ತುಮಕೂರು : ಆಸ್ಪತ್ರೆಯಿಂದ ಬಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ

 ತುಮಕೂರು :

      ತುಮಕೂರು ದಕ್ಷಿಣ ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭದ ವಿಶೇಷ ಬಹುಆಯ್ಕೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಪನ್ನಗೊಂಡಿದ್ದು, ಜಿಟಿ ಜಿಟಿ ಮಳೆಯಲ್ಲೂ ಗುರುವಾರ ಭಾಷಾ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದರು.

     ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಆರು ತಾಲೂಕುಗಳ 139 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 21729 ವಿದ್ಯಾರ್ಥಿಗಳು ಹಾಜರಾಗಿದ್ದು, 56 ಮಂದಿ ಗೈರಾಗಿದ್ದರು. 326 ಖಾಸಗಿ ಅಭ್ಯರ್ಥಿಗಳು ಹಾಗೂ 1469ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

      ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ನಾಲ್ಕು ತಾಲೂಕುಗಳ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಗುರುವಾರ ಭಾಷಾ ಪರೀಕ್ಷೆಗೆ ಹಾಜರಾದ 12,845 ವಿದ್ಯಾರ್ಥಿಗಳ ಪೈಕಿ 12,754 ಮಂದಿ ಪರೀಕ್ಷೆ ಬರೆದಿದ್ದು 81 ಮಂದಿ ಗೈರಾದರು. ಜು.19ರಂದು ನಡೆದ ಮೊದಲ ಪರೀಕ್ಷೆಯಲ್ಲಿ 67 ಮಂದಿ ಗೈರಾಗಿದ್ದರು.

      ಕೋವಿಡ್ ನಿಯಮಾನುಸಾರ ಪ್ರತಿಯೊಬ್ಬರ ಅಭ್ಯರ್ಥಿಗಳನ್ನು ತಪಾಸಣೆಗೊಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಪ್ರಾಥಮಿಕ ಶಾಲಾ ಶಿಕ್ಷಣಇಲಾಖೆ ನಿರ್ದೇಶಕರಾದ ಪ್ರಸನ್ನ ಕುಮಾರ್, ಡಿಡಿಪಿಐಗಳಾದ ಸಿ.ನಂಜಯ್ಯ, ಎಂ.ರೇವಣಸಿದ್ದಪ್ಪ , ತಹಸೀಲ್ದಾರ್‍ಗಳು, ಸಿಆರ್‍ಪಿಗಳು ಇತರೆ ಅಧಿಕಾರಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಳಿಗ್ಗೆ 10.30 ರಿಂದ 1.30ರವರೆಗೆ ಪರೀಕ್ಷೆ ನಡೆದಿದ್ದು, ಜಿಟಿ ಜಿಟಿ ಮಳೆಯಲ್ಲೂ ಉತ್ಸಾಹದಿಂದಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆ.10ರಂದು ಪ್ರಕಟಗೊಳ್ಳುವುದು ಎನ್ನಲಾದ ಫಲಿತಾಂಶಕ್ಕಾಗಿ ಕಾತರರಾಗಿದ್ದಾರೆ.

ಆಸ್ಪತ್ರೆಯಿಂದ ಬಂದ ವಿದ್ಯಾರ್ಥಿಗೂ ಪರೀಕ್ಷೆ ಬರೆಯಲು ಅವಕಾಶ:

        ಜು.19ರಂದು ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದ ಗುಬ್ಬಿ ತಾಲೂಕು ನಾಗಸಂದ್ರದ ಸಲ್ಮಾನ್ ಹಾಗೂ ಕಡಬದ ಹರ್ಷವರ್ಧನ ಇ.ಆಚಾರಿ ಎಂಬ ವಿದ್ಯಾರ್ಥಿಗಳು ಇಂದು ಮತ್ತೆ ಪರೀಕ್ಷೆ ಬರೆಯಲು ಮನವೊಲಿಸುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದು, ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಚಿಕ್ಕನಾಯಕನಹಳ್ಳಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜು ಅವರು ಪರೀಕ್ಷೆ ಬರೆಯಲು ಇಚ್ಚಿಸಿದ್ದು ವೈದ್ಯರ ಸಲಹೆ ಮೇರೆಗೆ ಪೋಷಕರ ಸಹಾಯದಿಂದ ಕಾತ್ರಿಕೆಹಾಳ್ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾಗಿ ಡಿಡಿಪಿಐ ನಂಜಯ್ಯ ತಿಳಿಸಿದ್ದು, ಪರೀಕ್ಷೆ ಸುಗಮಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಜಿಪಂ, ಆರಕ್ಷಕ, ಸಾರಿಗೆ ಆರೋಗ್ಯ, ಕೆಎಸ್‍ಆರ್‍ಟಿಸಿ ಮತ್ತು ವಿದ್ಯಾರ್ಥಿಗಳಿಗೆ ಎರಡು ಶೈಕ್ಷಣಿಕ ಜಿಲ್ಲೆ ಡಿಡಿಪಿಐಗಳು ಕೃತಜ್ಞತೆ ಸಲ್ಲಿಸಿದ್ದಾರೆ.

  ಆರ್.ರಾಜೇಂದ್ರರಿಂದ ವಿದ್ಯಾರ್ಥಿಗಳಿಗೆ ನೀರಿನ ಬಾಟೆಲ್ ವಿತರಣೆ :

      ಮಧುಗಿರಿ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಎರಡು ದಿನ ನೀರಿನ ಬಾಟೆಲ್‍ಗಳನ್ನು ಕಾಂಗ್ರೆಸ್ ಯುವ ಮುಖಂಡ ಆರ್.ರಾಜೇಂದ್ರ ವಿತರಿಸಿದ್ದು, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆಯಿಂದ ಅವಶ್ಯಕವಿದ್ದವರಿಗೆ ಉಪಾಹಾರ ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap