ತುರುವೇಕೆರೆ :
ಹಗಲು ರಾತ್ರಿ ಎನ್ನದೇ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತಾಲ್ಲೂಕಿನ ಕೋವಿಡ್ ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರುಗಳ ಸೇವೆ ಅವಿಸ್ಮರಣೀಯ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕಿನ ಕೊರೊನಾ ವಾರಿಯರ್ಸ್ಗಳಾದ ಅಂಗನವಾಡಿ, ಆಶಾ ಕಾರ್ಯಕರ್ತರುಗಳಿಗೆ ಹಾಗು ಪತ್ರಿಕಾ ಪ್ರತಿನಿಧಿಗಳಿಗೆ ಮಾಸ್ಕ್, ಇನ್ನಿತರ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋವಿಡ್ 2ನೇ ಅಲೆಯು ಕ್ಷಿಪ್ರಗತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿದೆ. ಆಶಾ ಕಾರ್ಯಕರ್ತೆಯರು ಹಾಗು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಗ್ರಾಮಗಳ ಮನೆಗೆ ಭೇಟಿ ನೀಡಿ ಯಾರ್ಯಾರಿಗೆ ಸೋಂಕಿದೆ, ಎಷ್ಟು ಜನ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಅವರ ಆರೋಗ್ಯದ ಸ್ಥಿತಿ ವಿಚಾರಿಸುವ ಜೊತೆಗೆ ಸೋಂಕಿತರ ಸ್ಯಾಚುರೇಷನ್ ಪರೀಕ್ಷೆ ಮಾಡುವುದು, ಅವರ ಊಟ-ತಿಂಡಿ, ಮಾತ್ರೆ, ಚಿಕಿತ್ಸೆ ಪಡೆಯುವ ಬಗ್ಗೆ ಹಾಗು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡುತ್ತಾರೆ.
ಪ್ರತಿ ರೋಗಿಗಳ ಆರೋಗ್ಯದಲ್ಲಿ ಏರುಪೇರಾದರೆ ಸಂಬಂಧಿಸಿದ ವೈದ್ಯರಿಗೆ ಮಾಹಿತಿ ನೀಡುವುದು, ವ್ಯಾಕ್ಸಿನ್ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಸೋಂಕಿತ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆ ಅಥವಾ ಕೋವಿಡ್ ಕೇಂದ್ರಗಳಿಗೆ ಕಳುಹಿಸಿಕೊಡುವುದು ಇಂತಹ ಅನೇಕ ಕೆಲಸಗಳನ್ನು ಭಯಭಯವಿಲ್ಲದೆ ಮಾಡುತ್ತಿದ್ದಾರೆ. ಇಂತಹ ವಾರಿಯರ್ಸ್ಗಳಿಗೆ ಏನೇ ಕೊಟ್ಟರೂ ಕಡಿಮೆಯೇ. ಅದೇ ರೀತಿ ಪತ್ರಿಕಾ ಮಾಧ್ಯಮದವರ ಸೇವೆಯೂ ಶ್ಲಾಘನೀಯವಾಗಿದ್ದು ಈ ಸಂದರ್ಭದಲ್ಲಿ ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ರೊಟರಿ ಅಧ್ಯಕ್ಷ ಎನ್.ರಾಜಣ್ಣ ಮಾತನಾಡಿ ತಾಲ್ಲೂಕಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅದರ ನಿಯಂತ್ರಣಕ್ಕೆ ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ಗಳಿಗೆ ತುರುವೇಕೆರೆ ರೋಟರಿ ಕ್ಲಬ್ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ವಾರಿಯರ್ಸ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ತಾಲ್ಲೂಕಿನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರುಗಳು, ಹೋಂಗಾಡ್ಸ್, ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಹೆಡ್ಮಾಸ್ಕ್ ವಿತರಿಸಲಾಗಿದ್ದು ಅದೇ ರೀತಿ ಮುಂದಿನ ದಿನಗಳಲ್ಲಿ ಪೊಲೀಸ್ ಮತ್ತು ಪೌರ ಕಾರ್ಮಿಕರಿಗೂ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ರೋಟರಿ ತಾಲ್ಲೂಕು ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಂ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ಗುಪ್ತಾ, ಪದಾಧಿಕಾರಿಗಳಾದ ಎಸ್.ಕೆ.ಥಾಮಸ್, ರಾಜಪ್ಪ, ಗ್ಯಾಸ್ಪ್ರಭು, ಬಿಎಮ್ಎಸ್ ಉಮೇಶ್, ಸಾ.ಶಿ.ದೇವರಾಜು, ಕೆ.ಸಿ.ಜಯರಾಂ, ಬಸವರಾಜು, ಶಶಿಧರ್, ತ್ರಿಜಯ್, ಪ.ಪಂ.ಮುಖ್ಯಾಧಿಕಾರಿ ಮಂಜುಳಾದೇವಿ, ಸಿಡಿಪಿಒ ಅರುಣ್, ಅಂಗನವಾಡಿ ಮೇಲ್ವಿಚಾರಕಿ ಮಮತ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹೋಂಗಾಡ್ರ್ಸ್ಗಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
