ತುಮಕೂರು :
ನಗರದ ಜನರಲ್ ಕಾರ್ಯಪ್ಪ ರಸ್ತೆಯ ತನಿಷ್ಕಾ ಜ್ಯೂವೆಲ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮದ್ ಆದಿಲ್, ರಿತೇಶ್ ಕುರುಪ್ ಎನ್ನುವರು ಈ ಜ್ಯೂವೆಲ್ಸ್‍ನಲ್ಲಿದ್ದ ಒಟ್ಟು 2 ಕೆ.ಜಿ. 470 ಗ್ರಾಂ ತೂಕದ 1,30,64,310 ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಜ್ಯೂವೆಲ್ಸ್ ಮಾಲೀಕರಾದ ಪ್ರಕಾಶ್‍ಕುಮಾರ್ ರಾಥೋಡ್ ಅವರು 19-06-2020ರಂದು ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಗಳ ಪತ್ತೆಗಾಗಿ ತುಮಕೂರು ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ.ನವೀನ್‍ರವರ ಉಸ್ತುವಾರಿಯಲ್ಲಿ ಅಪರಾಧ ಪತ್ತೆ ತಂಡ ರಚಿಸಲಾಗಿದ್ದು, ಈ ಕೇಸಿನ ಆರೋಪಿತರುಗಳಾದ ನಗರದ ವಿನೋಬ ನಗರ ಮೊಹಮದ್ ಆದಿಲ್, ಕೇರಳದ ಪೆರಿಗೆರ ಗ್ರಾಮದ ರಿತೇಶ್‍ಕುರುಪ್, ಗುಬ್ಬಿ ಟೌನ್‍ನ ಮಹೇಶ್ ಹಾಗೂ ಮೀನಾಕ್ಷಿ, ಹೆಬ್ಬೂರಿನ ಮಸಿದಿ ಮೊಹಲ್ಲಾದ ರುಕ್ಸಾನ ಇವರನ್ನು ಪತ್ತೆ ಮಾಡಿ, ದಸ್ತಗಿರಿ ಕ್ರಮ ಅನುಸರಿಸಿ ವಿಚಾರಣೆಗೊಳಪಡಿಸಿದಾಗ ಅವರು ನಗರದ ತನಿಷ್ಕಾ ಜ್ಯೂವೆಲ್ಸ್‍ನಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿ ಆರೋಪಿಗಳಿಂದ ಕಳವು ಮಾಡಲಾಗಿದ್ದ ಚಿನ್ನಾಭರಣಗಳಲ್ಲಿ ಒಟ್ಟು 1 ಕೆಜಿ 854 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು 4,05,000 ರೂ. ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಚಿನ್ನಾಭರಣ ಮತ್ತು ನಗದು ಹಣ ಸೇರಿ ಒಟ್ಟು 87,49,282 ರೂಪಾಯಿಗಳಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಪ್ರಕರಣದಲ್ಲಿನ ಆರೋಪಿಗಳನ್ನು ಮತ್ತು ಚಿನ್ನಾಭರಣಗಳನ್ನು ಪತ್ತೆ ಹಚ್ಚಲು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ. ಉದೇಶ್‍ರವರ ಮಾರ್ಗದರ್ಶನದಲ್ಲಿ, ಡಿ.ವೈ.ಎಸ್.ಪಿ. ತಿಪ್ಪೇಸ್ವಾಮಿ. ಹೆಚ್.ಜೆ, ನೇತೃತ್ವದಲ್ಲಿ ಶ್ರಮಿಸಿದ ತುಮಕೂರು ನಗರ ವೃತ್ತ ನಿರೀಕ್ಷಕರಾದ ನವೀನ್. ಬಿ., ಪಿ.ಎಸ್.ಐಗಳಾದ ಮಂಜುನಾಥ ಬಿ.ಸಿ, ಗಂಗಮ್ಮ, ಎಎಸ್‍ಐ ರಮೇಶ್, ಸಿಬ್ಬಂದಿಗಳಾದ ಮಂಜುನಾಥ ಪ್ರಸನ್ನಕುಮಾರ್, ರಾಮಚಂದ್ರಯ್ಯ, ಸಿದ್ದೇಶ್ವರ ಈರಣ್ಣ, ನಾಗರಾಜ, ಜೈಪ್ರಕಾಶ್, ನವೀನ, ಅಶ್ವಿನಿ, ದಯಾಮಣಿ, ಕವಿತ, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ನರಸಿಂಹರಾಜು, ರಮೇಶ್, ಜಗದೀಶ್‍ರವರುಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಕೆ. ವಂಸಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ