ಸಮಸ್ಯೆಗಳ ಆಗರವಾದ ತುರುವೇಕೆರೆ ತಾಲ್ಲೂಕು ಕಚೇರಿ

ತುರುವೇಕೆರೆ:


ದೇಶದೆಲ್ಲೆಡೆ ಸ್ವಚ್ಛ ಭಾರತ್ ಆಂದೋಲನ ನಡೆಯುತ್ತಿದೆ. ಆದರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮೂಲಭೂತ ಸೌಲಭ್ಯಗಳ ಮರೀಚಿಕೆ, ಜನ ಸಾಮಾನ್ಯರಿಗೆ ಎಟುಕದ ಸೌಲಭ್ಯಗಳು, ಉಪಯೋಗಕ್ಕೆ ಬಾರದ ಶೌಚಾಲಯಗಳು, ಸುಣ್ಣಬಣ್ಣ ಕಾಣದ ಕಟ್ಟಡ ಸೇರಿದಂತೆ ಹಲವಾರು ಸಮಸ್ಯೆಗಳು ಜೀವಂತವಾಗಿದ್ದು, ತಾಲ್ಲೂಕು ಕಚೇರಿಗೆ ಶೀಘ್ರ ಕಾಯಕಲ್ಪ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದಶಕ ಕಳೆದರೂ ಕಾಣದ ಸುಣ್ಣ ಬಣ್ಣ :

ಎಂ.ಡಿ.ಲಕ್ಷ್ಮೀನಾರಾಯಣ್ ಶಾಸಕರಾಗಿದ್ದ ಅವಧಿಯಲ್ಲಿ ತಾಲ್ಲೂಕು ಕಚೇರಿ ಉದ್ಘಾಟನೆಯಾಗಿತ್ತು. ನಂತರ ಇಲ್ಲಿಯವರೆಗೆ ಕಟ್ಟಡ ಸುಣ್ಣಬಣ್ಣ ಕಂಡಿಲ್ಲ. ಕಚೇರಿಯ ಕಿಟಕಿ ಗಾಜುಗಳು ಒಡೆದಿವೆ. ಗೋಡೆಗಳು ಶಿಥಿಲಗೊಂಡು ಮಳೆನೀರು ಸೋರಿ ಪಾಚಿ ಕಟ್ಟಿವೆ. ಕಬ್ಬಿಣದ ಕಂಬಿಗಳು ಕಿತ್ತು ಬೀಳುವ ಸ್ಥಿತಿಯಲ್ಲಿವೆ. ಮೊದಲ ಅಂತಸ್ತಿನ ಕಟ್ಟಡದ ಸಜ್ಜೆ ಶಿಥಿಲವಾಗಿದ್ದು, ಯಾವ ಕ್ಷಣದಲ್ಲಾದರೂ ಕಳಚಿ ಬೀಳಬಹುದು.

ಗಿಡ, ಬಳ್ಳಿಗಳು ಕಚೇರಿಯನ್ನೂ ಮೀರಿ ಬೆಳೆದಿವೆ. ಕಿಟಕಿ ಸಜ್ಜೆಗಳ ಮೇಲೆಲ್ಲಾ ಗಿಡ-ಗೆಂಟಿಗಳು ಬೆಳೆದಿದ್ದು, ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಕಾಂಪೌಂಡ್ ಒಳಗಿನ ಮರಗಳ ರೆಂಭೆ-ಕೊಂಬೆಗಳನ್ನು ಕತ್ತರಿಸಿ ಹಾಗೆ ಬಿಟ್ಟಿರುವುದರಿಂದ ಎಲೆಗಳು ಒಣಗಿದ್ದು, ಆಕಸ್ಮಿಕವಾಗಿ ತರಗೆಲೆಗೆ ಬೆಂಕಿ ಬಿತ್ತೆಂದರೆ ಅಪಾಯ ತಪ್ಪಿದ್ದಲ್ಲ. ತಹಶೀಲ್ದಾರ್ ಕಚೇರಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಕಚೇರಿಗಳಲ್ಲಿ ದಾಖಲಾತಿ ಕಡತಗಳಿದ್ದು, ಅದರ ಗೋಡೆಬದಿಯೆ ರಾಶಿ ತರಗೆಲೆ ಬಿದ್ದಿದೆ. ಜೊತೆಗೆ ವಿದ್ಯುತ್ ವೈರು ತರಗೆಲೆಯ ಮೇಲೆ ಬಿದ್ದಿದ್ದು, ಶಾರ್ಟ್ ಸಕ್ರ್ಯೂಟ್ ಅಥವಾ ಬೆಂಕಿ ಬಿದ್ದರೆ ದಾಖಲಾತಿಗಳೆಲ್ಲ ಬೆಂಕಿಗೆ ಆಹುತಿಯಾಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ನಾಗರಿಕರ ಆತಂಕವಾಗಿದೆ.

ಮೂಲಭೂತ ಸೌಲಭ್ಯಗಳ ಕೊರತೆ :

ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗೂ ವಿವಿಧ ಕೆಲಸಗಳಿಗಾಗಿ ತಾಲ್ಲೂಕಿನ ಮೂಲೆ ಮೂಲೆಗಳಿಂದ ಬರುವ ಜನರಿಗೆ ಮೂಲಭೂತ ಸೌಲಭ್ಯಗಳ ಬಳಕೆ ಕೇವಲ ಮರೀಚಿಕೆಯಾಗಿದೆ. ಇಲ್ಲಿ ಅನೇಕ ಇಲಾಖೆಗಳ ಕಚೇರಿಗಳಿದ್ದು, 100 ಕ್ಕೂ ಹೆಚ್ಚು ಮಹಿಳಾ ಹಾಗೂ ಪುರುಷ ಅಧಿಕಾರಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೈತರು, ವಿದ್ಯಾರ್ಥಿಗಳು, ಕೂಲಿಕಾರರು ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿದಿನ ಕಚೇರಿಗೆ ಭೇಟಿ ನೀಡುತ್ತಾರೆ. ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜನಸ್ನೇಹಿ, ಪಹಣಿ, ಪಟ್ಟೆ, ಪಡಿತರಚೀಟಿ, ಜಮೀನು ಅಳತೆ, ತಿದ್ದುಪಡಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಲು ಪ್ರತಿದಿನ ನೂರರು ಜನ ಕಚೇರಿಗೆ ಎಡತಾಕುತ್ತಾರೆ. ಆದರೇ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವಂತ ಸ್ಥಿತಿ ತಾಲ್ಲೂಕು ಕಚೇರಿಯಲ್ಲಿ ನಿರ್ಮಾಣವಾಗಿದೆ.

ಉಪಯೋಗಕ್ಕೆ ಬಾರದ ಶೌಚಾಲಯಗಳು :

ತಾಲ್ಲೂಕು ಕಚೇರಿಯಲ್ಲಿ ನಾಲ್ಕು ಶೌಚಾಲಯಗಳಿದ್ದು, ಲೆಕ್ಕಕ್ಕಿಲ್ಲ ಎಂಬಂತಾಗಿವೆ. ತಹಶೀಲ್ದಾರ್ ಕೊಠಡಿ ಹಾಗೂ ಮೇಲಿನ ಕೊಠಡಿಯಲ್ಲಿ ಅಧಿಕಾರಿಗಳ ಶೌಚಾಲಯ ಹೊರತು ಪಡಿಸಿದರೆ ಉಳಿದ ಶೌಚಾಲಯಗಳು ಉಪಯೋಗಕ್ಕೆ ಬರದ ಸ್ಥಿತಿ ತಲುಪಿವೆ. ಉಪ ಖಜಾನೆ ಬಲ ಭಾಗದಲ್ಲಿರುವ ಶೌಚಾಲಯದೊಳಗೆ ಕಾಲಿಡಲೂ ಸಾಧ್ಯವಾಗದ ಗಲೀಜು ತುಂಬಿದ್ದು, ದುರ್ನಾತ ಬೀರುತ್ತಿದೆ.

ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಪುರುಷ ಹಾಗೂ ಮಹಿಳಾ ಸಿಬ್ಬಂದಿಗೂ ಸಹ ಸುಸಜ್ಜಿತÀ ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲದೆ ಕಚೇರಿ ಹೊರಗೆ ಹೋಗಬೇಕಾದ ಪರಿಸ್ಥಿತಿ. ಹಳೆಬೀರು ಟೇಬಲ್ ಮುರಿದ ಕುರ್ಚಿಗಳನ್ನು ಬೇರೆಡೆ ಸಾಗಿಸದೆ ವರಾಂಡದಲ್ಲಿ ಜೋಡಿಸಿರುವುದರಿಂದ ಜನ ಸಾಮಾನ್ಯರು ಸರಾಗವಾಗಿ ಓಡಾಡಲು ತೊಂದರೆಯಾಗಿದೆ. ವರ್ಷದಿಂದೀಚೆಗೆ 4-5 ಮಂದಿ ತಹಶೀಲ್ದಾರ್‍ಗಳು ತಾಲ್ಲೂಕಿಗೆ ಬಂದು ಹೋದರೂ ಸಹ ಯಾವ ಅಧಿಕಾರಿಯೂ ಇತ್ತ ಗಮನ ಹರಿಸದಿರುವುದು ದುರ್ದೈವದ ಸಂಗತಿಯಾಗಿದೆ.

ಕಚೇರಿ ಹಿಂಭಾಗದ ಶೌಚಾಲಯ ಬಂದ್:

ತಾಲ್ಲೂಕು ಕಚೇರಿಗೆ ಹಾಗೂ ಇತರೆ ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಹಿಂಭಾಗದಲ್ಲಿದ್ದ ಶೌಚಾಲಯ ವರದಾನವಾಗಿತ್ತು. ಆದರೆ ಇದೀಗ ಇದನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂಬ ಮಾತುಗಳು ಕೇಳಬರುತ್ತಿವೆ. ಈ ಶೌಚಾಲಯದಿಂದ ಪಟ್ಟಣದಲ್ಲಿ ಅಳವಡಿಸಿರುವ ಅಸಮರ್ಪಕ ಒಳಚರಂಡಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಯುಜಿಡಿ ಗುಂಡಿ ತುಂಬಿ, ಬಿಆರ್‍ಸಿ ಕಚೇರಿ ಮುಂಭಾಗ ಹರಿದು ನಿಲ್ಲುತ್ತಿದ್ದರಿಂದ ಸಾರ್ವಜನಿಕರ ಆಕ್ಷೇಪಣೆಯ ಮೇರೆಗೆ ಪಪಂಯು ಶೌಚಾಲಯದ ಸಂಪರ್ಕವನ್ನು ಬಂದ್ ಮಾಡಿದ್ದರಿಂದ ಇಲ್ಲಿನ ಶೌಚ ಹೊರಹೋಗದೆ ಬಂದಾಗಿದ್ದರಿಂದ ಇದೀಗ ಶೌಚಾಲಯಕ್ಕೆ ಬೀಗ ಜಡಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಾದಚಾರಿಗಳಿಗೆ ದ್ವಿಚಕ್ರ ವಾಹನಗಳಿಂದ ತಡೆ :

ತಾಲ್ಲೂಕು ಕಚೇರಿ ಆವರಣ ಹಾಗೂ ಕಚೇರಿ ಮುಂಭಾಗ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದು ವಾಹನ ನಿಲ್ದಾಣವೆನೊ ಎಂಬಂತೆ ಜನರು ಕಚೇರಿಯ ಒಳಗೆ ಹೊರಗೆ ಒಡಾಡಲು ಪ್ರಾಯಾಸ ಪಡುವಂತಾಗಿದೆ. ಗೇಟಿನ ಮುಖ್ಯ ದ್ವಾರದಲ್ಲಿಯೆ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿರುತ್ತಾರೆ. ಕೆಲ ಬೈಕ್ ಸವಾರರು ತಮ್ಮ ಕೆಲಸಗಳಿಗಾಗಿ ಕಚೇರಿ ಆವರಣದೊಳಗೆ ವಶಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿ ಒಳಹೋದರೆಂದರೆ ಗಂಟೆಗಳಾದರೂ ಇತ್ತ ಸುಳಿಯುವುದಿಲ್ಲ. ಬೈಕ್‍ಗಳಲ್ಲದೆ ಕಾರುಗಳೂ ಸಹ ಇಲ್ಲಿ ನಿಲ್ಲುವುದರಿಂದ ಅಧಿಕಾರಿಗಳ ವಾಹನಗಳು ಒಳಗೆ ಹೋಗಲು ಹರಸಾಹಸ ಪಡಬೇಕಾಗಿದೆ.

ಕೆಲವು ಬೈಕ್‍ಗಳನ್ನು ರಸ್ತೆಗೆ ತಾಗಿ ನಿಲ್ಲಿಸಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರ ಸಾಧ್ಯವಿಲ್ಲ. ಇಲ್ಲಿ ವಾಹನಗಳ ಓಡಿಸುವವರಿಗೆ ನಿಯಮಗಳ ಅಗತ್ಯವಿಲ್ಲ, ಮಕ್ಕಳಾದಿಯಾಗಿ ಚಾಲನಾ ಪರವಾನಗಿ ಇಲ್ಲದಿದ್ದವರೂ ಎಲ್ಲೆಂದರಲ್ಲಿ ವಾಹನ ಓಡಿಸುವುದರಿಂದ ಪಾದಚಾರಿಗಳು ತಮ್ಮ ಜೀವ ಕೈಲಿಡಿದು ಆತಂಕದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಕಾಲದಲ್ಲಿ ಆಗದ ರೈತರ ಕೆಲಸಗಳು :

ದೂರದಿಂದ ಬರುವ ಸಾರ್ವಜನಿಕರ ಕುಂದು-ಕೊರತೆಗಳ ಬಗ್ಗೆ ಅಧಿಕಾರಿಗಳು ನಿಗಾವಹಿಸದೆ ನಿರ್ಲಕ್ಚ್ಯ ವಹಿಸುತ್ತಿದ್ದು, ಸಕಾಲದಲ್ಲಿ ಕೆಲಸ ಮಾಡಿಕೊಡದೆ ಆಗ-ಈಗ ಎಂದು ಸತಾಯಿಸುತ್ತಾ ಅಲೆದಾಡಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಚೇರಿಗೆ ಎಡತಾಕುವ ಸಾರ್ವಜನಿಕರು ಆರೋಪಿಸಿದ್ದಾರೆ.

ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡಿರುವ ತುರುವೇಕೆರೆ ತಾಲ್ಲೂಕು ಕಚೇರಿಗೆ ಶೀಘ್ರ ಕಾಯಕಲ್ಪ ಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜನಸಾಮಾನ್ಯರ ಧ್ವನಿಗೆ ಸ್ಪಂದಿಸಿ ಸೂಕ್ತ ಸೌಲಭ್ಯ ಒದಗಿಸಿಕೊಡುವ ಮೂಲಕ ತಾಲ್ಲೂಕು ಜನತೆಯ ಆತಂಕವನ್ನು ದೂರ ಮಾಡುವರೆ ಕಾದು ನೋಡಬೇಕಾಗಿದೆ.

ಕಚೇರಿ ಗೋಡೆಯೆ ಶೌಚಾಲಯಕ್ಕೆ ಬಳಕೆ :

ತಾಲ್ಲೂಕು ಕಚೇರಿ ಹಿಂಭಾಗದಲ್ಲಿದ್ದ ಶೌಚಾಲಯ ಬಂದ್ ಆಗಿರುವುದರಿಂದ ಕಚೇರಿಗೆ ಬಂದ ಜನ ಜಲಭಾದೆ ತೀರಿಸಿಕೊಳ್ಳಲು ತಾಲ್ಲೂಕು ಕಚೇರಿ ಹಿಂಭಾಗದ ಕಾಂಪೌಂಡ್ ಗೋಡೆ ಹಾಗೂ ಮರಗಳನ್ನು ಆಶ್ರಯಿಸಿದ್ದಾರೆ. ಕೆಲ ಅಧಿಕಾರಿಗಳು ಸಹ ಈ ಮಾರ್ಗವನ್ನೆ ಅನುಸರಿಸುತ್ತಿದ್ದಾರೆ. ಇದನ್ನು ಮನಗಂಡ ತಾಲ್ಲೂಕು ಆಡಳಿತವು ಕಚೇರಿಯ ಎಡಭಾಗದಲ್ಲಿ ಯಾರೂ ಹಿಂದಕ್ಕೆ ಹೋಗದಂತೆ ಹಳೆಯ ಫ್ಲೆಕ್ಸ್‍ವೊಂದನ್ನು ಅಡ್ಡ ನಿಲ್ಲಿಸಿದ್ದರೂ ಸಹ ಜನತೆ ಗೋಡೆಗೆ ತೀರ್ಥಾಭಿಷೇಕ ಮಾಡುತ್ತಿರುವುದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದು, ರಸ್ತೆಯಲ್ಲಿ ಓಡಾಡುವವರು ತಲೆ ತಗ್ಗಿಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೌಲಭ್ಯಗಳು ಮರೀಚಿಕೆ :

ತಾಲ್ಲೂಕು ಕಚೇರಿಗೆ ದೂರದ ಊರುಗಳಿಂದ ಬರುವ ಜನರಿಗೆ ಸರಿಯಾದ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಜನತೆ ಕಚೇರಿಗೆ ಆಗಮಿಸಿ ತಮ್ಮ ಕೆಲಸ ಬೇಗನೆ ಆದರೇ ಸಾಕೆಂದು ಬಿಸಿಲು ಮಳೆ ಲೆಕ್ಕಿಸದೆ ಸರದಿಯಲ್ಲಿ ನಿಂತಿರುತ್ತಾರೆ. ಬಾಯಾರಿದರೆ ಕುಡಿಯುವ ನೀರಾಗಲಿ, ಶೌಚಾಲಯ ಸೌಲಭ್ಯವಾಗಲಿ ದೊರಕುತ್ತಿಲ್ಲ. ನೀರು ಕುಡಿಯಲು, ಇಲ್ಲವೆ ಶೌಚಾಲಯಕ್ಕೆ ಹೋಗಬೇಕೆಂದರೆ ತಾಲ್ಲೂಕು ಕಚೇರಿ ಬಿಟ್ಟು ಸುಮಾರು ದೂರ ಆಚೆ ಹೋಗಬೇಕು. ಒಂದು ವೇಳೆ ಆಚೆ ಹೋಗಿ ಬರುವುದರೊಳಗೆ ಹನುಮಂತನ ಬಾಲದಂತಿರುವ ಸಾಲಿನ ಕೊನೆಯಲ್ಲಿ ಹೋಗಿ ಮತ್ತೆ ನಿಲ್ಲಬೇಕಾದ ಪರಿಸ್ಥಿತಿ. ಒಂದು ವೇಳೆ ವಯಸ್ಸಾದವರು ಸರದಿಯಲ್ಲಿ ನಿಂತ ಸಂದರ್ಭದಲ್ಲೆನಾದರೂ ಬಾಯಾರಿಕೆಯಾಗಿ ತಲೆ ಸುತ್ತಿ ಬಿದ್ದರೆ ದೇವರೆ ಗತಿ.

    -ಮಲ್ಲಿಕಾರ್ಜುನ ದುಂಡ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್

 

Recent Articles

spot_img

Related Stories

Share via
Copy link