ತುಮಕೂರು :
ಕಳೆದ ಆ.24ರಂದು ಹಿರೇಹಳ್ಳಿ ಮಜರೆ ಚೋಟೇಸಾಬರಪಾಳ್ಯದ ಮಹಿಳೆಯೊಬ್ಬರು ಕುರಿಮೇಯಿಸಲು ಹೋದಾಗ ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣ ನಡೆದು ತಿಂಗಳೇ ಕಳೆದಿದ್ದು, ಇನ್ನೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಜಿಲ್ಲಾ ಪೊಲೀಸ್ ಇಲಾಖೆಗೆ ಆರೋಪಿಗಳ ಪತ್ತೆಯೇ ದೊಡ್ಡ ಸವಾಲೆನಿಸಿದ್ದು, ಆರೋಪಿಗಳ ಪತ್ತೆ ವಿಳಂಬದ ಬಗ್ಗೆ ಗ್ರಾಮಾಂತರ ಶಾಸಕರು ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರೂ ಸರಕಾರ ಅವಕಾಶ ನಿರಾಕರಿಸಿ ಗೃಹಸಚಿವರು ತನಿಖೆ ಮಾಹಿತಿಯನ್ನಷ್ಟೇ ನೀಡಿ ಕೈ ತೊಳೆದುಕೊಂಡಿದ್ದಾರೆ.
ಸರಕಾರದ ಈ ನಡೆ ಬಗ್ಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ತ್ವರಿತ ಪತ್ತೆಹಚ್ಚಿರುವ ಪೊಲೀಸರಿಗೆ ತುಮಕೂರಿನ ಪ್ರಕರಣದಲ್ಲೇಕೆ ತಿಂಗಳಾದರೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.
ಈ ಬಗ್ಗೆ ನಾನು ಕಲಾಪ ಆರಂಭವಾಗುವುದಕ್ಕೆ ಮೊದಲೇ ಸೆ.2ರಂದೇ ಚುಕ್ಕೆ ಗುರುತಿನ ಪ್ರಶ್ನೆಯನ್ನು ವಿಧಾನಸಭೆ ಕಾರ್ಯದರ್ಶಿಯವರಿಗೆ ಸಲ್ಲಿಸಿ ಚರ್ಚೆಗೆ ಅವಕಾಶ ಕೋರಿದ್ದಲ್ಲದೆ ಈ ಪ್ರಕರಣಗಳನ್ನು ಭೇದಿಸಲು ಎಷ್ಟು ಕಾಲಾವಕಾಶದ ಅವಶ್ಯಕತೆ ಇದೆ ಎಂದು ಪ್ರಶ್ನಿಸಿದ್ದೆ. ಗೃಹಸಚಿವರು ಸೆ.21ರಂದು ಈ ಬಗ್ಗೆ ಉತ್ತರ ನೀಡುವುದಾಗಿ ನನಗೆ ಮಾಹಿತಿ ನೀಡಲಾಗಿತ್ತು. ಆದರೆ ಬುಧವಾರದ ಕಲಾಪದಲ್ಲಿ ತುಮಕೂರಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ಚರ್ಚೆಗೆ ಅವಕಾಶವನ್ನೇ ನೀಡದೆ, ಕೇವಲ 7 ತಂಡ ರಚಿಸಿ 150 ಜನ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದೇವೆ ಎಂದು ಲಿಖಿತ ಉತ್ತರ ನೀಡಿ ಸರಕಾರ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯ ಪ್ರಕರಣದಲ್ಲಿ ಹಿಂದುಳಿದ ಸಮುದಾಯದ ಮಹಿಳೆಗಾಗಿರುವ ಅನ್ಯಾಯದ ಬಗ್ಗೆ ಆಡಳಿತಾರೂಢ ಜಿಲ್ಲೆಯ ಸಚಿವರು, ಹಿರಿಯ ಶಾಸಕರುಗಳು ಸಹ ಧ್ವನಿ ಎತ್ತದಾಗಿದ್ದಾರೆ ಎಂದು ಬೇಸರಿಸಿದ್ದಾರೆ.
ತುಮಕೂರು ಗ್ರಾಮಾಂತರದಲ್ಲಿ ಹೆಚ್ಚಾದ ಕ್ರೈಂ:
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಶಾಸಕರಿಂದ ಕೇಳಲಾದ ಪ್ರಶ್ನೆಗೂ ಗೃಹ ಸಚಿವರು ಮೂರು ವರ್ಷಗಳ ಅಂಕಿ ಅಂಶ ಸಹಿತ ಉತ್ತರ ಒಗದಿಸಿದ್ದು, ತುಮಕೂರು ಗ್ರಾಮಾಂತರದಲ್ಲಿ ಪ್ರಸ್ತುತ ವರ್ಷವೇ 5 ಕೊಲೆ, 31 ಅಕ್ರಮ ಮದ್ಯ ಮಾರಾಟ, 70 ಜೂಜುಗಾರಿಕೆ, 21 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ. 2020ರಲ್ಲಿ 3 ಕೊಲೆ, 54 ಅಕ್ರಮ ಮದ್ಯ ಮಾರಾಟ, 69 ಜೂಜುಗಾರಿಕೆ, 02 ಅಕ್ರಮ ಮರಳು ಸಾಗಾಣಿಕೆ ಪ್ರಕರಣ ವರದಿಯಾಗಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಹಾರಿಕೆಯ ಉತ್ತರಕ್ಕೆ ಹೋರಾಟದ ಪ್ರತ್ಯುತ್ತರ:
ಗ್ರಾಮಾಂತರ, ಕೋರಾ, ಕ್ಯಾತ್ಸಂದ್ರ ಪೊಲೀಸರ ಅಕ್ರಮ ಚಟುವಟಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ಬಂದಿರುವುದಿಲ್ಲ ಎಂಬ ಮಾಹಿತಿ ನೀಡಿದ್ದು, ಮಹಿಳಾ ದೌರ್ಜನ್ಯಗಳನ್ನು ತಡೆಯಲು ಗ್ರಾಮಸಭೆ ನಡೆಸಿ ಅರಿವು ಮೂಡಿಸಲಾಗುತ್ತಿದೆ.
ಇಆರ್‍ಎಸ್‍ಎಸ್ ವಾಹನಗಸ್ತು, ಚೀತಾಗಸ್ತು ಮಾಡಿಸಲಾಗುತ್ತಿದ್ದು, ಒಂಟಿ ಮನೆಗಳ ವಿವರ ಸಂಗ್ರಹಿಸಿ ಭೀಟ್ ವ್ಯವಸ್ಥೆ ಚುರುಕುಗೊಳಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ. ಗೃಹ ಸಚಿವರ ಈ ಉತ್ತರ ಕೇವಲ ಹಾರಿಕೆಯ ಉತ್ತರವಾಗಿದ್ದು, ಸರಕಾರ, ಪೊಲೀಸ್ ವೈಫಲ್ಯದ ವಿರುದ್ಧ ಜನಹೋರಾಟ ತೀವ್ರಗೊಳಿಸುವ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದು ಶಾಸಕ ಗೌರಿಶಂಕರ್ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ದಿನವೂ ಎಸ್ಪಿ, ಎಎಸ್ಪಿ ಅವರಿಂದ ಮಾಹಿತಿ ಸಂಗ್ರಹವಂತೆ!
ಗೃಹ ಸಚಿವರು ಶಾಸಕರಿಗೆ ಒದಗಿಸಿರುವ ಮಾಹಿತಿಯಲ್ಲಿ ಮಹಿಳಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಐವರು ಸಿಪಿಐ, ಐವರು ಪಿಎಸ್‍ಐ, 20ಕ್ಕೂ ಹೆಚ್ಚು ಮಂದಿ ಎಎಸ್‍ಐ, ಸಿಬ್ಬಂದಿಯನ್ನೊಳಗೊಂಡು 7 ತಂಡ ರಚಿಸಿ ನಿರ್ಧಿಷ್ಟ ಜವಾಬ್ದಾರಿ ವಹಿಸಿದ್ದು, 150ಕ್ಕೂ ಅಧಿಕ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಪ್ರತಿದಿನ ಎಸ್ಪಿ, ಎಎಸ್ಪಿ ಅವರು ಠಾಣೆಗೆ ಭೇಟಿ ನೀಡಿ ಪ್ರತಿ ತಂಡ ಕಾರ್ಯವೈಖರಿ ಪರಿಶೀಲಿಸುತ್ತಿದ್ದಾರೆ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಇಷ್ಟು ಸಂಖ್ಯೆಯ ಉನ್ನತಾಧಿಕಾರಿಗಳು ತನಿಖೆಗೆ ನಿಯೋಜಿಸಲ್ಪಟ್ಟರೂ, ಮಾಹಿತಿ ಸಂಗ್ರಹಿಸುತ್ತಿದ್ದರೂ ಆರೋಪಿಗಳು ಸುಳಿವು ಸಿಗದಿರುವುದು ಅಚ್ಚರಿ, ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗಿದೆ. ಎಸ್ಪಿ ಹಾಗೂ ಜಿಲ್ಲಾ ಪೊಲೀಸರ ನಡುವಿನ ಆಂತರಿಕ ಸಂಘರ್ಷಗಳು ಪ್ರಕರಣದ ವಿಳಂಬಕ್ಕೆ ಕಾರಣವಾಗಿದೆಯೇ ಎಂಬ ಚರ್ಚೆಗೂ ನಾಂದಿ ಹಾಡಿದೆ.
ಗೃಹ ಸಚಿವರೇ ಸದನಕ್ಕೆ ಒದಗಿಸಿರುವ ಗ್ರಾಮಾಂತರ ಅಪರಾಧ ಪ್ರಕರಣಗಳ ಮಾಹಿತಿ
ಅಪರಾಧ 2019 2020 2021
ಕೊಲೆ 05 03 05
ಅಕ್ರಮ ಮದ್ಯ 36 54 31
ಜೂಜು 54 69 70
ಅಕ್ರಮಮರಳು 15 02 21
ಮೈಸೂರಿನಲ್ಲಿ ಯುವತಿ ಮೇಲಾದ ಅತ್ಯಾಚಾರದ ಘಟನೆ ವಿಧಾನಸಭೆ ಕಲಾಪದಲ್ಲಿ ವಿಸ್ತ್ರತ ಚರ್ಚೆ ನಡೆಯಿತು. ಶಾಸಕಿಯರು ಸಹ ಮಹಿಳಾ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿ ಸದನದ ಗಮನ ಸೆಳೆದರು. ಆದರೆ ಕಳೆದ ಆ.24ರಂದು ತುಮಕೂರು ತಾಲೂಕು ಹಿರೇಹಳ್ಳಿ ಬಳಿಯಾದ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಘಟನೆಯ ಆರೋಪಿಗಳು ಇನ್ನೂ ಪತ್ತೆಯಾಗದಿರುವ ಬಗ್ಗೆ ಸರಕಾರದ ಗಮನಸೆಳೆಯಲು ಚುಕ್ಕೆ ಗುರುತಿನ ಪ್ರಶ್ನೆಗೆ ಅವಕಾಶ ಕೋರಿದ್ದರೂ, ಅವಕಾಶ ನೀಡದೆ ಬರೀ ತನಿಖಾ ಮಾಹಿತಿ ನೀಡಿದ್ದು, ತನಿಖೆಯ ನೆಪದಲ್ಲಿ ಕಾಲ ಹರಣ ಮಾಡಿ ಇಡೀ ಪ್ರಕರಣವನ್ನು ಹಳ್ಳಹಿಡಿಸಲಾಗುತ್ತದೆ ಎಂಬ ಅನುಮೂನ ಮೂಡಿಸಿದೆ. ಇಡೀ ಗ್ರಾಮಾಂತರ ವ್ಯಾಪ್ತಿಯಲ್ಲ್ಲಿ ಪೊಲೀಸ್ ವೈಫಲ್ಯ ಹೆಚ್ಚಾಗಿದೆ.
-ಡಿ.ಸಿ.ಗೌರಿಶಂಕರ್, ಗ್ರಾಮಾಂತರ ಶಾಸಕ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ