ತುಮಕೂರು :
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಾಲ್ಕು ವರ್ಷಗಳ ಸ್ನಾತಕ ಪದವಿಯನ್ನು ಅನುಷ್ಠಾನಗೊಳಿಸುತ್ತಿದೆ. ಪ್ರವೇಶ ಪ್ರಕ್ರಿಯೆಯು ಆ.23ರಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಆನರ್ಸ್ ಪದವಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬಹುಶಿಸ್ತೀಯ ಮೌಲ್ಯಾಧಾರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವ ಸ್ನಾತಕ ಪದವಿಯ ಈ ಹೊಸ ಮಾದರಿಯು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳಿಗೆ ಯುವ ತಲೆಮಾರನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಬಹುಹಂತದ ಪ್ರವೇಶ ಹಾಗೂ ನಿರ್ಗಮನದ ಅವಕಾಶ ಇರುವುದು ಈ ಪದವಿಯ ವೈಶಿಷ್ಟ್ಯವಾಗಿದೆ. ಪದವಿಯ ಮೊದಲ ವರ್ಷ ಪೂರೈಸಿದ ಬಳಿಕ ಅನಿವಾರ್ಯವಾಗಿ ವ್ಯಾಸಂಗ ಮುಂದುವರಿಸಲಾಗದ ಪರಿಸ್ಥಿತಿ ಬಂದರೆ ಅಂತಹ ವಿದ್ಯಾರ್ಥಿಗಳು ‘ಸರ್ಟಿಫಿಕೇಟ್’ಅನ್ನು ಪಡೆಯುತ್ತಾರೆ. ಎರಡನೇ ವರ್ಷದ ಅಂತ್ಯದಲ್ಲಿ ಕೋರ್ಸ್ ಬಿಡುವ ಪರಿಸ್ಥಿತಿ ಬಂದರೆ ‘ಡಿಪ್ಲೊಮಾ’ವನ್ನು, ಮೂರನೆ ವರ್ಷ ಪೂರೈಸಿದರೆ ಪದವಿ ಹಾಗೂ ನಾಲ್ಕು ವರ್ಷದ ಅಧ್ಯಯನ ಪೂರ್ಣಗೊಳಿಸಿದರೆ ಆನರ್ಸ್ ಪದವಿಯನ್ನು ಪಡೆಯುತ್ತಾರೆ.
ಕೋರ್ಸ್ ಮಧ್ಯೆ ವ್ಯಾಸಂಗ ನಿಲ್ಲಿಸಿದ ವಿದ್ಯಾರ್ಥಿ ಮತ್ತೆ ಅಲ್ಲಿಂದಲೇ ವ್ಯಾಸಂಗ ಮುಂದುವರಿಸುವುದಕ್ಕೆ ಅವಕಾಶವಿದೆ. ನಾಲ್ಕು ವರ್ಷಗಳ ಆನರ್ಸ್ ಪದವಿಯನ್ನು ಪಡೆದ ವಿದ್ಯಾರ್ಥಿ ನೇರವಾಗಿ ಪಿಎಚ್.ಡಿ ಅಧ್ಯಯನಕ್ಕೆ ಪ್ರವೇಶ ಪಡೆಯಬಹುದಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಲೆ ಹಾಗೂ ವಾಣಿಜ್ಯ ವಿಷಯಗಳನ್ನು ಓದುವುದಕ್ಕೂ, ಕಲಾ ವಿಭಾಗದ ವಿದ್ಯಾರ್ಥಿ ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳನ್ನು ಓದುವುದಕ್ಕೂ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಉಳಿದೆರಡು ವಿಭಾಗಗಳ ವಿಷಯಗಳನ್ನು ಓದುವುದಕ್ಕೂ ಈ ಮಾದರಿಯಲ್ಲಿ ಅವಕಾಶವಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್(ಪ್ರೊ.)ವೈ.ಎಸ್ ಸಿದ್ದೇಗೌಡ ಅವರು ಸಮಾಜವಿಜ್ಞಾನ ವಿಷಯಗಳ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳ ಚೌಕಟ್ಟನ್ನು ರೂಪಿಸುವ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಸಮರ್ಥ ನೇತೃತ್ವದಲ್ಲಿ ತುಮಕೂರು ವಿವಿ ವ್ಯಾಪ್ತಿಯಲ್ಲಿ ಹೊಸ ಮಾದರಿಯ ಪದವಿಯ ಪರಿಣಾಮಕಾರಿ ಅನುಷ್ಠಾನಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸ ಪದವಿ ವ್ಯವಸ್ಥೆಗೆ ಅನುಗುಣವಾಗಿ ರಾಜ್ಯಮಟ್ಟದಲ್ಲಿ ವಿವಿಧ ವಿಷಯ ಪರಿಣತರ ಸಮಿತಿಗಳು ಪಠ್ಯಕ್ರಮವನ್ನು ರೂಪಿಸುತ್ತಿವೆ. ಸಮಾನಾಂತರವಾಗಿ, ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿಗಳು ಕಾರ್ಯತತ್ಪರವಾಗಿ ಪಠ್ಯಕ್ರಮಗಳನ್ನು ಯೋಜಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಈಗಾಗಲೇ ತುಮಕೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಹಲವಾರು ಸುತ್ತಿನ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ತಾಲ್ಲೂಕು ಕೇಂದ್ರಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕಳಿಸಿ ಆಯಾ ಪ್ರದೇಶದ ಕಾಲೇಜುಗಳಿಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ. ಎಲ್ಲ ಡೀನರುಗಳ ನೇತೃತ್ವದಲ್ಲಿ ಅನುಷ್ಠಾನದ ಟಾಸ್ಕ್‍ಫೋರ್ಸ್ ಇದೆ. ನಾಲ್ಕು ವರ್ಷಗಳ ಆನರ್ಸ್ ಪದವಿಯ ವಿಶೇಷ ಲಕ್ಷಣಗಳನ್ನು ಪರಿಚಯಿಸುವ ವೀಡಿಯೋವನ್ನು ವಿವಿ ನಿರ್ಮಿಸಿದ್ದು, ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳನ್ನು ಈ ಹಿಂದಿನಂತೆಯೇ ಕಾಲೇಜುಗಳಲ್ಲಿ ದಾಖಲಾತಿ ಮಾಡಿ ಪ್ರವೇಶದ ವಿವರಗಳನ್ನು ಮುಂದೆ ಯುಯುವಿಸಿಎಂಎಸ್ ತಂತ್ರಾಂಶದಲ್ಲಿ ದಾಖಲಿಸುವುದು. ಪ್ರತೀ ಕಾಲೇಜಿನಲ್ಲಿಯೂ ಹೆಲ್ಪ್‍ಡೆಸ್ಕ್ ಅನ್ನು ಸ್ಥಾಪಿಸಿ, ಸೂಕ್ತ ಸಂಪರ್ಕ ಸಂಖ್ಯೆಯನ್ನು ಒದಗಿಸುವುದು. ಬಿಎ, ಬಿಎಸ್ಸಿ ಪದವಿಗಳಿಗೆ ಯಾವುದಾದರೂ ಎರಡು ಪ್ರಧಾನ ವಿಷಯಗಳನ್ನು ಹಾಗೂ ಒಂದು ಮುಕ್ತ ಆಯ್ಕೆಯ ಪತ್ರಿಕೆಯನ್ನು ಆಯ್ದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದು. ಕಾಲೇಜುಗಳಲ್ಲಿ ಈಗಾಗಲೇ ಇರುವ ಪ್ರವೇಶ ಸಂಖ್ಯೆಯ ಶೇ. 20 ಸೀಟುಗಳನ್ನು ಹೆಚ್ಚುವರಿಯಾಗಿ ನೀಡುವುದು. ಶುಲ್ಕವನ್ನು ವಿ.ವಿ. ನೀಡಿರುವ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಂದ ಪಾವತಿಸಿಕೊಳ್ಳುವುದು. ಕಾಲೇಜು ಹಂತದಲ್ಲಿ ಈ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವವಿದ್ಯಾನಿಲಯವು ಕಾಲೇಜುಗಳಿಗೆ ಸೂಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
