಒಪ್ಪಿಗೆ ನೀಡಿದ ನಗರ ಪಾಲಿಕೆ ಆಯುಕ್ತರಾದ ರೇಣುಕಾ ಅವರು, 50 ಗಿಡಗಳನ್ನು ನೆಟ್ಟು ಪೋಷಿಸುವ ಭರವಸೆ ನೀಡಿದರು. ಈ ಕಾರ್ಯದಲ್ಲಿ ಆರಣ್ಯ ಇಲಾಖೆಯೂ ಕೈ ಜೋಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap