ತುಮಕೂರು :
ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರ ರಾಜೀನಾಮೆಯೊಂದಿಗೆ ಕಮಲಪಾಳಯದಲ್ಲಿನ ಆಂತರಿಕ ಕಲಹ ದಿಢೀರ್ ಸ್ಫೋಟಗೊಂಡಿದ್ದು, ಜಿಲ್ಲಾಧ್ಯಕ್ಷರ ದಿಢೀರ್ ರಾಜೀನಾಮೆಗೆ ಕಾರಣವೇನು? ಅವರ ಮುಂದಿನ ನಡೆ ಏನು ಎಂಬುದು ಜಿಲ್ಲಾ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್, ಜೆಡಿಎಸ್ ಹಾಗೂ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವೊದಗಿಸಿದೆ.
ಜಿಲ್ಲಾಧ್ಯಕ್ಷನಾಗಿರುವರಿಂದ ಕ್ಷೇತ್ರದಲ್ಲಿ ಸಂಚರಿಸಲು, ಕಾರ್ಯಕರ್ತರು, ಮತದಾರರ ಕುಶಲೋಪರಿ ವಿಚಾರಿಸಲು ಸಮಯ ಸಾಕಾಗುತ್ತಿಲ್ಲವೆಂಬ ಕಾರಣಕ್ಕೆ ರಾಜೀನಾಮೆ ನೀಡಿರುವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುರೇಶ್‍ಗೌಡರು, ನಿಜಕ್ಕೂ ಅದೇ ಕಾರಣಕ್ಕೆ ರಾಜೀನಾಮೆ ನೀಡಿರುವರೇ ಎಂದರೆ ಒಪ್ಪಲು ಸಾಧ್ಯವಿಲ್ಲವೆಂದು ಬಿಜೆಪಿ ಮುಖಂಡರೆ ಆಂತರಿಕವಾಗಿ ಚರ್ಚೆ ಮಾಡುತ್ತಿದ್ದು, ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳಿಗೂ ಇಂಬು ನೀಡಿದೆ.
ಅಸಲಿ ಕಾರಣವೇನು?:
ಇತ್ತೀಚಿನ ಎಪಿಎಂಸಿ ನಾಮ ನಿರ್ದೇಶನದ ಹಿನ್ನೆಲೆಯಲ್ಲಿ ಎದ್ದಿದ್ದ ಅಪಸ್ವರ ಹಾಗೂ ಜಿಲ್ಲೆಯ ಸಚಿವರು, ಪಕ್ಷದ ಸಂಸದರು-ಶಾಸಕರು, ಮಾಜಿ ಸಚಿವರ ಗುಂಪುಗಳ ನಡುವಿನ ಶೀತಲ ಸಮರಗಳು, ಗುಂಪುಗಳ ಹಗ್ಗ-ಜಗ್ಗಾಟದಿಂದಾಗಿ ಸಹಕಾರವಿಲ್ಲದೆ ಜಿಲ್ಲಾಧ್ಯಕ್ಷ ಸ್ಥಾನಸುರೇಶ್‍ಗೌಡರಿಗೆ ಮುಳ್ಳಿನ ಹಾಸಿಗೆಯಂತಾಗಿತ್ತು.ಇದನ್ನು ಖುದ್ದು ಸುರೇಶ್‍ಗೌಡರೇ ಒಪ್ಪಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಲು ಸಿಕ್ಕಿದ್ದ ಅವಕಾಶವನ್ನು ಬಿಟ್ಟು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರನ್ನು ಮಣಿಸಿ ಬಿಜೆಪಿ ಗೆಲ್ಲಿಸಲು ಶ್ರಮಿಸಿದ್ದೆ ಎಂದಿರುವ ಸುರೇಶ್‍ಗೌಡರು. ಗೌರವ ಇಲ್ಲದ ಮೇಲೆ ಅಧ್ಯಕ್ಷನಾಗಿದ್ದು ಏನು ಪ್ರಯೋಜನ? ನನ್ನ ಸಲಹೆಗಳನ್ನು ಸ್ವೀಕರಿಸಿಲ್ಲ. ಅಧಿಕಾರದಲ್ಲಿರುವವರು ಮಾಡಿಕೊಳ್ಳಲಿ. ನನಗೆ ಯಾವುದೇ ಅಧಿಕಾರವಿಲ್ಲ. ಕ್ಷೇತ್ರದ ಕಡೆ ಗಮನಹರಿಸಲು ರಾಜೀನಾಮೆ ನೀಡಿರುವುದಾಗಿ ಸ್ಪಷ್ಟೀಕರಿಸಿದ್ದಾರೆ. ಗೌಡರ ಈ ಹೇಳಿಕೆ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಲ್ಲವೆಂಬುದನ್ನು ಬಹಿರಂಗ ಪಡಿಸಿದೆ.
ಚುನಾವಣೆ ಸನಿಹದಲ್ಲಿ ಜಿಲ್ಲಾ ಸಾರಥಿಯೇ ಔಟ್:
2ನೇ ಅವಧಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಸುರೇಶ್‍ಗೌಡರ ನೇತೃತ್ವದಲ್ಲಿ ಲೋಕಸಭೆ ಚುನಾವಣೆ, ಸಿರಾ ಉಪಚುನಾವಣೆಯನ್ನು ಎದುರಿಸಿ ಕಮಲ ಗೆಲುವಿನ ನಗೆ ಬೀರಿತ್ತು. ಗ್ರಾಪಂ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಯಾವುದೇ ತುರ್ತು ಇರಲಿಲ್ಲ. ಇನ್ನೇನು ಜಿಪಂ ತಾಪಂ ಹಾಗೂ ಪರಿಷತ್ ಚುನಾವಣೆ ಎದುರಾಗುತ್ತದೆ ಎನ್ನುವ ಸಂದರ್ಭದಲ್ಲಿ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಹಿನ್ನಡೆ ಎಂಬ ವಿಶ್ಲೇಷಣೆಗೂ ಎಡೆಮಾಡಿದೆ.
ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡು ಅವರ ಸಿಎಂ ಆಗಿದ್ದಾಗ ಪ್ರಭಾವಿಯಾಗಿ ಓಡಾಡುತ್ತಿದ್ದ ಬಿ.ಸುರೇಶ್‍ಗೌಡ ಬಿಎಸ್‍ವೈ ಅಧಿಕಾರದಿಂದ ನಿರ್ಗಮಿಸಿದ ಬಳಿಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯಮಟ್ಟದಲ್ಲೂ ಬಿಜೆಪಿ ಭಿನ್ನಮತದ ಚರ್ಚೆಗಳಿಗೆ ಆಸ್ಪದ ಒದಗಿಸಿದ್ದು, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಒಕ್ಕಲಿಗ ಹಾಲಿ-ಮಾಜಿ ಶಾಸಕರಿಗೆ ಗಾಳ ಹಾಕುತ್ತಿದ್ದಾರೆಂಬ ವದಂತಿಗಳಿಗೆ ಪುಷ್ಟಿ ನೀಡಿದೆ.
ರಾಜೀನಾಮೆ ನೀಡಿದ್ದೋ… ಕೊಡಿಸಿದ್ದೋ?:
ಬಿ.ಸುರೇಶ್‍ಗೌಡ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ರಾಜೀನಾಮೆಗೆ ಸ್ಪಷ್ಟ ಕಾರಣ ನೀಡಲು ನಿರಾಕರಿಸಿ ರಾಜೀನಾಮೆ ಕಾರಣವೇನು ಎಂಬುದನ್ನು ರಾಜ್ಯಾಧ್ಯಕ್ಷ ಕಟೀಲ್ ಅವರನ್ನೇ ಕೇಳಿ ಎಂದು ಖಾರವಾಗಿ ಹೇಳಿದ್ದು, ಅವರು ನಿಜಕ್ಕೂ ರಾಜೀನಾಮೆ ನೀಡಿದರೋ ಅಥವಾ ಕೊಡಿ ಎಂದು ರಾಜ್ಯಾಧ್ಯಕ್ಷರೇ ಸೂಚಿಸಿದರೋ ಎಂಬ ಅನುಮಾನಕ್ಕೆ ಎಡೆ ಮಾಡಿದೆ. ಮತ್ತೊಂದೆಡೆ ಇತ್ತೀಚೆಗೆ ಕಾರ್ಯಕರ್ತರ ಕೈಗೂ ಗೌಡರು ಅಷ್ಟಾಗಿ ಸಿಗುತ್ತಿಲ್ಲ ಎಂಬ ದೂರುಗಳು ರಾಜ್ಯಾಧ್ಯಕ್ಷರಿಗೆ ಸಲ್ಲಿಕೆಯಾಗಿದ್ದವು ಎಂಬ ಮಾತುಗಳು ರಾಜೀನಾಮೆ ಬೆನ್ನಲ್ಲೆ ಕೇಳಿಬಂದಿವೆ.
ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರೋಲ್ಲ..
ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆಗಳಿರುವುದು ನಿಜ. ಅಧ್ಯಕ್ಷ ಸ್ಥಾನಕ್ಕೆ ಗೌರವ ಇಲ್ಲದ ಮೇಲೆ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಇತರೆ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಅವಿರತ ಶ್ರಮ ಹಾಕಿದ್ದೇನೆ. ಕಳೆದ ಬಾರಿ ಪಕ್ಷದ ಕೆಲವರ ಕುತಂತ್ರದಿಂದ ಸೋತೆ. ಮತ್ತೆ ಈ ಬಾರಿ ಅದೇ ರೀತಿ ಆಗುವುದು ಬೇಡ ಎನ್ನುವ ಕಾರಣಕ್ಕೆ ಕ್ಷೇತ್ರದ ಕಡೆ ಗಮನಹರಿಸಲು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ ಹೊರತು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ.
-ಬಿ.ಸುರೇಶ್‍ಗೌಡ ಬಿಜೆಪಿ ಮಾಜಿ ಶಾಸಕ.
ಕ್ಷೇತ್ರಕ್ಕೆ ಸಮಯ ಕೊಡಲಾಗುತ್ತಿಲ್ಲವೆಂದು ರಾಜೀನಾಮೆ ನೀಡಿರುವುದಾಗಿ ಸುರೇಶ್‍ಗೌಡರು ಹೇಳಿಕೊಂಡಿದ್ದಾರೆ. ಪಕ್ಷದಲ್ಲಿ ಆಂತರಿಕ ಕಲಹವೇನಿಲ್ಲ. ರಾಜೀನಾಮೆ ಅಂಗೀಕರಿಸುವುದು ಬಿಡುವುದನ್ನು ರಾಜ್ಯಾಧ್ಯಕ್ಷರು ತೀರ್ಮಾನಿಸುತ್ತಾರೆ. ಇನ್ನೆರೆಡು-ಮೂರು ದಿನದಲ್ಲಿ ಅಧ್ಯಕ್ಷಸ್ಥಾನಕ್ಕೆ ಹೊಸಬರ ನೇಮಕವಾಗಲಿದೆ.
-ಎಂ.ಬಿ.ನಂದೀಶ್ ಬಿಜೆಪಿ ರಾಜ್ಯ ಉಪಾಧ್ಯಕ್ಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ