ತುಮಕೂರು : ಜಿಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಮುಂದೂಡಿಕೆ

ತುಮಕೂರು :

 

      ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್ ವಿರುದ್ಧ ಬಿಜೆಪಿ-ಜೆಡಿಎಸ್ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಸಭೆ ಕೋರಂ ಕೊರತೆಯಿಂದ ಜ.25ಕ್ಕೆ ಮತ್ತೆ ಮುಂದೂಡಿಕೆಯಾಗಿದೆ.

      ಜ.18 ಸೋಮವಾರ ಬೆಳಿಗ್ಗೆ 10ಕ್ಕೆ ಪ್ರಾದೇಶಿಕ ಆಯುಕ್ತ ನವೀನ್‍ರಾಜ್‍ಸಿಂಗ್ ಅವರ ನೇತೃತ್ವದಲ್ಲಿ ಅವಿಶ್ವಾಸ ಪ್ರಕ್ರಿಯೆ ಸಭೆ ಕರೆಯಲಾಗಿತ್ತು. ನಿಯಮಾನುಸಾರ ಸದಸ್ಯರು ಹಾಜರಾಗಲು ಅರ್ಧತಾಸು ಕಾಲಾವಕಾಶ ನೀಡಲಾಗಿತ್ತು. ಈ ಸಮಯಕ್ಕೆ ಹೊಯ್ಸಳಕಟ್ಟೆ ಬಿಜೆಪಿ ಜಿಪಂ ಸದಸ್ಯ ಮಹಾಲಿಂಗಪ್ಪ ಹಾಗೂ ಬುಕ್ಕಾಪಟ್ಟಣ ಜೆಡಿಎಸ್ ಸದಸ್ಯ ಜಯಪ್ರಕಾಶ್ ಅವರು ಆಗಮಿಸಿದ್ದು ಬಿಟ್ಟರೆ ಇನ್ನ್ಯಾವ ಸದಸ್ಯರು ಆಗಮಿಸದ ಕಾರಣ ಪ್ರಾದೇಶಿಕ ಆಯಕ್ತರು ಅವಿಶ್ವಾಸ ಮಂಡನಾ ಸಭೆಯನ್ನು ಕೋರಂ ಕೊರತೆ ಇದೆ ಎಂದು ಹೇಳಿ ಜ.25 ಬೆಳಿಗ್ಗೆ 11ಕ್ಕೆ ಮತ್ತೆ ಸಮಯ ನಿಗದಿ ಮಾಡಿ ಮುಂದೂಡಿದರು.

      57 ಸದಸ್ಯ ಬಲದ ಜಿಪಂನಲ್ಲಿ ಅಧ್ಯಕ್ಷರ ವಿರುದ್ಧ ಮಂಡನೆಯಾಗಿದ್ದು ಅವಿಶ್ವಾಸ ಗೆಲ್ಲಲು 29 ಸದಸ್ಯ ಬಲ ಅವಶ್ಯಕವಾಗಿತ್ತು. ಕಾಂಗ್ರೆಸ್ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ 23 ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಸಭೆಯಿಂದ ದೂರ ಉಳಿದಿದ್ದರು. ಅವಿಶ್ವಾಸ ಮಂಡಿಸಿದ್ದ ಬಿಜೆಪಿ-ಜೆಡಿಎಸ್ ಸದಸ್ಯರ ಪೈಕಿ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಉಳಿದವರು ಪಾಲ್ಗೊಳ್ಳದಿರುವುದು ಅಧ್ಯಕ್ಷೆ ಲತಾ ರವಿಕುಮಾರ್ ಅವರಿಗೆ ಮತ್ತಷ್ಟು ದಿನಗಳು ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿದೆ.

ಹೈಕೋರ್ಟ್ ಮೊರೆ:

      ಅವಿಶ್ವಾಸ ಮಂಡಿಸಿದ್ದ ಸದಸ್ಯರೇ ಭಾಗವಹಿಸದಿರುವ ಕಾರಣ, ಪದೇ ಪದೇ ಮುಂದೂಡಿಕೆ ಪ್ರಕ್ರಿಯೆ ನಡೆಯುತ್ತಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇನ್ನೆರೆಡು ಮೂರು ತಿಂಗಳಷ್ಟೇ ಅಧಿಕಾರವಧಿ ಉಳಿದಿರುವುದು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಪ್ರಕ್ರಿಯೆಯನ್ನೇ ರದ್ದು ಮಾಡಬೇಕೆಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿರುವುದಾಗಿ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್ ತಿಳಿಸಿದರು.

      ಪ್ರಭಾರದಲ್ಲಿ ಮುಂದುವರಿಯಲು ಬಿಜೆಪಿ ಹುನ್ನಾರ:

      ಹಿಂದೆ ಬಿಜೆಪಿಯವರೊಂದಿಗೆ ಆದ ಒಪ್ಪಂದದಂತೆ ಅಧ್ಯಕ್ಷ –ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದು, ಉಪಾಧ್ಯಕ್ಷರು ರಾಜೀನಾಮೆ ಕೊಟ್ಟ ಕೂಡಲೇ ನಾನು ರಾಜೀನಾಮೆ ಕೊಡುವೆ. ಉಪಾಧ್ಯಕ್ಷರೇ ಪ್ರಭಾರರಾಗಿ ಅಧಿಕಾರದಲ್ಲಿ ಮುಂದುವರಿಯಲು ಈ ಅವಿಶ್ವಾಸ ಪ್ರಕ್ರಿಯೆಯ ನಾಟಕವಾಡಲಾಗುತ್ತಿದೆ ಎಂದು ಜಿಪಂ ಅಧ್ಯಕ್ಷರ ಪತಿ ರವಿಕುಮಾರ್ ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link