ತುಮಕೂರು : ನಿಯಂತ್ರಣಕ್ಕೆ ಬಾರದ ಸ್ಮಾರ್ಟ್ ಕಾಮಗಾರಿಗಳು!!

 ತುಮಕೂರು : 

      ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಸ್ಪರ್ಧೆಯಲ್ಲಿ ತುಮಕೂರು ಮಹಾನಗರಪಾಲಿಕೆ ರಾಜ್ಯದಲ್ಲೇ ಕಳೆದ ಬಾರಿ 2ನೇ ಸ್ಥಾನಗಳಿಸಿದ್ದು ಪ್ರಶಂಸಾರ್ಹ ಸಂಗತಿಯೇ. ಸದ್ಯ ಚಾಲನೆಗೊಂಡಿರುವ 2020-21 ವರ್ಷದ ಅಭಿಯಾನದಲ್ಲಿ ಮೊದಲನೇ ಸ್ಥಾನಕ್ಕೇರಿಸಬೇಕೆಂಬ ಪಾಲಿಕೆಯ ಆಶಯವೂ ಒಳ್ಳೆಯದೇ. ಇದಕ್ಕಾಗಿ ನಾಗರಿಕರ ಸಹಕಾರವನ್ನು ಕೋರಿರುವ ತುಮಕೂರು ಮಹಾನಗರ ಪಾಲಿಕೆ ಆಡಳಿತ ಸ್ವಚ್ಛತಾ ಕಾರ್ಯದಲ್ಲಿ ನೈಜ ಪ್ರದರ್ಶಿಸುವ ಅಗತ್ಯತೆ ಇದೆ.

      ನನ್ನ ತುಮಕೂರು, ಸ್ವಚ್ಛ ತುಮಕೂರು ಘೋಷಣೆಯೊಂದಿಗೆ ಶುಕ್ರವಾರ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆ ಅಭಿಯಾನ ಆರಂಭಿಸಿರುವ ತುಮಕೂರು ಮಹಾನಗರಪಾಲಿಕೆಗೆ ಸಮೀಕ್ಷೆಯಲ್ಲಿ ಟಾಪರ್ ಆಗುವುದೇ ಮುಖ್ಯವಾಗಬಾರದು, ಉತ್ತಮ ಸ್ವಚ್ಛತೆಯ ಕಾರ್ಯಯೋಜನೆಗಳ ಮೂಲಕ ನಾಗರಿಕರ ಮನದಲ್ಲಿ ಟಾಪರ್ ಆಗಲು ಯತ್ನಿಸಬೇಕೆಂಬ ಅಭಿಪ್ರಾಯ ಪ್ರಜ್ಞಾವಂತ ನಾಗರಿಕರಿಂದ ಕೇಳಿಬಂದಿದೆ.

      ತುಮಕೂರು ಮಹಾನಗರದಲ್ಲಿ ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಯಡಿ ಕೈಗೊಂಡಿರುವ ಅರೆಬರೆಯಾಗಿ ಮುಗಿದಿದ್ದು, ಕೆಲವೆಡೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ರಸ್ತೆಯಲ್ಲೇ ಉಳಿದ ಜಲ್ಲಿ ಮಣ್ಣು, ಸಿಮೆಂಟ್‍ಗಳಿಂದ ಧೂಳೆಬ್ಬಿಸುತ್ತಾ ಡಸ್ಟ್ ಸಿಟಿಯಾಗಿ ಮಾರ್ಪಟ್ಟಿದೆ. ಇನ್ನೊಂದೆಡೆ ಆಗಾಗ್ಗೆ ಸುರಿಯುತ್ತಿರುವ ಮಳೆ ಒತ್ತುವರಿಯಾದ ರಾಜಗಾಲುವೆಯ ನೀರು ರಸ್ತೆಯ ಮೇಲೆ ಹರಿಯುವಂತೆ ಮಾಡಿದ್ದು, ಕಸ ತ್ಯಾಜ್ಯಗಳಿಂದ ತುಂಬಿದ ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿರುವುದ ತ್ಯಾಜ್ಯದ ನೀರು ರಸ್ತೆಗೆ ಹರಿದು ಸಮಸ್ಯೆ ಸೃಷ್ಟಿಸುವಂತೆ ಮಾಡಿದೆ.

 ಅರೆಬರೆ ಕಾಮಗಾರಿಯಿಂದ ಏಳುತ್ತಿದೆ ಧೂಳು:

      ನಗರದ ಹೃದಯ ಭಾಗದ 7 ವಾರ್ಡ್ ಸೇರಿದಂತೆ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಮಂಡಿಪೇಟೆ ರಸ್ತೆ, ಬಡ್ಡಿಹಳ್ಳಿ ಮುಖ್ಯರಸ್ತೆ, ಬಟವಾಡಿ ರಸೆ ಗಳಲ್ಲಿ ಸ್ಮಾರ್ಟ್ ಸಿಟಿ, ಪಿಡಬ್ಲ್ಯೂಡಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಒಂದು ಪೂರ್ಣ ಮುಗಿಸಿ ಮತ್ತೊಂದಕ್ಕೆ ಚಾಲನೆ ನೀಡದೆ ಏಕಕಾಲದಲ್ಲಿ ಕಾಮಗಾರಿಗಳು ನಡೆಯುತ್ತಿರುವುದು ಇಡೀ ನಗರವನ್ನು ಧೂಳುಮಯವಾಗಿಸಿದೆ. ಕೆಲವೆಡೆ ರಸ್ತೆ ಡಾಂಬರೀಕರಣ, ಕಾಂಕ್ರೀಟ್ ಹಾಕಿದ್ದರೂ, ಇಕ್ಕೆಲದ ಪಾದಚಾರಿ ರಸ್ತೆ, ಡ್ರೈನ್ ಅಭಿವೃದ್ಧಿಗಾಗಿ, ರಸ್ತೆಯಲ್ಲೇ ಎಂಸ್ಯಾಂಡ್, ಜಲ್ಲಿ ಕಲ್ಲುಗಳನ್ನು ಸುರಿದಿದ್ದು ಇದರ ಮೇಲೆ ವಾಹನಗಳು ಸಂಚರಿಸಿದಾಗ ಧೂಳೇಳಲು ಕಾರಣವಾಗಿದೆ.

      ಈ ಬಗ್ಗೆ ಪಾಲಿಕೆಯವರ ಗಮನಕ್ಕೆ ಬರುತ್ತಿಲ್ಲವೇ ಎಂದು ಹಲವು ನಾಗರಿಕರು ಪ್ರಶ್ನಿಸುತ್ತಿದ್ದು, ಯಾವುದೇ ರಸ್ತೆ ಕಾಮಗಾರಿ ಮುಗಿಯವರೆಗೆ ರಸ್ತೆ ಮೇಲೆ ದಿನ ನಿತ್ಯ ನೀರು ಸಿಂಪಡಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಪ್ರಶ್ನಿಸಲು ಪಾಲಿಕೆ ಆಡಳಿತ ಯಂತ್ರಕ್ಕೆ ಸಾಧ್ಯವಿಲ್ಲವೇ? ಸಂಬಂಧಪಟ್ಟವರು ನಿಯಮಪಾಲಿಸದಿದ್ದರೆ ಪಾಲಿಸುವಂತೆ ಮಾಡಬೇಕಾದ ಹೊಣೆಗಾರಿಕೆ ಪಾಲಿಕೆಗಿಲ್ಲವೇ ಎಂದು ಕೇಳುತ್ತಿದ್ದಾರೆ

      ಖಾಲಿ ನಿವೇಶನಗಳಲ್ಲಿ, ಕಸ ತ್ಯಾಜ್ಯ ತಾಂಡವ:

      ನಗರದ ಹಲವೆಡೆ ಖಾಲಿ ನಿವೇಶನ,ಸ್ಥಳಗಳಲ್ಲಿ, ಖಾಲಿ ನಿವೇಶನಗಳಲ್ಲಿ ಗಿಡ ಗಂಟೆಗಳು ಬೆಳೆದು, ತ್ಯಾಜ್ಯಗಳು ಸುರಿಯಲ್ಪಡುತ್ತಿದ್ದು, ಹಂದಿ ನಾಯಿಗಳು, ಸರಿಸೃಪಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಇದರ ತೆರವಿಗೆ ಸಂಬಂಧಪಟ್ಟ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ, ಇಲ್ಲವೇ ಪಾಲಿಕೆಯೇ ಸ್ವಚ್ಛಗೊಳಿಸಿ ಸಂಬಂಧಪಟ್ಟವರಿಂದ ಶುಲ್ಕ ವಸೂಲಿ ಮಾಡಲು ಪಾಲಿಕೆ ಸಮರ್ಪಕವಾಗಿ ಮುಂದಾಗದಿರುವುದು ಸ್ವಚ್ಛ ತುಮಕೂರು ಆಶಯಕ್ಕೆ ಧಕ್ಕೆ ತಂದಿದೆ.

ಗಬ್ಬು ವಾಸನೆ ನಿಂತಿಲ್ಲ:

      ನಗರದ ಅಶೋಕ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ರಸ್ತೆ ಇಕ್ಕೆಲ, ಚರಂಡಿಗಳು, ಪಾದಚಾರಿ ರಸ್ತೆಯ ಮೇಲೆ ಸ್ಲ್ಯಾಬ್‍ಗಳನ್ನು ಅಳವಡಿಸಲಾಗುತ್ತಿದೆ. ಈ ಕಾರ್ಯದರ್ಶಿ ಚರಂಡಿಯಲ್ಲಿ ವರ್ಷಾನುಗಟಲೇ ಸಂಗ್ರಹವಾದ ತ್ಯಾಜ್ಯವನ್ನು ಸರಿಯಾಗಿ ಹೊರಹಾಕದ ಪರಿಣಾಮ, ಜೊತೆಗೆ ಅಲ್ಲೇ ಪದೇ ಪದೇ ಕುಸಿಯುವ ಮ್ಯಾನ್‍ಹೋಲ್ ಸಮಸ್ಯೆಯಿಂದಾಗಿ ಗಬ್ಬು ವಾಸನೆ ನಿಲ್ಲದಾಗಿದೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಸ್ವಚ್ಛ ಸರ್ವೆಕ್ಷಣೆಯಲ್ಲಿ ಏನೇ ಸ್ಥಾನಗಳಿಸಿದರೂ ಬರೀ ತೋರಿಕೆ ಎಂಬಂತಾಗುತ್ತದೆ. ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ ಗಮನಹರಿಸಲಿ.

ನಗರ ಸಾರಿಗೆ, ಶೆಲ್ಟರ್‍ಗಳು ಸ್ವಚ್ಛತೆಯಿಂದ ಕೂಡಿಲ್ಲ :

      ನಗರದ ಹಲವೆಡೆ ಬಸ್ ತಂಗುದಾಣಗಳನ್ನು ನಿರ್ಮಿಸಿದ್ದು, ಕೂರಲು ಆಗದ ಸ್ಥಿತಿಇದೆ. ರಸ್ತೆ ಕಾಮಗಾರಿ, ವಾಹನಗಳು ಧೂಳು, ಮಣ್ಣು ಆಸನದ ಮೇಲೆ ಒಂದು ಇಂಚು ಕೂತಿದ್ದು, ಇವುಗಳನ್ನು ಸ್ವಚ್ಛಗೊಳಿಸಲು ಪಾಲಿಕೆ ಕ್ರಮ ವಹಿಸದಿರುವುದು ಕಂಡುಬಂದಿದೆ. ಇನ್ನೂ ನಗರ –ಗ್ರಾಮಾಂತರ ಸಾರಿಗೆ ಬಸ್‍ಗಳಲ್ಲೂ ಸೀಟ್ ಕೆಳಗೆ, ಹತ್ತುವ ಇಳಿಯುವ ಸ್ಥಳಗಳು, ಕಿಟಕಿ ಕಂಬಿಗಳಲ್ಲಿ ವ್ಯಾಪಕ ಧೂಳಿದ್ದು, ಅನ್‍ಲಾಕ್ ಪ್ರಾರಂಭದಲ್ಲಿ ಕೊರೊನಾ ಮುನ್ನೆಚ್ಚರಿಕೆಯಾಗಿ ಸ್ಯಾನಿಟೈಜ್, ಕ್ಲೀನಿಂಗ್‍ಗೆ ಒತ್ತುಕೊಟ್ಟ ಕೆಎಸ್‍ಆರ್‍ಟಿಸಿ ಸದ್ಯ ಮರೆತಂತಿದೆ.

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap