ತುಮಕೂರು :
ನಾನು ಯಾವುದೇ ಜಾತಿ ಕೋಟಾದಲ್ಲಿ ಮಂತ್ರಿಯಾಗಿಲ್ಲ. ಪರಿಶ್ರಮದಿಂದ ಬೆಳೆದಿರುವ ಪಕ್ಷದ ಕಾರ್ಯಕರ್ತನಿಗೆ ಈಗ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಜಾತಿ ಕೋಟಾ ಇಲ್ಲ ಎಂದು ನೂತನ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬ್ರಾಹ್ಮಣ ಕೋಟಾದಡಿ ಮಾಜಿ ಸಚಿವ ಸುರೇಶ್‍ಕುಮಾರ್ ಅವರನ್ನು ಕೈಬಿಟ್ಟು ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ನಮ್ಮ ಪಕ್ಷದಲ್ಲಂತೂ ಯಾವುದೇ ರೀತಿಯ ಜಾತಿ ಕೋಟಾ ಇಲ್ಲ. ಆದರೆ ಮಾಧ್ಯಮದವರು ಜಾತಿಯ ಹೊಸ ಬಣ್ಣ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಸುರೇಶ್‍ಕುಮಾರ್ ಅವರಷ್ಟು ಅನುಭವ, ಸಾಮಥ್ರ್ಯ, ಹೋರಾಟ ಶಕ್ತಿ ನನಗಿಲ್ಲ. ನನ್ನನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವರನ್ನು ಕೈಬಿಟ್ಟಿದ್ದಾರೆ ಎಂಬುದು ಸರಿಯಲ್ಲ. ಹೊಸ ಜವಾಬ್ದಾರಿ ನೀಡಿರುವ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳ ಅಪೇಕ್ಷೆಯನ್ನು ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಖಾತೆ ಕ್ಯಾತೆ ಮಾಡೋಲ್ಲ:
ಪಕ್ಷದ ವರಿಷ್ಠರು ನನಗೆ ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಪ್ರತಿಕ್ರಿಯಿಸಿದ ಬಿ.ಸಿ. ನಾಗೇಶ್‍ಅವರು ನಾನು ಮಂತ್ರಿಗಿರಿಯನ್ನೆ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಾಗಾಗಿ ಇಂತಹದ್ದೇ ಖಾತೆ ಬೇಕು ಎಂಬ ಅಪೇಕ್ಷೆಯನ್ನೂ ಹೊಂದಿಲ್ಲ. ವರಿಷ್ಠರು, ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸ ಇಟ್ಟು ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವೆ ಎಂದರು.
ಶೀಘ್ರ ಯಾದಗಿರಿ ಭೇಟಿ:
ಕೋವಿಡ್ 3ನೇ ಅಲೆ ಬರಲಿದೆ ಎಂಬ ಬಗ್ಗೆ ತಜ್ಞರು ನೀಡಿರುವ ವರದಿ ಹಿನ್ನೆಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿಗಳು ನನಗೆ ಯಾದಗಿರಿ ಜಿಲ್ಲೆಯ ಹೊಣೆ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಅಲ್ಲಿನ ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಅಲ್ಲಿನ ಪರಿಸ್ಥಿತಿ, ತಯಾರಿ ಬಗ್ಗೆ ಚರ್ಚಿಸುತ್ತೇನೆ. ಶೀಘ್ರದಲ್ಲೇ ಯಾದಗಿರಿಗೆ ತೆರಳುತ್ತೇನೆ ಎಂದರು.
ಯಾವ ಜಿಲ್ಲೆಯ ಉಸ್ತುವಾರಿ ಬಯಸುತ್ತೀರಾ ಎಂಬ ಪ್ರಶ್ನೆಗೆ, ಇನ್ನು ಆ ಬಗ್ಗೆ ಚರ್ಚೆಯಾಗಿಲ್ಲ. ಸದ್ಯಕ್ಕೆ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಹೊಣೆ ಮಾತ್ರ ವರಿಷ್ಠರು ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, , ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್, ಮಾಜಿ ಸಚಿವ ಶಿವಣ್ಣ, ಮೇಯರ್ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮುಖಂಡರಾದ ರವಿ ಹೆಬ್ಬಾಕಕೊಪ್ಪಲ್ ನಾಗರಾಜು, ದಿಲೀಪ್‍ಕುಮಾರ್, ಮಲ್ಲಸಂದ್ರ ಶಿವಣ್ಣ, ವೇದಮೂರ್ತಿ, ರುದ್ರೇಶ್ ಹಾಗೂ ಬಿಜೆಪಿಯ ಪಾಲಿಕೆ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.
ತಿಪಟೂರು ಜಿಲ್ಲೆಯಾಗಲು ಖಂಡಿತಾ ಅರ್ಹವಾಗಿದೆ
ಬೆಳಗಾವಿ ಬಿಟ್ಟರೆ ಅತ್ಯಂತ ಹೆಚ್ಚು ತಾಲೂಕುಗಳನ್ನು ಹೊಂದಿ ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆ ತುಮಕೂರು. ಪಾವಗಡ, ತಿಪಟೂರು, ಚಿ.ನಾ.ಹಳ್ಳಿ, ತುರುವೇಕೆರೆ ಭಾಗಗಳು ಜಿಲ್ಲೆಯಿಂದ ಬಹಳ ದೂರ ಇವೆ. ಆಡಳಿತಾತ್ಮಕವಾಗಿ ತುಮಕೂರು ಜಿಲ್ಲೆಯನ್ನು ವಿಭಜಿಸುವುದು ಸೂಕ್ತವೂ ಆಗಿದೆ. ತಿಪಟೂರು ಜಿಲ್ಲಾ ಕೇಂದ್ರವಾಗಲು ಖಂಡಿತಾ ಅರ್ಹವಾಗಿದೆ. ಅದುರಾಜ್ಯಮಟ್ಟದಲ್ಲಿ ಆಗಬೇಕಾದ ತೀರ್ಮಾನ. ಹೊಸ ಜಿಲ್ಲೆ ರಚನೆ ಪ್ರಕ್ರಿಯೆ ಸಂದರ್ಭದಲ್ಲಿ ಆ ಬಗ್ಗೆ ಸರಕಾರ ತೀರ್ಮಾನಿಸಲಿದೆ.
-ಬಿ.ಸಿ.ನಾಗೇಶ್, ತಿಪಟೂರು ಶಾಸಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ