ತುಮಕೂರು :
ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗೆ ಸ್ಥಗಿತಗೊಂಡು ಸಂಕಷ್ಟಕ್ಕೀಡಾಗಿರುವ ಪರಿಸ್ಥಿತಿಯಲ್ಲಿ ತುಮಕೂರು ನಗರ ಪಾಲಿಕೆ ಜನ ಮೇಲೆ ತೆರಿಗೆ ಹೊರೆ ಹೊರಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ದೇಶಾದ್ಯಂತ ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ವಿವಿಧ ತೆರಿಗೆ ವಿನಾಯಿತಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ವೇಳೆ ತುಮಕೂರು ನಗರ ಪಾಲಿಕೆ ಈ ಬಾರಿ ಶೇಕಡ 15ರಷ್ಟು ಆಸ್ತಿ ತೆರಿಗೆ ವಿಧಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೊವೀಡ್-19 ಹಿನ್ನೇಲೆಯಲ್ಲಿ ಲಾಕ್‍ಡೌನ್ ಹಾಗೂ ಅದಕ್ಕೆ ಸಂಬಂಧಿಸಿದಂತೆ ಆಗಿರುವ ಆರ್ಥಿಕ ಹಾಗೂ ಸಾಮಾಜಿಕ ತೊಂದರೆಗಳ ನಡುವೆ ತುಮಕೂರು ಮಹಾನಗರ ಪಾಲಿಕೆಯವರು ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹೆಚ್ಚಳ ಮಾಡಿರುವುದು ತುಮಕೂರು ನಾಗರಿಕರು ಹಾಗೂ ವರ್ತಕರಿಗೆ ಅತಂಕವನ್ನು ಉಂಟುಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಪ್ರಸ್ತುತ ಇರುವ ಹಣಕಾಸಿನ ದುಸ್ಥಿತಿಯಲ್ಲಿ ಹಲವು ವಿಧವಾದ ಆರ್ಥಿಕ ನೆರವನ್ನು ಘೋಷಣೆ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ನಾಗರೀಕರಿಗೆ ಅನುಕೂಲವಾಗುವಂತೆ ಕೆಲವು ರಿಯಾಯಿತಿಗಳನ್ನು ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದ ನಾಗರೀಕರಿಗೆ ತೆರಿಗೆಯನ್ನು ಹೆಚ್ಚಿಸಿ ಇನ್ನಷ್ಟು ಹೊರೆ ಮಾಡಿದೆ ಎಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಟೀಕಿಸಿದ್ದಾರೆ.
ನಗರ ಪಾಲಿಕೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತೆರಿಗೆಯನ್ನು ಹೆಚ್ಚಳ ಮಾಡಬಾರದೆಂದು ಸಲಹೆ ಮಾಡಿದ್ದರು. ಪಾಲಿಕೆಯ 2020-21 ಸಾಲಿನ ಬಜೆಟ್‍ನಲ್ಲಿಯೂ ತೆರಿಗೆ ಹೆಚ್ಚಿಸುವ ಪ್ರಸ್ತಾಪ ಇಲ್ಲದಿರುವುದು ಕಂಡುಬಂದಿದೆ. ಕೊವಿಡ್-19ರ ಹಿನ್ನೆಲೆಯಲ್ಲಿ ತೆರಿಗೆಯನ್ನು ಹೆಚ್ಚಿಸಿದರೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಹೀಗಾಗಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಇತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿದ ನಗರಪಾಲಿಕೆ ಏಕಾಏಕಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೊವಿಡ್-19ರ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಸ್ಮಾರ್ಟ್‍ಸಿಟಿ ವತಿಯಿಂದ ನಡೆಯುತ್ತಿರುವುದರಿಂದ ಈ ತೆರಿಗೆ ಹೆಚ್ಚಳವನ್ನು ಹಿಂಪಡೆಯಬೇಕು ಹಾಗೂ ಹಿಂದಿನ ವರ್ಷದ ತೆರಿಗೆಯನ್ನು ಮುಂದಿನ 3 ವರ್ಷದವರೆಗೆ ಮುಂದುವರಿಸಿಕೊಂಡು ಹೋಗಬೇಕು ಮತ್ತು ಆರು ತಿಂಗಳು ತೆರಿಗೆಯನ್ನು ಪಾವತಿಸಲು ರಿಯಾಯಿತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಸ್ತಿ ತೆರಿಗೆ ಹೆಚ್ಚಳಕ್ಕೆ ಆಡಿಟರ್ ಎಸ್. ಪ್ರಕಾಶ್ ಅವರೂ ಆಕ್ಷೇಪ ಮಾಡಿದ್ದಾರೆ. ನಗರ ಪಾಲಿಕೆ ಸಂಪನ್ಮೂಲ ಕ್ರೂಢೀಕರಣದ ಜೊತೆಗೆ ನಾಗರೀಕ ಸೌಲಭ್ಯ ನೀಡುತ್ತಲೂ ಗಮನಹರಿಸಬೇಕು, ಕೇವಲ ಆದಾಯ ಜಸ್ತಿ ಮಾಡಿಕೊಳ್ಳುವುದಷ್ಟೇ ಅಲ್ಲ ಎಂದಿದ್ದಾರೆ.
24*7 ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿ ಒಂದು ವರ್ಷವಾಯಿತು. ಈ ಮಾರ್ಗದಲ್ಲಿ ಇನ್ನೂ ನೀರು ಬಂದಿಲ್ಲ. ಸಪ್ತಗಿರಿ ಬಡಾವಣೆ ಮತ್ತಿತರ ಕಡೆ ಇನ್ನೂ ಒಳಚರಂಡಿ ವ್ಯವಸ್ಥೆ ಆಗಿಲ್ಲ, ಸ್ಮಾರ್ಟ್ ಸಿಟಿ ಮಾಡಲು ಹೊರಟವರು ನಾಗರೀಕರಿಗೆ ಸೌಕರ್ಯ ಒದಗಿಸಲೂ ಅದ್ಯತೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ನಗರ ಪಾಲಿಕೆಯ ಹಿಂದಿನ ತೆರಿಗೆ ನಿರ್ಧರಣಾ ಮತ್ತು ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಆಸ್ತಿ ತೆರಿಗೆಯನ್ನು ಶೇಕಡ 15ರಷ್ಟು ಹೆಚ್ಚಳ ಮಾಡಿ ತೀರ್ಮಾನಿಸಲಾಗಿತ್ತು. ಈ ವಿಷಯವನ್ನು ಸಾಮಾನ್ಯ ಸಭೆಗೆ ತಂದು ಚರ್ಚೆ ಮಾಡಿ ಜಾರಿ ಮಾಡಬೇಕಾಗಿತ್ತು. ಆದರೆ, ಲಾಕ್‍ಡೌನ್ ಕಾರಣದಿಂದ ಸಾಮಾನ್ಯ ಸಭೆ ನಡೆಯಲಿಲ್ಲ. ಹೀಗಾಗಿ, ಸ್ಥಾಯಿ ಸಮಿತಿ ನಿರ್ಣಯವನ್ನೇ ಜಾರಿ ಮಾಡಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್‍ಕುಮಾರ್ ಹೇಳಿದರು.
ತೆರಿಗೆ ಹೆಚ್ಚಳ ಅಥವಾ ಇನ್ನಾವುದೇ ಸ್ಥಾಯಿ ಸಮಿತಿ ನಿರ್ಣಯಗಳು ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನವಾದ ನಂತರವೇ ಜಾರಿ ಆಗಬೇಕು. ಆದರೆ, ಆಸ್ತಿ ತೆರಿಗೆ ಹೆಚ್ಚಳದ ವಿಷಯ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗದೆ ಹೆಚ್ಚಳ ತೆರಿಗೆ ಜಾರಿಗೆ ತಂದಿರುವುದು ನಿಯಮ ಬಾಹೀರ ಎಂದು ಕೆಲವು ಪಾಲಿಕೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು ಎಂಬುದು ಡಿಎಂಎ ನಿರ್ದೇಶನ. ಶೇಕಡ 15ರಷ್ಟು ತೆರಿಗೆ ಹೆಚ್ಚಳ ಮಾಡಿ ಆರ್ಥಿಕ ಸಂಪನ್ಮೂಕ ಕ್ರೂಢೀಕರಣ ಮಾಡಿಕೊಳ್ಳಲು ಅವಕಾಶವಿದೆ. ಜನರ ಆರ್ಥಿಕ ಸಂಕಷ್ಟದ ಈ ವರ್ಷ ಶೇಕಡ 5ರಿಂದ 10ರಷ್ಟು ತೆರಿಗೆ ಏರಿಕೆ ಮಾಡಬೇಕಾಗಿತ್ತು, ಆದರೆ 5ರಷ್ಟು ಮಾಡಿರುವುದು ಸರಿಯಾದ ನಿರ್ಧಾರವಲ್ಲ ಎಂದು ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಟಿ.ಆರ್.ಲೋಕೇಶ್ ಅವರು ಹೇಳಿದ್ದಾರೆ.
ಬೇರೆ ಸ್ಥಳೀಯ ಸಂಸ್ಥೆಗಳಲ್ಲಿ ಈ ರೀತಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ, ಲಾಕ್‍ಡೌನ್ ಕಷ್ಟ ಕಾಲದಲ್ಲಿ ಜನರ ನೆರವಿಗೆ ಬರಬೇಕಾಗಿದ್ದ ನಗರಪಾಲಿಕೆ, ಇನ್ನಷ್ಟು ಹೊರೆ ಹೊರಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಆಸ್ತಿ ತೆರಿಗೆ ವಿಷಯ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನವಾಗಿಲ್ಲ. ಆದರೆ, ಇತ್ತೀಚಿನ ಬಜೆಟ್ ಸಭೆಯಲ್ಲಿ ಕೆಲ ಸದಸ್ಯರು ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಏರಿಸಿರುವ ತೆರಿಗೆ ಕಡಿಮೆ ಮಾಡಬೇಕು ಹಾಗೂ ಈ ವರ್ಷ ಸಾರ್ವಜನಿಕರಿಂದ ತೆರಿಗೆ ಸಂಗ್ರಹ ಮಾಡದಂತೆ ವಿನಾಯಿತಿ ನೀಡಬೇಕು ಎಂದು ಸರ್ಕಾರವನ್ನು ಕೋರುವಂತೆ ಸದಸ್ಯರು ಸಭೆಯಲ್ಲಿ ಹಾಜರಿದ್ದ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಮನವಿ ಮಾಡಿದರು. ಅದರಂತೆ, ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ತೆರಿಗೆ ಪಾವತಿಗೆ ವಿನಾಯಿತಿ ಮಾಡಲು ಕೋರುವಂತೆ ಸಂದ ಜಿ.ಎಸ್.ಬಸವರಾಜು ನಗರ ಪಾಲಿಕೆ ಆಯುಕ್ತ ಭೂಬಾಲನ್ ಅವರಿಗೆ ಹೇಳಿದ್ದರು ಎಂದು 26ನೇ ವಾರ್ಡಿನ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಹೇಳಿದರು.
ಇದಾಗಿಯೂ, ನಗರ ಪಾಲಿಕೆ ಶೇಕಡ 15ರಷ್ಟು ಆಸ್ತಿ ತೆರಿಗೆ ಜಾರಿಗೆ ಕ್ರಮ ತೆಗೆದುಕೊಂಡಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಪಾಲಿಕೆ ಶೇಕಡ 5ರಷ್ಟು ರಿಯಾಯಿತಿ ಪ್ರಕಟಿಸಿದೆ.
ನಗರ ಪಾಲಿಕೆ ಅಧಿಕಾರಿಗಳಿಗೆ ನಗರದ ಜನರ ಬಗ್ಗೆ ಸ್ಪಂದನೆ ಇದೆಯೋ ಇಲ್ಲವೊ, ಆದರೆ, ಪಾಲಿಕೆಗೆ ಆಯ್ಕೆಯಾದ ಸದಸ್ಯರು, ಶಾಸಕರು, ಸಂಸದರು ಪಾಲಿಕೆ ಹೆಚ್ಚು ಮಾಡಿರುವ ಆಸ್ತಿ ತೆರಿಗೆಯನ್ನು ವಾಪಸ್ ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ನಗರ ಪಾಲಿಕೆಯ ಹಿಂದಿನ ತೆರಿಗೆ ನಿರ್ಧರಣಾ ಮತ್ತು ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಆಸ್ತಿ ತೆರಿಗೆಯನ್ನು ಶೇಕಡ 15ರಷ್ಟು ಹೆಚ್ಚಳ ಮಾಡಿ ತೀರ್ಮಾನಿಸಲಾಗಿತ್ತು. ಈ ವಿಷಯವನ್ನು ಸಾಮಾನ್ಯ ಸಭೆಗೆ ತಂದು ಚರ್ಚೆ ಮಾಡಿ ಜಾರಿ ಮಾಡಬೇಕಾಗಿತ್ತು. ಆದರೆ, ಲಾಕ್‍ಡೌನ್ ಕಾರಣದಿಂದ ಸಾಮಾನ್ಯ ಸಭೆ ನಡೆಯಲಿಲ್ಲ. ಹೀಗಾಗಿ, ಸ್ಥಾಯಿ ಸಮಿತಿ ನಿರ್ಣಯವನ್ನೇ ಜಾರಿ ಮಾಡಲಾಗಿದೆ.
-ಟಿ.ಎಂ.ಮಹೇಶ್‍ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಪ್ರಸ್ತುತ ಇರುವ ಹಣಕಾಸಿನ ದುಸ್ಥಿತಿಯಲ್ಲಿ ಹಲವು ವಿಧವಾದ ಆರ್ಥಿಕ ನೆರವನ್ನು ಘೋಷಣೆ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ನಾಗರೀಕರಿಗೆ ತೆರಿಗೆಯನ್ನು ಹೆಚ್ಚಿಸಿ ಇನ್ನಷ್ಟು ಹೊರೆ ಮಾಡಿದೆ. ಈ ತೆರಿಗೆ ಹೆಚ್ಚಳವನ್ನು ಹಿಂಪಡೆಯಬೇಕು ಹಾಗೂ ಹಿಂದಿನ ವರ್ಷದ ತೆರಿಗೆಯನ್ನು ಮುಂದಿನ 3 ವರ್ಷದವರೆಗೆ ಮುಂದುವರಿಸಿಕೊಂಡು ಹೋಗಬೇಕು ಮತ್ತು ಆರು ತಿಂಗಳು ತೆರಿಗೆಯನ್ನು ಪಾವತಿಸಲು ರಿಯಾಯಿತಿಯನ್ನು ಮುಂದುವರಿಸಬೇಕು.
-ಹೆಚ್.ಜಿ.ಚಂದ್ರಶೇಖರ್, ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ.
ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು ಎಂಬುದು ಡಿಎಂಎ ನಿರ್ದೇಶನ. ಶೇಕಡ 15ರಷ್ಟು ತೆರಿಗೆ ಹೆಚ್ಚಳ ಮಾಡಿ ಆರ್ಥಿಕ ಸಂಪನ್ಮೂಕ ಕ್ರೂಢೀಕರಣ ಮಾಡಿಕೊಳ್ಳಲು ಅವಕಾಶವಿದೆ. ಜನರ ಆರ್ಥಿಕ ಸಂಕಷ್ಟದÀ ಈ ವರ್ಷ ಶೇಕಡ 5ರಿಂದ 10ರಷ್ಟು ತೆರಿಗೆ ಏರಿಕೆ ಮಾಡಬೇಕಾಗಿತ್ತು, ಆದರೆ 5ರಷ್ಟು ಮಾಡಿರುವುದು ಸರಿಯಾದ ನಿರ್ಧಾರವಲ್ಲ.
-ಟಿ.ಆರ್.ಲೋಕೇಶ್, ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷರು.
ನಗರ ಪಾಲಿಕೆ ಸಂಪನ್ಮೂಲ ಕ್ರೂಢೀಕರಣದ ಜೊತೆಗೆ ನಾಗರೀಕ ಸೌಲಭ್ಯ ನೀಡುತ್ತಲೂ ಗಮನಹರಿಸಬೇಕು, ಕೇವಲ ಆದಾಯ ಜಸ್ತಿ ಮಾಡಿಕೊಳ್ಳುವುದಷ್ಟೇ ಅಲ್ಲ. 24*7 ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿ ಒಂದು ವರ್ಷವಾಯಿತು. ಈ ಮಾರ್ಗದಲ್ಲಿ ಇನ್ನೂ ನೀರು ಬಂದಿಲ್ಲ. ಸಪ್ತಗಿರಿ ಬಡಾವಣೆ ಮತ್ತಿತರ ಕಡೆ ಇನ್ನೂ ಒಳಚರಂಡಿ ವ್ಯವಸ್ಥೆ ಆಗಿಲ್ಲ, ಸ್ಮಾರ್ಟ್ ಸಿಟಿ ಮಾಡಲು ಹೊರಟವರು ನಾಗರೀಕರಿಗೆ ಸೌಕರ್ಯ ಒದಗಿಸಲೂ ಅದ್ಯತೆ ನೀಡಬೇಕು.
-ಎಸ್.ಪ್ರಕಾಶ್, ಆಡಿಟರ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ