ತುಮಕೂರು :
ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅದ್ವಾನಗಳಿಗೆ ಮಿತಿಯೇ ಇಲ್ಲದಂತಾಗಿದೆ. ಸಮರ್ಪಕ ಮಾಹಿತಿ ಇಲ್ಲದೆ, ವೈಜ್ಞಾನಿಕ ಮಾನದಂಡಗಳಿಲ್ಲದೆ ಬೇಕಾಬಿಟ್ಟಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ನಗರದ ಜನತೆ ರೋಸಿ ಹೋಗಿದ್ದಾರೆ. ಯಾಕಾದರೂ ಈ ನಗರಕ್ಕೆ ಸ್ಮಾರ್ಟ್‍ಸಿಟಿ ಯೋಜನೆ ಮಂಜೂರಾಯಿತೋ ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕರ ಅಸಹನೆ ಮುಂದುವರೆದಿದೆ.
ವಿಜಯನಗರದ ಬಳಿ ಇತ್ತೀಚೆಗೆ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಆರಂಭಗೊಂಡಿವೆ. ಶೆಟ್ಟಿಹಳ್ಳಿ ಗೇಟ್ ಸಮೀಪ ಇರುವ ವಿಜಯನಗರದ 7ನೇ ತಿರುವಿನಲ್ಲಿ 3-4 ದಿನಗಳಿಂದ ಸ್ಮಾರ್ಟ್‍ಸಿಟಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಏನು ಮತ್ತು ಯಾವ ಕಾಮಗಾರಿ ನಡೆಯುತ್ತದೆ ಎಂಬ ಮಾಹಿತಿಯೇ ಅಲ್ಲಿನ ನಿವಾಸಿಗಳಿಗಿಲ್ಲ. ಕಳೆದ ಮೂರು ದಿನಗಳ ಹಿಂದೆ ರಸ್ತೆ ಬದಿಯಲ್ಲಿನ ಚರಂಡಿಯನ್ನು ಕಿತ್ತು ಹಾಕಿ ಮತ್ತೆ ಚರಂಡಿ ನಿರ್ಮಾಣ ಮಾಡುವ ಕಾಮಗಾರಿ ಆರಂಭವಾಗಿದೆ. ಇದೊಂದು ಭವಿಷ್ಯದ ದೃಷ್ಟಿಯಿಂದ ಉತ್ತಮ ಕಾಮಗಾರಿ ಎಂದು ಅಲ್ಲಿನ ನಿವಾಸಿಗಳು ಎಣಿಸಿದ್ದರು. ಆದರೆ ದಿನ ಕಳೆದಂತೆ ನಾಗರಿಕರಿಗೆ ಕಿರಿಕಿರಿ ಉಂಟು ಮಾಡುವ ಕಾಮಗಾರಿಯಾಗಿ ಇದು ಪರಿಣಮಿಸಿದೆ.
ಇರುವ ರಸ್ತೆಯನ್ನು ಎತ್ತರಗೊಳಿಸಿ ಅದಕ್ಕೆ ತಕ್ಕಂತೆ ಚರಂಡಿಯನ್ನು ಎತ್ತರ ಮಾಡುವ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಅಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಇದು ಧಕ್ಕೆ ತರುತ್ತಿದೆ. ನಿವಾಸಿಗಳು ತಮ್ಮ ಮನೆಯೊಳಗೆ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ಅವರದ್ದು.
ಕಾಮಗಾರಿ ರಸ್ತೆ ಬದಿಯಲ್ಲಿ ನಡೆಯುತ್ತಿದ್ದು, ಮನೆಯ ಮುಂಭಾಗದಲ್ಲೆಲ್ಲಾ ನೀರು ಸಂಗ್ರಹಗೊಂಡಿದೆ. ಮನೆಗಳಿಗೆ ಹಾನಿಯಾಗದಂತೆ, ಮರಗಳನ್ನು ಕಟಾವು ಮಾಡದಂತೆ ಕಾಮಗಾರಿ ನಿರ್ಮಿಸಿ ಎಂದು ನಾಗರಿಕರು ಹೇಳಿದರೆ ಅವರ ಮಾತನ್ನು ಒಪ್ಪುವ ಸ್ಥಿತಿಯಲ್ಲಿ ಇಲ್ಲ. ನಮಗೆ ಸ್ಮಾರ್ಟ್‍ಸಿಟಿ ಯೋಜನೆಯ ಮಾನದಂಡಗಳು ಇವೆ. ಅದೇ ಪ್ರಕಾರವಾಗಿಯೇ ಮಾಡುತ್ತೇವೆ ಎಂದು ಹೇಳುತ್ತಾರೆ. ರಸ್ತೆಯನ್ನು ಅಪ್ ಗ್ರೇಡ್ ಮಾಡಬೇಕಾಗಿದೆ ಎನ್ನುತ್ತಾರೆ. ಇಂತಿಷ್ಟು ಅವಧಿಯೊಳಗೆ ಕಾಮಗಾರಿ ಮುಗಿಸದಿದ್ದರೆ ಹಣ ಮಂಜೂರಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಸ್ಥಳೀಯ ಸಮಸ್ಯೆ ಮತ್ತು ವಾಸ್ತವತೆಯ ಬಗ್ಗೆ ಅವರು ಗಮನ ಹರಿಸಬೇಕಲ್ಲವೆ ಎಂಬುದು ಸ್ಥಳೀಯ ನಿವಾಸಿಗಳ ದೂರು.
ಯಾವುದೇ ಕಾಮಗಾರಿಯಾಗಲಿ ಆ ಬಗ್ಗೆ ಮಾಹಿತಿ ಇರಬೇಕು. ಎಷ್ಟು ದಿವಸಗೊಳಗೆ ಕಾಮಗಾರಿ ಮುಗಿಯುತ್ತದೆ ಎಂಬುದನ್ನು ವಿವರಿಸಬೇಕು. ಆ ಕಾಮಗಾರಿಯಿಂದ ನಿವಾಸಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆದರೆ ಅದಾವುದೂ ಕಂಡುಬರುತ್ತಿಲ್ಲ. ಬೇಕಾಬಿಟ್ಟಿ ಮತ್ತು ಮನಸೋಇಚ್ಚೇ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರ ಮೇಲ್ವಿಚಾರಣೆಯೂ ಇಲ್ಲದೆ ಸ್ಮಾರ್ಟ್‍ಸಿಟಿ ಯೋಜನೆಯ ಕೋಟಿ ಕೋಟಿ ರೂ. ಹಣ ವೃಥಾ ಪೋಲಾಗುತ್ತಿರುವುದು ಈ ನಗರದ ಒಂದು ದುರಂತ ಕಥೆಯಾಗಿದೆ.
ಕಾಮಗಾರಿಗಳನ್ನು ಕೈಗೊಳ್ಳುವಾಗ ವಾಸ್ತವಿಕ ಸಮಸ್ಯೆಗಳನ್ನು ಪರಿಶೀಲಿಸಬೇಕು. ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಾಮಗಾರಿಗಳು ಪಾರದರ್ಶಕವಾಗಿರಬೇಕು ಮತ್ತು ಮಾಹಿತಿ ನೀಡಬೇಕು. ಆದರೆ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಜನರಿಗೆ ಕಿರಿಕಿರಿ ಉಂಟಾಗಿದೆ. ಮನೆಗಳ ಮುಂಭಾಗ ನೀರು ನಿಂತು ಓಡಾಡುವುದೇ ಕಷ್ಟಕರವಾಗಿದೆ. ರಸ್ತೆ ಅಪ್‍ಗ್ರೇಡ್ ಎಂದು ಹೇಳುತ್ತಾರೆ. ಹಾಗೆಂದ ಮಾತ್ರಕ್ಕೆ ಇರುವ ಮನೆಗಳು ಹಾಳಾಗಿ ಹೋಗಲಿ ಎಂದು ಅರ್ಥವೆ? ಮಂಜೂರಾಗಿರುವ ಹಣವನ್ನು ಬೇಗ ಖರ್ಚುಮಾಡಬೇಕು ಎಂಬ ಧಾವಂತದಲ್ಲಿ ಅವರಿಗೆ ಬೇಕಾದ ಹಾಗೆ ಕಾಮಗಾರಿಗಳನ್ನು ನಡೆಸುತ್ತಾ ಹೋದರೆ ನಿವಾಸಿಗಳೇನು ಕುರಿಗಳೆ? ಯಾವುದೇ ತೊಂದರೆ ಇರದ ರಸ್ತೆ ಬದಿಯ ಗಿಡಗಳನ್ನು ಏಕೆ ಕಡಿಯಬೇಕು? ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ ಅನಗತ್ಯ ಕಿರಿಕಿರಿ ಉಂಟು ಮಾಡುವ ಕಾಮಗಾರಿಗಳಿಗೆ ನಮ್ಮ ವಿರೋಧವಿದೆ. ಈ ಬಗ್ಗೆ ಸಂಬಂಧಪಟ್ಟವರು ಪರಿಶೀಲಿಸುವ ಅಗತ್ಯವಿದೆ.
-ನಾರಾಯಣ ಆಚಾರ್ಯ, ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು.