ತುಮಕೂರು : ವೈವಿಧ್ಯಮಯ ಮಾಹಿತಿ ನೀಡುವ ಸಿದ್ಧಗಂಗಾ ವಸ್ತುಪ್ರದರ್ಶನ

 ತುಮಕೂರು : 

      ಕೊರೊನಾ ಆತಂಕದಲ್ಲಿಯೂ ಸಿದ್ಧಗಂಗಾ ವಸ್ತುಪ್ರದರ್ಶನ ಹಲವು ವಿಧದ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಸಂಖ್ಯೆಯ ಮಳಿಗೆಗಳಿವೆ. ಆದರೂ ಉತ್ತಮ ಮಾಹಿತಿ ಕೆಲವೊಂದು ಮಳಿಗೆಗಳಿಂದ ದೊರಕುತ್ತಿದೆ.

ಸುಮಾರು 18 ಸರ್ಕಾರಿ ಮಳಿಗೆಗಳು ಹಾಗು ಖಾಸಗಿಯಾಗಿ 100ಕ್ಕೂ ಹೆಚ್ಚು ಸ್ಟಾಲ್‍ಗಳಿವೆ. ಸರ್ಕಾರಿ ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ. ಸಂಬಂಧಿಸಿದ ಕೈಪಿಡಿ ಹಾಗೂ ಕರಪತ್ರಗಳನ್ನು ಸ್ಟಾಲ್‍ಗಳ ಮುಂದೆ ಇಡಲಾಗಿದ್ದು, ಇದು ಸಾರ್ವಜನಿಕರಿಗೆ ಮಾಹಿತಿ ತಿಳಿಯಲು ಅನುಕೂಲಕರವಾಗಿದೆ.

      ರೇಷ್ಮೆ ಇಲಾಖೆ, ಪಶುವೈದ್ಯಕೀಯ, ಆರೋಗ್ಯ, ಕೈಗಾರಿಕೆ, ಅರಣ್ಯ, ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಜಲಾನಯನ, ಶಿಕ್ಷಣ ಇಲಾಖೆ, ಮಹಿಳಾ ಇಲಾಖೆ, ಪ್ರವಾಸೊದ್ಯಮ ಸಿದ್ಧಗಂಗಾ ವಿದ್ಯಾಸಂಸ್ಥೆ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಸೇರಿದಂತೆ ಹಲವು ಹತ್ತು ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.

ಕೈಗಾರಿಕೆ, ಕೃಷಿ, ಆರೋಗ್ಯ, ತೊಟಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಗ್ರಾಮೀಣ ಜನತೆಗೆ ಹೊಸ ಮಾಹಿತಿ ಒದಗಿಸುವ ವ್ಯವಸ್ಥೆ ಇಲ್ಲಿದೆ. ಕೆಲವು ಮಳಿಗೆಗಳು ನಾಮಕಾವಸ್ಥೆಗೆ ತೆರೆದಿದ್ದರೆ ಮತ್ತೆ ಕೆಲವು ಮಳಿಗೆಗಳಲ್ಲಿ ಉಪಯುಕ್ತ ಮಾಹಿತಿ ದೊರೆಯುತ್ತಿದೆ.

      ಕೊರೊನಾ ಆತಂಕದ ಈ ಸಮಯದಲ್ಲಿ ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳನ್ನು ವಿವರಿಸುವ ಚಾರ್ಟ್‍ಗಳನ್ನು ಪ್ರದರ್ಶಿಸಲಾಗಿದೆ. ಸರ್ಕಾರದ ವಿವಿಧ 20 ಕಾರ್ಯಕ್ರಮಗಳು ಹಾಗೂ ಕೊರೊನಾ ಮುಂಜಾಗ್ರತೆಯ ಮಾಹಿತಿಗಳ ಫಲಕಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಮಳಿಗೆಯ ಒಂದು ಭಾಗದಲ್ಲಿ ತಾತ್ಕಾಲಿಕವಾಗಿ ಒಂದು ವೈದ್ಯರ ಕೊಠಡಿಯನ್ನೂ ಸಹ ತೆರೆಯಲಾಗಿದೆ. ರೋಗಗಳ ಬಗ್ಗೆ ಸಾಕಷ್ಟು ಮುದ್ರಿತ ಕರಪತ್ರಗಳು ಅಲ್ಲಿದ್ದು, ಸಾರ್ವಜನಿಕರು ಅವುಗಳನ್ನು ಪಡೆದು ಹೋಗುತ್ತಿದ್ದಾರೆ.
ಜಿಲ್ಲೆಯಲ್ಲಿ ಹಿಂದೆ ರೇಷ್ಮೆ ಉತ್ಪಾದನೆ ಅಧಿಕವಾಗಿತ್ತು. ಇತ್ತೀಚಿನ ದಿನಗಳಲ್ಲಿ ರೈತರು ಅದರಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಕಾರಣಗಳೇನು ಮತ್ತು ಅದರಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ರೇಷ್ಮೆ ಉತ್ಪಾದಿಸುವ ರೈತರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಉತ್ಪಾದನೆ ಮಾತ್ರ ಅಷ್ಟೇ ಪ್ರಮಾಣದಲ್ಲಿದೆ. ಶಿರಾ, ಪಾವಗಡದ ಪ್ರದೇಶಗಳಲ್ಲಿಯೂ ರೇಷ್ಮೆ ಉತ್ಪಾದನೆ ಹೆಚ್ಚಿರುವುದು ಒಂದು ವಿಶೇಷ ಎನ್ನುತ್ತಾರೆ ಅಧಿಕಾರಿ ಚೇತನ.

      ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಯಂತ್ರೋಪಕರಣಗಳು, ಆವಿಷ್ಕಾರದ ಮಾಹಿತಿಯೂ ಅಷ್ಟೇ ಗಮನ ಸೆಳೆಯುತ್ತಿದೆ. ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಯ ಪ್ರಯತ್ನಗಳು ಎಂದಿನಂತೆ ಮುಂದುವರೆದಿವೆ.

      ಈ ಬಾರಿಯ ವಸ್ತುಪ್ರದರ್ಶನದಲ್ಲಿ ರಾಜ್ಯ ಸರ್ಕಾರದ 12 ಮಳಿಗೆಗಳು ಖಾಸಗಿ ಸಂಸ್ಥೆಗಳ 170 ಮಳಿಗೆಗಳು ಸೇರಿ ಒಟ್ಟು 186 ಮಳಿಗೆಗಳು ಭಾಗವಹಿಸಿವೆ. ಖಾಸಗಿ, ಸ್ತ್ರೀಶಕ್ತಿ ಸಂಘಗಳು ಅವರ ಉತ್ಪಾದನೆಗಳನ್ನು ಪರಿಚಯಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಿದ್ದ ಮಹಿಳೆಗಳಿಗೆ ಉತ್ತಮ ಪ್ರದರ್ಶನಕ್ಕಾಗಿ ಬಹುಮಾನ ನೀಡಲಾಗುತ್ತಿದೆ ಎಂದು ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ತಿಳಿಸಿದರು.

     ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿದ್ದ ಜನತೆ ಜಾತ್ರೆ ಮತ್ತು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ತಮ್ಮ ಮನಸ್ಸನ್ನು ಸಂತೋಷಗೊಳಿಸಿಕೊಂಡಿದ್ದಾರೆ. ಕೈಕಟ್ಟಿ ಕೂತಿದ್ದ ಮಕ್ಕಳ ಅಮ್ಯೂಸ್‍ಮೆಂಟ್ ಮತ್ತು ಮಳಿಗೆಗಳ ವ್ಯಾಪಾರಸ್ಥರಿಗೆ ಉತ್ತೇಜನ ಸಿಕ್ಕಿದಂತಾಗಿದೆ.

-ಬಿ.ಗಂಗಾಧರಯ್ಯ, ಕಾರ್ಯದರ್ಶಿ ವಸ್ತುಪ್ರದರ್ಶನ ಸಮಿತಿ.

4 ಲಕ್ಷ ಭಕ್ತರ ಭೇಟಿ

       ಬುಧವಾರದ 9ನೇ ದಿನಕ್ಕೆ ನಾಲ್ಕು ಲಕ್ಷ ಭಕ್ತರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಬರುವ ನಿರೀಕ್ಷೆ ಇದೆ. ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ನಡೆಯುತ್ತಿವೆ. ಪ್ರತಿದಿನ 30 ರಿಂದ 50 ಸಾವಿರದವರೆಗೂ ಭಕ್ತರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಶಿವರಾತ್ರಿಯಂದು 1 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ. ವಸ್ತುಪ್ರದರ್ಶನಕ್ಕೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಗ್ರಂಥ ಪರಿಚಯಿಸುವ ಚಿಂತನೆ ನಡೆಯುತ್ತಿದೆ. ಕೊರೊನಾ ಮುಂಜಾಗ್ರತೆಗಾಗಿ ಆರೋಗ್ಯ ಇಲಾಖೆ ನಮ್ಮೊಂದಿಗೆ ಸಾಕಷ್ಟು ಶ್ರಮಿಸುತ್ತಿದೆ.

-ಕೆಂ.ಬ.ರೇಣುಕಯ್ಯ, ಜಂಟಿ ಕಾರ್ಯದರ್ಶಿ, ವಸ್ತುಪ್ರದರ್ಶನ ಸಮಿತಿ.

Recent Articles

spot_img

Related Stories

Share via
Copy link