ತುರುವೇಕೆರೆ :

ತಾಲೂಕಿನ 2ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಶಾಂತಿಯುತವಾಗಿ ನಡೆದು ಶೇ.90.25ರಷ್ಟು ದಾಖಲೆಯ ಮತದಾನವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾದರೂ 9 ಗಂಟೆಯವರೆಗೂ ತೀರಾ ನಿಧಾನಗತಿಯಲ್ಲಿ ಸಾಗಿತು. ಆನಂತರ ಬಿರುಸಿನ ಮತದಾನ ಪ್ರಾರಂಭವಾಗಿ ವಯಸ್ಸಾದವರು, ವೃದ್ದರು, ಗರ್ಭಿಣಿಯರು, ಅಂಗವಿಕಲರು ಮತ್ತು ರೋಗಿಗಳನ್ನು ಬೈಕ್ ಆಟೋಗಳಲ್ಲಿ ಕರೆ ತಂದು ಮತದಾನ ಕೇಂದ್ರಕ್ಕೆ ಬಿಡಲಾಗುತ್ತಿತ್ತು. ಕೆಲ ಗ್ರಾಮಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಮತ ಚಲಾಯಿಸಲು ಬರುವವರಿಗೆ ಮಾಸ್ಕ್‍ಗಳನ್ನು ವಿತರಿಸತ್ತಿದ್ದದು ಕಂಡು ಬಂದಿತು.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಅಹಿತಕರ ಘಟನೆಯು ನಡೆಯದಂತೆ ಪೊಲೀಸ್ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ವಡಕೇಘಟ್ಟ ಮತಗಟ್ಟೆ ಕೇಂದ್ರದಲ್ಲಿ ಎರಡು ಗುಂಪುಗಳ ನಡುವೆ ಮಾತುಕತೆ ಚಕಮುಕಿ ಉಂಟಾಗಿ ಕೆಲ ನಿಮಿಷ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಎಸ್.ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ತಾಳ್ಕೆರೆ 3, ಮಾವಿನಕೆರೆ 2, ತಂಡಗ 1, ಹುಲಿಕೆರೆ2, ಕೋಳಾಲ 1, ಮಂಗಿಕುಪ್ಪೆ 1 ಹಾಗೂ ದುಂಡ 1 ಸೋಂಕಿತ ವ್ಯಕ್ತಿಗಳು 4ರಿಂದ 5 ಗಂಟೆಯ ಸಮಯದಲ್ಲಿ ಮತಚಲಾಯಿಸಿದರು. ಮಾಜಿ ಶಾಸಕ ಎಚ್.ಬಿ.ನಂಜೇಗೌಡ ವಡಕೇಘಟ್ಟದಲ್ಲಿ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು. ಬಡಗರಹಳ್ಳಿಯಲ್ಲಿ 85 ವಯಸ್ಸಿನ ಬ್ಯಾಟಪ್ಪ, ಡೊಂಕಿಹಳ್ಳಿಯಲ್ಲಿ 100 ವರ್ಷಕ್ಕೂ ಮೇಲ್ಪಟ್ಟ ಗಂಡಸು ಹಾಗೂ ಹೆಂಗಸು ತಳ್ಳುಗಾಡಿಯಲ್ಲಿ ಸಂಬಂದಿಕರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಒಟ್ಟಿನಲ್ಲಿ ಈಬಾರಿ ತಾಲ್ಲೂಕಿನಾದ್ಯಂತ ಹೆಚ್ಚು ಮತದಾನವಾಗಿದ್ದು ಯಾವುದೇ ಅಹಿತಕರ ಘಟನೆಯಿಲ್ಲದೆ ಶಾಂತಿಯುತವಾಗಿ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








