ತುರುವೇಕೆರೆ :
ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಮ್ಯಾನೇಜರ್ ರೈತರ ಸಾಲಾ ವಸೂಲಾತಿ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ಆರೋಪಿಸಿದರು.
ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ರೈತರೊಂದಿಗೆ ಆಗಮಿಸಿ ಬ್ಯಾಂಕ್ ಸಿಬ್ಬಂದಿ ಜೊತೆ ಚರ್ಚಿಸಿ ನಂತರ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ತಾಲೂಕಿನಾದ್ಯಂತ ರೈತರು ಗ್ರಾಮೀಣ ಬ್ಯಾಂಕ್‍ನಲ್ಲಿ ಕೃಷಿ ಸಾಲ ತೆಗೆದುಕೊಂಡಿದ್ದಾರೆ. ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ಕೆಲವು ರೈತರ ಸಾಲ ಮನ್ನಾವಾಗಿದ್ದು ಸಾಲ ತಿರುವಳಿಯಾಗಿಲ್ಲ, ಸುಸ್ತಿಯಾಗಿದೆ ಎಂದು ರೈತರಿಗೆ ನೋಟೀಸ್ ನೀಡುತ್ತಿದ್ದಾರೆ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದು ಬೆಲೆ ಕುಸಿತ, ಕೊವಿಡ್ ನಿಂದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದ್ದು ಇಂತಹ ಸಮಯದಲ್ಲಿ ಬ್ಯಾಂಕ್‍ನವರು ರೈತನಿಗೆ ಕನಿಷ್ಟ ಗೌರವನ್ನು ಕೊಡದೇ ಏಕವಚನದಲ್ಲಿಯೇ ಬೈದು ಸಾಲ ಕಟ್ಟುವಂತೆ ದಮಕಿ ಹಾಕುತ್ತಿದ್ದಾರೆ. ಗ್ರಾಮಕ್ಕೆ ತೆರಳುವ ಮ್ಯಾನೇಜರ್ ರೈತರನ್ನು ತಮ್ಮ ಜಮೀನು ಬಳಿ ಕರೆದುಕೊಂಡು ಬ್ಯಾಂಕ್ ನೋಟೀಸ್‍ನ್ನು ನೀಡಿ ಬಲವಂತವಾಗಿ ರೈತನ ಕೈಯಲ್ಲಿ ಪೊಲೀಸರು ಕಳ್ಳರ ಕೈಲಿ ಸ್ಲೇಟ್ ಇಡಿಸುವಂತೆ ಇಡಿಸಿ ಪೋಟೋ ತೆಗೆದು ಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ತಾಳಕೆರೆ ಗ್ರಾಮದ ಗಿರಿಯಪ್ಪ ಎಂಬ ರೈತರಿಗೆ ಇದೇ ರೀತಿ ಮಾಡಿದ್ದು ಸಾಲದ ವಿವರವನ್ನು ನೀಡದೇ ಬಲವಂತವಾಗಿ ಸಹಿ ಹಾಕಿಸಿಕೊಂಡು ಬಂದಿದ್ದಾರೆ. ಬ್ಯಾಂಕ್‍ನಲ್ಲಿ ಸಾಲ ಬಗ್ಗೆ ವಿಚಾರಿಸಲು ಬರುವ ರೈತರ ಜೊತೆ ದರ್ಪದಲ್ಲಿ ವರ್ತಿಸುತ್ತಿದ್ದು ರೈತ ಸಾಲ ಮನ್ನಾ ಆಗಿದಿಯೇ ಎಂಬ ಕನಿಷ್ಟ ಮಾಹಿತಿಯನ್ನು ನೀಡದೇ ಕೇಂದ್ರ ಕಚೇರಿಗೆ ತೆರಳಿ ಎಂದು ರೈತರನ್ನು ಕಳಿಸುತ್ತಿದ್ದಾರೆ. ರೈತರ ಖಾತೆಗೆ ಹಾಕುವ ಕೇಂದ್ರ, ರಾಜ್ಯ ಸರ್ಕಾರದ ಹಣ, ಡಿಪಾಜಿಟ್ ಇಟ್ಟಿರುವ ಹಣ, ನರೇಗಾ ಹಣ, ಮಾಸಾಶನದ ಹಣವನ್ನು ಸಹ ಸಾಲದ ಕಂತಿಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವಾರು ರೈತರಿಗೆ ಕಿರುಕುಳ ನೀಡುತ್ತಿದ್ದು ಇದನ್ನು ಖಂಡಿಸಿ ಸಾವಿರಾರು ರೈತರೊಂದಿಗೆ ಬ್ಯಾಂಕ್ ಎದುರು ಮುಂದಿನ ಶುಕ್ರವಾರ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಹಮತ್, ನಾಗರಾಜು, ಶಿವಲಿಂಗಮೂರ್ತಿ, ಗಿರಿಯಪ್ಪ, ಶಿವನಂಜಪ್ಪ, ನರಸಿಂಹ, ಶಿವಣ್ಣ, ಚಂದ್ರಶೇಖರ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ