ತುಮಕೂರು : ನೋಂದಣಿ ಇಲಾಖೆಯಲ್ಲಿ ಕಾಸು ಬಿಚ್ಚಿಟ್ಟರಷ್ಟೆ ಕಾರ್ಯ!!

ತುಮಕೂರು :

      ಸರ್ಕಾರದ ಖಜಾನೆ ತುಂಬಿಸುತ್ತಿರುವ, ಅಧಿಕಾರಿಗಳು, ಮಧ್ಯವರ್ತಿಗಳಿಗೆ ಕೇಳಿದಷ್ಟು ಕೊಡುವ ಕಾಮಧೇನುವಾಗಿರುವ ಜಿಲ್ಲಾ ಕೇಂದ್ರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು ಗಬ್ಬೆದ್ದು ನಾರುವ ಶೌಚಾಲಯ, ಮುರುಕಲು ಕುರ್ಚಿಗಳು, ಮಧ್ಯವರ್ತಿಗಳ ಕಾರುಬಾರು, ಚೆಲ್ಲಾಪಿಲ್ಲಿಯಾಗಿರುವ ತಂಬಾಕು ಉತ್ಪನ್ನಗಳ ಆವರಣದಲ್ಲಿ ಕಾಸಿಲ್ಲದೆ ಕಾರ್ಯವಾಗದ ಸ್ಥಿತಿ ತಲೆದೋರಿದೆ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಾಪಕವಾಗಿವೆ.

      ಸಬ್‍ರಿಜಿಸ್ಟ್ರಾರ್ ಕಚೇರಿಗೆ ಪತ್ರ ನೋಂದಣಿಗೆ ಬರುವ ಸಾರ್ವಜನಿಕರು ನೋಂದಣಿಗಾಗಿ ಮುಂಚಿತವಾಗಿ ಟೋಕನ್ ಪಡೆಯಬೇಕಿದ್ದು, ಮುಂಜಾನೆ 6 ಗಂಟೆಯಿಂದಲೆ ಟೋಕನ್‍ಗಾಗಿ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಟೋಕನ್ ದುರ್ಬಳಕೆಯ ಆರೋಪಗಳು ಕೇಳಿ ಬಂದಿದ್ದು ಮಧ್ಯವರ್ತಿಗಳಿಗೆ, ತಮಗೆ ಬೇಕಾದವರಿಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಹಳೆ ಕಾಲದ ಬೆರಳೆಣಿಕೆಯಷ್ಟು ಕಂಪ್ಯೂಟರ್‍ಗಳಿಂದಾಗಿ ಒಂದು ಪತ್ರ ನೋಂದಣಿಗೆ ಜನರು ವಾರವಿಡಿ ಕಾಯುವಂತಾಗಿದ್ದು, ಕಾಸು ಬಿಚ್ಚಿದರಷ್ಟೆ ಕಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಹಲವು ಹತ್ತು ಸಮಸ್ಯೆಗಳಿಂದಾಗಿ ದೂರದ ಊರುಗಳಿಂದ ಕಚೇರಿಗೆ ಬರುವ ಸಾರ್ವಜನಿಕರು ಹೈರಾಣಾಗಿ ಹೋಗಿದ್ದು, ವಿಶೇಷ ಚೇತನರು, ವೃದ್ಧರು, ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಕೆಯಾಗಿದೆ.

ನೆಪಮಾತ್ರಕ್ಕೆ ಟೋಕನ್ :

      ಸಾರ್ವಜನಿಕರಿಗೆ ನೆಪಮಾತ್ರಕ್ಕೆ ಟೋಕನ್ ನೀಡುತ್ತಿದ್ದು, ಟೋಕನ್ ನೀಡುವ ಸಮಯವು ಕೆಲವು ಸಲ ಮುಂಜಾನೆ, ಇನ್ನೂ ಕೆಲವು ಸಲ ಸಂಜೆ ಈ ರೀತಿ ಸಬ್‍ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ ತಮಗಿಷ್ಟಬಂದ ರೀತಿಯಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಸಮಯದಲ್ಲಿ ಟೋಕನ್ ವಿತರಿಸುತ್ತಿದ್ದಾರೆ. ಒಂದು ಕಡೆ ಸಾರ್ವಜನಿಕರಿಗೆ ಟೋಕನ್ ಕೊಡುವ ಸಿಬ್ಬಂದಿ ಮತ್ತೊಂದು ಕಡೆ ಮಧ್ಯವರ್ತಿಗಳ 80-100 ದಾಸ್ತವೇಜುಗಳನ್ನು ಒಟ್ಟಿಗೆ ತೆಗೆದುಕೊಂಡು ಹೊಸದಾಗಿ ಟೋಕನ್ ಕೇಳಲು ಹೋದ ಸಾರ್ವಜನಿಕರಿಗೆ ಟೋಕನ್ ಮುಗಿದು ಹೋಗಿವೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಲಂಚದ ಆಸೆಗೆ ಬಿದ್ದ ಸಿಬ್ಬಂದಿ ಎಲ್ಲಾ ಮಧ್ಯವರ್ತಿಗಳನ್ನು ಮೆಚ್ಚಿಸಲು ಒಂದೊಂದು ದಿನ ಒಬ್ಬೊಬ್ಬರ ದಾಸ್ತಾವೇಜುಗಳನ್ನು ಪಡೆದು ಅವರ ಕೆಲಸ ಮಾಡಿಕೊಡಲು ಅಲಿಖಿತ ವೇಳಾಪಟ್ಟಿ ಹಾಕಿಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಮಧ್ಯವರ್ತಿಗಳಿಂದ ತುಂಬಿದ ಕಚೇರಿ ಮತ್ತು ಆವರಣ :

      ಕಚೇರಿಯ ಒಳಗೆ ಮತ್ತು ಆವರಣದೊಳಗೆ ಮಧ್ಯವರ್ತಿಗಳೇ ತುಂಬಿದ್ದು, ಕೆಲ ಪತ್ರ ಬರಹಗಾರರೇ ಮಧ್ಯವರ್ತಿಗಳಾಗಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ದಲ್ಲಾಳಿ ಕೆಲಸ ಮಾಡುತ್ತಾ ವ್ಯವಹಾರ ಕುದುರಿಸುತ್ತಿದ್ದಾರೆ ಎಂಬ ಆರೋಪಗಳನ್ನು ಉಳಿದ ಕೆಲ ಪತ್ರ ಬರಹಗಾರರೇ ಮಾಡುತ್ತಿದ್ದು, ಸಾರ್ವಜನಿಕರು ಈ ವಿಚಾರವನ್ನು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ನಿಯಮದ ಪ್ರಕಾರ ಪತ್ರಬರಹಗಾರ, ಮಧ್ಯವರ್ತಿ, ದಲ್ಲಾಳಿ ಈ ಯಾವುದೇ ವ್ಯಕ್ತಿಗಳು ಕಚೇರಿಯ ಆವರಣದಲ್ಲಿ ತಮ್ಮ ವ್ಯವಹಾರ ಮಾಡಲು ಅವಕಾಶವಿಲ್ಲದಿದ್ದರೂ ಕಚೇರಿಯ ಆವರಣದಲ್ಲಿ ಪತ್ರಬರಹಗಾರರು, ಮಧ್ಯವರ್ತಿಗಳು ಮೇಜು-ಕುರ್ಚಿ ಹಾಕಿಕೊಂಡು ತಮ್ಮ ಕಚೇರಿ ತೆಗೆದಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪಗಳು ಕೇಳಿ ಬಂದಿವೆ.

ನೋಂದಣಿಗೆ ವಾರ, ಬೇಸತ್ತ ಜನ :

     ನಗರವು ಸ್ಮಾರ್ಟ್ ಸಿಟಿಯಾಗಿದ್ದು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಭವಿಷ್ಯದ ಉಪನಗರಿ ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದಲ್ಲಿ ಆಸ್ತಿ, ನಿವೇಶನ ಕೊಳ್ಳುವವರ ಮತ್ತು ಮಾರುವವರ ಸಂಖ್ಯೆ ಹೆಚ್ಚಿದೆ. ಇಲ್ಲಿನ ಸಬ್‍ರಿಜಿಸ್ಟ್ರಾರ್ ಕಚೇರಿಯು ಕಂದಾಯ ಇಲಾಖೆಗೆ ರಾಜ್ಯದಲ್ಲೆ ಎರಡನೇ ಅತಿ ಹೆಚ್ಚು ಆದಾಯ ನೀಡುತ್ತಿದೆ ಆದರೇ ಹಳೆಕಾಲದ ಬೆರಳೆಣಿಕೆಯಷ್ಟು ಕಂಪ್ಯೂಟರ್‍ಗಳನ್ನು ಇಟ್ಟುಕೊಂಡು ಜನರ ಬೇಡಿಕೆ ಇರುವಷ್ಟು ದಾಸ್ತವೇಜುಗಳ ನೋಂದಣಿ ಮಾಡದೇ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಕಚೇರಿಯ ಬಳಿ ನೋಂದಣಿಗೆ ಬಂದಿದ್ದ ಸಾರ್ವಜನಿಕರು ಈ ಕುರಿತು ದೂರುತ್ತಾ ವಾರವಾದರೂ ನೋಂದಣಿಯಾಗುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆದ್ದರಿಂದ ಇಲಾಖೆಯು ಅತಿ ಹೆಚ್ಚು ಆದಾಯ ಬರುವ ಕಚೇರಿಯಲ್ಲಿ ಶೀಘ್ರವಾಗಿ ಕೆಲಸಗಳಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಅದು ಮೂರ್ಖತನದ ಪರಮಾವಧಿ ಆದೀತು.

       ನಮ್ಮ ತಂದೆ ಅಂಗವಿಕಲರಾಗಿದ್ದು, ಅವರ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಬೇಕಿದೆ ಹಾಗಾಗಿ ಅವರನ್ನು ಜೊತೆಯಲ್ಲಿಯೇ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಕರೆ ತಂದಿದ್ದೇವೆ. ಸುಮಾರು ಮೂರು ಗಂಟೆಗಳಿಂದ ಟೋಕನ್‍ಗಾಗಿ ಕಾಯುತ್ತಿದ್ದು ಇನ್ನೂ ಸಿಕ್ಕಿಲ್ಲ. ಇಲ್ಲಿ ಕೂರಲು ಜಾಗವಿಲ್ಲದೇ ಕುಟುಂಬ ಸದಸ್ಯರೆಲ್ಲಾ ನಿಂತೆ ಕಾಯುತ್ತಿದ್ದೇವೆ.

-ಪವಿತ್ರಾಬಾಯಿ, ಬಳ್ಳಾಪುರ

      ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್ ಸಮಮಸ್ಯೆಗಳಿವೆ. ದುಡ್ಡು ಕಟ್ಟುವವರು ಕಚೇರಿಯ ಆಚೆ ಇರುತ್ತಾರೆ. ದುಡ್ಡು ತೆಗೆದುಕೊಳ್ಳುವವರು ಒಳಗೆ ಇರುತ್ತಾರೆ. ಬ್ರೋಕರ್‍ಗಳು ತಮ್ಮ ಶುಲ್ಕ, ಅಧಿಕಾರಿಗಳ ಲಂಚ ಸೇರಿ ಒಟ್ಟು ಹಣವನ್ನು ನೋಂದಣಿ ಮಾಡಿಸುವವರಿಂದ ಪಡೆಯುತ್ತಾರೆ. ಲಂಚ ಕೊಡದೇ ಯಾವುದೇ ಕೆಲಸ ಆಗಲ್ಲ. ಪ್ರಶ್ನಿಸಿದರೇ ಟೋಕನ್ ನೀಡುವುದನ್ನು ತಡ ಮಾಡುತ್ತಾರೆ. ಆಗ ನಮ್ಮ ಕೆಲಸ ಅಲ್ಲೆ ಉಳಿಯುತ್ತದೆ. ಹೀಗಿದೆ ನೋಡಿ ಪರಿಸ್ಥಿತಿ.

-ದಿವಾಕರ್, ತುಮಕೂರು

https://fb.watch/8VYTneCBqD/

      2004 ನೇ ಇಸವಿಯಲ್ಲಿ ಅಳವಡಿಸಿರುವ 8 ಕಂಪ್ಯೂಟರ್‍ಗಳೇ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಅಂದಿನಿಂದ ಇಂದಿನವರೆಗೆ ನಗರ, ಗ್ರಾಮಾಂತರ ಬೆಳೆದಿದ್ದು ಸಿಸ್ಟಮ್‍ಗಳು ಮಾತ್ರ ಅಷ್ಟೇ ಇದ್ದು, ಇವು ಹಳೆಯವಾಗಿದ್ದು ನಿಧಾನವಾಗಿ ಕಾರ್ಯ ನಿರ್ವಹಿಸುವುದರಿಂದ ಸಾರ್ವಜನಿಕರ ನೋಂದಣಿಗಳು ತಡವಾಗುತ್ತಿವೆ. ನೋಂದಣಿ ಇಲಾಳೆ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಕೊಡುತ್ತಿದ್ದು, ಸಂಬಂಧಪಟ್ಟವರು ಸೂಕ್ತಕ್ರಮ ಕೈಗೊಳ್ಳಬೇಕು.

-ಹೆಸರು ಹೇಳಲಿಚ್ಛಿಸದ ಪತ್ರಬರಹಗಾರ

      ಸಮಸ್ಯೆಗೆ ಶೀಘ್ರ ಪರಿಹಾರ-ಜಿಲ್ಲಾ ನೋಂದಾಣಾಧಿಕಾರಿ :

      ಸದ್ಯ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿರುವ ಕಂಪ್ಯೂಟರ್‍ಗಳು ಹಳೆಯವಾಗಿದ್ದು, ಹೊಸ ಸಿಸ್ಟಮ್‍ಗಳನ್ನು ಅಳವಡಿಸಲು ಕೇಂದ್ರ ಕಚೇರಿಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ 8 ಜನ ಸಿಸ್ಟಮ್ ಆಪರೇಟರ್‍ಗಳಿದ್ದು, 1 ಸಿಸ್ಟಮ್‍ನಲ್ಲಿ ದಿನಕ್ಕೆ 30 ದಾಸ್ತವೇಜುಗಳನ್ನು ನೋಂದಣಿ ಮಾಡುವ ಸಾಮಥ್ರ್ಯವಿದ್ದು, ಪ್ರತಿದಿನ ಒಟ್ಟು 240 ದಾಖಲೆಗಳು ಸಿದ್ಧವಾಗಬೇಕು ಆದರೇ ಸದ್ಯ 100 ರಿಂದ 120 ದಾಸ್ತವೇಜುಗಳು ಮಾತ್ರ ನೋಂದಣಿಯಾಗುತ್ತಿವೆ. ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಇಲಾಖೆಯ ಗಮನಕ್ಕೆ ತಂದು ಶೀಘ್ರ ಸರಿಪಡಿಸಿ ಸಾರ್ವಜನಿಕರಿಗೆ ಸುಗಮ ಸೇವೆ ನೀಡಲು ಪ್ರಯತ್ನಿಸಲಾಗುವುದು. ಶೌಚಾಲಯ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯಗಳನ್ನು ನಮ್ಮ ಮಟ್ಟದಲ್ಲೆ ಸರಿಪಡಿಸಲು ಅವಕಾಶವಿದ್ದು, ಶೀಘ್ರ ಕಲ್ಪಿಸಲಾಗುವುದು. ಇಲಾಖೆಯಿಂದ ಲೈಸೆನ್ಸ್ ಹೊಂದಿದ ಪತ್ರ ಬರಹಗಾರರು ಸಾರ್ವಜನಿಕರಿಗೆ ಅಗತ್ಯ ಪತ್ರ ಬರೆದು ಕೊಟ್ಟು ನಿಗದಿತ ಶುಲ್ಕ ಪಡೆಯಬಹುದೆ ಹೊರತು ಕಚೇರಿಯೊಳಗೆ ಬಂದು ದಲ್ಲಾಳಿ ಕೆಲಸ ಮಾಡಲು ಅವಕಾಶವಿಲ್ಲ ಹಾಗೂ ಕಚೇರಿ ಆವರಣದಲ್ಲಿ ಪತ್ರ ಬರಹಗಾರರು ಮೇಜು-ಖುರ್ಚಿ ಹಾಕಿ ಕೂರಲು ಅವಕಾಶವಿಲ್ಲ. ಸಮಸ್ಯೆಗಳ ಬಗ್ಗೆ ಶೀಘ್ರ ಸಬ್‍ರಿಜಿಸ್ಟ್ರಾರ್ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ ನೇರವಾಗಿ ಬಂದು ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ ತಮ್ಮ ಕೆಲಸ ಮಾಡಿಸಿಕೊಂಡು ಹೋಗಬಹುದು.

-ಸೈಯ್ಯದ್ ನೂರ್‍ಪಾಷಾ, ಜಿಲ್ಲಾ ನೋಂದಾಣಾಧಿಕಾರಿ.

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap