ತುಮಕೂರು :

ಕೊರೊನಾ ಕಾಲದಲ್ಲಿ ವೆಂಟಿಲೇಟರ್‍ಗಳಿಗೆ ಭಾರೀ ಡಿಮ್ಯಾಂಡ್. ಕೆಲವು ಜೀವರಕ್ಷಕಗಳಿಗೆ ಕೊರತೆ ಇದ್ದರೂ ಇರುವುದನ್ನೇ ಉಪಯೋಗಿಸಿಕೊಳ್ಳಲಾಗದ ಅಸಮರ್ಥತೆ ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿದೆ. ಸಾಯುವ ರೋಗಿಯನ್ನು ಕೊನೆಯ ಕ್ಷಣದಲ್ಲಿ ಬದುಕಿಸಬಹುದಾದ ಒಂದು ಆಶಾಕಿರಣ ಎಂಬಂತೆ ಕಂಡುಬರುವ ವೆಂಟಿಲೇಟರ್‍ಗಳ ಸ್ಥಿತಿಯೂ ಇದೇ ಆಗಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಆಮ್ಲಜನಕ ಸಹಿತ ವೆಂಟಿಲೇಟರ್‍ಗಳು ಪೂರೈಕೆಯಾಗಿದ್ದರೂ ಅವುಗಳನ್ನು ಬಳಕೆ ಮಾಡಲಾಗದೆ ಯಾವುದೋ ಕೊಠಡಿಯ ಮೂಲೆಗೆ ಹಾಕಿ ಕುಳಿತಿರುವ ದಾರುಣ ಮತ್ತು ದೈನೇಸಿ ಸ್ಥಿತಿಯನ್ನು ಕಾಣುತ್ತಿದ್ದೇವೆ.
ಕೋವಿಡ್ ವೈರಾಣು ಬರುವುದಕ್ಕೂ ಹಿಂದೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‍ಗಳ ಬಳಕೆ ವಿರಳವಾಗಿತ್ತು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಇವುಗಳ ಬೇಡಿಕೆ ಹೆಚ್ಚಿದ್ದು, ಐಸಿಯು ವೆಂಟಿಲೇಟ್‍ಗಳು ಸಿಗದೆ, ಆಮ್ಲಜನಕ ಸಹಿತ ಹಾಸಿಗೆಗಳು ಸಿಗದೆ ಮರಣ ಹೊಂದಿದವರೇ ಹೆಚ್ಚು. ಹಳ್ಳಿ ಹಳ್ಳಿಗಳಿಗೂ ಕೊರೊನಾ ವೈರಾಣು ವಕ್ಕರಿಸಿ ಸಾವು-ನೋವುಗಳು ಹೆಚ್ಚಿದ ಹಿನ್ನೆಲೆಯಲ್ಲಿ ವೈದ್ಯಕೀಯ ಕ್ಷೇತ್ರದ ಉಪಕರಣಗಳು ಹೆಚ್ಚು ಬಳಕೆಗೆ ಬಂದವು. ಬೇಡಿಕೆಯೂ ಸೃಷ್ಟಿಯಾಯಿತು.
ಬೇಡಿಕೆಗೆ ಅನುಗುಣವಾಗಿ ಕೊರೊನಾ ವೈರಾಣು ನಿಗ್ರಹಕ್ಕಾಗಿ ಅಗತ್ಯ ಜೀವರಕ್ಷಕ ಉಪಕರಣಗಳ ಅಗತ್ಯತೆ ತಲೆದೋರಿತು. ಇವುಗಳಲ್ಲಿ ವೆಂಟಿಲೇಟರ್‍ಗಳೂ ಸೇರಿವೆ. 2020 ರ ಅವಧಿಯಲ್ಲಿ ಇದ್ದ ವೆಂಟಿಲೇಟರ್‍ಗಳ ಸಂಖ್ಯೆಗೂ ಪ್ರಸ್ತುತ ಇರುವ ಸಂಖ್ಯೆಗೂ ಸಾಕಷ್ಟು ಏರಿಕೆಯಾಗಿದೆ. ಸರ್ಕಾರದಿಂದ, ದೇಣಿಗೆ ರೂಪದಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳಿಂದ ವೆಂಟಿಲೇಟರ್‍ಗಳು, ಆಮ್ಲಜನಕ ಸಾಂದ್ರತೆ, ಆಕ್ಸಿಮೀಟರ್‍ಗಳು ಸರಬರಾಜಾಗುತ್ತಲೇ ಇವೆ. ವಿಶ್ವದ ವಿವಿಧ ಮೂಲೆಗಳಿಂದ, ವಿಶ್ವ ಆರೋಗ್ಯ ಸಂಸ್ಥೆಯಿಂದ ಜೀವರಕ್ಷಕ ಉಪಕರಣಗಳು ಭಾರತಕ್ಕೆ ಹರಿದು ಬರುತ್ತಲೇ ಇವೆ. ದುರಂತವೆಂದರೆ ಇವುಗಳನ್ನು ಬಳಕೆ ಮಾಡಲಾಗದ ಅಸಹಾಯಕ ಸ್ಥಿತಿ, ಸಿಬ್ಬಂದಿಯ ಕೊರತೆ. ತಜ್ಞರ ಸಮಸ್ಯೆ. ಕೊರೊನಾ ಕಾಲಘಟ್ಟದಲ್ಲಿ ಇಂತಹ ಸಮಸ್ಯೆಗಳೇ ಈಗ ಸವಾಲಾಗಿ ಪರಿಣಮಿಸಿವೆ.
ವೆಂಟಿಲೇಟರ್‍ಗಳೂ ಸಾಕಷ್ಟು ಸಂಖ್ಯೆಯಲ್ಲಿ ಪೂರೈಕೆಯಾಗಿವೆ. ಇನ್ನೂ ಪೂರೈಕೆಯಾಗಬಹುದೇನೋ? ವಿಷಾದದ ಸಂಗತಿ ಎಂದರೆ ಅವುಗಳನ್ನು ಬಳಕೆ ಮಾಡದೆ ಗೋಡೌನ್‍ನಲ್ಲಿ ತುಕ್ಕು ಹಿಡಿಯುವಂತೆ ಮಾಡಿರುವುದು. ಬಹುತೇಕ ಎಲ್ಲ ಕಡೆ ಇದೇ ಪರಿಸ್ಥಿತಿ ಇದ್ದು, ತುಮಕೂರು ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ಜಿಲ್ಲಾಸ್ಪತ್ರೆ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿರುವ ಆಸ್ಪತ್ರೆಗಳಲ್ಲಿಯೂ ವೆಂಟಿಲೇಟರ್‍ಗಳು ಧೂಳು ಹಿಡಿಯುತ್ತಿವೆ. ಈ ಸಂಪತ್ತಿಗೆ ಲಕ್ಷ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಈ ಉಪಕರಣಗಳನ್ನು ನೀಡಬೇಕಿತ್ತೆ..?
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ನೀಡುವ ಮಾಹಿತಿಯಂತೆ ತುಮಕೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 87 ವೆಂಟಿಲೇಟರ್‍ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ 48 ವೆಂಟಿಲೇಟರ್‍ಗಳಿವೆ. ಇಷ್ಟಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ವೆಂಟಿಲೇಟರ್‍ಗಳ ಕೊರತೆ ಇದೆ ಎಂದು ಹಿಂದೆ ಬೊಬ್ಬೆ ಹೊಡೆಯಲಾಗುತ್ತಿತ್ತು. ಈಗ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಜಿಲ್ಲಾಸ್ಪತ್ರೆಯಿಂದ ಹಿಡಿದು ತಾಲ್ಲೂಕು ಆಸ್ಪತ್ರೆಗಳವರೆಗೂ ವೆಂಟಿಲೇಟರ್‍ಗಳನ್ನು ಪೂರೈಸಲಾಗಿದೆ. ಆದರೆ ಅವುಗಳನ್ನು ಬಳಕೆ ಮಾಡದೆ ಆಸ್ಪತ್ರೆಯ ಕೊಠಡಿಯಲ್ಲಿಟ್ಟು ಧೂಳು ಹಿಡಿಸಿದರೆ ಅದರಿಂದ ಪ್ರಯೋಜನವದರೂ ಯಾರಿಗೆ..? ಸಾರ್ವಜನಿಕರ, ಸರ್ಕಾರದ ಹಣ ವೃಥಾ ಪೋಲಾಗುತ್ತಿದೆ.
2020 ರಲ್ಲಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 21 ಐಸಿಯು ವೆಂಟಿಲೇಟರ್‍ಗಳಿದ್ದವು. ಕೋವಿಡ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರಮಾಣವನ್ನು ಹೆಚ್ಚಳ ಮಾಡಲಾಯಿತು. ಪಿ.ಎಂ.ಕೇರ್ಸ್ ಫಂಡ್, ರಾಜ್ಯ ಸರ್ಕಾರದ ನೆರವಿನೊಂದಿಗೆ ವೆಂಟಿಲೇಟರ್‍ಗಳು ಸರಬರಾಜಾಗುತ್ತಲೇ ಇವೆ. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ 30 ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಪೂರೈಕೆಯಾಗಿರುವ ವೆಂಟಿಲೇಟರ್‍ಗಳು ಬಳಕೆಯಾಗದೆ ಉಳಿದಿವೆ. ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿಯೇ ಹೀಗೆ ಬಳಕೆಯಾಗದೆ ವೇಸ್ಟ್ ಆಗಿ ಉಪಕರಣಗಳು ಉಳಿಯುತ್ತವೆಂದರೆ, ಇನ್ನು ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಪರಿಸ್ಥಿತಿ ಹೇಗಿರಬೇಕು.?
ತುಮಕೂರು ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 48 ವೆಂಟಿಲೇಟರ್‍ಗಳು ಇವೆ. ಜಿಲ್ಲಾಸ್ಪತ್ರೆ ಇರಲಿ, ಖಾಸಗಿ ಆಸ್ಪತ್ರೆ ಇರಲಿ ಎಲ್ಲ ಕಡೆಯೂ ಈಗ ವೆಂಟಿಲೇಟರ್‍ಗಳಿಗೆ ಕೊರತೆ ಇಲ್ಲ. ಕೊರತೆ ಉಂಟಾಗಿರುವುದು ಅದನ್ನು ಆಪರೇಟ್ ಮಾಡಬೇಕಾದ ತಜ್ಞರು, ಸಿಬ್ಬಂದಿ ಕೊರತೆ. ಸರ್ಕಾರ ಈ ಕೊರತೆಯನ್ನು ನೀಗಿಸದೆ ಕೇವಲ ವೆಂಟಿಲೇಟರ್‍ಗಳನ್ನು ಪೂರೈಕೆ ಮಾಡಿದರೆ ಸಾಕೆ..? ಇತ್ತೀಚೆಗೆ ಹಾಸಿಗೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಂತೆ ಕಂಡುಬರುತ್ತಿದೆ. ಮೇ ತಿಂಗಳಿನಲ್ಲಿ ಕೋವಿಡ್ ನರಳಾಟದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಭಿನ್ನತೆ ಇದೆ. ರಾತ್ರೋರಾತ್ರಿ ರೋಗಿಗಳನ್ನು ಕರೆತಂದು ಆಸ್ಪತ್ರೆಗಳ ಮುಂದೆ ಅಂಗಲಾಚುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿಯೇ 13 ವೆಂಟಿಲೇಟರ್‍ಗಳು ಖಾಲಿ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ 10 ವೆಂಟಿಲೇಟರ್‍ಗಳು ಖಾಲಿ ಇವೆ. ಈಗ ಪರಿಸ್ಥಿತಿ ಸುಧಾರಿಸುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥತಿ ಮತ್ತಷ್ಟು ಭೀಕರವಾದಾಗ, ಮೂರನೇ ಅಲೆ ವಕ್ಕರಿಸಿದಾಗ ಕೈಚೆಲ್ಲಿ ಕುಳಿತುಕೊಳ್ಳುವಂತಾಗಬೇಕೆ..?
ದುಬಾರಿ ವೆಚ್ಚ :

ಒಂದು ವೆಂಟಿಲೇಟರ್ ವೆಚ್ಚ 4 ಲಕ್ಷ ರೂ.ಗಳಿಂದ ಹಿಡಿದು 15 ಲಕ್ಷ ರೂ.ಗಳವರೆಗೂ ಇದೆ. ಒಂದೊಂದು ಏಜೆನ್ಸಿಯಿಂದ ಒಂದೊಂದು ದರ ನಿಗದಿ ಇದೆ. ಪರಿಕರಗಳ ಗುಣಮಟ್ಟ, ಅವುಗಳ ವಿನ್ಯಾಸ, ಉಪಕರಣಗಳ ಜೋಡಿಕೆ ಇತ್ಯಾದಿಗಳ ಮೇಲೆ ಹಾಗೂ ಯಾವುದಕ್ಕೆ ಇದನ್ನು ಬಳಸಲಾಗುತ್ತದೆ ಎಂಬುದರ ಮೇಲೆ ವೆಂಟಿಲೇಟರ್‍ಗಳ ದರ ನಿಗದಿಯಾಗುತ್ತದೆ. ಪ್ರಸ್ತುತ ಕೋವಿಡ್ ರೋಗಿಗಳಿಗಾಗಿಯೇ ಹೆಚ್ಚು ವೆಂಟಿಲೇಟರ್‍ಗಳು ಬಳಕೆಯಾಗುತ್ತಿರುವುದರಿಂದ ಕೋವಿಡ್ ರೋಗಿಗಳಿಗೆ ಸುಮಾರು ಏಳೂವರೆ ಲಕ್ಷ ರೂ.ಗಳ ವೆಂಟಿಲೇಟರ್‍ಗಳು ಬೇಕು ಎನ್ನುತ್ತಾರೆ ವೈದ್ಯಕೀಯ ಕ್ಷೇತ್ರದ ತಜ್ಞರು.
ಆಪರೇಟರ್‍ಗಳ ಕೊರತೆ :
ವೆಂಟಿಲೇಟರ್ ಇದೆ ಎಂದಾಕ್ಷಣ ಅಲ್ಲಿ ಎಲ್ಲವೂ ಇದೆ ಎಂದು ಅರ್ಥವಲ್ಲ. ಅದನ್ನು ನಿಭಾಯಿಸುವ ಮತ್ತು ನಿರ್ವಹಿಸುವ ಸಾಮಥ್ರ್ಯ ಬೇಕು. ಅದನ್ನು ನೋಡಿಕೊಳ್ಳಲೆಂದೇ ಕೆಲವು ಸಿಬ್ಬಂದಿಗಳು ಇರಬೇಕು. ದಿನದ 24 ಗಂಟೆಗಳಲ್ಲಿಯೂ ಇದರ ಕಾರ್ಯನಿರ್ವಹಣೆ ಇರುವುದರಿಂದ 6ಗಂಟೆಗಳ ಸಮಯದ ಅವಧಿಯಲ್ಲಿ ಎರಡು ಪಾಳಿಯದಲ್ಲಿ ಕೆಲಸ ಮಾಡುವಂತಹ ಇಬ್ಬರು ನರ್ಸ್‍ಗಳು ತಪಾಸಣೆ ಮಾಡುವ ಓರ್ವ ವೈದ್ಯರು ಮತ್ತೋರ್ವ ಸಿಬ್ಬಂದಿ ಸೇರಿ ಕನಿಷ್ಠ 4 ಮಂದಿ ಬೇಕು. ಒಮ್ಮೆ ವೆಂಟಿಲೇಟರ್ ಅಳವಡಿಕೆಯಾಗಿ ಸಿಬ್ಬಂದಿಗಳು ಇದ್ದರೆ ಸಮಸ್ಯೆ ಇಲ್ಲ. ನಿರಾಂತಕವಾಗಿ ನಡೆದು ಹೋಗುತ್ತದೆ. ಆದರೆ ತೊಂದರೆ ಎದುರಾಗುವುದು ವೆಂಟಿಲೇಟರ್‍ಗಳು ತಾಂತ್ರಿಕ ತೊಂದರೆಗೆ ಸಿಲುಕಿದಾಗ.
ಯಾವುದೇ ಒಂದು ಉಪಕರಣ ಕೆಲಸ ಮಾಡದಿದ್ದರೂ ಅದರ ಮೇಲ್ವಿಚಾರಣೆಗೆ ತಕ್ಕ ಆಪರೇಟರ್ ಇರಬೇಕು. ಆದರೆ ಜಿಲ್ಲೆ ಮಾತ್ರವಲ್ಲದೆ, ಬಹುತೇಕ ಎಲ್ಲ ಕಡೆ ಆಪರೇಟರ್‍ಗಳ ಕೊರತೆ ಎದ್ದುಕಾಣುತ್ತಿದೆ. ಒಂದು ವೆಂಟಿಲೇಟರ್ ಕೈಕೊಟ್ಟರೆ ಅದು ದುರಸ್ತಿಯಾಗುವವರೆಗೂ ಮತ್ತಷ್ಟು ಫಜೀತಿ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಇರುವ ವೆಂಟಿಲೇಟರ್‍ಗಳನ್ನೇ ಬಳಸಲಾಗುತ್ತಿದೆಯೇ ಹೊರತು ಹೊಸದಾಗಿ ಬಂದಿರುವ ವೆಂಟಿಲೇಟರ್ ಉಪಕರಣಗಳನ್ನು ಅಳವಡಿಸುವ ಗೋಜಿಗೆ ಹೋಗುತ್ತಿಲ್ಲ. ಇದು ವಾಸ್ತವದ ಸಮಸ್ಯೆ. ಪರಿಣಾಮವಾಗಿ ಸಾಕಷ್ಟು ವೆಂಟಿಲೇಟರ್‍ಗಳು ಕೊಠಡಿಗಳಲ್ಲಿ ಧೂಳು ತಿನ್ನುತ್ತಿವೆ.
ವೆಂಟಿಲೇಟರ್ ಆಪರೇಟ್ ಮಾಡುವ ಕೋರ್ಸ್ ಮುಗಿಸಿರುವ 6000 ಕ್ಕೂ ಅಧಿಕ ತಜ್ಞರು ರಾಜ್ಯದಲ್ಲಿ ಇದ್ದಾರೆ. ಕೋವಿಡ್ ವಾರಿಯರ್ಸ್‍ಗಳಾಗಿ ಕೆಲಸ ನಿರ್ವಹಿಸಲು ಅವರೆಲ್ಲ ಸಿದ್ಧರಿದ್ದಾರೆ. ಇಂತಹವರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಯಾವುದ್ಯಾವುದಕ್ಕೂ ಹಣ ಖರ್ಚು ಮಾಡುವ ಸರ್ಕಾರ ಅತ್ಯಂತ ಅಗತ್ಯವಿರುವ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿರುವುದಾದರೂ ಏಕೆ..?
ಐಸಿಯು ವೆಂಟಿಲೇಟರ್‍ಗಳ ವಿಷಯ ಬಂದಾಗ ಹಿಂದಿನ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಲೇಬೇಕು. ಜನರಿಗೆ ಅರೋಗ್ಯ ಪ್ರಥಮ ಆದ್ಯತೆಯಾಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅವರು, ತಮ್ಮ ಸಚಿವ ಅವಧಿಯಲ್ಲಿ ಇಡೀ ರಾಜ್ಯದ ಸುತ್ತ ಆಸ್ಪತ್ರೆಗಳನ್ನು ಸುತ್ತಿ ಬೇಡಿಕೆಗಳೇನು ಎಂಬುದನ್ನು ಪರಿಶೀಲಿಸಿದ್ದರು. ಅವರ ಗಮನಕ್ಕೆ ಬಂದ ಹಲವು ಸಮಸ್ಯೆಗಳ ಪೈಕಿ ಐಸಿಯು ವೆಂಟಿಲೇಟರ್‍ಗಳು ಇದ್ದವು. ಹೀಗಾಗಿ ಪ್ರತಿ ತಾಲ್ಲೂಕು ಆಸ್ಪತ್ರೆಗೂ 3 ಐಸಿಯು ವೆಂಟಿಲೇಟರ ಹಾಗೂ ಪ್ರತಿ ಜಿಲ್ಲಾಸ್ಪತ್ರೆಗೆ 1 ಎಂ.ಆರ್.ಐ. ಹಾಗೂ ಸಿ.ಟಿ.ಸ್ಕ್ಯಾನ್ ಮಂಜೂರು ಮಾಡುವ ಯೋಜನೆ ರೂಪಿಸಿದರು. ಅದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆ ಜಾರಿಯಾಯಿತು. ವೆಂಟಿಲೇಟರ್‍ಗಳು ಮಂಜೂರಾದವು. ಆದರೆ ಬಹಳಷ್ಟು ಕಡೆ ಅವುಗಳ ಸಮರ್ಪಕ ಬಳಕೆಯಾಗದೆ ನಾಮಕಾವಸ್ಥೆಯಾಗಿ ಉಳಿದಿದ್ದವು. ಈಗ ಅನಿವಾರ್ಯ ಪರಿಸ್ಥಿತಿಯಲ್ಲಿ ಇರುವ ಉದ್ಯೋಗಿಗಳನ್ನೇ ಬಳಸಿಕೊಂಡು ವೆಂಟಿಲೇಟರ್‍ಗಳ ಬಳಕೆ ಮಾಡಲಾಗುತ್ತಿದೆ.
ಬಂದ ವೆಂಟಿಲೇಟರ್‍ಗಳು ಏನಾದವು..? :
2020ರ ಮಾರ್ಚ್‍ನಿಂದ ಆರಂಭವಾದ ಕೋವಿಡ್-19 ಏರುಗತಿ ಈ ವರ್ಷವೂ ಮರುಕಳಿಸಿತು. ಕರ್ನಾಟಕದ ಪರಿಸ್ಥಿತಿ 2ನೇ ಅಲೆಯಲ್ಲಿ ಭೀಕರವೆನಿಸಿತು. ಹಾದಿಬೀದಿಗಳಲ್ಲಿ ಜನ ಸಾಯತೊಡಗಿದರು. ವಿಶ್ವ ಮಟ್ಟದಲ್ಲಿ ಕರ್ನಾಟಕದ ಧಾರುಣ ಚಿತ್ರಗಳು ಮನಕಲಕಿದವು. ಪರಿಸ್ಥಿತಿಯ ತೀವ್ರತೆಯನ್ನು ಅರಿತು ಕೇಂದ್ರ ಸರ್ಕಾರ ರಾಜ್ಯಕ್ಕೆ 2025 ವೆಂಟಿಲೇಟರ್‍ಗಳನ್ನು ಕಳುಹಿಸಿಕೊಟ್ಟಿತು. ಇದರಲ್ಲಿ 405 ವೆಂಟಿಲೇಟರ್‍ಗಳನ್ನು ಮಾತ್ರವೇ ಬಳಕೆ ಮಾಡಿದ್ದು, 1620 ವೆಂಟಿಲೇಟರ್‍ಗಳು ಬಳಕೆಯಾಗದೆ ಉಳಿದಿವೆ. ಒಂದೊಂದು ವೆಂಟಿಲೇಟರ್‍ಗೆ 7ರಿಂದ 15 ಲಕ್ಷ ರೂ.ಗಳವರೆಗು ಖರ್ಚು ಬರಲಿದ್ದು, ಇಷ್ಟು ಸಂಖ್ಯೆಯ ವೆಂಟಿಲೇಟರ್‍ಗಳನ್ನು ಧೂಳು ಹಿಡಿಯುವಂತೆ ಮಾಡುವುದರ ಬದಲು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬಹುದಿತ್ತಲ್ಲವೆ..? ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡು ಮೇ ಆರಂಭದಲ್ಲಿಯೇ ಬಳಕೆಗೆ ಕ್ರಮ ವಹಿಸಿದ್ದರೆ ನೂರಾರು ಜನರ ಪ್ರಾಣ ಉಳಿಸಬಹುದಿತ್ತಲ್ಲವೆ..? ಈ ನಿರ್ಲಕ್ಷ್ಯಗಳಿಗೆ ಹೊಣೆಯಾರು..?
ಇಲ್ಲಿ ವೆಂಟಿಲೇಟರ್‍ಗಳಿವೆ.. ಬಳಕೆಗಿಲ್ಲ..!
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 30 ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದ ವೆಂಟಿಲೇಟರ್‍ಗಳು ಇರುವುದು ಸಮಾಧಾನಕರ ಸಂಗತಿಯಾದರೂ ಅವುಗಳ ಬಳಕೆಯಲ್ಲಿ ಹಿಂದುಳಿದಿರುವುದು ಆತಂಕಕಾರಿ ವಿಷಯ. ಕೇಂದ್ರ ಸರ್ಕಾರ, ಪಿ.ಎಂ.ಕೇರ್ಸ್ ನಿಧಿ, ರಾಜ್ಯ ಸರ್ಕಾರದ ಸಹಯೋಗದಲ್ಲಿ ವೆಂಟಿಲೇಟರ್‍ಗಳು ಜಿಲ್ಲಾಸ್ಪತ್ರೆಗೂ ಬಂದಿವೆ, ತಾಲ್ಲೂಕು ಆಸ್ಪತ್ರೆಗಳಿಗೂ ರವಾನೆಯಾಗಿವೆ. ಹಿಂದೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಂದು ವೆಂಟಿಲೇಟರ್ ಇದ್ದರಷ್ಟೇ ಹೆಚ್ಚು. ಈಗ ಪ್ರತಿ ತಾಲ್ಲೂಕಿನಲ್ಲಿ 4 ರಿಂದ 5ರಷ್ಟು ವೆಂಟಿಲೇಟರ್‍ಗಳು ಇವೆ. ದುರಂತವೆಂದರೆ ಜಿಲ್ಲಾಸ್ಪತ್ರೆಯಿಂದ ಹಿಡಿದು ತಾಲ್ಲೂಕು ಆಸ್ಪತ್ರೆಗಳವರೆಗಿನ ಎಲ್ಲ ಕಡೆ ಸಾಕಷ್ಟು ಸಂಖ್ಯೆಯ ವೆಂಟಿಲೇಟರ್‍ಗಳು ಕೊಠಡಿಯಲ್ಲಿ ಧೂಳು ಹಿಡಿಯುತ್ತಿವೆ. ಆಪರೇಟರ್‍ಗಳ ಕೊರತೆ, ಬಳಕೆ ಮಾಡಲು ಸಿಬ್ಬಂದಿಗಳ ಕೊರತೆ ಇತ್ಯಾದಿಗಳಿಂದಾಗಿ ಇದ್ದರೂ ವೆಂಟಿಲೇಟರ್ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ಇದೆ. ಹೀಗೆ ಲಕ್ಷಾಂತರ ರೂ.ಗಳ ವೆಚ್ಚದ ಉಪಕರಣಗಳು ತುಕ್ಕು ಹಿಡಿಯುತ್ತಿದ್ದರೂ ಈ ಬಗ್ಗೆ ಗಮನ ಹರಿಸದೆ ಇರುವುದು ವ್ಯವಸ್ಥೆಯ ಮತ್ತೊಂದು ವೈಫಲ್ಯ.
4 ರಿಂದ 15 ಲಕ್ಷ ರೂ.ಗಳವರೆಗೆ :
ವೆಂಟಿಲೇಟರ್‍ಗಳಲ್ಲಿ ಹಲವು ಬಗೆಗಳಿವೆ. ಪ್ರಸ್ತುತ ಕೊರೊನಾ ವೈರಾಣು ಹೆಚ್ಚಿರುವ ಸಂದರ್ಭದಲ್ಲಿ ವೆಂಟಿಲೇಟರ್‍ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಕೊರೊನಾ ವೈರಾಣು ಶ್ವಾಸಕೋಶಕ್ಕೆ ದಾಳಿ ಮಾಡಿ ಲಂಗ್ಸ್ ಡ್ಯಾಮೇಜ್ ಆಗುವ ಹಿನ್ನೆಲೆಯಲ್ಲಿ ಅಂತಹವರಿಗೆಲ್ಲ ವೆಂಟಿಲೇಟರ್ ಅವಶ್ಯಕತೆ ಇರುತ್ತದೆ. ಉತ್ಪಾದಕ ಕಂಪನಿಗಳ ದರ ನಿಗದಿ, ಗುಣಮಟ್ಟ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ 4 ರಿಂದ 15 ಲಕ್ಷ ರೂ.ಗಳವರೆಗೆ ವೆಂಟಿಲೇಟರ್‍ಗಳ ದರ ಇರುತ್ತದೆ. ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೆಂಟಿಲೇಟರ್‍ಗಳು ಇವೆ. ಆದರೆ ಇವು ಎಲ್ಲರಿಗೂ ಬೇಕಾಗುವುದಿಲ್ಲ. ಅಗತ್ಯ ಇರುವವರಿಗೆ ಮಾತ್ರವೆ ವೈದ್ಯರು ಸಲಹೆ ನೀಡುತ್ತಾರೆ ಎನ್ನುತ್ತಾರೆ ಫಿಜಿಷಿಯನ್ ಡಾ.ಟಿ.ಎನ್.ಶಶಿಧರ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








