ತುಮಕೂರು :
ಜಿಲ್ಲೆಯಾದ್ಯಂತ ಕೋವಿಡ್ ಆತಂಕದ ನಡುವೆಯೂ ವರಮಹಾಲಕ್ಷ್ಮೀ ಹಬ್ಬಕ್ಕೆ ಜನರ ಸಡಗರದ ಸಿದ್ಧತೆ ಕಂಡುಬಂದಿತು. ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ ಹಬ್ಬದ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ದುಬಾರಿ ಬೆಲೆಯ ನಡುವೆಯೂ ಹೂವ್ವು ಹಣ್ಣು, ಬಾಳೆಕಂದು, ಮಾವಿನಸೊಪ್ಪು, ಮಂಗಳದ್ರವ್ಯ, ಹೊಸಬಟ್ಟೆಗಳ ಖರೀದಿಗೆ ಮುಗಿಬಿದ್ದಿದ್ದ ಜನರು ಚೌಕಾಸಿಮಾಡಿ ವ್ಯಾಪಾರ ಮಾಡುತ್ತಿದ್ದರು.
ನಗರದ ಅಂತರಸನಹಳ್ಳಿ ಹಣ್ಣು ಹೂ ಮಾರುಕಟ್ಟೆಯಲ್ಲಿ ಹಬ್ಬದ ವಹಿವಾಟು ಹೆಚ್ಚಾಗಿತ್ತು. ಮಾರುಕಟ್ಟೆ ರಸ್ತೆಯಲ್ಲಿ ಹೆಚ್ಚಿದ ಜನಸಂದಣಿ, ವಾಹನ ಓಡಾಟದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಳೆದ ಎರಡು ದಿನಗಳಿಂದ ಬಿದ್ದ ಮಳೆ ಮಾರುಕಟ್ಟೆ ಪ್ರಾಂಗಣ, ಹೊರಗಡೆ ಕೆಸರಿನಿಂದ ಆವೃತ್ತವಾಗಿಸಿದ್ದು, ಕೆಸರಿನಲ್ಲೇ ಹಣ್ಣು, ಹೂ ಬುಟ್ಟಿಗಳನ್ನಿಟ್ಟು ವರ್ತಕರು ಮಾರಾಟ ಮಾಡುುತ್ತಿದ್ದರು. ಉಳಿದಂತೆ ನಗರದ ಚಿಕ್ಕಪೇಟೆ, ಜೆ.ಸಿ.ರಸ್ತೆ, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಶ್ರೀರಾಮನಗರ, ಹನುಮಂತ, ಶಿರಾಗೇಟ್, ಬಟವಾಡಿ,ಸೋಮೇಶ್ವರಪುರಂ, ಶೆಟ್ಟಿಹಳ್ಳಿಮುಖ್ಯರಸ್ತೆ, ಕ್ಯಾತ್ಸಂದ್ರ, ರಿಂಗ್ ರಸ್ತೆ, ಮೆಳಕೋಟೆ ಗಂಗಸಂದ್ರ, ಹೆಗ್ಗೆರೆ, ಬನಶಂಕರಿ, ಸರಸ್ವತಿಪುರಂ ಹೀಗೆ ಹಲವು ಬಡಾವಣೆಗಳಲ್ಲೂ ಹಣ್ಣು, ಹೂ,ತರಕಾರಿಗಳ ಮಾರಾಟ ಪ್ರಕ್ರಿಯೆ ಜೋರಾಗಿ ಕಂಡುಬಂದಿತು. ಗ್ರಾಮಾಂತರ ಪ್ರದೇಶದಿಂದ ಬಂದ ರೈತರು ರಸ್ತೆ ಫುಟ್‍ಪಾತ್ ಬದಿಯಲ್ಲೇ ಬಾಳೆಕಂದು, ಮಾವಿನಸೊಪ್ಪು, ಕಬ್ಬಿನ ಜೊಲ್ಲೆಯನ್ನಿಟ್ಟು ವಿಕ್ರಯ ಮಾಡುತ್ತಿದ್ದರು.
ದುಬಾರಿಯಾದ ಹೂ, ಹಣ್ಣಿನ ದರ:
ಪ್ರತೀ ವರ್ಷದಂತೆ ಈ ಬಾರಿಯೂ ಹೂವ್ವಿನ ದರ ದುಬಾರಿಯಾಗಿತ್ತು. ಸೇವಂತಿಗೆ ಮಾರೊಂದಕ್ಕೆ 80, 100, 120ರೂ.ಗಳವರೆಗೆ ಇದ್ದರೆ ದುಂಡುಮಲ್ಲಿಗೆಯ ಹಾರ 250 ರಿಂದ 300 ರೂ., ಬಟನ್ಸ್ ಮಾರೊಂದಕ್ಕೆ 60 ರಿಂದ 80 ರೂ. ಕಾನಕಾಂಬರ, ಕಾಕಡ ಮಾರೊಂದಕ್ಕೆ 100 ರಿಂದ 150 ರೂ.ವರೆಗೆ ಏರಿಕೆಯಾಗಿತ್ತು. ಲಕ್ಷ್ಮೀಗೆ ಪ್ರಿಯವಾದ ತಾವರೆಹೂವ್ವಿಗೆ ಹೆಚ್ಚಿನ ಡಿಮ್ಯಾಂಡ್ ಕೇಳಿಬಂದಿದ್ದು, ಜೋಡಿ ತಾವರೆ ಹೂವು 60 ರೂ.ಹೇಳುತ್ತಿದ್ದರೆ, ಗುಲಾಬಿ ಸೇರಿದಂತೆ ಬಿಡಿ ಹೂ ಕೆ.ಜಿಗೆ 200ರೂ. ದಾಟಿತ್ತು. ಹಣ್ಣುಗಳ ಪೈಕಿ ಬಾಳೆಹಣ್ಣು ಕೆಜಿಗೆ 50-60 ರೂ.ಗಳಿದ್ದರೆ, ಸೇಬು 160 ರಿಂದ 200, ಮೂಸಂಬಿ 60, ದ್ರಾಕ್ಷಿ 100, ಸೀಬೆಹಣ್ಣನ್ನು 100 ರೂ.ಕೆಜಿಗೆ ಮಾರಾಟ ಮಾಡಲಾಗುತ್ತಿತ್ತು.
ಸೀರೆ, ಚಿನ್ನಾಭರಣ ಖರೀದಿಯು ಜೋರು:
ಹೆಣ್ಣುಮಕ್ಕಳ ಹಬ್ಬವೆನಿಸಿರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಹೊಸ ಸೀರೆ, ಚಿನ್ನಾಭರಣ, ಲಕ್ಷ್ಮೀ ಮುಖವಾಡ, ಲಕ್ಷ್ಮೀಕಾಯಿನ್‍ಗಳ ಖರೀದಿಯಲ್ಲಿ ಮಹಿಳೆಯರು ಹೆಚ್ಚು ಆಸಕ್ತಿ ತಳೆದಿದ್ದರು. ದೇವರಿಗೆ ಉಡಿಸುವ ಸೀರೆ, ರವಿಕೆ, ಮತ್ತೈದೆಯರಿಗೆ ಕೊಡಲು ಹಸಿರು ಬಳೆ, ಅರಿಶಿನ ಕುಂಕುಮ, ಗೆಜ್ಜೆವಸ್ತ್ರಗಳ ಖರೀದಿಯಲ್ಲಿ ನಾರಿಯರು ನಿರತರಾಗಿದ್ದರು. ಮನೆಯಲ್ಲಿ ಲಕ್ಷ್ಮೀಯನ್ನು ಕೂಡಿಸಿ ಹೊಸ ನೋಟುಗಳನ್ನಿಟ್ಟು ಆರಾಧಿಸಲು ಬ್ಯಾಂಕುಗಳಿಂದ ಹೊಸ ನೋಟುಗಳನ್ನು ಪಡೆಯಲು ಗ್ರಾಹಕರು ಮುಂದಾಗಿದ್ದರು.
ಒಬ್ಬಟ್ಟು, ಚಕ್ಕುಲಿ, ಉಂಡೆ ಖಾದ್ಯಕ್ಕೂ ತಯಾರಿ:
ಶ್ರಾವಣದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮೀ ಹಬ್ಬಕ್ಕೆ ವಿಶೇಷವಾಗಿ ಲಕ್ಷ್ಮೀಯನ್ನು ಸಂಪ್ರಿತಗೊಳಿಸಲು ಮನೆಗಳಲ್ಲಿ ಒಬ್ಬಟ್ಟು, ರವೆಉಂಡೆ, ಚಕ್ಕುಲಿ, ಖರ್ಜಿಕಾಯಿ…, ಹೀಗೆ ಬಗೆಬಗೆಯ ಖಾದ್ಯಗಳನ್ನು ಮಾಡಿ ನೈವೇದ್ಯ ಮಾಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಸಿಹಿ-ಖಾರದ ಖಾದ್ಯಗಳ ತಯಾರಿಗೆ ಅಗತ್ಯವಾದ ಅಗತ್ಯ ದಿನಸಿ ವಹಿವಾಟು ಜೋರಾಗಿತ್ತು.
ಶುಕ್ರವಾರ ಮೊಹರಂ ಕಡೇ ದಿನವೂ ಬಂದಿದ್ದು, ಸಾರ್ವತ್ರಿಕ ರಜೆ ಇರುವುದರಿಂದ ಶನಿವಾರ -ಭಾನುವಾರ ವಾರಾಂತ್ಯ ರಜಾ ದಿನಗಳ ಹಿನ್ನೆಲೆಯಲ್ಲಿ ಗುರುವಾರ ಸಂಜೆಯಿಂದಲೇ ರಾಜಧಾನಿ ಮತ್ತು ಹೊರ ಜಿಲ್ಲೆಗೆ ಬಸ್, ರೈಲುಗಳಲ್ಲಿ ಹೋಗುವವರು-ಬರುವವರ ಸಂಖ್ಯೆ ಹೆಚ್ಚಾಗಿತ್ತು.
ದೇಗುಲಗಳಲ್ಲಿ ದರ್ಶನ ಅವಕಾಶವಿಲ್ಲ :
ರಾಜ್ಯ ಸರಕಾರ ಪರಿಷ್ಕೃತ ಮಾರ್ಗಸೂಚಿಯನ್ವಯ ಜಿಲ್ಲಾಡಳತ ವಾರಾಂತ್ಯ ಹಾಗೂ ರಜಾದಿನಗಳಂದು ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದು, ಇಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯ ಕಾರಣಕ್ಕೆ ದೇಗುಲಗಳಿಗೆ ಪ್ರವೇಶ ನಿರ್ಬಂಧಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೇರಿದಂತೆ ಎಲ್ಲೆಡೆ ಬರೀ ಸಾಂಪ್ರದಾಯಿಕ ಪೂಜೆ ಮಾತ್ರ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೊಹರಂ ಆಚರಣೆಗೆ ಸರಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದು, ಸಮುದಾಯ ಬಾಂಧವರು ಪಾಲಿಸಬೇಕೆಂದು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ