ತುಮಕೂರು :
ನಗರದ ವಿವಿಧ ದೇವಸ್ಥಾನಗಳಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಮಹೋತ್ಸವ ವೈಭವದಿಂದ ನೆರವೇರಿತು. ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು.
ಇದರ ಪ್ರಯುಕ್ತ ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ವ್ಯವಸ್ಥೆಯಾಗಿತ್ತು. ಬೆಳಗಿನ ಜಾವದಿಂದಲೇ ಭಕ್ತರು ದೇವಸ್ಥಾನಗಳ ಬಳಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದದ್ದು ಕಂಡು ಬಂದಿತು.
ವೆಂಕಟೇಶ್ವರ, ಲಕ್ಷ್ಮೀರಂಗನಾಥ ಮತ್ತಿತರ ದೇವಸ್ಥಾನಗಳಲ್ಲಿ ವೈಕುಂಠ ದ್ವಾರ ದರ್ಶನ ಹಾಗೂ ಪ್ರವೇಶ ಮಾಡಿ ಭಕ್ತರು ಪುನೀತರಾದರು. ಬಡಾವಣೆಗಳಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ವೈಕುಂಠ ಏಕಾದಶಿಯನ್ನು ನಗರದಾದ್ಯಂತ ಆಚರಿಸುತ್ತಿದ್ದು, ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ವೈಕುಂಠ ಮಹಾದ್ವಾರ ಪ್ರವೇಶ ಹಾಗೂ ಪುಣ್ಯದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಬಟವಾಡಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರ ವೈಕುಂಠ ವೈಭವ ಏರ್ಪಡಿಸಲಾಗಿತ್ತು. ಶ್ರೀ ಸ್ವಾಮಿಗೆ ವಜ್ರ ಕಿರೀಟ ಹಾಗೂ ವಜ್ರ ಶಂಖ ಚಕ್ರ ವಿಶೇಷ ಅಲಂಕಾರ ಮಾಡಲಾಗಿತ್ತು.
ಮುಂಜಾನೆ 3 ಗಂಟೆಗೆ ಸುಪ್ರಭಾತ, ನಿತ್ಯವಿಧಿ, ವಿಶೇಷ ಮಹಾಭಿಷೇಕ, 5.30ಕ್ಕೆ ರಾಜಬೀದಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. 6 ಗಂಟೆಗೆ ವೈಕುಂಠ ದ್ವಾರದ ಪೂಜೆ ನೆರವೇರಿಸಿ ಭಕ್ತರಿಗೆ ಶ್ರೀ ಸ್ವಾಮಿಯ ದಿವ್ಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಲ್ಲಿನ ರಿಂಗ್ ರಸ್ತೆಯ ಕೆಹೆಚ್‍ಬಿ ಕಾಲೋನಿಯಲ್ಲಿರುವ ತಿರುಮಲ ನಗರದಲ್ಲಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು. ಮುಂಜಾನೆ 4 ಗಂಟೆಗೆ ಶ್ರೀ ಸ್ವಾಮಿಗೆ ಪಂಚಾಮತ ಅಭಿಷೇಕ, 5 ಗಂಟೆಗೆ ಪ್ರಕಾರೋತ್ಸವ, ಉಯ್ಯಾಲೆ ಸೇವೆ, ಮಹಾಮಂಗಳಾರತಿ ನೆರವೇರಿತು.
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿಯ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ದೇವರಾಜ ಅರಸು ರಸ್ತೆಯ ಸರಸ್ವತಿಪುರಂನಲ್ಲಿರುವ ನವಗ್ರಹ ಶ್ರೀ ವೆಂಕೇಟಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆಯು ನಡೆಯಿತು.
ಜಯನಗರದ ಪದ್ಮಾ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿಯ ಪೂಜಾ ಕೈಂಕರ್ಯಗಳು ನೆರವೇರಿದವು.
ಮಧುಗಿರಿ ರಸ್ತೆಯಲ್ಲಿರುವ ವೆಂಕಟೇಶಪುರದ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಶ್ರೀಸ್ವಾಮಿಗೆ ವೈಕುಂಠ ಪರವಾಸುದೇವ ವಿಶೇಷ ಅಲಂಕಾರ ಮಾಡಲಾಗಿತ್ತು. ಜತೆಗೆ ಭಕ್ತರಿಗೆ ವೈಕುಂಠ ಮಹಾದ್ವಾರ ಪ್ರವೇಶ ಮತ್ತು ಪುಣ್ಯದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.
ನಗರದ ಕೆಇಬಿ ರಸ್ತೆಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ವೈಕುಂಠ ಏಕಾದಶಿ ಪೂಜಾಕಾರ್ಯ ವಿಜೃಂಭನೆಯಿಂದ ನೆರವೇರಿತು. ಶ್ರೀರಾಮನಗರದ ಲಕ್ಷ್ಮೀ ವೆಂಕಟರಣ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಾಗಿತ್ತು, ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಈ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ಬೆಳಿಗ್ಗೆಯಿಂದಲೇ ದೇವರ ದರ್ಶನ, ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಇಡೀ ದಿನ ದೇವಸ್ಥಾನಗಳಲ್ಲಿ ಪೂಜಾ, ಧಾರ್ಮಿಕ ಚಟುವಟಿಕೆಗಳು ನಡೆದವು. ಎಲ್ಲೆಡೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ