ತುಮಕೂರು :
ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಜಾಗವನ್ನು ಶಾಲೆಯ ಸುಪರ್ದಿಗೆ ತೆಗೆದುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮುತುವರ್ಜಿಯಿಂದ ಈ ಕೆಲಸ ಮಾಡಬೇಕು ಎಂದು ತುಮಕೂರು ತಾಲ್ಲೂಕು ಪಂಚಾಯ್ತಿಯ ಸಭೆಯಲ್ಲಿ ಬಹುತೇಕ ಸದಸ್ಯರು ಒತ್ತಾಯಿಸಿದರು.
ಅಧ್ಯಕ್ಷೆ ಕವಿತಾ ರಮೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಸರ್ಕಾರಿ ಶಾಲೆಗಳ ಜಮೀನು ರಕ್ಷಣೆಗೆ ಒತ್ತಾಯ ಮಾಡಿದರು. ಅನೇಕ ಶಾಲೆಗಳಿಗೆ ಹಲವಾರು ವರ್ಷಗಳ ಹಿಂದೆ ದಾನಿಗಳು ಜಮೀನನ್ನು ಶಾಲೆಗೆ ದಾನ ನೀಡಿದ್ದರು. ಅದರ ಖಾತೆಯನ್ನು ಶಾಲೆಗಳ ಹೆಸರಿಗೆ ಮಾಡಿಸಿಕೊಂಡಿಲ್ಲ. ಈಗ ದಾನ ಕೊಟ್ಟವರ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಗಳು ಶಾಲೆ ಜಾಗ ತಮಗೆ ಸೇರಬೇಕು, ಬಿಟ್ಟುಕೊಡಿ ಎಂದು ಹಲವು ಕಡೆ ತಕರಾರು ತೆಗೆದಿರುವ ಪ್ರಕರಣಗಳಿವೆ ಎಂದರು.
ಸದಸ್ಯ ಗಂಗಾಂಜನೇಯ ವಿಷಯ ಪ್ರಸ್ತಾಪ ಮಾಡಿ, ತಾಲ್ಲೂಕಿನಲ್ಲಿ ಈಗ ಭೂಮಿಯ ಬೆಲೆ ಹೆಚ್ಚಾಗಿದೆ. ಶಾಲೆಗೆ ಜಮೀನು ದಾನ ನೀಡಿದವರ ಸಂಬಂಧಿಗಳು ಆ ಜಮೀನು ತಮ್ಮದೆಂದು ಹೇಳುತ್ತಿದ್ದಾರೆ. ಹೀಗೇ ನಿರ್ಲಕ್ಷ ಮಾಡಿದರೆ ಬಹುತೇಕ ಸರ್ಕಾರಿ ಶಾಲೆಗಳ ಜಮೀನು ಕಳೆದುಕೊಳ್ಳಬೇಕಾಗುತ್ತದೆ ಎಂದರು. ಇತರೆ ಸದಸ್ಯರೂ ಇದಕ್ಕೆ ಧ್ವನಿಗೂಡಿಸಿದರು.
ಕೋರ ಕ್ಷೇತ್ರ ಸದಸ್ಯೆ ಕವಿತಾ ರಮೇಶ್ ಇದೇ ವಿಚಾರ ಮುಂದುವರೆಸಿ, ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಗೆ 15-20 ವರ್ಷದ ಹಿಂದೆ ಒಬ್ಬರು ಒಂದು ಎಕರೆ ಜಮೀನನ್ನು ಶಾಲೆಗೆ ದಾನ ನೀಡಿದ್ದರು. ಅದನ್ನು ಶಾಲೆ ಹೆಸರಿಗೆ ದಾಖಲೆ ಮಾಡಿಕೊಳ್ಳದೆ ನಿರ್ಲಕ್ಷ ಮಾಡಿರುವ ಕಾರಣ ಖಾಸಗಿ ವ್ಯಕ್ತಿಯೊಬ್ಬರು ಆ ಜಮೀನಿನಲ್ಲಿ ಮಾವಿನ ಗಿಡ ಬೆಳೆಸಿ ತಮ್ಮದು ಮಾಡಿಕೊಂಡಿದ್ದಾರೆ. ಈ ಜಮೀನಿನ ಈಗಿನ ಬೆಲೆ ಸುಮಾರು ಒಂದು ಕೋಟಿ ರೂ. ಮೀರುತ್ತದೆ. ಕೂಡಲೇ ಆ ಜಮೀನನ್ನು ಶಾಲೆ ವಶಕ್ಕೆ ಪಡೆಯುವಂತೆ ಕವಿತಾ ರಮೇಶ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾ ನಾಯ್ಕ್ ಅವರಿಗೆ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ್ ಮಾತನಾಡಿ, ಇಂದೇ ಬೊಮ್ಮನಹಳ್ಳಿ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿಯಾಗಿರುವ ಶಾಲೆಯ ಜಾಗವನ್ನು ತೆರವುಗೊಳಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
2020-21ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶೌಚಾಲಯ, ಆಟದ ಮೈದಾನ ಅಡುಗೆ ಕೋಣೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಜಲ್‍ಜೀವನ್ ಮಿಷನ್‍ನಡಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿಗೆ ವರದಿ ಕಳುಹಿಸಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎನ್‍ಆರ್‍ಇಜಿ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕೆಲವು ಸಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶಾಲಾ ಕಾಂಪೌಂಡ್ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಪೌಷ್ಠಿಕ ತೋಟ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕಿದೆ ಎಂದು ಬಿಇಒ ಹನುಮಾನಾಯ್ಕ್ ಸಭೆಗೆ ಮಾಹಿತಿ ನೀಡಿದರು.
ಸದಸ್ಯ ಸುರೇಶ್ ಮಾತನಾಡಿ, ಹಿರೇಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇರುವ ಕೆಲವು ಬೋರ್‍ವೆಲ್‍ಗಳು ಬತ್ತಿಹೋಗಿದ್ದರೆ, ಇನ್ನೂ ಕೆಲವು ಬೋರ್‍ವೆಲ್‍ಗಳನ್ನು ದುರಸ್ಥಿ ಮಾಡಬೇಕಾಗಿದೆ. ಕೂಡಲೇ ಅಧಿಕಾರಿಗಳು ಕ್ರಮ ವಹಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕೆಂದು ಒತ್ತಾಯಿಸಿದರು.
ತಾಪಂ ಅಧ್ಯಕ್ಷೆ ಕವಿತಾ ರಮೇಶ್ ಮಾತನಾಡಿ, ಈಗಾಗಲೇ ಬೇಸಿಗೆ ಆರಂಭವಾಗಿದೆ. ತಾಪಂ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು, ಅಧಿಕಾರಿಗಳು ಜವಾಬ್ದಾರಿ ವಹಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ಎಲ್ಲಿಯೂ ನೀರಿನ ಸಮಸ್ಯೆ ಕಂಡುಬರದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸದಸ್ಯ ಗಂಗಾಂಜನೇಯ ಮಾತನಾಡಿ, ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಕೆರೆಕಟ್ಟೆಗಳಿಲ್ಲ, ನೀರು ಸಂಗ್ರಹಗಾರಗಳಿಲ್ಲ. ಕೊಳವೇ ಬಾವಿ ನೀರು ಆಶ್ರಯಿಸಬೇಕಾಗಿದೆ. ಈಗಾಗಲೇ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆಯಲ್ಲಿ ಉಲ್ಬಣವಾಗಲಿದೆ. ಮುಂಜಾಗ್ರತವಾಗಿ ಕೊಳವೆ ಬಾವಿ ಕೊರೆದು ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಚಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ಜೈಪಾಲ್, ಗ್ರಾಮ ಪಂಚಾಯ್ತಿ ಪಿಡಿಓಗಳ ಸಭೆ ಕರೆದು ಎಲ್ಲಾ ಓವರ್‍ಹೆಡ್ ಟ್ಯಾಂಗಳನ್ನು ಸ್ವಚ್ಚಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ರಾಗಿ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗದ ಕಾರಣ ರಾಗಿ ಬೆಳೆದ ರೈತರು ರಾಗಿ ಮಾರಾಟ ಮಾಡಲು ಪರದಾಡುವಂತಾಗಿದೆ. ಫಸಲು ಕೈಗೆ ಬಂದರೂ ಮಾರಾಟ ಮಾಡಲಾಗುತ್ತಿಲ್ಲ, ಕೂಡಲೇ ಅಧಿಕಾರಿಗಳು ಗಮನ ಹರಿಸಿ ಎಪಿಎಂಸಿ ಯಾರ್ಡ್‍ನಲ್ಲಿ ರಾಗಿ ಖರೀದಿಗೆ ಮುಂದಾಗಬೇಕೆಂದು ಸದಸ್ಯ ಶಿವಕುಮಾರ್ ಕೃಷಿ ಅಧಿಕಾರಿಯನ್ನು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಈಗಾಗಲೇ 2850 ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ, ಮಾರ್ಚ್ 14ರವರೆಗೂ ನೊಂದಣಿ ಹಾಗೂ ರಾಗಿ ಮಾರಾಟಕ್ಕೆ ಅವಕಾಶವಿದೆ. ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ 3295 ರೂ. ನಿಗಧಿ ಮಾಡಲಾಗಿದೆ. ಶೀಘ್ರದಲ್ಲಿ ಖರೀದಿ ಕೇಂದ್ರ ಆರಂಭವಾಗಲಿದೆ ಎಂದು ಕೃಷಿ ಅಧಿಕಾರಿ ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಪಟ್ಟಿ ಮಾಡಿ ಕೊಟ್ಟರೆ ಮುಂದಿನ ಸಭೆಯೊಳಗೆ ನಿರ್ಣಯ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆದ್ದರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಖಾಲಿ ಹುದ್ದೆಗಳ ಪಟ್ಟಿ ಮಾಡಿ ಕೊಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿಯ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶಾಂತಕುಮಾರ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಜಿ.ಮಧು, ಇಒ ಜೈಪಾಲ್, ಹಣಕಾಸು ಅಧಿಕಾರಿ ಆದಿಲಕ್ಷ್ಮಮ್ಮ ಉಪಸ್ಥಿತರಿದ್ದರು.
ಬೇಸಿಗೆ ಪ್ರಾರಂಭವಾಗುತ್ತಿದೆ. ಯಾವ ಹಳ್ಳಿಯಲ್ಲೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಅಭಾವ ಇರುವ ಕಡೆ ಪರ್ಯಾಯ ವ್ಯವಸ್ಥೆ ಮಾಡಬೇಕು.
-ಕವಿತಾ ರಮೇಶ್, ಅಧ್ಯಕ್ಷರು, ತಾಪಂ.
ತಾಲ್ಲೂಕಿನಲ್ಲಿ ಈಗ ಭೂಮಿಯ ಬೆಲೆ ಹೆಚ್ಚಾಗಿದೆ. ಶಾಲೆಗೆ ಜಮೀನು ದಾನ ನೀಡಿದವರ ಸಂಬಂಧಿಗಳು ಆ ಜಮೀನು ತಮ್ಮದೆಂದು ಹೇಳುತ್ತಿದ್ದಾರೆ. ಹೀಗೇ ನಿರ್ಲಕ್ಷ ಮಾಡಿದರೆ ಬಹುತೇಕ ಸರ್ಕಾರಿ ಶಾಲೆಗಳ ಜಮೀನು ಕಳೆದುಕೊಳ್ಳಬೇಕಾಗುತ್ತದೆ
-ಗಂಗಾಂಜನೇಯ, ಸದಸ್ಯರು.