ತುಮಕೂರು :
ತುಮಕೂರು – ಬೆಂಗಳೂರು ನಡುವೆ ಸಂಚರಿಸುವ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ನೈಋತ್ಯ ರೈಲ್ವೇ ತುಮಕೂರು-ಯಶವಂತಪುರ ಮಧ್ಯೆ ಆರು ಸಿಂಗಲ್ ಡೆಮು ರೈಲುಗಳ ಸಂಚಾರವನ್ನ ಇಂದಿನಿಂದ ಆರಂಭಿಸಿದೆ.
ಯಶವಂತಪುರದಿಂದ ತುಮಕೂರು ಕಡೆಗೆ ಬೆಳಗ್ಗೆ 5.30ಕ್ಕೆ, ತುಮಕೂರಿನಿಂದ ಯಶವಂತಪುರಕ್ಕೆ ಬೆಳಗ್ಗೆ 8ಕ್ಕೆ, ಯಶವಂತಪುರದಿಂದ ತುಮಕೂರಿಗೆ ಬೆಳಗ್ಗೆ 9.30ಕ್ಕೆ, ತುಮಕೂರಿನಿಂದ ಯಶವಂತಪುರಕ್ಕೆ ಸಂಜೆ 4.20ಕ್ಕೆ, ಯಶವಂತಪುರದಿಂದ ಸಂಜೆ 6ಕ್ಕೆ ಹಾಗೂ ತುಮಕೂರಿನಿಂದ ಯಶವಂತಪುರಕ್ಕೆ ರಾತ್ರಿ 7.40 ಕ್ಕೆ ಹೊರಡಲಿದೆ.
ಯಶವಂತಪುರ ಮತ್ತು ತುಮಕೂರಿನ ನಡುವಿನ ಎಲ್ಲ ನಿಲ್ದಾಣಗಳಲ್ಲೂ ರೈಲು ನಿಲುಗಡೆ ಕಲ್ಪಿಸಲಾಗಿದ್ದು, ರಾಜ್ಯ ಸರ್ಕಾರ ಕೋವಿಡ್ ಲಾಕ್ ಡೌನ್ ಸಡಿಲಿಕೆಯಿಂದ ಕೈಗಾರಿಕೆಗಳು ಮತ್ತು ಇತರ ಚಟುವಟಿಕೆಗಳು ಆರಂಭವಾಗಿದ್ದು, ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗಕ್ಕೆ ತೆರಳುವವರ ಸಂಖ್ಯೆಯಲ್ಲಿ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೂ ಕೇವಲ ಒಂದೇ ಡೆಮು ರೈಲಿನ ಸಂಚಾರವಿದ್ದುದರಿಂದ ಅತಿ ಹೆಚ್ಚಿನ ದಟ್ಟಣೆ ಇತ್ತು. ಕೋವಿಡ್ ಸುರಕ್ಷತಾ ಕ್ರಮವಾಗಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿ ಪ್ರಯಾಣಿಕರಿಗೆ ಕೊರೋನಾ ಸೋಂಕು ಹರಡುವ ಅಪಾಯವಿತ್ತು.
ಈ ಹಿನ್ನೆಲೆಯಲ್ಲಿ ತುಮಕೂರು ಬೆಂಗಳೂರು ರೈಲ್ವೇ ಪ್ರಯಾಣಿಕೆ ವೇದಿಕೆ ಪ್ರಯಾಣಿಕರ ದಟ್ಟಣೆಯ ಚಿತ್ರದೊಂದಿಗೆ ರೈಲ್ವೇ ಇಲಾಖೆ, ರೈಲ್ವೇ ಸಚಿವರು ಹಾಗೂ ಇಲಾಖೆಯ ಎಲ್ಲ ಹಿರಿಯರಿಗೆ ಟ್ವೀಟ್ ಮಾಡಿ ಹೆಚ್ಚಿನ ರೈಲುಗಳ ಸಂಚಾರಕ್ಕೆ ಮನವಿ ಮಾಡಿತ್ತು.
ವಿಷಯದ ಗಂಭೀರತೆ ಅರಿತ ಇಲಾಖೆ ಅಧಿಕಾರಿಗಳು ವೇದಿಕೆಯ ಕಾಳಜಿಯ ಮನವಿಗೆ ತಕ್ಷಣ ಸ್ಪಂದಿಸಿ ಹೆಚ್ಚು ರೈಲುಗಳ ಸಂಚಾರ ಆರಂಭಿಸಿದ್ದು ಇದಕ್ಕಾಗಿ ವೇದಿಕೆ ಅಧಿಕಾರಿಗಳನ್ನು ಅಭಿನಂದಿಸಿದೆ.
ಎಚ್ಚರಿಕೆ ವಹಿಸಲು ಮನವಿ:
ಕೋವಿಡ್ ಹಿನ್ನೆಲೆಯಲ್ಲಿ ರೈಲ್ವೇ ಪ್ರಯಾಣಿಕರು ಅಗತ್ಯವಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರೋಗ್ಯ ಸಂರಕ್ಷಿಸಿಕೊಳ್ಳಬೇಕೆಂದು ವೇದಿಕೆ ಮನವಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ