ತುಮಕೂರು : ನಗರಾಭಿವೃದ್ಧಿ ಸಚಿವರೇ, ಸ್ಮಾರ್ಟ್ ಸಿಟಿ ಅವ್ಯವಸ್ಥೆ ಕೊನೆಗಾಣಿಸಿ!

ತುಮಕೂರು :

      ನಗರದಲ್ಲಿ 2017ರಿಂದ ಪ್ರಾರಂಭವಾದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಇನ್ನೂ ಸಾಗುತಲಿದ್ದು, ಪಿಎಂಸಿಗಳ ಅಸಮರ್ಪಕ ನಿಗಾವಣೆಯಿಂದಾಗಿ ಸಾವಿರ ಕೋಟಿ ವೆಚ್ಚದ ಕಾಮಗಾರಿಗಳು ಅವ್ಯವಸ್ಥೆಯಿಂದ ಕೂಡಿವೆ. ವಿಳಂಬಗತಿ ಕಾಮಗಾರಿಗಳಿಂದ ನಗರದ ಪ್ರಮುಖ ರಸ್ತೆಗಳೆಲ್ಲ ಧೂಳು, ಮಣ್ಣಿನಿಂದ ಆವೃತ್ತವಾಗಿ ಸ್ಮಾರ್ಟ್ ಬದಲಾಗಿ ಡಸ್ಟ್ ಸಿಟಿಯಾಗಿ ಜನರ ಆಕ್ರೋಶಕ್ಕೆ ತುತ್ತಾಗಿದೆ.

      ನಗರಕ್ಕೆ ಇಂದು ಆಗಮಿಸುತ್ತಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದು, ಪರಿಶೀಲನೆ ನೆಪಮಾತ್ರಕ್ಕಾಗದೇ ಅಸಮರ್ಪಕ ಕಾಮಗಾರಿ ಕೈಗೊಂಡವರಿಗೆ ಸ್ಥಳದಲ್ಲೇ ಕ್ರಮವಾದರೆ, ಈವರೆಗೆ ಆಗಿರುವ ಅಧ್ವಾನಗಳಾದರೂ ಮುಂದಿನ ದಿನಗಳಲ್ಲಿ ಸರಿಹೋಗುತ್ತವೆ ಎಂಬ ನಿರೀಕ್ಷೆ ನಗರದ ನಾಗರಿಕರದ್ದಾಗಿದೆ.

Congress won't come to power to withdraw anti-cow slaughter law: Byrathi  Basavaraj | Deccan Herald

      ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರದ ಹೃದಯಭಾಗದ 4,5,15,16, 19 ಮತ್ತು ಭಾಗಶಃ 7ನೇ ವಾರ್ಡ್‍ಗಳ ಸಮಗ್ರ ಅಭಿವೃದ್ಧಿ ಸೇರಿದಂತೆ ಉಳಿದ ಪ್ರದೇಶವನ್ನು ಪ್ಯಾನ್ ಸಿಟಿಯಾಗಿ ಅಭಿವೃದ್ಧಿಪಡಿಸಲು 1064.42 ಕೋಟಿ ಮೊತ್ತದ 156 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು 81 ಯೋಜನೆಗಳು ಪೂರ್ಣಗೊಂಡು, 67 ಕಾಮಗಾರಿ ಪ್ರಗತಿಯಲ್ಲಿವೆ ಎಂಬುದಾಗಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಗತಿ ವರದಿ ಹೇಳುತ್ತದೆ. ಆದರೆ ಸ್ಮಾರ್ಟ್ ಸಿಟಿಯ ಮೂಲ ಆಶಯಕ್ಕನುಗುಣವಾಗಿ ಕಾಮಗಾರಿಗಳು ನಡೆಯುತ್ತಿಲ್ಲ, ಯೋಜನೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಎಪಿಎಂಸಿಗಳು ಕಾಮಗಾರಿಗಳ ಅಸಮರ್ಪಕ ನಿರ್ವಹಣೆ ಮಾಡುತ್ತಿವೆ.

      ಕಾಮಗಾರಿ ಅನುಷ್ಟಾನ ವಿಷಯದಲ್ಲಿ ಪಾಲಿಕೆ, ಸ್ಮಾರ್ಟ್ ಸಿಟಿ, ಪಿಎಂಸಿ ಹಾಗೂ ಇತರೆ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಇರುವುದು ಎದ್ದು ಕಾಣುತ್ತಿದೆ. ಸಾವಿರಾರು ಕೋಟಿ ವೆಚ್ಚದ ಯೋಜನೆ ನಿರರ್ಥಕವಾಗುತ್ತಿದೆ ಎಂಬುದಕ್ಕೆ ಮಾದರಿ ರಸ್ತೆ ಎಂದು ನಿರ್ಮಿಸಲಾದ ಜನರಲ್ ಕಾರಿಯಪ್ಪ ರಸ್ತೆಯೇ ಜ್ವಲಂತ ನಿದರ್ಶನವೆನಿಸಿದೆ. ಈ ರಸ್ತೆಯಲ್ಲಿ ಎರಡು ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದ್ದು, ನೀರು ಸರಾಗವಾಗಿ ಡ್ರೈನ್‍ಗೆ ಹರಿಯದಂತಾಗಿದೆ. ಪಾರ್ಕಿಂಗ್‍ಗೆಂದು ಮೀಸಲಾದ ಕನ್ಸರ್‍ವೆನ್ಸಿಗಳು ನಿರರ್ಥಕವಾಗಿವೆ.

ದೂರದೃಷ್ಟಿಯಿಲ್ಲದೆ ಕಿರಿದಾದ ರಸ್ತೆಗಳು :

       ನಗರದ ಜನರಲ್ ಕಾರಿಯಪ್ಪ ರಸ್ತೆ, ಅಶೋಕ ರಸ್ತೆ, ಬಿ.ಎಚ್.ರಸ್ತೆಯಲ್ಲಿ ಎರಡು ಬದಿ ಪುಟ್‍ಪಾತ್ ಅನ್ನು ಹೆಚ್ಚಾಗಿ ವಿಸ್ತರಿಸಿ ರಸ್ತೆ ಕಿರಿದಾಗಿಸಿರುವುದು ದೂರದೃಷ್ಟಿಯ ಕೊರತೆ ಪ್ರತೀಕವೆನಿಸಿದ್ದು, ಸಿಡಿಪಿ ಪ್ಲ್ಯಾನ್ ಅನ್ವಯ ವಾಣಿಜ್ಯ ರಸ್ತೆಗಳನ್ನು ಹಿಂದೆ ಅಗಲೀಕರಣಗೊಳಿಸಿ ಅನೇಕ ವ್ಯಾಪಾರಸ್ಥರನ್ನು ಬೀದಿಪಾಲಾಗಿಸಿದ್ದು ಹಾಲಿ ರಸ್ತೆಯನ್ನು ಕಿರಿದು ಮಾಡುವುದಕ್ಕಾಗಿಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

      ದೊಡ್ಡದಾದ ಫುಟ್‍ಪಾತ್‍ಗಳು ಬೀದಿ ಬದಿ ವ್ಯಾಪಾರ ತಲೆ ಎತ್ತಲು ಕಾರಣವಾಗಲಿದ್ದು, ಮರಗಳನ್ನು ಉಳಿಸಿ ಕಾಮಗಾರಿ ನಡೆಸುತ್ತಿಲ್ಲ. ಕಾರಿಯಪ್ಪ ರಸ್ತೆಯಲ್ಲಿದ್ದ ಏಳು ಮರಗಳನ್ನು ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸಿದ್ದು, ಆರು ಮರಗಳು ಬತ್ತಿಹೋಗಿವೆ. ಹೊಸ ಗಿಡಗಳನ್ನು ನೆಟ್ಟರೂ ಸಮರ್ಪಕ ನಿರ್ವಹಣೆಯಿಲ್ಲದಾಗಿದೆ.

ಹೆದ್ದಾರಿ ನಿಯಮ ಉಲ್ಲಂಘನೆ: 

      ರಾಷ್ಟ್ರೀಯ ಹೆದ್ದಾರಿಯಾದ ಬಿ.ಎಚ್.ರಸ್ತೆ ಅಭಿವೃದ್ಧಿ ನೆಪದಲ್ಲಿ ಪುಟ್‍ಪಾತ್ ವಿಸ್ತರಿಸಿ ಸ್ಲ್ಯಾಬ್‍ಗಳನ್ನು ಅಳವಡಿಸಿ ವಾಹನ ಪಾರ್ಕಿಂಗ್‍ಗೆ ಅವಕಾಶ ಮಾಡಿಕೊಟ್ಟಿದ್ದು, ಸರ್ವೀಸ್ ರಸ್ತೆಗೆ ಅವಕಾಶವಿಲ್ಲದಿರುವುದು ಹೆದ್ದಾರಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಯೋಜನೆ ಆರಂಭದಲ್ಲಿ ನಾಗರಿಕರ ಸರಣಿ ಸಭೆಗಳನ್ನು ನಡೆಸಿ ಸಲಹೆಯನ್ನು ಸ್ವೀಕರಿಸಿದ ಸ್ಮಾರ್ಟ್ ಸಿಟಿಯನ್ನು ಆರಂಭದಲ್ಲಿ ಜನತೆ ಮುಕ್ತವಾಗಿ ಸ್ವಾಗತಿಸಿದ್ದರು. ಆದರೆ ಇತ್ತೀಚಿನ ಕಾಮಗಾರಿ ಸ್ವರೂಪ ಕಂಡು ನಾಗರಿಕರು ಬೇಸರಗೊಂಡಿದ್ದು, ಹಳೆಯ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸದೆ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

      ಗಮನಕ್ಕೂ ತಾರದೇ ಕಾಮಗಾರಿಗಳು: ಅಂಡರ್‍ಗ್ರೌಂಡ್ ಡಕ್ಟಿಂಗ್ ಕಾರ್ಯದಲ್ಲಿ ಯುಜಿಡಿ, ಎಲೆಕ್ಟ್ರಿಕ್, ಟೆಲಿಫೋನ್ ವೈರಿಂಗ್ ಲೇನ್‍ಗಳು ಒಡೆದುಹೋಗುತ್ತಿದ್ದು, ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಪಿಎಂಸಿಗಳವರು ಅನುಮೋದಿತ ಯೋಜನೆಗಳ ಕಾರ್ಯಸ್ವರೂಪದಲ್ಲಿ ಸ್ವಲ್ಪವೂ ಬದಲಾವಣೆಗೆ ಆಸ್ಪದ ಕೊಡುತ್ತಿಲ್ಲವೆಂಬ ವ್ಯಾಪಕ ದೂರುಗಳು ಅಧಿಕಾರಿಗಳ ವಲಯದಲ್ಲೇ ಕೇಳಿಬರುತ್ತಿದ್ದು, ಕಾಮಗಾರಿ ಮಾಡುವಾಗ ಸ್ಥಳೀಯ ಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳ ಗಮನಕ್ಕೂ ತಾರದೇ ನಿರ್ವಹಿಸುತ್ತಿರುವುದು ಕಾಮಗಾರಿ ಅವೈಜ್ಞಾನಿಕತೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಲಹಾ ಸಮಿತಿ, ಶಾಸಕರ, ಸಂಸದರ ಎಚ್ಚರಿಕೆಯನ್ನೂ ಲೆಕ್ಕಿಸದೇ ಅವರಿಗೆ ತೋಚಿದಂತೆ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಸ್ಮಾರ್ಟ್ ಸಿಟಿ ಉನ್ನತ ಸಮಿತಿಯ ಮುಖ್ಯಸ್ಥರಾಗಿರಾವ ನಗರಾಭಿವೃದ್ಧಿ ಸಚಿವರಾದರೂ ಇಂತಹ ಅವ್ಯವಸ್ಥೆಯನ್ನು ಕೊನೆಗಾಣಿಸುವರೇ ಎಂಬ ನಿರೀಕ್ಷೆ ನಗರದ ಪ್ರಜ್ಞಾವಂತ ನಾಗರಿಕರದ್ದಾಗಿದೆ.

ಅವ್ಯವಸ್ಥೆಗಳ ಆಗರಕ್ಕೆ ಮುಂದೆ ಹೆಚ್ಚು ತೆರಿಗೆ ಕಟ್ಟಬೇಕೇ?

      ಸ್ಮಾರ್ಟ್ ಸಿಟಿ ಯೋಜನೆ ಆರಂಭದಲ್ಲಿ ಸಂಗ್ರಹಿಸಿದ ಜನಾಭಿಪ್ರಾಯಕ್ಕನುಸಾರ ಕಾಮಗಾರಿಗಳು ನಡೆಯುತ್ತಿಲ್ಲ. ಅನಗತ್ಯ ಹೊರೆಯ ಹೊಸ ಕಾಮಗಾರಿಗಳನ್ನು ಸೇರಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಸುಂದರ ನಗರದ ಕನಸು ಕಮರಿದೆ. ಮಾದರಿ ಎನ್ನುವುದಕ್ಕೆ ಉದಾಹರಣೆಯೇ ಕಾಣದಂತೆ ಕಾಮಗಾರಿಗಳನ್ನು ಮಾಡುತ್ತಿದ್ದು, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾವಿರ ಕೋಟಿ ಮೊತ್ತದ ಯೋಜನೆ ಪೂರ್ಣಗೊಂಡ ಬಳಿಕ ಕಾಮಗಾರಿ ಅಮರ್ಪಕವಾಗಿದ್ದರೂ ಅದರ ವೆಚ್ಚದ ಹೊರೆ ನಾಗರಿಕರ ಮೇಲೆ ಬೀಳಲಿದೆ. ತೆರಿಗೆ ಮೊತ್ತ ಮೂರ್ನಾಲ್ಕು ಪಟ್ಟು ಹೆಚ್ಚಿಸಲಿದ್ದು, ಅವ್ಯವಸ್ಥೆಯ ಆಗರದ ಕಾಮಗಾರಿಗಳಿಗೆ ಜನಸಾಮಾನ್ಯರು ಬಲಿಪಶುಗಳಾಗಬೇಕೇ? ವೈಜ್ಞಾನಿಕವಾಗಿ ಕಾಮಗಾರಿ ಮಾಡುವುದಾದರೆ ಯೋಜನೆ ಮುಂದುವರಿಯಲಿ, ಇಲ್ಲವಾದರೆ ಸ್ಮಾರ್ಟ್ ಸಿಟಿಯೇ ನಗರಕ್ಕೆ ಅನಗತ್ಯ ಎಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷ ಎನ್.ಎಸ್. ಪಂಡಿತ್ ಜವಾಹರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap