ತುಮಕೂರು :
ಗ್ರಾಮಾಂತರ ಕ್ಷೇತ್ರದ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದು, ಯೋಜನೆಗೆ ನ್ಯಾಯಯುತವಾಗಿ ಹರಿಯಬೇಕಾದ ಹೇಮಾವತಿ ನೀರನ್ನು ಹರಿಸಿಕೊಳ್ಳಲಾಗದ ಶಾಸಕ ಡಿ.ಸಿ. ಗೌರಿಶಂಕರ್ ನರಸತ್ತವರಂತೆ ಯೋಜನೆಯೇ ಅವೈಜ್ಞಾನಿಕವೆಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ಶಾಸಕರಿರುವುದು ಕ್ಷೇತ್ರದ ಜನರ ದುರದೃಷ್ಟ ಎಂದು ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್‍ಗೌಡ
ಕಟುವಾಗಿ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀರಾವರಿ ಯೋಜನೆಯ ಗಂಧಗಾಳಿ ಗೊತ್ತಿಲ್ಲದ ಶಾಸಕರು, ಹೇಮಾವತಿ ನಾಲೆ ನೀರನ್ನು ಕೆರೆಗಳಿಗೆ ಹರಿಸದಂತೆ ಅಧಿಕಾರಿಗಳಿಗೆ ಹೇಳಿರುವ ವಿಡಿಯೊ ವೈರಲ್ ಆಗಿದೆ. ಅಧಿಕೃತವಾಗಿ ಅಲೋಕೇಷನ್ ಆಗಿರುವ ನೀರನ್ನು ಬಿಡಿಸಿಕೊಳ್ಳಪ್ಪ ಅಂದರೆ ಯೋಜನೆಯ ವ್ಯರ್ಥ ಎಂಬಂತ ಹೇಳಿಕೆ ನೀಡಿದ್ದಾರೆ. ಗುಂಡು ತುಂಡು ಪಾರ್ಟಿ ಮಾಡಿಸುತ್ತಿರುವ ಶಾಸಕರಿಗೆ ತಮ್ಮ ಮನೆ ಬಳಿಯ ಕೆರೆ ತುಂಬಿದೆಯೇ ಇಲ್ಲವೆ ಎಂಬುದು ಗೊತ್ತಾಗುತ್ತಿಲ್ಲವೇ? ನಾನು ಶಾಸಕನಾಗಿದ್ದ ಅವಧಿಯಲ್ಲಿ ಹೆಬ್ಬೂರು-ಗೂಳೂರು ಏತನೀರಾವರಿ ಸೇರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನಿಗದಿತ ಪ್ರಮಾಣದ ನೀರು ಹರಿಸಿದ್ದು, 2016-17, 2017-18ರಲ್ಲಿ ಮಾತ್ರ ಇಡೀ ಜಿಲ್ಲೆಗೆ ಕಡಿಮೆ ಪ್ರಮಾಣದ ನೀರು ಹರಿದಿದ್ದರಿಂದ ನೀರು ತುಂಬಿಸಲಾಗಿಲ್ಲ ಬಿಟ್ಟರೆ, 2014ರಿಂದಲೂ ನೀರು ಹರಿಸಿದ್ದಾಗಿ ದಾಖಲೆ ಬಿಡುಗಡೆಗೊಳಿಸಿದರು.
ಅಲೋಕೇಟ್ ಆಗದ ಕೆರೆ ತುಂಬಿಸುತ್ತಿದ್ದಾರೆ:
ಜಿಲ್ಲೆಯಲ್ಲಿ ಅಲೋಕೇಟ್ ಆಗದ ಕೆರೆಗಳಿಗೆ ಹೇಮೆ ನೀರು ಹರಿಸುತ್ತಿರುವಾಗ ಅಲೋಕೇಟ್ ಆದ ಯೋಜನೆಗೆ ನೀರು ಹರಿಸಬಾರದೇಕೇ? ಎಂದು ಪ್ರಶ್ನಿಸಿದ ಸುರೇಶ್‍ಗೌಡರು ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕವೆಂದರೆ ತಿಪಟೂರು ಹೊನ್ನವಳ್ಳಿ ಏತ ನೀರಾವರಿ ಯೋಜನೆ ವೈಜ್ಞಾನಿಕ ಹೇಗೆ? ಅಲ್ಲಿನ ಕೆರೆಗಳಿಗೆ ಹೇಗೆ ನೀರು ತುಂಬಿಸಲಾಗುತ್ತಿದೆ ಕಾನೂನಾತ್ಮಕವಾಗಿ ಹೇಳುವುದಾದರೆ ಹೇಮಾವತಿ ಯೋಜನೆಯಡಿ ಕೆರೆಗಳನ್ನು ತುಂಬಿಸಲು ಅವಕಾಶವೇ ಇಲ್ಲ. ಬೆಳೆ ಅಚ್ಚುಕಟ್ಟಿಗೆ ನೀರು ಕೊಡಬೇಕು. ಅದು ಈವರೆಗೆ ಆಗಿಲ್ಲ. ಬದಲಾಗಿ ಗುಬ್ಬಿ, ತುರುವೇಕೆರೆ, ಚಿ.ನಾಹಳ್ಳಿ, ತಿಪಟೂರು ಭಾಗದ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ದೂರಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತುಮಕೂರು ಗ್ರಾಮಾಂತರದಲ್ಲಿ ನಾನು, ತಿಪಟೂರಿನಲ್ಲಿ ಶಾಸಕರಾಗಿದ್ದ ಸಚಿವ ಬಿ.ಸಿ.ನಾಗೇಶ್, ಚಿ.ನಾ.ಹಳ್ಳಿ ಶಾಸಕರಾಗಿದ್ದ ಕೆ.ಎಸ್.ಕಿರಣ್‍ಕುಮಾರ್ ಅವರ ಒತ್ತಾಯದ ಕಾರಣಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದಾ ಬಸವರಾಜಬೊಮ್ಮಾಯಿ ಮಂಜೂರು ಮಾಡಿದರು ಎಂದರು.
ಡಿಸಿ, ಸಿಇಓ ನೀರು ಹರಿಸದಿದ್ದರೆ ಹೋರಾಟ:
ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರೇ ಯೋಜನೆ ಅವೈಜ್ಞಾನಿಕ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಆ ಬಗ್ಗೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸುತ್ತೇನೆ. ಪ್ರಸ್ತುತ ಕ್ಷೇತ್ರದ ಶಾಸಕರು ತಮ್ಮ ಹೊಣೆಗಾರಿಕೆ ಮರೆತಿರುವ ಬಗ್ಗೆ ಗಮನಸೆಳೆಯುತ್ತಿದ್ದೇನೆ. ಗ್ರಾಮಾಂತರ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಸಿಇಓ ಕೂಡಲೇ ನೀರು ಹರಿಸಬೇಕು. ನಿರಂತರವಾಗಿ 3 ತಿಂಗಳು ನೀರು ಹರಿಸದಿದ್ದರೆ ಕ್ಷೇತ್ರದ ಜನರೊಡಗೂಡಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಕೆ.ಎಂ.ಉಮೇಶ್‍ಗೌಡ, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಸಿದ್ದೇಗೌಡ, ವಿಜಯಕುಮಾರ್, ಮ್ಯಾಸ ಪ್ರಭಾಕರ್ ನಾಯ್ಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್. ಹೊನ್ನೇಶ್‍ಕುಮಾರ್ ಮತ್ತಿತರರು ಹಾಜರಿದ್ದರು.
ದೇವೇಗೌಡರು, ಬಸವರಾಜಬೊಮ್ಮಾಯಿ ಅವರನ್ನು ಕೇಳಿ ತಿಳಿಯಲಿ:
ಎಲ್ಲಿಂದಲೋ ಬಂದು ಗ್ರಾಮಾಂತರ ಜನರಿಗೆ ಮಕ್ಮಲ್ ಟೋಪಿ ಹಾಕಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಗೆದ್ದಿರುವ ಶಾಸಕರಿಗೆ ನೀರಾವರಿ ಯೋಜನೆಗಳ ಗಂಧ ಗಾಳಿ ಗೊತ್ತಿಲ್ಲ. ಕುಣಿಗಲ್, ಗ್ರಾಮಾಂತರ ಭಾಗಕ್ಕೆ ಹೇಮೆ ನೀರು ಹರಿಸಲು ವೈ.ಕೆ.ರಾಮಯ್ಯ ಅವರಾದಿಯಾಗಿ ನನ್ನವರೆಗೆ ಹಲವು ಶಾಸಕರು ಹೋರಾಡಿದ್ದೇವೆ. ಈ ಕುರಿತು ನೀರಾವರಿ ಯೋಜನೆಯಲ್ಲಿ ಅತೀ ಹೆಚ್ಚು ಜ್ಞಾನ ಹೊಂದಿರುವ ಅವರ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಈ ಯೋಜನೆಗೆ ಅಂದು ಜಲಸಂಪನ್ಮೂಲ ಸಚಿವರಾಗಿ ಅನುಮೋದನೆ ನೀಡಿದ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿ ತಿಳಿಯಲಿ ಎಂದು ಶಾಸಕ ಗೌರಿಶಂಕರ್‍ಗೆ ತಿರುಗೇಟು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ