ತುಮಕೂರು : ಇಂದು ಜಿಪಂ ಸಾಮಾನ್ಯ ಸಭೆ: ಕೋರಂ ದೊರೆಯುವುದೇ?

  ತುಮಕೂರು : 

      ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಸದಸ್ಯರ ಬೇಸರ, ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಹುನ್ನಾರದ ಯತ್ನದಲ್ಲಿ ಸಭೆಗೆ ಸದಸ್ಯರ ಗೈರುಹಾಜರಾತಿಯಲ್ಲಿ ಇತ್ತೀಚಿನ ಜಿಲ್ಲಾ ಪಂಚಾಯ್ತಿ ಸಭೆಗಳು ನಡೆಯದೇ, ವಿವಿಧ ಯೋಜನೆಗಳ ಅನುಮೋದನೆ ಪಡೆಯಲಾಗದೆ, ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಲಾಗದೆ ಹಿನ್ನಡೆಯಾಗಿತ್ತು.

      ಇದರ ನಡುವೆ ಇದೇ 20ರಂದು(ಶುಕ್ರವಾರ) ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಿಗಧಿಯಾಗಿದೆ. ಈ ಸಭೆಯಲ್ಲಿ ಸದಸ್ಯರು ಭಾಗವಹಿಸಿ ಸಭೆ ಸುಗಮವಾಗಿ ನಡೆಯಬಹುದೆ ಅಥವಾ ಹಿಂದಿನ ಸಭೆಗಳ ಗೊಂದಲ ಮುಂದುವರೆಯಬಹುದೆ ಎಂದು ಕಾದು ನೋಡಬೇಕಾಗಿದೆ.

      ಒಂದೂವರೆ ತಿಂಗಳ ಹಿಂದೆ ನಿಗಧಿಯಾಗಿದ್ದ ಜಿಲ್ಲಾ ಪಂಚಾಯ್ತಿ ಸಭೆಯೂ ಕೋರಂ ಕೊರತೆಯಿಂದ ರದ್ದಾಗಿತ್ತು. ಇದಾಗಿ, ಶಿರಾ ಉಪ ಚುನಾವಣೆ ನಡೆದು ಈ ಮಧ್ಯೆ ಹಲವು ರಾಜಕೀಯ ಬದಲಾವಣೆಗಳಾಗಿವೆ. ಶಿರಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರ ಪ್ರಭಾವದಿಂದ ಲತಾ ರವಿಕುಮಾರ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲು ಸಾಧ್ಯವಾಗಿತ್ತು. ಈಗ ಸತ್ಯನಾರಾಯಣ ಅಕಾಲಿಕವಾಗಿ ಅಗಲಿದ್ದಾರೆ. ಜೊತೆಗೆ, ಶಿರಾ ಕ್ಷೇತ್ರದಲ್ಲಿ ಈಗ ಬಿಜೆಪಿ ಶಾಸಕರು ಅಧಿಕಾರದಲ್ಲಿದ್ದಾರೆ. ಅಲ್ಲದೆ, ಜೆಡಿಎಸ್‍ನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿಕುಮಾರ್ ಅವರು ಶಿರಾ ಉಪಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಜಿಪಂ ಅಧ್ಯಕ್ಷೆ ಲತಾ ಅವರು ಅಧಿಕೃತವಾಗಿ ಜೆಡಿಎಸ್‍ನಲ್ಲಿದ್ದಾರೆ. ಹಾಗೆಂದು ಶಿರಾ ಚುನಾವಣೆಯಲ್ಲಿ ಇವರು ಜೆಡಿಎಸ್ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿಲ್ಲ, ಅಲ್ಲದೆ, ತಮ್ಮ ಪತಿ ಕಾಂಗ್ರೆಸ್ ಸೇರಿದರೆಂದು ಕಾಂಗ್ರೆಸ್ ಪರವಾಗಿಯೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಳ್ಳಲಿಲ್ಲ.

      ಜಿಪಂ ಲಿಂಕ್ ಡಾಕ್ಯೂಮೆಂಟ್ ಸೇರಿ 545.70 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಾಮಾನ್ಯಸಭೆಯಲ್ಲಿ ಅನುಮೋದನೆ ನೀಡುವುದು ಬಾಕಿ ಇದೆ, ಇದಾಗದಿದ್ದರೆ ಬಂದಿರುವ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಲಿದೆ. ಹೀಗಾಗಿ ನ.20ರ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು, ಶಾಸಕರು, ಸಂಸದರು ಸಹಕರಿಸಿ ಯೋಜನೆಗೆ ಅನುಮೋದಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯತ್ ಅನ್ನು ಸೂಪರ್‍ಸೀಡ್ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಈ ತಿಂಗಳ 17ರಂದು ನಡೆದ ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಆದರೆ ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು. ಈ ಸಂಬಂಧ ವೈಯಕ್ತಿಕವಾಗಿ ನಾನು ಸಹ ಸಭೆಗೆ ಹಾಜರಾಗುವಂತೆ ಶಾಸಕರು, ಸದಸ್ಯರಿಗೆ ಪತ್ರ ಬರೆದಿದ್ದು, ಕೋರಂ ಲಭ್ಯವಾಗಿ ಅನುಮೋದನೆ ಸಿಗದಿದ್ದರೆ ಅನುದಾನವೇ ರದ್ದಾಗಲಿದೆ. ಅನುಮೋದನೆ ನೀಡಬೇಕಾದ್ದು ಜಿಪಂ ಸದಸ್ಯರ ಕರ್ತವ್ಯ. ಇದನ್ನು ನಾವು ಒತ್ತಿ ಹೇಳಬೇಕಿಲ್ಲ ಎಂದು ಸಚಿವರು ಸಭೆಯಲ್ಲಿ ಹೇಳಿದ್ದರು.

      ಅಧ್ಯಕ್ಷೆ ಲತಾ ಅವರು ಜೆಡಿಎಸ್‍ನವರಾಗಿದ್ದರೂ ಜಿಲ್ಲಾ ಪಂಚಾಯ್ತಿಯ 14 ಜೆಡಿಎಸ್ ಸದಸ್ಯರ ಪೈಕಿ, ಇವರನ್ನು ಹೊರತುಪಡಿಸಿ ಉಳಿದ ಎಲ್ಲಾ 13 ಸದಸ್ಯರು ಲತಾ ಅವರ ವಿರುದ್ಧ ಅವಿಶ್ವಾಸ ಮಂಡನೆಗೆ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಅಧ್ಯಕ್ಷರ ಪದಚ್ಯುತಿಗೆ ಬಿಜೆಪಿ ಸದಸ್ಯರೇ ಹೆಚ್ಚು ಪ್ರಯತ್ನ ಮಾಡಿದ್ದರು. ಈಗ ತಮ್ಮ ಪಕ್ಷದ ಸಚಿವರೇ ಸಭೆಯಲ್ಲಿ ಭಾಗವಹಿಸುವಂತೆ ಪತ್ರ ಬರೆದಿದ್ದು ಸದಸ್ಯರು ಭಾಗವಹಿಸುವರೇ? ಲತಾ ಅವರ ಪತಿ ಕಲ್ಕೆರೆ ರವಿಕುಮಾರ್ ಅವರು ಕಾಂಗ್ರೆಸ್ ಸೇರಿರುವುದರಿಂದ ಲತಾ ಅವರ ರಕ್ಷಣೆಗೆ ನಿಲ್ಲಲು ಕಾಂಗ್ರೆಸ್ ಸದಸ್ಯರು ಸಭೆಗೆ ಹಾಜರಾಗುವರೇ? ಹಾಗೂ ಸಭೆಗೆ ಕೋರಂ ಕೊರತೆಯಾಗಿ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾಗುವ ಕಾರಣ, ಜಿಲ್ಲೆಯ ಅಭಿವೃದ್ಧಿಯ ಸಲುವಾಗಿ ಜೆಡಿಎಸ್ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap