ತುಮಕೂರು :

ಜಿಲ್ಲೆಗೆ ಶಿಖರ ಪ್ರಾಯದಂತಿರುವ ಸಿದ್ಧಗಂಗಾ ಮಠಕ್ಕೆ ನೇರ ಪ್ರವೇಶ ಪಡೆಯುವ ಕ್ಯಾತ್ಸಂದ್ರ ರೈಲ್ವೇಗೇಟ್ ಅನ್ನು ಅಂಡರ್‍ಪಾಸ್ ಕಾಮಗಾರಿಗಾಗಿ ಮುಚ್ಚಿ ಇದೇ ಸೆ.25ಕ್ಕೆ ಬರೋಬ್ಬರಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಅಂಡರ್‍ಪಾಸ್ ಕಾಮಗಾರಿ ಭೂ ವಿವಾದದಿಂದ ನನೆಗುದಿಗೆ ಬಿದ್ದಿದ್ದು, ಮಠದ ಹಿಂಭಾಗದಿಂದ ಒಂದೂವರೆ-ಎರಡು ಕಿ.ಮೀ ಸುತ್ತಾಕಿ ಪ್ರವೇಶ ಪಡೆಯುವಂತಾಗಿರುವುದು ಹೊರಗಿನಿಂದ ಬರುವ ಭಕ್ತರು, ಸ್ಥಳೀಯನಿವಾಸಿಗಳಿಗೂ ತೊಂದರೆಯಾಗಿ ಪರಿಣಮಿಸಿದೆ.
ರೈಲ್ವೇ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕಾಲವಾಗುವುದಕ್ಕೆ ಕೆಲ ತಿಂಗಳ ಹಿಂದೆಯಷ್ಟೇ ಸ್ಥಳೀಯ ಜನಪ್ರತಿನಿಧಿಗಳು, ಭಕ್ತರ ಒತ್ತಾಯದ ಮೇರೆಗೆ 2.3 ಕೋಟಿ ವೆಚ್ಚದ ಕ್ಯಾತ್ಸಂದ್ರ ರೈಲ್ವೇ ಅಂಡರ್‍ಪಾಸ್ ಕಾಮಗಾರಿಗೆ ಮಂಜೂರಾತಿ ನೀಡಿದ್ದರು. ಕಳೆದ ವರ್ಷದ ಸೆ.25ರಂದು ಕಾಮಗಾರಿಯನ್ನು ಆರಂಭಿಸಲಾಯಿತು. 6 ತಿಂಗಳಲ್ಲಿ ಕಾಮಗಾರಿ ಮುಗಿಸಿ ಅಂಡರ್‍ಪಾಸ್ ಅನ್ನು ದ್ವಿಚಕ್ರವಾಹನ ಹಾಗೂ ಕಾರುಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದೆಂದು ಅಧಿಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಘೋಷಿಸಿದರು. ಆದರೆ ಕ್ಯಾತ್ಸಂದ್ರದಿಂದ ಅಂಡರ್‍ಪಾಸ್‍ಗೆ ಪ್ರವೇಶಪಡೆಯುವ ಭಾಗದಲ್ಲೇ ತಲೆದೋರಿರುವ ಅಗತ್ಯ ಭೂಸ್ವಾಧೀನ ವಿವಾದ ಕಾಮಗಾರಿ ವರ್ಷ ಕಳೆದರೂ ಮುಗಿಯದ ಪರಿಸ್ಥಿತಿ ತಂದೊಡ್ಡಿದೆ.
ಅಂಡರ್‍ಪಾಸ್ ಉತ್ತರ ಭಾಗದ ಮಠದ ಕಡೆಯ ಕಾಮಗಾರಿ ಮುಗಿದು, ಅಪ್ರೋಚ್ ರಸ್ತೆ ಸಹ ನಿರ್ಮಾಣವಾದರೂ, ದಕ್ಷಿಣದ ಪ್ರವೇಶದ್ವಾರದಲ್ಲಿ ರೀಟೈನಿಂಗ್ ವಾಲ್, ಅಪ್ರೋಚಿಂಗ್ ರಸ್ತೆ ನಿರ್ಮಿಸಲು ಭೂಮಿ ಅಲಭ್ಯವಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಪೂರ್ಣಕ್ಕೆ ಅವಶ್ಯಕವಾದ ಭೂಮಿಯನ್ನು ಪ್ರವೇಶದ್ವಾರದ ಸನಿಹದಲ್ಲಿರುವ ಟೀ ಅಂಗಡಿ, ಇತರ ಖಾಸಗಿ ಒಡೆತನದವರಿಂದ ಖರೀದಿಸಿ ರೈಲ್ವೆ ಇಲಾಖೆಗೆ ರಾಜ್ಯ ಸರಕಾರ ಹಸ್ತಾಂತರಿಸಬೇಕಿದ್ದು, ಈ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬ ಇಡೀ ಅಂಡರ್‍ಪಾಸ್ ಕಾಮಗಾರಿಯನ್ನು ಅಪೂರ್ಣಗೊಳಿಸಿ ಮಠದ ನೇರ ಪ್ರವೇಶಕ್ಕೆ ತಡೆಯೊಡ್ಡಿದೆ.
ದರ ನಿಗದಿಯಲ್ಲಿ ಮೂಡದ ಸಹಮತ:
ರೈಲ್ವೆ ಇಲಾಖೆ ಅಂಡರ್‍ಪಾಸ್ ಕಾಮಗಾರಿಯ ಭೂಸ್ವಾಧೀನಕ್ಕೆ 44 ಲಕ್ಷರೂ.ಗಳನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ನೀಡಿದ್ದು, ಜಿಲ್ಲಾಡಳಿತ ಈ ಸಂಬಂಧ ನೋಟಿಸ್ ನೀಡಿ ಮೂರ್ನಾಲ್ಕು ಸುತ್ತಿನ ಚರ್ಚೆಯನ್ನು ಸಂತ್ರಸ್ತರಿಗೂ ನಡೆಸಿದರೂ, ಪರಿಹಾರ ದರ ನಿಗದಿಯಲ್ಲಿ ಸಹಮತ ಸಾಧ್ಯವಾಗಿಲ್ಲ. ಭೂಮಿ ಕಳೆದುಕೊಳ್ಳುವ ಸಂತ್ರಸ್ತರು ನಮಗೆ ಮಹಾನಗರವ್ಯಾಪ್ತಿಯ ಚದರಡಿ ದರದಲ್ಲಿ ಪರಿಹಾರ ದರ ನೀಡಬೇಕೆಂದು ಪಟ್ಟು ಹಿಡಿದಿದ್ದು, ಜಿಲ್ಲಾಡಳಿತ ವಶಪಡಿಸಿಕೊಳ್ಳುತ್ತಿರುವ ಭೂಮಿ, ವಸತಿ/ವಾಣಿಜ್ಯ ಉದ್ದೇಶವೆಂದು ಪರಿವರ್ತನೆಯಾಗದಿರುವುದರಿಂದ ಕೃಷಿ ಭೂಮಿ ದರವನ್ನು ಮಾತ್ರ ನೀಡಲು ಸಾಧ್ಯ ಎಂದು ಕಾನೂನಿನ ಅಂಶವನ್ನು ಮುಂದು ಮಾಡಿದೆ. ಆಡಳಿತ ಮತ್ತು ಖಾಸಗಿಯವರ ಈ ದರ ನಿಗದಿ ಹಗ್ಗ-ಜಗ್ಗಾಟದಲ್ಲಿ ತೊಂದರೆ ಅನುಭವಿಸುವ ಪಾಡು ನಾಗರಿಕರು, ಮಠದ ವಿದ್ಯಾರ್ಥಿಗಳದ್ದಾಗಿದೆ.
ಅಪಘಾತ ಆಗುವ ಮುನ್ನಾ ಎಚ್ಚರವಹಿಸಿ:

ಅಂಡರ್‍ಪಾಸ್ ಕಾಮಗಾರಿ ಸಲುವಾಗಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‍ಅನ್ನು ಶಾಶ್ವತವಾಗಿ 2 ಕಡೆ ಮುಚ್ಚಲ್ಪಟ್ಟಿದ್ದು, ಕ್ಯಾತ್ಸಂದ್ರದಿಂದ ಬಸ್ ಹತ್ತಿ ಶಾಲೆ-ಕಾಲೇಜಿಗೆ ತೆರಳುವ ಮಠದ ಸಾವಿರಾರು ವಿದ್ಯಾರ್ಥಿಗಳು, ಮಠಕ್ಕೆ ಬಂದು-ಹೋಗುವ ಸಾರ್ವಜನಿಕರು, ಅಂಡರ್‍ಪಾಸ್ ಇಲ್ಲದೇ ಈ ರೈಲ್ವೇ ಗೇಟ್ ಅನ್ನೇ ತಳಭಾಗದಲ್ಲೂ ತೂರಿ, ಹಳಿಗಳನ್ನು ದಾಟುತ್ತಿದ್ದು, ದಿಢೀರನೇ ರೈಲುಗಳು ಹಾದು ಹೋದರೆ ದೊಡ್ಡ ಮಟ್ಟದ ದುರಂತ ಸಂಭವಿಸುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮುಗಿದ ಗುತ್ತಿಗೆ ಅವಧಿ, ವೆಚ್ಚ ಹೆಚ್ಚಳ :
ಆಗಸ್ಟ್ 31ಕ್ಕೆ ಅಂಡರ್‍ಪಾಸ್ ಕಾಮಗಾರಿ ಗುತ್ತಿಗೆ ಅವಧಿ ಮುಗಿದಿದ್ದು, ಭೂಸ್ವಾಧೀನ ವಿಳಂಬದಿಂದ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರೈಸಲು ತೊಡಕಾಗಿದೆ. ಏತನ್ಮದ್ಯೆ ಕಬ್ಬಿಣ, ಸಿಮೆಂಟ್ ದರದಲ್ಲಿ ಆಗಿರುವ ತೀವ್ರ ಹೆಚ್ಚಳದಿಂದ ಹಳೇ ದರದಲ್ಲಿ ಕಾಮಗಾರಿ ಮುಗಿಸಲುಅಸಾಧ್ಯ ಎಂಬ ಮಾತನ್ನು ಕಾಮಗಾರಿ ಗುತ್ತಿಗೆ ಪಡೆದಿರುವ ಗೌಂಡರ್ ಅಂಡ್ ಕಂಪನಿಯವರು ಹೇಳುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ ಮತ್ತಷ್ಟು ವಿಳಂಬವಾದರೆ ಗುತ್ತಿಗೆದಾರರೇ ಕಾಮಗಾರಿಯಿಂದ ವಿಮುಖರಾಗಿ ಉಳಿಕೆ ಶೇ.30ರಷ್ಟು ಕಾಮಗಾರಿಗೆ ಹೊಸ ಗುತ್ತಿಗೆದಾರರನ್ನು ಹುಡುಕುವ ಪರಿಸ್ಥಿತಿ ಸಹ ತಲೆದೋರಬಹುದು ಎಂಬ ಆತಂಕ ರೈಲ್ವೆ ಇಲಾಖೆಯವರದ್ದಾಗಿದೆ.
ಉಸ್ತುವಾರಿ ಸಚಿವರು, ಸಂಸದರು ಗಮನಹರಿಸುವರೇ?
ಅಂಡರ್‍ಪಾಸ್‍ಗಾಗಿ ರೈಲ್ವೇ ಗೇಟ್ ಮುಚ್ಚಿದ ಬಳಿಕವೂ ಹಿಂದಿನ ಸಿಎಂ ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜಬೊಮ್ಮಾಯಿ ಅವರು ಎರಡ್ಮೂರು ಬಾರಿ ಮಠಕ್ಕೆ ಹಿಂಭಾಗದಿಂದಲೇ ಭೇಟಿ ನೀಡಿದ್ದಾರೆ. ಮಠಕ್ಕೆ ಭೇಟಿ ನೀಡುತ್ತಿರುವ ಸಚಿವರೆಲ್ಲರೂ ಸಹ ಹಿಂಬಾಗಿಲಿನ ಪ್ರವೇಶವನ್ನೇ ಮಾಡುತ್ತಿದ್ದರೂ ಸಮಸ್ಯೆ ಬಗ್ಗೆ ಯಾರು ತಲೆಕೆಡಿಸಿಕೊಳ್ಳಿಲ್ಲವೆಂಬ ಭಾವನೆ ಸ್ಥಳೀಯರದ್ದಾಗಿದೆ. 200 ಅಡಿ ಉದ್ದ 20 ಅಡಿ ಅಗಲದ ಜಾಗವಷ್ಟೆ ಅಂಡರ್‍ಪಾಸ್ ಉಳಿಕೆ ಕಾಮಗಾರಿ ಅವಶ್ಯಕವಾಗಿದ್ದು, ತಲೆತಲಾಂತರಗಳಿಂದ ಈ ಭೂಮಿಯನ್ನೇ ನೆಚ್ಚಿ ಬದುಕುತ್ತಿರುವ ಐದಾರು ಸಂತ್ರಸ್ತ ಕುಟುಂಬಗಳಿಗೆ, ಸರಕಾರವಿಶೇಷ ಪ್ರಕರಣವೆಂದು ಪರಿಭಾವಿಸಿ ಕೃಷಿ ಭೂಮಿ ದರಕ್ಕಿಂತ ಹೆಚ್ಚು ಪರಿಹಾರ ಒದಗಿಸಿದರೆ ಮಠದ ನೇರ ಪ್ರವೇಶಕ್ಕೆ ಅನುಕೂಲವಾಗುತ್ತದೆಯಲ್ಲದೆ ಸಾವಿರಾರು ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ. ಈ ಬಗ್ಗೆ ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಇನ್ನಾದರೂ ಗಮನಹರಿಸುವರೇ ಕಾದು ನೋಡಬೇಕಿದೆ.
ಸಿದ್ಧಗಂಗಾ ಮಠಕ್ಕೆ ಸಾರ್ವಜನಿಕರ ಸುಗಮ ಪ್ರವೇಶಕ್ಕೆ ರೈಲ್ವೆ ಅಂಡರ್‍ಪಾಸ್ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ. ಇರುವ ಭೂ ತೊಡಕನ್ನು ಶೀಘ್ರ ನಿವಾರಿಸಿ ಕಾಮಗಾರಿ ಬೇಗ ಮುಗಿಸಿದರೆ ಭಕ್ತರು, ಮಠದ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲಿದೆ.
– ಶ್ರೀ ಸಿದ್ಧಲಿಂಗಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು.
ಅಂಡರ್‍ಪಾಸ್ ಕಾಮಗಾರಿ ಬೇಗ ಮುಗಿಯಬೇಕೆಂಬ ಉದ್ದೇಶದಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕೈದು ಬಾರಿ ಸಭೆಗಳು ನೀಡಿದಿದ್ದು, ಸರಕಾರದ ಮಾರ್ಗಸೂಚಿ ಪ್ರಕಾರ ಕೃಷಿ ಭೂಮಿ ಪರಿಹಾರ ಮಾತ್ರ ನೀಡಲು ಸಾಧ್ಯ. ಆದರೆ ಜಮೀನಿನ ಮಾಲೀಕರು ಇದಕ್ಕೆ ಒಪ್ಪುತ್ತಿಲ್ಲ. ಇನ್ನೂ ಅವಕಾಶವಿದೆ. ಅವರು ಸಹಮತ ವ್ಯಕ್ತಪಡಿಸಿದರೆ ಪರಿಹಾರ ಧನ ಕೂಡಲೇ ಒದಗಿಸಲಾಗುವುದು. ಇಲ್ಲವಾದಲ್ಲಿ ಕಾನೂನಿನ ಅನುಸಾರ ಭೂಸ್ವಾಧೀನ ಪ್ರಕ್ರಿಯೆ ಜರುಗಿಸಲಾಗುವುದು.
-ಅಜಯ್, ಉಪವಿಭಾಗಾಧಿಕಾರಿ, ತುಮಕೂರು.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
