ಇಂದಿನಿಂದ ಶಾಲಾ-ಕಾಲೇಜು ಆರಂಭ : ಪದವಿಗೆ ದಾಖಲಾತಿ ಶುರು!!

ತುಮಕೂರು :

      ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯಲ್ಲಿ ಇಂದಿನಿಂದ (ಆ.23) ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದು, 9-12 ರವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳನ್ನು ಆರಂಭಿಸಲು ತುಮಕೂರು ಮತ್ತು ಮಧುಗಿರಿ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲಾ ಕಟ್ಟಡ, ಆವರಣ ಸ್ವಚ್ಛಗೊಳಿಸಲಾಗಿದೆ. ಎಲ್ಲಾ ಕೊಠಡಿಗಳಿಗೂ ಸ್ಯಾನಿಟೈಸ್ ಮಾಡಲಾಗಿದೆ. ಬಹುತೇಕ ಶಿಕ್ಷಕರು ಕೊರೋನಾ ಲಸಿಕೆ ಪಡೆದಿದ್ದಾರೆ. ಮಕ್ಕಳು ಕೂಡ ಶಾಲೆಗೆ ಬರಲು ಉತ್ಸಾಹ ತೋರುತ್ತಿದ್ದು, ಷಕರು ಕೂಡ ತಮ್ಮ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ.

ವಾರದಿಂದಲೇ ತಯಾರಿ :

      ಶಾಲಾ-ಕಾಲೇಜುಗಳ ಆರಂಭಕ್ಕೂ ಮೊದಲೇ ಜಿಲ್ಲೆಯಲ್ಲಿ ವಾರದಿಂದ ಆವರಣ, ಕಾಂಪೌಂಡ್, ಗೇಟ್, ಮೆಟ್ಟಿಲುಗಳು, ಚಾವಣಿ ಸೇರಿದಂತೆ ಇಡೀ ಕಟ್ಟಡಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಈ ಕಾರ್ಯಕ್ಕೆ ಇಂಬು ನೀಡಿವೆ. ನೀರಿ ಸಂಪು, ಟ್ಯಾಂಕ್‍ಗಳು, ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ. ಬರೀ ಕೊಠಡಿಗಳನ್ನು ಮಾತ್ರವಲ್ಲದೆ ಬೆಂಚು, ಖುರ್ಚಿ, ಚಿಲಕ ಎಲ್ಲವನ್ನೂ ಸೋಂಕು ನಿಯಂತ್ರಣ ದ್ರವ ಬಳಸಿ ಸ್ವಚ್ಛಗೊಳಿಸಲಾಗಿದೆ. ಅಕ್ಷರ ದಾಸೋಹ ಕೊಠಡಿಯಲ್ಲಿನ ಎಲ್ಲಾ ಪಾತ್ರೆ, ಡಬ್ಬಿಗಳನ್ನು ಕೂಡ ತೊಳೆಯಲಾಗಿದ್ದು, ದವಸ ಧಾನ್ಯಗಳನ್ನು ಸ್ವಚ್ಛಗೊಳಿಸಲಾಗಿದೆ.

ಮುಂಜಾಗ್ರತೆಗೆ ಅಗತ್ಯ ಕ್ರಮಗಳು :

      ವಿದ್ಯಾರ್ಥಿಗಳು ಶಾಲೆ ಪ್ರವೇಶಿಸುವಾಗ ಹಾಗೂ ತರಗತಿ, ಗ್ರಂಥಾಲಯ ಸೇರಿದಂತೆ ಎಲ್ಲೆಡೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ದಟ್ಟಣೆ ತಪ್ಪಿಸುವ ಉದ್ದೇಶದಿಂದ ಅಗತ್ಯವಿದ್ದರೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತದೆ. ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸ್ ವ್ಯವಸ್ಥೆ ಕಲ್ಪಿಸಲಾಗಿದೆ, ಥರ್ಮಲ್ ಸ್ಥಾನರ್‍ನಿಂದ ಪರೀಕ್ಷಿಸಿಯೇ ಶಾಲೆಯೊಳಗೆ ಪ್ರವೇಶ ಕಲ್ಪಿಸಲಾಗುತ್ತದೆ. ಸೋಂಕು ಲಕ್ಷಣಗಳಿದ್ದಲ್ಲಿ ಪೆÇೀಷಕರನ್ನು ಸಂಪರ್ಕಿಸಿ ಮನೆಗೆ ಕಳುಹಿಸುವ, ಚಿಕಿತ್ಸೆ ಕೊಡಿಸುವ ಬಗ್ಗೆ ಗಮನಹರಿಸಲಾಗುತ್ತದೆ. ಜೊತೆಗೆ ಶಿಕ್ಷಕರು, ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಆಗಿಂದಾಗ್ಗೆ ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಕೈತೊಳೆದುಕೊಳ್ಳುವಂತೆ ನೋಡಿ ಕೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
ದಿನ ಬಿಟ್ಟು ದಿನ ನಡೆಯಲಿವೆ ತರಗತಿಗಳು : ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪಾಳಿ ತರಗತಿ ನಡೆಸಲಾಗುತ್ತದೆ. ಬೆಳಗ್ಗೆ ಒಂದಿಷ್ಟು ವಿದ್ಯಾರ್ಥಿಗಳಿಗೆ, ಮಧ್ಯಾಹ್ನ ಒಂದಿಷ್ಟು ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತದೆ. ಇಲ್ಲವೇ ವಾರದಲ್ಲಿ ಮೂರು ದಿನ ಒಂದು ಬ್ಯಾಚ್, ಇನ್ನು ಮೂರು ದಿನ ಇನ್ನೊಂದು ಬ್ಯಾಚ್ ತರಗತಿ ನಡೆಯಲಿವೆ. ಅಥವಾ ದಿನ ಬಿಟ್ಟು ದಿನ ಪಾಳಿ ಪ್ರಕಾರ ತರಗತಿಗಳು ನಡೆಯುತ್ತವೆ. ಹಾಜರಾತಿ ಕಡ್ಡಾಯವಿಲ್ಲ. ಪೆÇೀಷಕರ ಒಪ್ಪಿಗೆ ಮೇರೆಗೆ ಮಕ್ಕಳು ಶಾಲೆಗೆ ಹೋಗಬಹುದು. ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಸಹ ಅವಕಾಶವಿದೆ. ಆಯ್ಕೆ ವಿದ್ಯಾರ್ಥಿಗಳಿಗೆ ಬಿಟ್ಟದ್ದು.

ಎಲ್ಲಾ ಸಿಬ್ಬಂದಿಗೂ ಲಸಿಕೆ :

      ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 13,052 ಮಂದಿ ಬೋಧಕ-ಬೋಧಕೇತರ ಸಿಬ್ಬಂದಿಯಲ್ಲಿ ಇದುವರೆಗೆ 12,910 ಮಂದಿ ಲಸಿಕೆ ಪಡೆದಿದ್ದಾರೆ. ಅಂದರೆ ಶೇ.98.91ರಷ್ಟು ಗುರಿಸಾಧನೆಯಾಗಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 10,102 ಮಂದಿಯಲ್ಲಿ 9,750 ಮಂದಿ ಲಸಿಕೆ ಪಡೆದಿದ್ದಾರೆ. ಅಂದರೆ ಶೇ.96.51ರಷ್ಟು ಗುರಿ ಸಾಧನೆಯಾಗಿದೆ. ಅನಾರೋಗ್ಯ ಸಮಸ್ಯೆ, ಕೋವಿಡ್‍ನಿಂದ ಗುಣಮುಖರಾಗಿರುವವರು ತತ್‍ಕ್ಷಣ ಲಸಿಕೆ ಪಡೆಯಬಾರದು ಎಂಬಿತ್ಯಾದಿ ಕಾರಣಕ್ಕೆ ಕೆಲವರು ಲಸಿಕೆ ಪಡೆದಿಲ್ಲ.

ಪಿಯುಸಿಗೆ ವಿದ್ಯಾರ್ಥಿಗಳ ಹೆಚ್ಚಳ :

      ಕಳೆದ ವರ್ಷ ಜಿಲ್ಲೆಯಾದ್ಯಂತ ಪ್ರಥಮ ಪಿಯುಸಿಯಲ್ಲಿ ಸುಮಾರು 26 ಸಾವಿರ ವಿದ್ಯಾರ್ಥಿಗಳಿದ್ದರು. ಈ ವರ್ಷ 36 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆಯಿದೆ. ಅಂದರೆ ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲರೂ ಉತ್ತೀರ್ಣರಾಗಿರುವುದರಿಂದ ಕನಿಷ್ಟ 10 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಲಿದ್ದಾರೆ.

      ತಜ್ಞ ವೈದ್ಯರ ಪ್ರಕಾರ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ. ಆದ್ದರಿಂದ 1 ನೇ ತರಗತಿ ಯಿಂದಲೇ ಶಾಲೆ ಆರಂಭಿಸಬಹುದು. ಆದರೆ, ಸಣ್ಣ ಮಕ್ಕಳು ಎಸ್‍ಒಪಿ ಪಾಲಿಸುವುದು ಸ್ವಲ್ಪ ಕಷ್ಟ, ಆದ್ದರಿಂದ ಆ.23 ರಿಂದ 9 ನೇ ತರಗತಿಯಿಂದ ಶಾಲೆ ಆರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗುವುದು .

-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು

ಶಾಲಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೇ.99 ರಷ್ಟು ಶಿಕ್ಷಕರಿಗೆ, ಸಿಬ್ಬಂದಿಗೆ ವ್ಯಾಕ್ಸಿನೇಷನ್ ಆಗಿದೆ. ಕೋವಿಡ್ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ತೆರೆಯಲಾಗುತ್ತದೆ

-ನಂಜಯ್ಯ.ಸಿ. ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ

ಶಾಲೆಗೆ ಬರಲು ಮಕ್ಕಳು ಉತ್ಸುಕರಾಗಿದ್ದಾರೆ. ಪೆÇೀಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ. ಸ್ಯಾನಿಟೈಸೇಷನ್ ಸೇರಿದಂತೆ ಶಾಲಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

-ಕೃಷ್ಣಮೂರ್ತಿ, ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ

ಪಿಯುಸಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ . ಪ್ರಥಮ ಪಿಯುಸಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 10 ಸಾವಿರ ವಿದ್ಯಾರ್ಥಿಗಳು ಹೆಚ್ಚು ದಾಖಲಾಗಲಿದ್ದಾರೆ .

– ನರಸಿಂಹಮೂರ್ತಿ , ಡಿಡಿಪಿಯು.

 ಕಲಿಕೆ ಪರಿಣಾಮಕಾರಿಯಾಗುವಲ್ಲಿ ಆನ್‍ಲೈನ್ ತರಗತಿಗಳಿಗಿಂತ ಭೌತಿಕ ತರಗತಿಗಳು ಅನಕೂಲಕರ. ಶಾಲೆಗಳನ್ನು ಪ್ರಾರಂಭಿಸುತ್ತಿರುವುದರಿಂದ ಮಕ್ಕಳಿಗೆ ಮಾತ್ರವಲ್ಲ, ಶಿಕ್ಷಕ ಸಮುದಾಯಕ್ಕೂ ಸಂತೋಷದ ವಿಚಾರವೆ.

– ವಸಂತ್, ಶಿಕ್ಷಕರು, ಬಾ.ಸ.ಪ್ರೌ.ಶಾಲೆ, ತಿಪಟೂರು

 

 ಶಾಲೆಗೆ ಬರದೆ ತುಂಬಾ ದಿನವಾಗಿತ್ತು. ಶಾಲೆ ಆರಂಭವಾಗುತ್ತಿರುವುದು ಖುಷಿಯಾಗಿದೆ. ಆನ್‍ಲೈನ್ ತರಗತಿಗಳಿಂತ ಭೌತಿಕ ತರಗತಿಗಳು ಇಷ್ಟವಾಗುತ್ತವೆ. ಜೊತೆಗೆ ಸ್ನೇಹಿತರು ಮತ್ತು ಶಿಕ್ಷಕರನ್ನು ಭೇಟಿ ಮಾಡಬಹುದು.

– ದರ್ಶನ್, ವಿದ್ಯಾರ್ಥಿ, ಜಿಪಿಯುಸಿ, ಹುಳಿಯಾರು-ಕೆಂಕೆರೆ

ಪದವಿಗೆ ಆನ್‍ಲೈನ್ ದಾಖಲಾತಿ ಆರಂಭ

     ಇಂದಿನಿಂದ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಕಿಯೆ ಆರಂಭವಾಗುತ್ತಿದೆ. ಹೊಸ ರಾಷ್ಷ್ರೀಯ ಶಿಕ್ಷಣ ನೀತಿ ಅನುಸಾರ ವಿದ್ಯಾರ್ಥಿಗಳು ತಮಗಿಷ್ಟ ಬಂದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಆಯಾ ವಿವಿಗಳ ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮೆರಿಟ್, ಮೀಸಲಾತಿ, ಸೀಟುಗಳ ಲಭ್ಯತೆ ಆಧಾರದಲ್ಲಿ ಕಾಲೇಜುಗಳಲ್ಲಿ ಪ್ರವೇಶ ಕೊಡಲಾಗುತ್ತದೆ ಎನ್ನಲಾಗುತ್ತಿದೆ. ಬಿಎಸ್ಸಿಗೆ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮೂಲಕ ಪ್ರವೇಶ ನೀಡುವ ಚಿಂತನೆಯನ್ನು ಸರ್ಕಾರ ಕೈಬಿಟ್ಟಿದ್ದು, ವಿಜ್ಞಾನ ಬೋಧನೆ ಮತ್ತು ಕಲಿಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪದವಿ ವಿಜ್ಞಾನ ಪ್ರವೇಶಕ್ಕೂ ಸಿಇಟಿ ತರುವ ಯೋಚನೆ ಇತ್ತು. ಆದರೆ, ಸದ್ಯಕ್ಕೆ ಕೈ ಬಿಡಲಾಗಿದೆ.

      ಹೊಸ ರಾಷ್ಷ್ರೀಯ ಶಿಕ್ಷಣ ನೀತಿಯ ಅನುಸಾರ ಇಂದಿನಿಂದ ಪದವಿ ತರಗತಿಗಳಿಗೆ ಆನ್‍ಲೈನ್ ಮೂಲಕ ಪ್ರವೇಶಾತಿ ಆರಂಭವಾಗಿದ್ದು, ಕನ್ನಡ ಭಾಷೆಯ ಕಲಿಕೆಗೆ ಮೊದಲ ಆದ್ಯತೆ ನೀಡಲಾಗಿದೆ. ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳು ಸಹ ಕಡ್ಡಾಯವಾಗಿ ಕನ್ನಡ ಕಲಿಯಬೇಕಿದ್ದು, ಇಂಗ್ಲೀಷ್ ಕೇವಲ ಸಂವಹನ ಭಾಷೆಯಾಗಿ ಕಲಿಯಲು ಅವಕಾಶವಿದೆ.

-ಡಾ.ಶಿವಚಿತ್ತಪ್ಪ, ಕುಲಸಚಿವರು, ತುಮಕೂರು ವಿವಿ

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap