ತುಮಕೂರು : ಶೀಘ್ರ ಫಲಿತಾಂಶ ನೀಡಿ ದಾಖಲೆ ಬರೆದ ವಿವಿ!!

 ತುಮಕೂರು : 

       ಸ್ನಾತಕೋತ್ತರ ಪರೀಕ್ಷೆ ನಡೆದ ಮೂರೇ ಮೂರು ದಿನಗಳಲ್ಲಿ ಫಲಿತಾಂಶ ಘೋಷಿಸುವ ಮೂಲಕ ತುಮಕೂರು ವಿಶ್ವವಿದ್ಯಾನಿಲಯವು ಹೊಸ ದಾಖಲೆ ಬರೆದಿದೆ. ಕೋವಿಡ್ ಸಾಂಕ್ರಾಮಿಕ ರೋಗ ಇಲ್ಲದೇ ಹೋಗಿದ್ದರೆ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಸ್ನಾತಕೋತ್ತರ ಪದವಿಗಳ ಫಲಿತಾಂಶ ಬರುತ್ತಿತ್ತು. ಆದರೆ ಕೋವಿಡ್‍ನಿಂದಾಗಿ ಪರೀಕ್ಷೆಗಳನ್ನು ನಾಲ್ಕು ತಿಂಗಳು ಮುಂದೂಡುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಸೆ. 23 ರಂದು ವಿಶ್ವವಿದ್ಯಾಲಯದ ಕನ್ನಡ ಎಂಎ ಪದವಿಯ ಕೊನೆಯ ಪರೀಕ್ಷೆ ಮುಗಿದಿತ್ತು. ವಿಶ್ವವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮತ್ತು ಮಧುಗಿರಿಯ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಮುಗಿದ ತಕ್ಷಣವೇ ಪ್ರಾಧ್ಯಾಪಕರು ಮೌಲ್ಯಮಾಪನವನ್ನು ಮುಗಿದರು. ನಂತರ ವಿವಿಯು ಫಲಿತಾಂಶವನ್ನು ಘೋಷಿಸಿತು. ಈ ಮೂಲಕ ಪರೀಕ್ಷೆ ನಡೆದ ಮೂರೇ ದಿನಗಳಲ್ಲಿ ಫಲಿತಾಂಶ ಕೊಟ್ಟ ಹೆಗ್ಗಳಿಕೆಗೆ ತುಮಕೂರು ವಿವಿ ಪಾತ್ರವಾಯಿತು. ವಿವರಣಾತ್ಮಕವಾದ ಉತ್ತರ ಪತ್ರಿಕೆಗಳಿರುವ ಪರೀಕ್ಷೆಗಳ ಈ ಶೀಘ್ರ ಫಲಿತಾಂಶ ರಾಜ್ಯದ ಮಟ್ಟಿಗೆ ಒಂದು ದಾಖಲೆ ಎಂದೇ ಹೇಳಬಹುದು.

      ಕೋವಿಡ್ ಎರಡನೇ ಅಲೆಯ ಬಳಿಕ ಪುನರಾರಂಭವಾದ ರಾಜ್ಯದ ವಿಶ್ವವಿದ್ಯಾಲಯಗಳು ಇನ್ನೂ ಪಾಠ-ಪ್ರವಚನ ಮುಗಿಸುವುದರ ಒಳಗೇ ತುಮಕೂರು ವಿವಿ ಎಂ.ಎ. ಅಂತಿಮ ವರ್ಷದ ಫಲಿತಾಂಶ ಘೋಷಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಶೀಘ್ರ ಫಲಿತಾಂಶ ನೀಡಲು ಕಾರಣರಾದ ಪ್ರಾಧ್ಯಾಪಕರನ್ನು ಮತ್ತು ಪರೀಕ್ಷಾಂಗ ವಿಭಾಗವನ್ನು ಕುಲಪತಿ ಪ್ರೊ|| ವೈ ಎಸ್ ಸಿದ್ದೇಗೌಡ ಅವರು ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ