ತುಮಕೂರು :
ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಅನ್ನು ತಮಗೆ ನೀಡಬೇಕೆಂದು ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿರುವ ಯಲಚವಾಡಿ ನಾಗರಾಜ್ ಅವರು ಹಿಂದೆ ಕಾಂಗ್ರೆಸ್ ಒಕ್ಕಲಿಗ ನಾಯಕರು ಸ್ಪರ್ಧಿಸಿದಾಗ ಅವರ ಪರ ನಿಲ್ಲದೆ ಎಲ್ಲಿ ಹೋಗಿದ್ದರು.
ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿದಾಗ ಏನು ಮಾಡುತ್ತಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಒಕ್ಕಲಿಗ ಮುಖಂಡರಾದ ಕೆ.ಎ.ದೇವರಾಜು, ಬಿ.ಜಿ.ವೆಂಕಟೇಗೌಡ ಟಿ.ಆರ್.ಚಿಕ್ಕರಂಗಣ್ಣ, ಬಲರಾಮರಾಜು ಮತ್ತಿತರರು ಸುದ್ದಿಗೋಷ್ಠಿ ನಡೆಸಿ ಪ್ರಶ್ನಿಸುವ ಜೊತೆಗೆ ಪರಿಷತ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರೂ ಜನಪರ ಕೆಲಸವನ್ನು ಮಾಡುತ್ತಿರುವ ಯುವ ಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ ಅವರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಒಕ್ಕೊರಲ ಆಗ್ರಹ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಯಲು ಸೀಮೆಪ್ರದೇಶಾಭಿವೃದ್ಧಿ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ, ಅತ್ಯಂತ ಕಡಿಮೆ ಮತ ಪಡೆದ ಅಡಿಟರ್ ಯಲಚವಾಡಿ ನಾಗರಾಜು, ನಂತರದ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಕಾಣೆಯಾದರು. ಈಗ ಒಕ್ಕಲಿಗರ ಹೆಸರು ಹೇಳಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿಲ್ಲದವರನ್ನು ಕೂರಿಸಿಕೊಂಡು ವಿಧಾನಪರಿಷತ್ ಟಿಕೇಟ್ ಕೇಳಿದ್ದಾರೆ. ಇದನ್ನು ಖಂಡಿಸುವುದಾಗಿ ತಿಳಿಸಿದರು.
ಒಕ್ಕಲಿಗರಿಗೆ ಕೋಡಬೇಕಿಂದಿದ್ದರೆ, ಹಿರಿಯ ನಾಯಕರಾದ ಟಿ.ಬಿ.ಜಯಚಂದ್ರ ಆರ್ ನಾರಾಯಣ್ ಅವರಿಗೆ ಕೊಡಲಿ. ಅಲ್ಪಸಂಖ್ಯಾತರಾದರೆ ಷಫಿ ಅಹಮದ್, ಡಾ.ರಫೀಕ್ ಅಹಮದ್ ಅವರಿಗೆ ಕೊಡಲಿ. ಯುವಕರಲ್ಲಿ ಆರ್.ರಾಜೇಂದ್ರ ಅವರಿಗೆ ಟಿಕೆಟ್ ನೀಡಿದಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ ಎಂದರು.
ಒಕ್ಕಲಿಗ, ಲಿಂಗಾಯಿತರಿಂದ ಹಿಂದುಳಿದ ಮತಗಳೇ ಹೆಚ್ಚು:
ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಬಿ.ಜಿ.ವೆಂಕಟೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 330 ಗ್ರಾಮಪಂಚಾಯಿತಿಯಿಂದ 1100 ಜನ ಒಕ್ಕಲಿಗ, 600 ಜನ ಲಿಂಗಾಯಿತ, ಪರಿಶಿಷ್ಟ ಜಾತಿ, ವರ್ಗ ಮತ್ತು ಒಬಿಸಿಯಿಂದ 3626 ಮತ್ತು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ 258 ಸೇರಿದಂತೆ ಒಟ್ಟು 5376 ಮತದಾರರಿದ್ದಾರೆ.ಕೇವಲ ಜಾತಿ, ಹಣ ಬಲದಿಂದ ವಿಧಾನಪರಿಷತ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಿರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆರ್.ರಾಜೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಟಿಕೇಟ್ ನೀಡುವುದರಿಂದ ಪಕ್ಷಕ್ಕೆ ಗೆಲುವ ಖಚಿತ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಭರತ್‍ಗೌಡ, ಅಂದಾನಿಗೌಡ, ವಿಜಯಕುಮಾರ್, ರಾಮಲಿಂಗಾರೆಡ್ಡಿ,ತುರುವೇಕೆರೆ ದೇವರಾಜು, ಜಯರಾಂ, ಶಿವರಾಮ್, ದಾನಿಗೌಡ, ಶ್ರೀನಿವಾಸ್, ವೆಂಕಟೇಶ್, ಜಿ.ಎಲ್.ಮೂರ್ತಿ, ಶಿವಕುಮಾರ್, ನಾಗೇಶ್‍ಬಾಬು, ರಾಜಗೋಪಾಲ್, ನಾರಾಯಣಗೌಡ, ರಾಜಕುಮಾರ್, ಕೆಂಚಪ್ಪ, ಸುವರ್ಣಮ್ಮ, ಗಾಯತ್ರಿ ಬಲರಾಮರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಕ್ಷ ಸಂಘಟನೆಗೆ ಕೊಡುಗೆ ಶೂನ್ಯ
ಕಾಂಗ್ರೆಸ್ ಮುಖಂಡ ಟಿ.ಆರ್.ಚಿಕ್ಕರಂಗಣ್ಣ ಮಾತನಾಡಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ನಾಗರಾಜು ಅವರ ಕೊಡುಗೆ ಶೂನ್ಯ ಎಂದ ಅವರು ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸಿದ ಅವರು ಅಲ್ಲಿ ಪಕ್ಷ ಸಂಘಟನೆ ಮಾಡಿಲ್ಲ. ಪಕ್ಷ ನಡೆಸಿದ ಸಭೆಗಳಲ್ಲಿ ಸರಿಯಾಗಿ ಹಾಜರಾಗದ ಇವರು ಕೊರೊನಾ ಮೊದಲನೇ ಎರಡನೇ ಅಲೆಯಲ್ಲೂ ಬಡವರಿಗೆ ಯಾವುದೇ ಸಹಾಯಹಸ್ತ ಚಾಚಲಿಲ್ಲ. ಒಕ್ಕಲಿಗ ಮುಖಂಡರನ್ನು ಎಷ್ಟು ಪ್ರಮಾಣದಲ್ಲಿ ಬೆಳೆಸಿದ್ದಾರೆ. ಕೆ.ಎನ್.ರಾಜಣ್ಣ ಅವರು ಸಹಕಾರಿ, ಸ್ಥಳೀಯ ಸಂಸ್ಥೆಗಳಿಗೆ ಅನೇಕ ಒಕ್ಕಲಿಗ ಮುಖಂಡರಿಗೆ ಅವಕಾಶ ಕಲ್ಪಿಸಿ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಪುತ್ರ ರಾಜೇಂದ್ರ ಅವರು ಕಳೆದ ಬಾರಿ ಅಭ್ಯರ್ಥಿಯಾಗಿದ್ದಷ್ಟೆ ಅಲ್ಲದೆ ಕೋವಿಡ ಮೊದಲ ಅಲೆ, ಎರಡನೇ ಅಲೆ ಎರಡರಲ್ಲೂ ಮಧುಗಿರಿ,ತುಮಕೂರು ಜಿಲ್ಲೆಯ ವಿವಿಧೆಡೆ ಲಕ್ಷಾಂತರ ಮಂದಿಗೆ ಆಹಾರ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಜನರ ನಡುವೆ ಇದ್ದ ಕೆಲಸ ಮಾಡುವವರಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
