ತುಮಕೂರು :
ಕೇಂದ್ರ ಸರ್ಕಾರದ ಸೂಚನೆಯಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡಿದ್ದು, ಅದರಂತೆ ಬುಧವಾರ ಅಮಾನಿಕೆರೆಯಿಂದ ಎಸ್‍ಎಸ್ ವೃತ್ತದ ವರೆಗಿನ ಸೈಕಲ್ ಪಥದ ಪರೀಕ್ಷೆಯನ್ನು ನಡೆಸಲಾಯಿತು.
ಭಾರತ ಸರ್ಕಾರವು 75ನೆ ಸ್ವಾತಂತ್ರ್ಯ ದಿನವನ್ನು ಆಚರಿಸುವ ಮತ್ತು ಸ್ಮರಿಸುವ ಸಲುವಾಗಿ ಸ್ವಾತಂತ್ರದ ಅಮೃತಮಹೋತ್ಸವ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶನಗಳನ್ನು ನೀಡಿದೆ. ಇದರಂತೆ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ನಗರಾಭಿವೃದ್ಧಿ ಆಚರಣೆಗಳ ವಾರ ಎಂದು ಆಚರಿಸಲು ಸೂಚಿಸಿದ್ದಾರೆ. ಅದರಂತೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸೆ. 27 ರಿಂದ ಅ.2ರ ವರೆಗೆ ಹಲವಾರು ಚಟುವಟಿಕೆಗಳನ್ನು ನಡೆಸಲು ಆಯೋಜಿಸಲಾಗಿದ್ದು, ಇಂದು ಅಮಾನಿಕೆರೆಯಿಂದ ಎಸ್‍ಎಸ್ ವೃತ್ತದವರೆಗಿನ ಸೈಕಲ್ ಪಥದ ಪರೀಕ್ಷೆಯನ್ನು ನಡೆಸಲಾಯಿತು.
ಬೈಸಿಕಲ್ ಮೇಯರ್ ಆಫ್ ತುಮಕೂರು ಸುಮಂತ್ ಮಾತನಾಡಿ, ಈಗಾಗಲೇ ನಿರ್ಮಾಣ ಮಾಡಲಾಗಿರುವ ಸೈಕಲ್ ಟ್ರ್ಯಾಕ್‍ನಲ್ಲಿ ಅನುಭವಿ ಸೈಕ್ಲಿಸ್ಟ್‍ಗಳ ಜೊತೆ ಸೈಕಲ್ ಪಥ ಪರೀಕ್ಷೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸೈಕಲ್ ಸವಾರರು ಈ ಮಾರ್ಗವಾಗಿ ಎದುರಿಸುವಂತಹ ಸಮಸ್ಯೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಯಿತು ಎಂದರು.
ಸ್ಮಾರ್ಟ್ ಸಿಟಿ ಇಂಜಿನಿಯರ್ ಮಹಮ್ಮದ್ ಜಾವೇದ್ ಮಾತನಾಡಿ, ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಎರಡನೆ ದಿನ ಸೈಕಲ್ ಟ್ರ್ಯಾಕ್ ಪರಿಶೀಲನೆ ನಡೆಸುವಂತಹ ಕಾರ್ಯಕ್ರಮ ನಡೆಸಲಾಗಿದೆ. ಇದರಿಂದಾಗಿ ಹಲವಾರು ಉತ್ತಮ ಕೆಲಸಗಳು ಮತ್ತು ವೈಫಲ್ಯಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಿದೆ. ಮುಂದೆ ಇವುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದರು.
ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಿರುವ ಸಾಲು ಆಲದ ಮರದ ಆವರಣದಲ್ಲಿ ವಿವಿಧ ಸೈಕಲ್ ಪ್ರದರ್ಶನ, ಸೈಕಲ್ ದುರಸ್ತಿ ಹಾಗೂ ಇತರೆ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ