ತುಮಕೂರು:
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಬಂದ್ ಆಗಿದ್ದ ಪದವಿ ಕಾಲೇಜುಗಳ ಆಫ್‍ಲೈನ್ ತರಗತಿಗಳು ಪುನಾರಂಭವಾಗಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತುಮಕೂರಿನ ವಿಶ್ವವಿದ್ಯಾಲಯದ ಸಂಯೋಜಿತ ಪದವಿ ಕಾಲೇಜಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬೆಳಗ್ಗೆಯೇ ವಿವಿ ಕುಲಪತಿ ಪ್ರೊ .ಸಿದ್ದೇಗೌಡ ಹಾಗೂ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರೊಂದಿಗೆ ಸಂಯೋಜಿತ ಕಲಾ ಕಾಲೇಜಿಗೆ ಭೇಟಿ ನೀಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಮುನ್ನಚ್ಚೆರಿಕೆ ಕ್ರಮಗಳನ್ನು ಪರಿಶೀಲನೆ ಮಾಡಿದರಲ್ಲದೆ; ವಿದ್ಯಾರ್ಥಿಗಳ ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್, ಕೊಠಡಿಗಳ ಸ್ವಚ್ಛತೆ ಇತ್ಯಾದಿ ಅಂಶಗಳನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದರು.
ತರಗತಿಗಳು ನಡೆಯುತ್ತಿದ್ದ ಕೊಠಡಿಗಳಿಗೂ ಭೇಟಿ ನೀಡಿದ ಡಿಸಿಎಂ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರಲ್ಲದೆ, ಅವರ ಕುಂದುಕೊರತೆಗಳನ್ನು ವಿಚಾರಿಸಿದರು. ಕಾಲೇಜಿನಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆಯಾ? ಇಲ್ಲವಾ? ಎಂದು ಮಾಹಿತಿ ಪಡೆದುಕೊಂಡರು. ಮುಖ್ಯವಾಗಿ ತರಗತಿ ಕೊಠಡಿಗಳ ಸ್ವಚ್ಛತೆಯನ್ನು ತೀವ್ರವಾಗಿ ಪರಿಶೀಲಿಸಿದರು.
ಆನ್‍ಲೈನ್‍ನಲ್ಲಿ ಹೆಚ್ಚು ಅರ್ಥವಾಗುತ್ತಿರಲಿಲ್ಲ:
ಆನ್‍ಲೈನ್ ಕ್ಲಾಸ್ ನಮಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ನಾನು ಆಫ್‍ಲೈನ್ ಕಾಲೇಜಿಗೆ ಹಾಜರಾಗುತ್ತಿದ್ದೇನೆ. ಈಗ ಪಾಠಗಳು ತುಂಬಾ ಚೆನ್ನಾಗಿ ಅರ್ಥವಾಗುತ್ತಿವೆ ಎಂದು ಶಿರಾ ಮೂಲದ ವಿದ್ಯಾರ್ಥಿನಿಯೊಬ್ಬರು ಡಿಸಿಎಂ ಗಮನಕ್ಕೆ ತಂದರು.
ಸರಕಾರ ಮುನ್ನೆಚ್ಚರಿಕೆ ವಹಿಸಿದೆ:
ಪದವಿ, ಸ್ನಾತಕೋತ್ತರ, ಡಿಪ್ಲೊಮೋ ತರಗತಿಗಳ ಅಂತಿಮ ವರ್ಷದ ಆಫ್‍ಲೈನ್ ತರಗತಿಗಳು ಕಳೆದ ನ. 17ರಿಂದ ಆರಂಭವಾಗಿವೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೋಷಕರೂ ಸಹಕಾರ ನೀಡುತ್ತಿದ್ದಾರೆ. ಹಂತ ಹಂತವಾಗಿ ಹಾಜರಾತಿ ಹೆಚ್ಚುವ ವಿಶ್ವಾಸವಿದೆ. ಜ್ಞಾನಾರ್ಜನೆ ಬಗ್ಗೆ ಮಕ್ಕಳಿಗಿರುವ ಆಸಕ್ತಿ ನನಗೆ ಸಂತೋಷ ಉಂಟು ಮಾಡಿದೆ. ಶಾಲಾ ಹಂತದಲ್ಲಿ ತರಗತಿ ಆರಂಭಕ್ಕೆ ಸಂಬಂಧಿಸಿದಂತೆ ಮೊದಲು ಪಿಯುಸಿ, ನಂತರ ಪ್ರೌಢಶಾಲೆ ಹಂತದಲ್ಲಿ ತರಗತಿ ಆರಂಭಕ್ಕೆ ನನ್ನ ಸಹಮತವಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಇದೇ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸವಾಲಿದೆ ಎಂದು ಕೈಚೆಲ್ಲಬಾರದು:
ಕೆಲ ರಾಜ್ಯಗಳಲ್ಲಿ ಕೋವಿಡ್ ಹಾವಳಿ ಉಲ್ಬಣಿಸುತ್ತಿದೆ. ಅಲ್ಲೆಲ್ಲ ತರಗತಿಗಳನ್ನು ನಡೆಸುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಸವಾಲು ಇದೆ ಎಂದು ಕೈಚೆಲ್ಲಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷ ಸ್ಥಗಿತವಾಗಬಾರದು. ಅದರಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭವಿಷ್ಯದ ಪ್ರಶ್ನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಆಫ್‍ಲೈನ್ ತರಗತಿಗಳನ್ನು ಆರಂಭ ಮಾಡಿದ್ದೇವೆ ಎಂದರು.
ಆರಂಭದಲ್ಲಿ ಕಡಿಮೆ ವಿದ್ಯಾರ್ಥಿಗಳು ನೇರ ತರಗತಿಗಳಿಗೆ ಹಾಜರಾಗುತ್ತಿದ್ದರು. ಈಗ ದಿನೇದಿನೇ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉತ್ಸಾಹ ಬರುತ್ತಿದೆ. ಈಗ ಕೋವಿಡ್ ನಡುವೆಯೂ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಇನ್ನು ಕಾಲೇಜಿಗೆ ಬರುವುಧಕ್ಕೂ ಮೊದಲು ಮಾಡಿಸಿದ ಪರೀಕ್ಷೆಯಲ್ಲಿ ರಾಜ್ಯದಲ್ಲಿ 130 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಬಂದಿದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ತರಗತಿಗೆ ಬರುವ ಮೊದಲೇ ಅವರಿಗೆ ಕೋವಿಡ್ ಇತ್ತು ಎಂದು ಡಿಸಿಎಂ ಹೇಳಿದರು.
24 ತಾಸಿನಲ್ಲೇ ವಿದ್ಯಾರ್ಥಿಗಳ ರಿಪೋರ್ಟ್ ಕೊಡಬೇಕು:
ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಮೇಲೆ ಅವರ ವರದಿಗಳು ಬೇಗ ಬರುವಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. 48 ಗಂಟೆಗಳಲ್ಲ, 24 ಗಂಟೆಗಳಲ್ಲೇ ವರದಿ ಬರುವಂತೆ ಕ್ರಮ ವಹಿಸಲಾಗುವುದು. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಟೆಸ್ಟ್ ಮಾಡಲಾಗುತ್ತಿದೆ, ದಿನಕ್ಕೆ 75 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಪರೀಕ್ಷಾಂಗ ಕುಲಸಚಿವ ಡಾ.ಕೋಟ್ರೇಶ್, ಪ್ರಾಂಶುಪಾಲರುಗಳು ಹಾಜರಿದ್ದರು.
ಮುಂದೆ ಪರೀಕ್ಷೆ ಬರೆದೇ ಉತ್ತೀರ್ಣರಾಗಬೇಕು: ಡಿಸಿಎಂ
ಕೋವಿಡ್ ಕಾರಣಕ್ಕೆ ಪದವಿ ಸ್ನಾತಕೋತ್ತರ ಪದವಿ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದೆ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಅವರನ್ನು ಮುಂದಿನ ಸೆಮಿಸ್ಟರ್‍ಗೆ ತೇರ್ಗಡೆ ಮಾಡಿದಂತೆ ಇನ್ನು ಮುಂದೆ ಮಾಡಲಾಗುವುದಿಲ್ಲ. ಆಫ್‍ಲೈನ್-ಆನ್‍ಲೈನ್ ತರಗತಿಗಳಿಗೆ ಹಾಜರಾಗಿ ಪರೀಕ್ಷೆಗಳನ್ನು ಕಡ್ಡಾಯ ಎದುರಿಸಬೇಕು. ವಿದ್ಯಾರ್ಥಿಗಳು ತಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ಸೆಮಿಸ್ಟರ್‍ಗಳಿಗೆ ಅರ್ಹತೆ ಪಡೆಯಬೇಕು ಎಂದು ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದರು.
ಕ್ಯಾಂಪಸ್ ನಿರ್ಮಾಣದ ಬಗ್ಗೆಯೂ ಚರ್ಚೆ :
ಬಿದರೆಕಟ್ಟೆಯಲ್ಲಿ ತುಮಕೂರು ವಿವಿ ಕ್ಯಾಂಪಸ್ ನಿರ್ಮಾಣದ ಕುರಿತು ಸಹ ಸಿಂಡಿಕೇಟ್ ಸದಸ್ಯರು, ಕುಲಪತಿ, ಶಾಸಕರೊಡನೆ ಡಿಸಿಎಂ ಸಮಾಲೋಚಿಸಿದರು. ಈ ವೇಳೆ ಕುಲಪತಿಗಳು ಡೈನಮಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಂಪಸ್ ಸಹ ನಿಯಮಾನುಸಾರ ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ