ಸಿದ್ಧಗಂಗೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಹರಿದ ಆರೋಗ್ಯಗಂಗೆ!!

 ತುಮಕೂರು : 

      ಉದ್ಬವಗಂಗೆ ಹರಿಯುವ ತ್ರಿವಿಧ ದಾಸೋಹದ ಬೀಡು ಸಿದ್ಧಗಂಗೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಆರೋಗ್ಯ ಗಂಗೆಯೂ ಹರಿದಿದ್ದಾಳೆ. ಇದೇನು ಅಂತಾ ಅಚ್ಚರಿಯಾಗಬೇಡಿ. ಕೋವಿಡ್ 2ನೇ ಅಲೆ ತೀವ್ರವಾಗಿದ್ದ ಕಳೆದ ತಿಂಗಳಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರಕಾರೇತರ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲು ಮುಂದೆ ಬಂದಿದ್ದು ಸಿದ್ಧಗಂಗಾ ಶ್ರೀ ಮಠ. ಮಠದ ಯಾತ್ರಿ ನಿವಾಸವನ್ನು ಸೋಂಕಿತರ ಆಶ್ರಯಾಲಯವಾಗಿಸಿ ಆರೈಕೆ ಮಾಡಿದವರು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರು.

ಮಠದ ಕೇರ್ ಸೆಂಟರ್‍ಗೆ ಭೇಟಿಕೊಟ್ಟಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ.

      ಸಿದ್ಧಗಂಗೆಯಲ್ಲಿ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರು ಬೆಳಗಿಸಿದ ತ್ರಿವಿಧ ದಾಸೋಹದ ಜ್ಯೋತಿಯ ಕಿರಣ ಮತ್ತಷ್ಟು ಪ್ರಜ್ವಲಿಸುವಂತೆ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಆರೈಕೆ ಕೇಂದ್ರವನ್ನು ತೆರೆದು, ಕಳೆದ ತಿಂಗಳ ಮೇ 3 ರಿಂದ ಆರೈಕೆ ಮಾಡುತ್ತಿದ್ದು 385ಕ್ಕೂ ಅಧಿಕಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದು, ಆರೈಕೆ ಕೇಂದ್ರದಲ್ಲಿ ದೊರೆತ ಉತ್ತಮ ಆರೈಕೆ ಬಗ್ಗೆ ಕೃತಜ್ಞತೆಯ ಮಾತುಗಳನ್ನಾಡಿದ್ದಾರೆ. ಮೇ 28ರಂದು ತುಮಕೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಹ ಮಠದ ಕೋವಿಡ್ ಕೇರ್ ಸೆಂಟರ್‍ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಕೃಷ್ಣಪ್ಪ, ಡಿಸಿ ವೈ.ಎಸ್.ಪಾಟೀಲ್ ಅವರೊಟ್ಟಿಗೆ ಭೇಟಿಕೊಟ್ಟು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

     ಮಠದಿಂದಲೇ ಎಲ್ಲಾ ವ್ಯವಸ್ಥೆ:

ಶ್ರೀಸಿದ್ಧಲಿಂಗಸ್ವಾಮೀಜಿ.

     ಏಪ್ರಿಲ್ ಎರಡನೇ ವಾರದಿಂದ ಕಾಣಿಸಿಕೊಳ್ಳಲಾರಂಭಿಸಿದ ಕೋವಿಡ್ ಎರಡನೇ ಅಲೆ, ಮಾಸಾಂತ್ಯ ಹಾಗೂ ಮೇ ಮೊದಲ ವಾರದಲ್ಲಿ ತೀವ್ರ ಸ್ವರೂಪ ತಾಳಿ ಎಲ್ಲೆಲ್ಲೂ ಬೆಡ್,ಆಕ್ಸಿಜನ್‍ಗೆ ಹಾಹಾಕಾರ ಸೃಷ್ಟಿಯಾಗಿತ್ತು. ತುಮಕೂರು ಸಹ ಇದರಿಂದ ಹೊರತಾಗಿಲ್ಲ.ಕೋವಿಡ್ ಕೇರ್ ಸೆಂಟರ್‍ಗಳು ತೆರೆಯಲು ಬೇಡಿಕೆ ಹೆಚ್ಚಿತ್ತು. ಇದನ್ನರಿತ ಸಿದ್ಧಗಂಗಾ ಸ್ವಾಮೀಜಿ ಅವರು ಸರಕಾರಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಮುನ್ನವೇ ಮಠದಲ್ಲಿದ್ದ ಯಾತ್ರಿ ನಿವಾಸವನ್ನೇ ಸೋಂಕಿತರ ಆರೈಕೆ ಕೇಂದ್ರವಾಗಿ ಮಾರ್ಪಡಿಸಲು ತೀರ್ಮಾನಿಸಿ, ಗ್ರಾಮಾಂತರ ಭಾಗದ ಸೋಂಕಿತರಿಗೆ ಆದ್ಯತೆ ಮೇರೆಗೆ ಶುಶ್ರೂಷೆಗೆ ನೆರವಾದರು.

25 ಆಕ್ಸಿಜನ್ ಬೆಡ್:

      ಶ್ರೀಗಳ ಅಣತಿಯಂತೆ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕರಾದ ಡಾ.ಎಸ್.ಪರಮೇಶ್ ಹಾಗೂ ಮಠದ ಆಡಳಿತ ಮಂಡಳಿಯವರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸರಕಾರದ ಮಾನದಂಡದ ಅನುಸಾರ 90 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆದು ಸೋಂಕಿತರನ್ನು ದಾಖಲೆ ಮಾಡಿಕೊಳ್ಳಲಾರಂಭಿಸಿದರು. ಆಕ್ಸಿಜನ್ ಬೆಡ್ ಕೊರತೆ ನೀಗಿಸಲು ಟಿವಿಎಸ್ ಕಂಪನಿಯವರು ಕೊಡುಗೆ ನೀಡಿದ ಆಕ್ಸಿಜನ್ ಕಾನ್ಸರ್‍ಟ್ರೇಟರ್ ಸದ್ಬಳಕೆ ಮಾಡಿ 25 ಆಕ್ಸಿಜನ್ ಬೆಡ್ ಸಹ ವ್ಯವಸ್ಥೆ ಮಾಡಲಾಯಿತು.ಕೋವಿಡ್ ಕೇರ್ ಸೆಂಟರ್ ನಿರ್ವಹಣೆಗೆಂದೇ 4 ಮಂದಿ ಪ್ರತ್ಯೇಕ ವೈದ್ಯರು, 8 ಜನ ದಾದಿಯರು, 8 ಮಂದಿ ಕೇರ್ ಟೇಕರ್ಸ್‍ಗಳನ್ನು ಮಠದಿಂದಲೇ ನೇಮಕ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಕೋವಿಡ್ ಸ್ಕೋರ್ 5ಕ್ಕಿಂತ ಕಡಿಮೆಯಿದ್ದವರಿಗೆಅಗತ್ಯ ಲಸಿಕೆಗಳನ್ನು ಸಹ ಉಚಿತವಾಗಿ ಹಾಕಿ ಸಂಪೂರ್ಣ ಗುಣಮುಖರಾಗುವಂತೆ ಮಾಡಲಾಗಿದೆ.

      ಇನ್ನೂ ಮಾರ್ಗಸೂಚಿಯನ್ವಯವೇ ಪೌಷ್ಠಿಕಾಂಶ ಯುಕ್ತ ಆಹಾರ, ಕಷಾಯವನ್ನು ದಿನಕ್ಕೆ 3 ಬಾರಿ ಒದಗಿಸುತ್ತಿದ್ದು, ಇದಕ್ಕಾಗಿ ಎಸ್‍ಐಟಿಯಿಂದ ಅಡುಗೆಯವರನ್ನು ಕರೆತಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕೇರ್ ಸೆಂಟರ್‍ನಲ್ಲಿ ಉಸಿರಾಟದ ತೀವ್ರ ತೊಂದರೆ ಕಂಡುಬಂದವರನ್ನು ಸರಕಾರಿ, ಸಿದ್ಧಗಂಗಾ ಆಸ್ಪತ್ರೆಗಳಿಗೆ ಎನ್‍ಬಿಆರ್‍ಕೆಯಡಿ ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸಲಾಗಿದೆ.

     ಚಿಕಿತ್ಸೆಯಿಂದಿಗೆ ಆಧ್ಯಾತ್ಮದ ಚಿಂತನೆ:

      ಮಠದ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾದವರು ಬರೀ ಆರೋಗ್ಯವನ್ನಷ್ಟೇ ಸುಧಾರಿಸಿಕೊಂಡು ಹೋಗಿಲ್ಲ. ಯೋಗ, ಆಧ್ಯಾತ್ಮದ ಅರಿವು ಸಹ ಮೂಡಿಸಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಸಂಜೆ ಯೋಗ, ಪ್ರಾರ್ಥನೆ, ವೈದ್ಯರಿಂದ ಉಪಯುಕ್ತ ಸಲಹೆಗಳನ್ನು ನೀಡಿದ್ದು, ಸಿದ್ಧಲಿಂಗಸ್ವಾಮೀಜಿ ಸಹ ಆಗಾಗ್ಗೆ ಬಂದು ಸೋಂಕಿತರ ಯೋಗಕ್ಷೇಮ ವಿಚಾರಿಸಿಕೊಳ್ಳುವ ಜೊತೆಗೆ ಬದುಕಿನಲ್ಲಿ ವಿಶ್ವಾಸ ಬೆಳೆಸಿಕೊಳ್ಳುವ ಮಾತುಗಳನ್ನಾಡುತ್ತಿರುವುದು ಸೋಂಕಿತರ ಆತ್ಮವಿಶ್ವಾಸ ಹೆಚ್ಚಿಸಿದೆ.

ಸದ್ಯ ,ಸೋಂಕಿನ ಪ್ರಮಾಣ ತಗ್ಗಿರುವುದರಿಂದ ಕೇರ್ ಸೆಂಟರ್‍ಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಪ್ರಸ್ತುತ ಕೇವಲ 12 ಮಂದಿ ಮಾತ್ರ ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದು ಅನ್‍ಲಾಕ್ ಆಗುವವರೆಗೆ ಮಾತ್ರ ಕೇರ್ ಸೆಂಟರ್ ಅನ್ನು ನಿರ್ವಹಿಸಲು ಚಿಂತಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಸಹ ಸಲಹೆ ನೀಡಿದೆ ಎಂದು ಕೇರ್ ಸೆಂಟರ್ ಉಸ್ತುವಾರಿ ಡಾ.ಎಸ್.ಪರಮೇಶ್ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
 

3ನೇ ಅಲೆ ಭೀತಿ, ವ್ಯವಸ್ಥೆ ಉಳಿಸಿಕೊಳ್ಳಲು ಶ್ರೀಗಳ ಸೂಚನೆ :

ಕೇರ್ ಸೆಂಟರ್ ಉಸ್ತುವಾರಿ ಡಾ.ಎಸ್.ಪರಮೇಶ್.

      ಸಿದ್ಧಗಂಗಾ ಮಠವೆಂದರೆ ಸಾವಿರಾರು ಮಕ್ಕಳ ಆಲಯ. ಅವರ ಯೋಗಕ್ಷೇಮದ ಬಗ್ಗೆ ಮಠ ಯಾವತ್ತೂ ಕಳಕಳಿ ಹೊಂದಿರುವ ಕಾರಣಕ್ಕೆ ಶ್ರೀಮಠದ ಮಕ್ಕಳು ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಭಾಗದ ಕೋವಿಡ್ ಸೋಂಕಿತರ ಶುಶ್ರೂಷೆಗಾಗಿ ಶ್ರೀಸಿದ್ಧಲಿಂಗಸ್ವಾಮೀಜಿ ಅವರು ಎಲ್ಲಾ ವ್ಯವಸ್ಥೆಯನ್ನು ಮಠದಿಂದಲೇ ಮಾಡಿ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ ಸೂಚಿಸಿದರು.

      ಅದರಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮಾರ್ಗದರ್ಶನದೊಂದಿಗೆ ಮೇ 3ರಿಂದ ಕೇರ್ ಸೆಂಟರ್ ನಿರ್ವಹಣೆ ಮಾಡುತ್ತಿದ್ದು, 385 ಮಂದಿ ಈವರೆಗೆ ಗುಣಮುಖರಾಗಿದ್ದಾರೆ. 3ನೇ ಅಲೆ ಮಕ್ಕಳಿಗೆ ಎದುರಾಗತ್ತದೆಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಕೇರ್ ಸೆಂಟರ್‍ನ ವ್ಯವಸ್ಥೆ ಹಾಗೆ ಉಳಿಸಿಕೊಳ್ಳುವಂತೆ ಶ್ರೀಗಳು ಸೂಚಿಸಿರುವುದು ಅವರ ಮಕ್ಕಳ ಮೇಲಿನ ಕಾಳಜಿಯ ಪ್ರತೀಕವೆನಿಸಿದೆ ಎಂದು ಡಾ.ಎಸ್.ಪರಮೇಶ್ ತಿಳಿಸಿದ್ದಾರೆ.

     ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಾರ್ಯವನ್ನು ಸಿದ್ಧಗಂಗಾ ಮಠದ ಗುರುಪರಂಪರೆ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಪೂಜ್ಯ ಡಾ.ಶಿವಕುಮಾರಸ್ವಾಮೀಜಿ ಅವರ ಕಾಲಘಟ್ಟದಲ್ಲಿ ಪ್ಲೇಗ್, ಕಾಲರಾ, ಬರ ಬಂದಾಗಲೆಲ್ಲ ಜನರು ಶ್ರೀ ಮಠಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಅನಿರೀಕ್ಷಿತವಾಗಿ ಎದುರಾದ ಕೋವಿಡ್ 2ನೇ ಅಲೆ ಜನರಿಗೆ ಬೆಡ್‍ಗಳು ಸಿಗದಂತೆ ಮಾಡಿತ್ತು. ಅದಕ್ಕಾಗಿ ಮಠದಿಂದಲೇ ಕೋವಿಡ್ ಕೇರ್ ಸೆಂಟರ್ ತೆರೆದು ಸೋಂಕಿತರ ಆರೈಕೆ ಮಾಡಲಾಗಿದೆ.

-ಶ್ರೀ ಸಿದ್ಧಲಿಂಗಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು.

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link