ಇಂದು ಶ್ರೀ ಸಿದ್ಧಲಿಂಗಸ್ವಾಮಿಗಳ ಜನ್ಮ ವರ್ಧಂತಿ

 ತುಮಕೂರು :

      ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮಿಗಳವರು 58 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಶತಾಯುಷಿ ಲಿಂಗೈಕ್ಯ ಡಾ||ಶ್ರೀ.ಶಿವಕುಮಾರ ಮಹಾಸ್ವಾಮಿಗಳವರ ಉತ್ತರಾಧಿಕಾರಿಯಾಗಿ ಸಿದ್ದಗಂಗಾ ಮಠಾಧ್ಯಕ್ಷರಾಗಿ ಶ್ರೀಮಠವನ್ನು ಮುನ್ನಡೆಸುತ್ತಿರವು ಮಾತೃಹೃದಯಿ ಶ್ರೀಗಳ ಪೂರ್ವಾಶ್ರಮ ಹಾಗೂ ಸನ್ಯಾಸ ಜೀವನ ಹಾದಿಯ ಕಿರು ಪರಿಚಯ.

      ಶ್ರೀಗಳ ಪೂರ್ವಾಶ್ರಮದ ಹೆಸರು ಬಿ.ಎಸ್.ವಿಶ್ವನಾಥ್. ತಂದೆ ಸದಾಶಿವಯ್ಯ ಶಾಲಾ ಶಿಕ್ಷಕರು, ತಾಯಿ ಶಿವರುದ್ರಮ್ಮ ಗೃಹಿಣಿ. 22.7.1963 ರಂದು ಇಂದಿನ ರಾಮನಗರ ಜಿಲ್ಲೆ (ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅದಕ್ಕೂ ಮೊದಲು ಬೆಂಗಳೂರು ಜಿಲ್ಲೆ) ಮಾಗಡಿ ತಾಲ್ಲೂಕು, ಸೋಲೂರು ಹೋಬಳಿ, ಕಂಚುಗಲ್ ಬಂಡೆ ಮಠದಲ್ಲಿ ಜನಿಸಿದ ಶ್ರೀಗಳು, ಪ್ರೌಢಶಿಕ್ಷಣವನ್ನು ಸ್ಥಳೀಯವಾಗಿಯೆ ಮುಗಿಸಿ, ಪಿಯೂಸಿ ಮತ್ತು ಪದವಿ ಶಿಕ್ಷಣಕ್ಕಾಗಿ ತುಮಕೂರಿಗೆ ಆಗಮಿಸುತ್ತಾರೆ. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ವೇದ ಸಂಸ್ಕøತ ಕಾಲೇಜಿನಲ್ಲಿ ಬಿ.ಎ. ಮತ್ತು ಸಂಸ್ಕøತ ವಿದ್ವತ್ ಶಿಕ್ಷಣ ಪೂರೈಸುತ್ತಾರೆ. ಸುಮಾರು 10 ವರ್ಷಗಳ ಕಾಲ ಶ್ರೀಮಠದ ಅನಾಥಾಲಯದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆಶ್ರಯದಲ್ಲಿ ಶಿಕ್ಷಣ ಮುಂದುವರೆಸುತ್ತಾರೆ.

       ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಸಮೀಪದ ಶಿಷ್ಯರಾಗಿ 10 ವರ್ಷಗಳ ಕಾಲ ಪೂಜಾ ಮರಿಯಾಗಿ ಸೇವೆ ಸಲ್ಲಿಸುತ್ತಾರೆ. 29.1.1988 ರಲ್ಲಿ ಚರ ಜಂಗಮ ಪಟ್ಟಾಧಿಕಾರ ವಿರಕ್ತಾಶ್ರಮ ಸ್ವೀಕರಿಸುತ್ತಾರೆ. ಅಂದಿನಿಂದ ಶ್ರೀ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳಾಗಿ ನೂತನ ನಾಮಕರಣವಾಗುತ್ತದೆ. 31.3.1988 ರಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗುತ್ತಾರೆ. 4.8.2011 ರಂದು ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಸಿದ್ಧಗಂಗಾ ಮಠದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ.
ಪ್ರತಿನಿತ್ಯ ತಾವೇ ಖುದ್ದು ಹಾಜರಾಗಿ ಪ್ರಾಥಮಿಕ 5ನೇ ತರಗತಿಯ ಮಕ್ಕಳಿಗೆ ಬೆಳಗ್ಗೆ ಹಾಲು ಕಾಯಿಸಿ ಕುಡಿಸಿ ಅವರ ಅಪೌಷ್ಟಿಕತೆಯ ನಿವಾರಣೆಗೆ ಪೋಷಕರಾಗಿದ್ದಾರೆ. ಪ್ರತಿವರ್ಷ ಗಾಂಧಿ ಜಯಂತಿಯಂದು ಆವರಣ ಸ್ವಚ್ಛತೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಾಂಧೀಜಿಯವರ ಸ್ವಚ್ಛತಾ ಕಾರ್ಯದ ಆಂದೋಲನಕ್ಕೆ ಒತ್ತುಕೊಟ್ಟು ಗಾಂಧೀಜಿಯ ಆಚರಣೆಯನ್ನು ಸಾರ್ಥಗೊಳಿಸಿದ್ದಾರೆ.

      ಪ್ರತಿ ಭಾನುವಾರ ಅಧ್ಯಾಪಕರು ಮತ್ತು ವಿದ್ಯಾರ್ಥಿ ತಂಡಗಳೊಡನೆ ವಿದ್ಯಾರ್ಥಿಗಳು ವಾಸ ಮಾಡುವ ಕೊಠಡಿ ಮತ್ತು ಆವರಣವನ್ನು ಗುಡಿಸಿ ಶುಚಿಗೊಳಿಸಿ, ಪರಿಸರ ನೈರ್ಮಲ್ಯ ಮತ್ತು ವಾತಾವರಣವನ್ನು ಶುದ್ಧಗೊಳಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.

      ಸಸ್ಯ ಸಮೃದ್ಧಿಗಾಗಿ ವನ ನಿರ್ಮಾಣ ಮತ್ತು ಆರೋಗ್ಯ ಮತ್ತು ಧಾರ್ಮಿಕ ಮನೋಭಾವವನ್ನು ಜನತೆಯಲ್ಲಿ ಮೂಡಿಸಲು 100ಕ್ಕೂ ಹೆಚ್ಚು ಬಿಲ್ವವನ ನೆಡಿಸಿ, ಬಿಲ್ವವನವನ್ನು ಆಧುನಿಕ ಶೈಲಿಯಲ್ಲಿ ನಿರ್ಮಾಣ ಮಾಡಿರುತ್ತಾರೆ. ಶ್ರೀಮಠದ ಬೆಟ್ಟದ ತಪ್ಪಲಿನಲ್ಲಿರುವ ಕೆಲವು ಐತಿಹಾಸಿಕ ಹಾಗೂ ಪುರಾತನ ಗುಹೆಗಳ ಜೀರ್ಣೋದ್ಧಾರ ಮಾಡಿಸಿ, ಅನೇಕ ಋಷಿಮುನಿಗಳು, ಸಿದ್ಧ-ಸಾಧುಗಳು ಶ್ರೀ ಸಿದ್ದಗಂಗೆಯಲ್ಲಿ ತಪೋನುಷ್ಠಾನ ಮಾಡಿದ ಕುರುಹಾಗಿ ರಾರಾಜಿಸುವಂತೆ ಮಾಡಿದ್ದಾರೆ.

ಪ್ರಾಣಿ-ಪ್ರಕೃತಿ ಪ್ರೀತಿಗೆ ಎಣೆಯಿಲ್ಲ

      ಪ್ರಾಣಿ-ಪಕ್ಷಿಗಳನ್ನು ಕಂಡರೆ ಶ್ರೀಗಳಿಗೆ ತುಂಬಾ ಪ್ರೀತಿ. ನವಿಲು, ಗಿಳಿಗಳು, ಜಿಂಕೆ, ನಾಯಿ, ಬೆಕ್ಕು ಮುಂತಾದವುಗಳನ್ನು ಸಾಕಲು ವ್ಯವಸ್ಥೆ, ಆರೈಕೆ ಮಾಡುವುದರಲ್ಲಿ ಆಸಕ್ತಿ. ಇದರ ಜೊತೆಗೆ ಪಶುಸಂಗೋಪನೆ, ಹಸು-ಕರುಗಳ ಸಾಕಾಣಿಕೆಯಲ್ಲಿ ತೀವ್ರತರವಾದ ಆಸಕ್ತಿ. ಪ್ರತಿನಿತ್ಯ ಸಾಯಂಕಾಲ ಒಂದು ಸಾರಿ ವೀಕ್ಷಣೆ ಮಾಡುತ್ತಾರೆ. ಇನ್ನು ವ್ಯವಸಾಯದಲ್ಲಿ ಹೆಚ್ಚು ಉತ್ಸಾಹ ತೋರಿಸುತ್ತಾರೆ. ಕಾಲಕಾಲಕ್ಕೆ ಬಿತ್ತನೆ, ಪೈರು ನಾಟಿ, ಬೇಸಾಯ ಮಾಡಿಸುವುದರ ಜೊತೆಗೆ ತೆಂಗು, ಮಾವಿನ ತೋಟಗಳ ಕಡೆ ಗಮನ ಹರಿಸುತ್ತಾರೆ.

      ಶೈಕ್ಷಣಿಕ ಅಭಿವೃದ್ಧಿಗಾಗಿ ಹೊಸ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡಿದುದರ ಫಲವಾಗಿ ಬಿ.ಪಿ.ಇಡಿ., ಕಾಲೇಜು, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮುಂತಾದುವುಗಳನ್ನು ಪ್ರಾರಂಭ ಮಾಡಿದರು. ಹಾಲಿ ಇರುವ ಶಾಲಾ ಕಾಲೇಜುಗಳನ್ನು ಮೇಲಿಂದ ಮೇಲೆ ತನಿಖೆ ನಡೆಸಿ ಉತ್ತಮ ಶಿಕ್ಷಣ ನೀಡಲು ಮಾರ್ಗದರ್ಶನ ಮಾಡಿ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಶ್ರೀ ಮಠದಲ್ಲಿರುವ ಬಡ ಅನಾಥ ಅಶಕ್ತ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯವಾದ ಬಟ್ಟೆ, ಪುಸ್ತಕ ಮುಂತಾದ ಸಲಕರಣೆಗಳನ್ನು ಒದಗಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಕೊಠಡಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿಸಿ ತಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಮಕ್ಕಳಿಗೆ ತಿಳಿಹೇಳುತ್ತಾರೆ.

      ನಾಡಿನಾದ್ಯಂತ ನಡೆಯುವ ಅನೇಕ ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ, ಸಾಮಾಜಿಕವಾಗಿ ನಡೆಯುವ ಸಭೆ, ಸಮಾರಂಭಗಳಲ್ಲಿ ಬೋಧಪ್ರದವಾದ, ಔಚಿತ್ಯಪೂರ್ಣವಾದ, ಸಾಂದರ್ಭಿಕವಾದ ಉದ್ಬೋಧಕವಾದ ಉಪನ್ಯಾಸಗಳನ್ನು ಮಾಡಿ, ಸಭಿಕರ ಮನಸೊರೆ ಮಾಡುವ ಕೌಶಲ ಉಳ್ಳವರಾಗಿದ್ದಾರೆ. ಇದಲ್ಲದೆ ಜಿಲ್ಲಾ, ರಾಜ್ಯ ಮಟ್ಟದ ಸಭೆ ಸಮ್ಮೇಳನಗಳಲ್ಲಿ, ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿಷಯಾಧಾರಿತ ಭಾಷಣಗಳನ್ನು ಮಾಡಿದ್ದಾರೆ. ಶ್ರೀಮಠದಲ್ಲಿ ದಾಸೋಹ ವ್ಯವಸ್ಥೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಠಕ್ಕೆ ಬರುವ ಭಕ್ತಾದಿಗಳಿಗೆ ಸುವ್ಯವಸ್ಥಿತವಾದ ಭೋಜನ ನಡೆಯುವಂತೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

      2009-10 ರಲ್ಲಿ ಆಸ್ಪ್ರೇಲಿಯಾ ದೇಶದಲ್ಲಿ ಪ್ರವಾಸ ಮಾಡಿ ಆ ದೇಶದಲ್ಲಿ ನೆಲೆಸಿರುವ ಕರ್ನಾಟಕದ ಜನತೆ ಆಯೋಜಿಸಿದ್ದ ಬಸವ ಜಯಂತಿಯ ಮೂರು ಸಮಾರಂಭಗಳಲ್ಲಿ ಭಾಗವಹಿಸಿ ಬಸವಣ್ಣನವರ ಜೀವನ, ಅವರ ಸಮಕಾಲೀನ ಶರಣರ ಜೀವನ ಸಂದೇಶ ಮತ್ತು ತತ್ವ ಸಿದ್ಧಾಂತವನ್ನು ತಿಳಿಹೇಳುವ ಉಪನ್ಯಾಸ ನೀಡಿದ್ದಾರೆ.

      ಕರ್ನಾಟಕರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕøತರೂ, ತ್ರಿವಿಧ ದಾಸೋಹಿಗಳೂ, ಶತಾಯುಷಿಗಳೂ ಆದ ಪರಮ ಪೂಜ್ಯ ಡಾ.ಶ್ರೀ ಶಿವಕುಮರ ಮಹಾಸ್ವಾಮಿಗಳವರ ಕರಕಮಲ ಸಂಜಾತರಾಗಿ ದಿನಾಂಕ 31.3.1988 ರಲ್ಲಿ ಉತ್ತರಾಧಿಕಾರಿಯಾಗಿ ನೇಮಕಗೊಂಡು ಸುಮಾರು 25 ವರ್ಷಗಳ ಕಾಲ ಪರಮಪೂಜ್ಯ ಗುರುವರ್ಯರ ದಿವ್ಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ನುರಿತಿದ್ದಾರೆ. 4.8.2011 ರಂದು ಹಿರಿಯ ಗುರುಗಳಿಂದ ವಿದ್ಯುಕ್ತವಾಗಿ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ಸ್ವೀಕಾರ ಮಾಡಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರೆಂದು ಗೌರವಿಸಲ್ಪಟ್ಟರು.

     “ಮಹಾಜನೋಯೇನ ಗತಃ ಸ ಪಂಥಾಃ ಎಂಬಂತೆ ಮಹಾನುಭಾವರು ನಡೆದು ತೋರಿದ ಮಾರ್ಗದಲ್ಲಿ ಸಾಗುವ ದಿವ್ಯ ಸಂಕಲ್ಪವುಳ್ಳವರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap