ಪ್ರಜಾಪ್ರಗತಿ -ಪ್ರಗತಿ ವಾಹಿನಿಯಿಂದ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ರತ್ನ ಪುರಸ್ಕøತರೊಂದಿಗೆ ವಿಶೇಷ ಸಂವಾದ
ತುಮಕೂರು:
ಸಹಕಾರ ಕ್ಷೇತ್ರ ಜನರ ಪರಸ್ಪರ ಸಹಕಾರ ತತ್ವದಿಂದ ಬೆಳೆದು ಬಂದ ಕ್ಷೇತ್ರ. ಗ್ರಾಮೀಣ ರೈತರು, ಬಡ ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳು, ಸೀಮಿತ ಆದಾಯವುಳ್ಳವರಿಗೆ ಸಾಲ ಸೌಲಭ್ಯದ ನೆರವು ನೀಡುತ್ತಾ ಅವರ ಬದುಕಿನ ಉನ್ನತಿಗೆ ಸಹಕಾರ ಸಂಸ್ಥೆ, ಸಹಕಾರ ಬ್ಯಾಂಕ್‍ಗಳು ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿವೆ. ಆದರೆ ಈ ಕ್ಷೇತ್ರವನ್ನೇ ಅಭದ್ರಗೊಳಿಸುವಂತಹ ಕಾನೂನು ಮಿತಿಗಳನ್ನು ಸರಕಾರ, ಆರ್‍ಬಿಐ ಹೇರುತ್ತಿರುವುದು ಸರಿಯಲ್ಲ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ವಾಹಿನಿಯಿಂದ ಸಹಕಾರ ಸಪ್ತಾಹದ ಅಂಗವಾಗಿ ಜಿಲ್ಲೆಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರು ಹಾಗೂ ಸಹಕಾರಿ ಧುರೀಣರೊಂದಿಗೆ ಏರ್ಪಡಿಸಿದ್ಧ ವಿಶೇಷ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸದಸ್ಯರ ಷೇರು ಬಂಡವಾಳ, ಠೇವಣಿ, ಸಾಲ ಮರುಪಾವತಿಯ ವ್ಯವಹಾರದೊಂದಿಗೆ ಸಹಕಾರ ಕ್ಷೇತ್ರ ಮುನ್ನೆಡೆಯುತ್ತಿದೆ ಹೊರತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೃಪೆಯಿಂದಲ್ಲ. ಇಂತಹ ಸ್ಥಿತಿಯಲ್ಲಿ ಸರಕಾರಗಳು ಅನಗತ್ಯ ಕಾನೂನುಗಳನ್ನು ಸಹಕಾರ ಸಂಸ್ಥೆಗಳ ಮೇಲೆ ಹೇರುವ ಕ್ರಮ ಸಹಕಾರ ಚಳುವಳಿಯನ್ನು ದುರ್ಬಲಗೊಳಿಸಿದಂತಾಗುತ್ತದೆ. ಪ್ರಮುಖವಾಗಿ ಯುವಜನರು, ಮಹಿಳೆಯರು ಮುಂದೆ ಬಂದು ಸಹಕಾರಿ ರಂಗವನ್ನು ಸಮರ್ಥವಾಗಿ ಮುನ್ನೆಡೆಸಬೇಕು ಎಂದರು.
ಸಹಕಾರ ಸಂಸ್ಥೆಗಳಿಗೆ ಎಲ್ಲಿ ಕೊಡ್ತಾರೆ ದುಡಿಯುವ ಬಂಡವಾಳ :
ಸರಕಾರದ ಕೃಷಿ ಸಾಲ ಮನ್ನಾ, ಬಡ್ಡಿ ಮನ್ನಾ ಘೋಷಣೆಯ ಲಾಭ ರೈತಾಪಿ ವರ್ಗಕ್ಕೆ ಹೊರತು ಸಹಕಾರ ಬ್ಯಾಂಕ್‍ಗಳಿಗಲ್ಲ. ಮರುಪಾವತಿಯ ಅನಿಶ್ಚತತೆಯ ನಡುವೆಯೂ ರೈತಾಪಿ ವರ್ಗಕ್ಕೆ ಪ್ರತೀ ವರ್ಷ ಅಲ್ಪಾವಧಿ ಬೆಳೆ ಸಾಲ, ಚಿನ್ನಾಭರಣ ಅಡಮಾನ ಸಾಲ, ಕಡಿಮೆ ಬಡ್ಡಿದರ, ಹೀಗೆ ಹಲವು ಅನುಕೂಲಗಳನ್ನು ಕಲ್ಪಿಸುವಲ್ಲಿ ಸಹಕಾರ ಸಂಸ್ಥೆ ಸದಾ ಮುಂದಿದೆ. ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರಿಗೆ, ಜನಸಾಮಾನ್ಯರಿಗೆ ಇಂತಹ ನೇರ ಅನುಕೂಲ ಸುಲಭವಾಗಿ ಸಿಗುತ್ತಿದೆಯೇ? ಆದರೂ ಪ್ರತೀ ವರ್ಷ ವಾಣಿಜ್ಯ ಬ್ಯಾಂಕ್‍ಗಳಿಗೆ ದುಡಿಯುವ ಬಂಡವಾಳವನ್ನು ಕೇಂದ್ರ ಸರಕಾರ ನೀಡುತ್ತದೆ. ಸಹಕಾರ ಸಂಸ್ಥೆಗಳಿಗೆ ಇಂತಹ ದುಡಿಯುವ ಬಂಡವಾಳವನ್ನು ಎಲ್ಲಿ ಕೊಡುತ್ತಾರೆ. ಅದರಲ್ಲೂ ನಗರ-ಪಟ್ಟಣ ಸಹಕಾರ ಬ್ಯಾಂಕ್‍ಗಳಿಗಂತೂ ಯಾವ ಸ್ಕೀಂನ ಸಹಾಯಧನ, ಯೋಜನೆಗಳ ಜಾರಿಗೂ ಅವಕಾಶ ಇಲ್ಲವಾಗಿದೆ. ಇನ್ನೂ ಸಹಕಾರ ಬ್ಯಾಂಕ್‍ಗಳೇ ಸರಕಾರಕ್ಕೆ ತೆರಿಗೆ, ಟಿಡಿಎಸ್ ಆದಾಯ ಪಾವತಿ ಮಾಡುತ್ತಾ ಖಜಾನೆ ತುಂಬಲು ಸಹಕರಿಸುತ್ತಿದ್ದೇವೆ ಎಂದು ರಾಜಣ್ಣ ವಿಶ್ಲೇಷಿಸಿದರು.
ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ, ಬ್ಯಾಂಕ್‍ಗಳನ್ನೇ ಇಲ್ಲವಾಗಿಸಬೇಡಿ :
ಡಿಸಿಸಿ ಬ್ಯಾಂಕ್ ಸೇರಿ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕ್‍ಗಳು ಬಿಆರ್ ಆಕ್ಟ್‍ನಡಿ ಆರ್‍ಬಿಐಗೆ ವ್ಯವಹಾರಿಕ ದಾಖಲೆಗಳನ್ನು ಆಗಿಂದಾಗ್ಗೆ ಒದಗಿಸುತ್ತಲೇ ಬಂದಿದ್ದಾಗಿಯೂ ಬೆಂಗಳೂರಿನ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣವನ್ನು ಮುಂದು ಮಾಡಿ ಎಲ್ಲಾ ಸಹಕಾರ ಬ್ಯಾಂಕ್‍ಗಳಿಗೆ ಅತಿಯಾಗಿ ಲಗಾಮು ಹಾಕುವ ಪ್ರಕ್ರಿಯೆಗಳೇ ಸರಿಯಲ್ಲ. ವ್ಯವಸ್ಥಾಪನಾ ಮಂಡಳಿ ಸರಿಯಿದ್ದು, ಸಿಬ್ಬಂದಿಯೂ ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿ ಅವಶ್ಯಕವಾದಷ್ಟು ಮಾತ್ರ ಸಾಲ ನೀಡಿದರೆ ಯಾವ ಸಹಕಾರ ಸಂಸ್ಥೆಗಳು ಹಾಳಾಗುವುದಿಲ್ಲ. ಬ್ಯಾಂಕ್‍ಗಳನ್ನು ನಿಯಂತ್ರಿಸುವ ಅಧಿಕಾರ ಸರಕಾರದಲ್ಲಿ ಕೇಂದ್ರಿಕರಣವಾಗದೇ ವಿಕೇಂದ್ರಿಕರಣಗೊಳಿಸಿ ಸಹಕಾರ ಚಳುವಳಿಗೆ ಸರಕಾರ ಬಲ ತುಂಬುವ ನಿಟ್ಟಿನಲ್ಲಿ ಯೋಚಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ವ್ಯಕ್ತಿಯ ತಪ್ಪಿಗೆ ಇಡೀ ಬ್ಯಾಂಕ್ ಅಸ್ಥಿತ್ವವನ್ನೇ ಇಲ್ಲವಾಗಿಸುವ ಆಡಳಿತಶಾಹಿ ಮನೋಭಾವ ಸಹಕಾರ ಚಳುವಳಿಯೇ ಆತಂಕಕಾರಿಯಾದುದು. ಸಹಕಾರ ಬ್ಯಾಂಕಿಂಗ್ ಸಹ ವ್ಯವಹಾರಿಕ ಕ್ಷೇತ್ರ. ಲಾಭ-ನಷ್ಟ ಎರಡೂ ಉಂಟು. ಸಮಭಾವದಲ್ಲಿ ಸ್ವೀಕರಿಸಿ ಮುನ್ನೆಡೆಯಲು ಅನುವು ಮಾಡಿಕೊಡಬೇಕು. ಸಹಕಾರ ಕ್ಷೇತ್ರದ ಈ ಜ್ವಲಂತ ಸಮಸ್ಯೆಗಳಿಗೆ ಸಹಕಾರ ಸಚಿವನಾಗಿ ಪರಿಹಾರ ಕಲ್ಪಿಸಬೇಕೆಂಬುದು ನನ್ನ ಜೀವಿತದ ಗುರಿಯಾಗಿದೆ ಎಂದು ಕೆ.ಎನ್.ಆರ್ ಹೇಳಿದರು. ಸಂವಾದಕ್ಕೂ ಮುನ್ನಾ ಭಾರತದ ಸಹಕಾರ ಚಳುವಳಿಯ ಮೂಲಪುರುಷ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ವೇಣುಗೋಪಾಲ್, ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ, ಸಹ ಸಂಪಾದಕ ಟಿ.ಎನ್.ಮಧುಕರ್, ಪ್ರಗತಿ ವಾಹಿನಿ ಸಿಇಒ ಟಿ.ಎನ್.ಶಿಲ್ಪಶ್ರೀ, ರೂಪೇಶ್ ಕೃಷ್ಣಯ್ಯ, ಡಿಸಿಸಿ ಬ್ಯಾಂಕ್ ಎಜಿಎಂ ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ದೊಡ್ಮನೆ ಮತ್ತಿತರರು ಹಾಜರಿದ್ದರು.
ಮೃತ ರೈತರ ಕುಟುಂಬಕ್ಕೆ ಋಣ ಮುಕ್ತ ಪತ್ರ ಡಿಸಿಸಿ ಬ್ಯಾಂಕ್ ಹೆಗ್ಗಳಿಕೆ :
ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಆತ್ಮಹತ್ಯೆ ಹಾಗೂ ಮತ್ತ್ಯಾವುದೇ ಕಾರಣಕ್ಕೆ ಮೃತಪಟ್ಟ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿ ಅವರು ಕುಟುಂಬಕ್ಕೆ ಋಣ ಮುಕ್ತ ಪತ್ರ ನೀಡುತ್ತಾ ಬಂದಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ. ಈವರೆಗೆ 7ಸಾವಿರ ರೈತ ಕುಟುಂಬಗಳಿಗೆ ಇದರ ಪ್ರಯೋಜನ ದೊರೆತಿದೆ. ರೈತರು, ಸಣ್ಣ ವರ್ತಕರ ಮೇಲೆ ಅಧಿಕ ಬಡ್ಡಿದರದಲ್ಲಿ ಖಾಸಗಿ ಲೇವಾದೇವಿದಾರರು, ಖಾಸಗಿ ಚಿನ್ನಾಭರಣ ಸಾಲ ಸಂಸ್ಥೆಗಳು ಮಾಡುತ್ತಿದ್ದ ಶೋಷಣೆ ತಪ್ಪಿಸಲು, ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ಚಿನ್ನಾಭರಣ ಅಡಮಾನ ಸಾಲವನ್ನು ಹೆಚ್ಚಿನದಾಗಿ ರೈತಾಪಿ ವರ್ಗಕ್ಕೆ ಪಹಣಿ ಆಧಾರದಲ್ಲಿ ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಜಾಮೀನು ರಹಿತವಾಗಿ ಹತ್ತು ಸಾವಿರದವರೆಗೆ ಸಾಲ ಹೀಗೆ ಎಲ್ಲಾ ವರ್ಗದ ಜನರ ಕೈ ಹಿಡಿಯುವ ಪ್ರಯತ್ನ ಮಾಡಿದೆ. ಸಿದ್ದರಾಮಯ್ಯ ಅವರ ಸರಕಾರದಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಮಾದರಿಯಲ್ಲೇ ಜನಸಾಮಾನ್ಯರ ಆರ್ಥಿಕ ಕಲ್ಯಾಣಕ್ಕೆ ಪೂರಕವಾದ ನೆರವು ನೀಡುವುದೇ ಈ ಸಹಕಾರ ಚಳುವಳಿ, ಸಹಕಾರ ಸಪ್ತಾಹದ ಧ್ಯೇಯವಾಗಿದೆ ಎಂದು ಮಾಜಿ ಶಾಸಕರೂ ಆದ ಬ್ಯಾಂಕ್‍ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ಸಹಕಾರ ಚಳವಳಿ ಕುಂದಿಲ್ಲ, ಪ್ರೋತ್ಸಾಹಿಸುವ ಅಗತ್ಯವಿದೆ : ಎನ್.ಗಂಗಣ್ಣ
ಇಡೀ ಭಾರತದಲ್ಲಿ ಸಹಕಾರ ಚಳುವಳಿಗೆ ನಾಂದಿ ಹಾಡಿದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರು ಕರ್ನಾಟಕದ ಗದುಗಿನವರು. ಅವರ ಆಶಯದಂತೆ ರಾಜ್ಯ, ದೇಶದಲ್ಲಿ ಸಹಕಾರ ಚಳವಳಿ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದು, ಸಹಕಾರ ಚಳವಳಿ ಕುಂದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಹೇಳಿದರು.
ಸಂವಾದದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವಿಎಸ್‍ಎಸ್‍ಎನ್, ಹಾಲು ಉತ್ಪಾದಕ ಸಹಕಾರ ಸಂಘಗಳು ಸೇರಿ 42 ಸಾವಿರ ಸಹಕಾರಸಂಘಗಳಿವೆ. ಹಾಲಿನ ಉತ್ಪಾದನೆಯಲ್ಲಿ ಕ್ರಾಂತಿಯೇ ಆಗಿದೆ. ರಾಜ್ಯದ ಆರೂವರೆ ಕೋಟಿ ಜನರೆಲ್ಲರೂ ಸಹಕಾರ ಚಳವಳಿಯ ಭಾಗಿಯಾಗಬೇಕೆಂಬುದೇ ಸಹಕಾರ ಸಪ್ತಾಹದ ಮುಖ್ಯ ಆಶಯವಾಗಿದೆ. ಈ ದಿಸೆಯಲ್ಲಿ ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಮಾದರಿಯಾದ ಯೋಜನೆ ಕಾರ್ಯಗತದೊಂದಿಗೆ ಮುಂದಡಿಯಿರಿಸಿದೆ. ಜನಸಾಮಾನ್ಯರಿಗೆ ನೆರವಾಗುವ ಹಾದಿಯಲ್ಲಿ ಸಾಗುತ್ತಿರುವ ಸಹಕಾರ ಸಂಸ್ಥೆಗಳನ್ನು ಆರ್‍ಬಿಐನ ಅಧಿಕ ನಿಯಂತ್ರಣಕ್ಕೆ ಒಳಪಡಿಸುವ ಬದಲು ಮುಕ್ತ ಬೆಳವಣಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
260 ನಗರ ಬ್ಯಾಂಕ್‍ಗಳಲ್ಲಿ 160 ಶೀಘ್ರ ಮುಚ್ಚಲಿವೆ: ಎನ್.ಆರ್.ಜಗದೀಶ್
ಸಹಕಾರ ರಂಗದ ನಗರ ಮತ್ತು ಪಟ್ಟಣ ಸಹಕಾರ ಬ್ಯಾಂಕ್‍ಗಳ ಮೇಲೆ ಹೆಚ್ಚಾಗುತ್ತಿರುವ ಆರ್‍ಬಿಐ ಬಿಗಿ ಹಿಡಿತ ಹಾಗೂ ಸರಕಾರದ ನಿಯಂತ್ರಣದಿಂದಾಗಿ ರಾಜ್ಯದಲ್ಲಿ 260 ನಗರ ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿ 160 ಬ್ಯಾಂಕುಗಳು ಶೀಘ್ರವೇ ಮುಚ್ಚುವ ಸ್ಥಿತಿ ತಲುಪಲಿದೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಜಗದೀಶ್ ಕಳವಳ ವ್ಯಕ್ತಪಡಿಸಿದರು.
ಸಂವಾದದಲ್ಲಿ ಮಾತನಾಡಿದ ಅವರು ನಗರ ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿ ಇನ್ನೂ ಮುಂದೆ ಚುನಾಯಿತ ಆಡಳಿತ ಮಂಡಳಿಯೊಂದಿಗೆ ಆರ್‍ಬಿಐ ಮಾರ್ಗಸೂಚಿಯನ್ವಯ ಮತ್ತೊಂದು ಸಲಹಾ ಮಂಡಳಿ ಅಸ್ಥಿತ್ವಕ್ಕೆ ಬರಲಿದೆ. ಬ್ಯಾಂಕುಗಳ ವಹಿವಾಟಿಗೆ ಇದು ಅನಗತ್ಯ ವಿಳಂಬ, ಹೆಚ್ಚಿನ ಹಸ್ತಕ್ಷೇಪಗಳಿಗೆ ಎಡೆಮಾಡಲಿದ್ದು, ಸರಕಾರದಿಂದ ಒಂದು ರೂಪಾಯಿ ಅನುದಾನ, ಯಾವುದೇ ಯೋಜನೆಗಳು ಪಟ್ಟಣ ಸಹಕಾರಬ್ಯಾಂಕ್‍ಗಳಿಗೆ ಇಲ್ಲದಿರುವಾಗ ಅನಗತ್ಯ ನಿಯಂತ್ರಣ ಏಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನಮ್ಮ ಲಾಭದ ಹಣದಲ್ಲಿ ಬಡವರ ಕನಿಷ್ಠ ಐದು ಸಾವಿರ ಹಣವನ್ನು ಮನ್ನಾ ಮಾಡಲು ಸರಕಾರಗಳು, ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ. ಹೀಗಾದರೆ ಬ್ಯಾಂಕ್‍ಗಳನ್ನು ಮುನ್ನೆಡೆಸುವುದೇ ಕಷ್ಟವಾಗಲಿದೆ ಎಂದರು.
ಕೇಂದ್ರ ಸರಕಾರ ಲಾಕ್‍ಡೌನ್ ಸಂದರ್ಭದಲ್ಲಿ ಆತ್ಮ ನಿರ್ಭರ ಯೋಜನೆಯಡಿ ಬಡ್ಡಿರಹಿತ ಸಾಲ, ಕಡಿಮೆ ಬಡ್ಡಿದಾರದ ಆರ್ಥಿಕ ನೆರವು ಹೀಗೆ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಅದ್ಯಾವುದು ನಗರ ಸಹಕಾರ ಬ್ಯಾಂಕುಗಳಿಗೆ ಅನುಷ್ಟಾನಕ್ಕೆ ನೀಡಿಲ್ಲ. ಕೇವಲ ವಾಣಿಜ್ಯ ಬ್ಯಾಂಕ್‍ಗಳನ್ನು ಪೋತ್ಸಾಹಿಸಲಾಗುತ್ತಿದೆ. ನಮ್ಮಲ್ಲಿಗೆ ಬರುವ ಗ್ರಾಹಕರು ನಮಗೇಕೆ ಈ ಸೌಲಭ್ಯವಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಗರ ಪಟ್ಟಣ ಸಹಕಾರ ಬ್ಯಾಂಕ್‍ಗಳನ್ನು ಆರ್‍ಬಿಐ ಕಪಿಮುಷ್ಠಿಗೆ ಪೂರ್ಣ ಒಳಪಡಿಸದೆ ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಹಕಾರ ಚಳವಳಿ ನಿರಂತರ, ಸದಸ್ಯರಿಗೆ ಅರಿವು ಮುಖ್ಯ: ಎಸ್.ಎನ್.ಕೃಷ್ಣಯ್ಯ
ಸಹಕಾರ ಚಳವಳಿ ನಿಂತ ನೀರಲ್ಲ. ಅದು ನಿರಂತರವಾಗಿ ನಡೆಯುತ್ತಲೇ ಇದೆ. ಸಹಕಾರ ರಂಗದ ಪ್ರಗತಿಗೆ ಸರಕಾರದ ಅನಿಯಂತ್ರಿತ ಪ್ರೋತ್ಸಾಹ ಎಷ್ಟು ಅಗತ್ಯವೋ, ಸದಸ್ಯರಲ್ಲೂ ಅರಿವು ಅಷ್ಟೇ ಮುಖ್ಯ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಹಿರಿಯ ಸಹಕಾರ ಧುರೀಣ ಎಸ್.ಎನ್.ಕೃಷ್ಣಯ್ಯ ಹೇಳಿದರು.
ಸಂವಾದದಲ್ಲಿ ಮಾತನಾಡಿದ ಅವರು ಸಹಕಾರ ಸಪ್ತಾಹ ಮಾಡುವ ಉದ್ದೇಶವೇ ಸಹಕಾರ ರಂಗದ ಏಳು ಬೀಳುಗಳ ಅವಲೋಕನ ಹಾಗೂ ಅರಿವು ಮೂಡಿಸುವುದಾಗಿದೆ. ಕರ್ನಾಟಕ ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಆಶಾದಾಯಕವಾಗಿದ್ದು, ಜನಸಾಮಾನ್ಯರ ಕೈ ಬಲಪಡಿಸಲಾಗುತ್ತಿದೆ. ಸಹಕಾರ ಸಂಸ್ಥೆಗಳಿಗೆ ಜನರು ಕೇವಲ ಸದಸ್ಯರಾದರಷ್ಟೇ ಸಾಲದು, ವಹಿವಾಟು ನಡೆಸಬೇಕು. ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು. ವಾರ್ಷಿಕ ಸಾಮಾನ್ಯ ಸಭೆಗಳಿಗೆ ಹಾಜರಾಗಬೇಕು. ಈ ನಿಯಮಗಳ ಅರಿವಿಲ್ಲದೆ ಎಷ್ಟೋ ಮಂದಿ ಅವಕಾಶ ವಂಚಿತರಾಗುತ್ತಿದ್ದಾರೆ. ಸರಕಾರದ ಹೊಸ ಹೊಸ ಕಾನೂನುಗಳು ಸಹಕಾರ ರಂಗದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದು ವಿಷಾದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ