ತುಮಕೂರು :
ಕೋವಿಡ್ ಆತಂಕದ ನಡುವೆಯೂ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು 220 ಪರೀಕ್ಷಾ ಕೇಂದ್ರಗಳಲ್ಲಿ ಮೊದಲನೇ ದಿನವಾದ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.
ಜು 19 ಮತ್ತು ಜು. 22 ರಂದು ಎರಡು ದಿನ ಬಹು ಆಯ್ಕೆ ಪ್ರಶ್ನೆ ಪತ್ರಿಕೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ನಿನ್ನೆ ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳ ಮುಂದೆ ಹಾಜರಾಗಿದ್ದರು.
ಬೆಳಗ್ಗೆ 8.30ರ ವೇಳೆಗೆ ಪರೀಕ್ಷಾ ಕೇಂದ್ರಗಳ ಆವರಣದ ಒಳಗೆ ತೆರಳಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗೆ ಸ್ಯಾನಿಟೈಸ್ ಹಾಕಿ, ಮಾಸ್ಕ್ ಧರಿಸಿದ್ದನ್ನು ಖಚಿತ ಪಡಿಸಿಕೊಂಡ ನಂತರವೇ ತಮ್ಮ ನೋಂದಣಿ ಸಂಖ್ಯೆ ಇರುವ ಕೊಠಡಿಗಳನ್ನು ಗುರುತಿಸಿಕೊಳ್ಳಲು ಅನುಮತಿ ನೀಡಲಾಯಿತು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ, ಸಿದ್ದಗಂಗಾ ಪ್ರೌಢ ಶಾಲೆ, ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ 220 ಪರೀಕ್ಷಾ ಕೇಂದ್ರಗಳಲ್ಲೂ ಬೆಳಿಗ್ಗೆ 8 ಗಂಟೆಯಿಂದಲೇ ಪೋಷಕರೊಂದಿಗೆ ಮಕ್ಕಳು ಬಂದು ನೆರೆದಿದ್ದರು. ಬೆಳಿಗ್ಗೆ 10.30ರ ವೇಳೆಗೆ ಪರೀಕ್ಷಾ ಕೇಂದ್ರಗಳಲ್ಲಿ ಸೈರನ್ ಕೂಗಿದ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗಳಿಗೆ ಪ್ರವೇಶ ನೀಡಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ ಒಂದು ಡೆಸ್ಕ್‍ಗೆ ಒಬ್ಬ ವಿದ್ಯಾರ್ಥಿ ಮಾತ್ರ ಕುಳಿತು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳವನ್ನು ಒದಗಿಸಲಾಗಿತ್ತು.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ, ಪರೀಕ್ಷಾ ವಿವರ :
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ 21,891 ಹೊಸ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, ಇವರಲ್ಲಿ ಮೊದಲನೆ ದಿನದ ಪರೀಕ್ಷೆಗೆ 63 ಜನ ಕಾರಣಾಂತರಗಳಿಂದ ಗೈರು ಹಾಜರಾಗಿದ್ದು, ಒಟ್ಟು 21828 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ನೋಂದಾಯಿಸಿದ್ದ 430 ರಿಪೀಟರ್ಸ್ ಅಭ್ಯರ್ಥಿಗಳ ಪೈಕಿ 04 ಜನ ಗೈರು ಹಾಜರಾಗಿದ್ದು, 426 ಜನ ಪರೀಕ್ಷೆ ಬರೆದಿದ್ದಾರೆ. ಈ ಕುರಿತು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸಿ.ನಂಜಯ್ಯ ಅವರು ಮಾಹಿತಿ ನೀಡಿದ್ದಾರೆ.
ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ, ಪರೀಕ್ಷಾ ವಿವರ : ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ ಯಲ್ಲಿ 11996 ಹೊಸ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲು ನೋಂದಾಯಿಸಿದ್ದು, ಇವರಲ್ಲಿ 66 ಅಭ್ಯರ್ಥಿಗಳು ಗೈರಾಗಿದ್ದು, 11930 ಜನ ಪರೀಕ್ಷೆ ಬರೆದಿದ್ದಾರೆ. ಅದೇ ರೀತಿ 293 ಖಾಸಗಿ ಅಭ್ಯರ್ಥಿಗಳ ಪೈಕಿ 07 ಜನ ಗೈರು ಹಾಜರಾಗಿದ್ದು, 286 ಜನ ಪರೀಕ್ಷೆ ಬರೆದಿದ್ದಾರೆ. ಹಾಗೂ 556 ರಿಪೀಟರ್ಸ್ ಅಭ್ಯರ್ಥಿಗಳಲ್ಲಿ 08 ಜನ ಗೈರು ಹಾಜರಾಗಿ 548 ಜನ ಪರೀಕ್ಷೆ ಬರೆದಿದ್ದಾರೆ. ಈ ಕುರಿತು ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಎಂ.ರೇವಣಸಿದ್ದಪ್ಪ ಅವರು ಮಾಹಿತಿ ನೀಡಿದ್ದಾರೆ.
ಮೊದಲ ದಿನದ ಪರೀಕ್ಷೆ ಯಶಸ್ವಿ :
ಮೊದಲನೆಯ ದಿನವಿದ್ದ ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯಗಳನ್ನೊಳಗೊಂಡ ಐಚ್ಛಕ ಪತ್ರಿಕೆಯ ಪರೀಕ್ಷೆಯು ಯಶಸ್ವಿಯಾಗಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಅತ್ಯಂತ ಶಿಸ್ತಿನಿಂದ ಮೊದಲ ದಿನದ ಪರೀಕ್ಷೆ ಯಶಸ್ವಿಯಾಗಲು ಶ್ರಮಿಸಿವೆ. ಇಲಾಖೆಗಳ ಈ ಯಶಸ್ವಿ ಸಮನ್ವಯ ಕಾರ್ಯಕ್ಕೆ ಮಕ್ಕಳ ಪೋಷಕರು ಹಾಗು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ 22 ರಂದು ಗುರುವಾರ ನಡೆಯುವ ಭಾಷಾ ವಿಷಯದ ಪರೀಕ್ಷೆಯೂ ಇದೇ ರೀತಿ ಯಶಸ್ವಿಯಾಗಲಿ ಎಂದು ಆಶಿಸಿದ್ದಾರೆ.
ಯುದ್ಧ ಗೆದ್ದ ಹುಮ್ಮಸ್ಸು :
ಪರೀಕ್ಷೆಗೂ ಮುನ್ನ ಪರೀಕ್ಷಾ ಕೇಂದ್ರದೊಳಕ್ಕೆ ತುಸು ಉತ್ಸಾಹ, ತಸು ಗೊಂದಲದಿಂದಲೇ ಹೋದ ಪರೀಕ್ಷಾರ್ಥಿಗಳು ಪರೀಕ್ಷೆ ಬರೆದು ಮರಳಿ ಬರುವಾಗ ಯುದ್ಧ ಗೆದ್ದ ಹುಮ್ಮಸ್ಸಿನಲ್ಲಿ ಮಂದಸ್ಮಿತರಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಏ…ಸಖತ್ ಈಸೀ ಇತ್ತು ಅಲ್ವೇನೋ ಮಚ್ಚಾ.., ಅಂತ ಹುಡುಗರು, ಈ ಸಲ ಕಪ್ ನಮ್ದೆ ಕಣ್ರೆ ಅಂತ ಹುಡುಗಿಯರು ಮಾತಾಡಿಕೊಳ್ಳುತ್ತಿದ್ದ ದೃಶ್ಯಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಕೇಳಲ್ಪಟ್ಟವು.
ಪರೀಕ್ಷಾ ಕೇಂದ್ರಗಳಿಗೆ ಡಿಸಿ, ಸಿಇಓ ಭೇಟಿ :
ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ ಕೊರಟಗೆರೆ ತಾಲ್ಲೂಕಿನಲ್ಲಿ ಐದಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಿಷೇಧಾಜ್ಞೆ :
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಿಷೇಧಾಜ್ಞೆಯು ಇಂದು ಮತ್ತು ಜು. 22 ರ ಸಂಜೆ 5.30ರ ವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಾವುದೇ ಜೆರಾಕ್ಸ್ ಅಂಗಡಿ ಮತ್ತು ಸ್ಟೇಷನರಿ ಅಂಗಡಿಗಳು ಬಾಗಿಲು ತೆರೆಯುವಂತಿಲ್ಲ. ಜಿಲ್ಲೆಯ 220 ಪರೀಕ್ಷಾ ಕೇಂದ್ರಗಳಲ್ಲೂ ಬಿಗಿ ಪೆÇಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ವಿವರ :
- ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ
- ನೋಂದಾಯಿಸಿದ್ದ ಒಟ್ಟು ಅಭ್ಯರ್ಥಿಗಳು-22321
- ಹಾಜರಾದ ಅಭ್ಯರ್ಥಿಗಳು-22891
- ಗೈರು ಹಾಜರಾದ ಅಭ್ಯರ್ಥಿಗಳು-430
- ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ
- ನೋಂದಾಯಿಸಿದ್ದ ಒಟ್ಟು ಅಭ್ಯರ್ಥಿಗಳು-12845
- ಹಾಜರಾದ ಅಭ್ಯರ್ಥಿಗಳು-12764
- ಗೈರು ಹಾಜರಾದ ಅಭ್ಯರ್ಥಿಗಳು-81
ಈ ಸಲದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಶೇಷ
ದೂರದ ಹಳ್ಳಿಗಳಿಂದ ಪರೀಕ್ಷಾ ಕೇಂದ್ರಗಳಿಗೆ ಹಸಿದು ಬಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಸೂಚನೆ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ಉಪಾಹಾರ ವಿತರಣೆ
ಹಳ್ಳಿಗಾಡಿನ ಮಕ್ಕಳನ್ನು ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದ ಸಾರಿಗೆ ಇಲಾಖೆ ಮತ್ತು ನೌಕರರು
ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸ್ ಮಾಡಿ, ಮಾಸ್ಕ್, ಅಂತರ, ಸೋಂಕಿನ ಕುರಿತು ಅರಿವು ಮೂಡಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು
ಪರೀಕ್ಷಾ ಕೇಂದ್ರದ ಸುತ್ತಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ನೀಡಿದ ಪೊಲೀಸ್ ಇಲಾಖೆ
ಪರೀಕ್ಷೆಗೂ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿದ ಸ್ಥಳೀಯ ಸಂಸ್ಥೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರದೊಳಗೆ ಬಿಟ್ಟು ಅವರು ಮರಳಿ ಬರುವವರೆಗೆ ಕಾದ ಪೋಷಕರು
ಪರೀಕ್ಷೆ ಅತ್ಯಂತ ಸರಳವಾಗಿತ್ತು, ಈ ಬಾರಿ ಪುಟಗಟ್ಟಲೇ ಉತ್ತರ ಬರೆಯುವುದಕ್ಕಿಂತ 4 ಉತ್ತರಗಳಲ್ಲಿ 1 ಸರಿ ಉತ್ತರ ಆರಿಸಿ ಶೇಡ್ ಮಾಡುವ ಮಾದರಿ ಇದ್ದಿದ್ದರಿಂದಾಗಿ ಉತ್ತರಿಸಲು ಹೆಚ್ಚು ಸಮಯ ಸಿಕ್ಕಿತು ಹಾಗಾಗಿ ನಿಧಾನವಾಗಿ ಪ್ರಶ್ನೆಗಳನ್ನು ಓದಿಕೊಂಡು ಉತ್ತರಿಸಲು ಅನಕೂಲ ಆಯ್ತು. ಪರೀಕ್ಷೆಗೂ ಮುನ್ನ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದು ಹೆಚ್ಚು ಅನುಕೂಲ ಆಯ್ತು. ನಮ್ಮ ಶಾಲೆಯ ಎಲ್ಲಾ ಶಿಕ್ಷಕರಿಗೂ ಥ್ಯಾಂಕ್ಸ್ ಹೇಳಲು ಬಯಸುವೆ
-ಮೋನಿಕಾ ಟಿ.ಕೆ, ತಿಮ್ಮರಾಯನಹಳ್ಳಿ, ತಿಪಟೂರು ತಾಲ್ಲೂಕು
ಪರೀಕ್ಷೆ ಚೆನ್ನಾಗಿ ಆಯ್ತು, ಸುಲಭವಾಗಿಯೂ ಇತ್ತು. ಪರೀಕ್ಷೆಗೂ ಮೊದಲು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದು ಸಾಕಷ್ಟು ಅನುಕೂಲವಾಯಿತು. ಆನ್ಲೈನ್ ತರಗತಿಗಳಿಲ್ಲಿ ನಮ್ಮ ಶಿಕ್ಷಕರು ಪರೀಕ್ಷೆ ಕುರಿತು ಸಾಕಷ್ಟು ವರ್ಕ್ ಮಾಡಿಸಿದ್ದು ಸಹಕಾರಿ ಆಯಿತು.
-ಭುವನ್, ವಿದ್ಯಾರ್ಥಿನಿ, ಮರಳೂರು ದಿಣ್ಣೆ, ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ