ತುಮಕೂರು :
ಶಾಲೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕೈ ಅಡ್ಡ ಹಾಕಿದ್ರೂ ನಿಲ್ಲಿಸದೇ ತೆರಳಿದ ಬಸ್ ಚಾಲಕನನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ಕೊರಟಗೆರೆ ತಾಲ್ಲೂಕು ನೀಲಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಐ.ಕೆ.ಕಾಲೋನಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಶೈಕ್ಷಣಿಕ ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಮಧುಗಿರಿಯತ್ತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತೆರಳುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದಂತ ಕೆಎಸ್ ಆರ್ ಟಿ ಸಿ ಬಸ್, ಶಾಲೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕೈ ಅಡ್ಡ ಹಾಕಿದ್ರೂ ನಿಲ್ಲಿಸದೇ ತೆರಳಿತ್ತು. ಇದನ್ನು ಹಿಂದೆಯೇ ಸಾಗುತ್ತಿದ್ದ ಶಿಕ್ಷಣ ಸಚಿವರು ಗಮನಿಸಿದ್ದೇ, ಹೇ ಡ್ರೈವರ್ ಆ ಬಸ್ ಹಿಂದೆ ಹಾಕಿ, ಮುಂದೆ ಹೋಗಿ ನಿಲ್ಲಿಸು ಅಂದರು.. ಡ್ರೈವರ್ ಗೂ ಏನ್ ಅಂತ ಗೊತ್ತಾಗದೇ ಸಾರಿಗೆ ಬಸ್’ನ್ನು ಸೈಡ್ ಹೊಡೆದು, ಮುಂದೆ ಹೋಗಿ ನಿಲ್ಲಿಸಿದರು.
ಹೀಗೆ ಮುಂದೆ ಹೋಗಿ ಕೆಎಸ್ ಆರ್ ಟಿ ಸಿ ಬಸ್ ಗೆ ಬಸ್ ಗೆ ಕೈ ಅಡ್ಡಗಟ್ಟಿದ್ದನ್ನು ಕಂಡ ಬಸ್ ಚಾಲಕ, ದಿಢೀರ್ ಅಚ್ಚರಿಗೊಂಡು ಬಸ್ ಅನ್ನು ನಿಲ್ಲಿಸಿಬಿಟ್ಟ. ಬಸ್ ನಿಂತ ನಂತ್ರ, ಡ್ರೈವರ್ ಹತ್ತಿರ ತೆರಳಿದಂತ ಶಿಕ್ಷಣ ಸಚಿವರು, ಬಾ ಕೆಳಗೆ ಇಳಿ ಎಂದು ಸೂಚನೆ ನೀಡಿದರು. ಕೆಳಗೆ ಇಳಿದಂತ ಚಾಲಕನಿಗೆ.. ಅಲ್ಲಪ್ಪಾ.. ಮಕ್ಕಳು ಶಾಲೆಗೆ ತೆರಳೋದಕ್ಕಾಗಿ ರಸ್ತೆಯಲ್ಲಿ ನಿಂತು ಕೈ ಅಡ್ಡ ಹಾಕಿ, ನಿಲ್ಲಿಸೋದಕ್ಕೆ ಕೋರಿಕೊಂಡ್ರು.. ನಿಲ್ಲಿಸದೇ ಬರ್ತೀಯಲ್ಲಾ ಇದು ಸರಿಯಾ ಎಂದು ತರಾಟೆಗೆ ತೆಗೆದುಕೊಂಡರು
ಶಿಕ್ಷಣ ಸಚಿವರ ತರಾಟೆಯಿಂದ ಕ್ಷಣಕಾಲ ಮೌನಕ್ಕೆ ಶರಣಾದ ಚಾಲಕ, ಏನ್ ಮಾತನಾಡಬೇಕು ಎಂಬುದು ತೋಚದೇ ನಿಂತುಬಿಟ್ಟ. ಇದರಿಂದಾಗಿ ಮತ್ತೆ ಸಿಟ್ಟಾದಂತ ಸಚಿವರು, ಕೊರೋನಾ ಭೀತಿಯ ಕಾರಣದಿಂದ ತಡವಾಗಿ ಶಾಲೆಗಳು ಆರಂಭಗೊಂಡಿವೆ. ಈಗ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳದಿದ್ದರೇ ತರಗತಿ ಪಾಠದಿಂದ ವಂಚಿತರಾಗುತ್ತವೆ. ಪರೀಕ್ಷೆಗೂ ತೊಂದರೆಯಾಗುತ್ತದೆ ಎಂಬುದಾಗಿ ತಿಳಿದಿಲ್ಲವೇ ಎಂದು ತಿಳಿ ಹೇಳಿ, ಮತ್ತೆ ಹೀಗೆ ಮಾಡಬೇಡ. ಮಕ್ಕಳು ಕೈ ಮಾಡಿದಾಗ ನಿಲ್ಲಿಸಿ, ಬಸ್ ನಲ್ಲಿ ಹತ್ತಿಸಿಕೊಂಡು ಹೋಗು ಎಂದು ಕಿವಿಮಾತು ಹೇಳಿ ಹೊರಟಿದ್ದಾರೆ.
ಈ ಎಲ್ಲಾ ದೃಶ್ಯವನ್ನು ಕಂಡ ಸ್ಥಳದಲ್ಲಿದ್ದಂತ ಸ್ಥಳೀಯರು, ಬಸ್ ನಲ್ಲಿದ್ದಂತ ಪ್ರಯಾಣಿಕರು ಸೇರಿದಂತೆ ಹಲವರಿಂದ ಶಿಕ್ಷಣ ಸಚಿವರ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ