ತುರುವೇಕೆರೆ :
ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿ ಫೆ. 30ರವರೆಗೆ ರಾಗಿ ಖರೀದಿಸಲಿದ್ದು, ತಾಲ್ಲೂಕಿನ ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ರೈತರಿಗೆ ಕಿವಿ ಮಾತು ಹೇಳಿದರು.
ಅವರು ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವತಿಯಿಂದ ಸರ್ಕಾರಿ ಸಹಾಯ ಧನದೊಂದಿಗೆ 2020-21 ನೇ ಸಾಲಿಗೆ ಆರಂಭಗೊಂಡ ರಾಗಿ ಖರೀದಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ 3295 ರೂ.ಗಳನ್ನು ನೀಡಲಿದೆ. ಈ ದಿಸೆಯಲ್ಲಿ ರಾಗಿ ಬೆಳೆದ ರೈತರು ಪಹಣಿ, ಹೆಸರು, ವಿಳಾಸದೊಂದಿಗೆ ಬೆಳೆದ ರಾಗಿಯ ಸ್ಯಾಂಪಲ್ ನೀಡಿ ಒಂದು ಚೀಲಕ್ಕೆ 50 ಕೆ.ಜಿ. 600 ಗ್ರಾಂ. ಮಾತ್ರ ನೀಡಬೇಕು. ಖಾಲಿ ಚೀಲಕ್ಕೆ 12 ರೂ. ನೀಡಲಿದ್ದು, ತಾಲ್ಲೂಕಿನ ರೈತರು ನಿಗದಿತ ದಿನಾಂಕವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆ ದಿನ ರಾಗಿಯನ್ನು ನೀಡಬಹುದು. ನಿಗದಿತ ಅವಧಿಯಲ್ಲಿ ನೋಂದಾಯಿಸುವ ಮೂಲಕ ರೈತರಿಂದ ರಾಗಿ ಖರೀದಿಸಲಿದ್ದು, ವರ್ಷವಿಡೀ ಬೆವರು ಸುರಿಸಿ ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಆತುರ ಪಟ್ಟು ಅಗ್ಗದ ಬೆಲೆಗೆ ಮಧ್ಯವರ್ತಿ, ದಲ್ಲಾಳಿಗಳಿಗೆ ಬೇಕಾಬಿಟ್ಟಿ ಮಾರದೆ, ನೇರವಾಗಿ ರಾಗಿ ಖರೀದಿ ಕೇಂದ್ರಕ್ಕೆ ಮಾರುವ ಮೂಲಕ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ತಹಸೀಲ್ದಾರ್ ನಯೀಂಉನ್ನಿಸಾ ಮಾತನಾಡಿ, ರೈತರ ಪಹಣಿಯಲ್ಲಿ ತೆಂಗು, ಅಡಕೆ, ಬಾಳೆ ಎಂದು ತಪ್ಪಾಗಿ ನೋಂದಣಿಯಾಗಿದ್ದಲ್ಲಿ ಅಂತಹ ರೈತರು ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ರಾಗಿ ಖರೀದಿ ಅಧಿಕಾರಿ ರವಿಕುಮಾರ್ ಮಾತನಾಡಿ, ಫೆ.2 ರಿಂದ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, 1481 ಫಲಾನುಭವಿಗಳು ಈಗಾಗಲೆ ನೋಂದಣಿ ಮಾಡಿಸಿದ್ದಾರೆ. ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿಸಲಿದ್ದು ಫೆ.28 ರ ವರೆಗೆ ನೋಂದಣಿಗೆ ಸಮಯಾವಕಾಶವಿದೆ. ರೈತರು ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಚೀಟಿ ಖಡ್ಡಾಯವಾಗಿರುತ್ತದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ 0816-2278792 ಗೆ ಸಂಪರ್ಕಿಸಲು ಕೋರಿದೆ.
ಸರಳ ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಮಧು, ಉಪಾಧ್ಯಕ್ಷ ಎಂ.ಪಿ.ಲೋಕೇಶ್ ಹಾಗೂ ಸದಸ್ಯರುಗಳು, ಪ.ಪಂ ಅಧ್ಯಕ್ಷ ಅಂಜನ್‍ಕುಮಾರ್, ಆಹಾರ ಮತ್ತು ನಾಗರಿಕ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಚನ್ನನಾಯಕ, ಕೃಷಿಕ ಸಮಾಜದ ಅಧ್ಯಕ್ಷ ಕೆಂಪರಾಜು, ಕೃ.ಸ.ನಿರ್ದೇಶಕಿ ಪೂಜಾ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಆರ್‍ಎಂಸಿ ಕಾರ್ಯದರ್ಶಿ ವೆಂಕಟೇಶ್, ಪಿಎಸಿಬಿ ರಾಮೇಗೌಡ, ಮೂರ್ತಿ, ಬಾಬು ಸೇರಿದಂತೆ ಎಪಿಎಂಸಿ ಸದಸ್ಯರುಗಳು ಹಾಗೂ ರೈತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
