ತುರುವೇಕೆರೆ :
ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ನಾಗರೀಕರು ಭಯಭೀತರಾಗಿದ್ದಾರೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಳ್ಳರು ಮನೆಗಳ ಹಿಂಬಾಗಿಲಿನಿಂದ ಇಲ್ಲವೆ ಮನೆಯವರನ್ನು ಯಾಮಾರಿಸಿ ಮನೆಯೊಳಗೆ ನುಗ್ಗಿ ತಮ್ಮ ಕೈಚಳಕದಿಂದ ಹಣ, ವಡವೆ ದೋಚುತ್ತಿರುವುದು ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ವಿದ್ಯಾ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಹಗಲು ವೇಳೆಯಲ್ಲೆ ಅನೇಕ ಮನೆಗಳಿಗೆ ನುಗ್ಗಿ ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ. ಪೋಲಿಸರು ಆಟೋ ಮೂಲಕ ನಾಗರೀಕರಿಗೆ ಅರಿವು ಮೂಡಿಸುತ್ತಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಬುಧುವಾರ ರಾತ್ರಿ 11 ಗಂಟೆ ಸಮಯದಲ್ಲಿ ಬಾಣಸಂದ್ರ ರಸ್ತೆಯ ಪುರಿ ಅಂಗಡಿಗೆ ಕನ್ನ ಹಾಕಲು ಕಳ್ಳ ಮನೆ ಹೆಂಚು ತೆಗೆಯುತ್ತಿದ್ದ ವೇಳೆ ವಿಹಾರಕ್ಕೆ ಬಂದಂತ ವ್ಯಕ್ತಿಯು ಕಳ್ಳನನ್ನು ನೋಡಿ ಕೂಗಿಕೊಂಡಾಗ ಮನೆ ಮೇಲಿಂದ ಜಿಗಿದು ಪರಾರಿಯಾಗಿದ್ದಾನೆ. ತಕ್ಷಣ ಅಂಗಡಿ ಮಾಲೀಕ ಸುನಿಲ್‍ಬಾಬು ಅವರಿಗೆ ಕರೆ ಮಾಡಲಾಗಿ ಮಾಲೀಕ ಹಾಗೂ ಆಜುಬಾಜು ಅಂಗಡಿಯವರು ಸುತ್ತಮತ್ತ ಹುಡುಕಿದರೂ ಪ್ರಯೋಜನವಾಗಿಲ್ಲ. ಸೋಮವಾರವಷ್ಟೇ ಪಟ್ಟಣದ ಸುಮಾರು ನಾಗರೀಕರು ಪೋಲೀಸ್ ಠಾಣೆಗೆ ತೆರಳಿ ಪಿಎಸ್‍ಐ ಹಾಗೂ ಸಿಪಿಐ ಅವರಿಗೆ ಮನವಿ ಸಲ್ಲಿಸಿದ್ದು ಅದರಂತೆ ಆರಕ್ಷಕರು ಸಹಾ ಕಳ್ಳರನ್ನು ಹಿಡಿಯಲು ಬಲೆಬೀಸಿದ್ದರೂ ಯಾವೊಬ್ಬ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ.
ಸಿಪಿಐ ನವೀನ್ ಮಾತನಾಡಿ, ಕಳ್ಳರನ್ನು ಹಿಡಿಯಲು ಪೋಲೀಸರೊಂದಿಗೆ ಜನತೆಯೂ ಸಹಕಾರ ನೀಡಬೇಕು. ದೂರದೂರುಗಳಿಗೆ ಮನೆಮಂದಿ ತೆರಳುವ ವೇಳೆ ಪೋಲೀಸ್ ಠಾಣೆಗೆ ಮುಂಚೆಯೇ ಮಾಹಿತಿ ನೀಡಬೇಕು, ಪ್ರತಿ ವಾರ್ಡ್‍ಗಳಲ್ಲಿ ಅಲ್ಲಿನ ವಾಸಿಗಳು ಒಗ್ಗೂಡಿ ತಮ್ಮ ತಮ್ಮ ವಾರ್ಡ್‍ನ ರಸ್ತೆಗಳಲ್ಲಿ ಸಿಸಿ ಕ್ಯಾಮೆರ ಅಳವಡಿಸಿಕೊಳ್ಳುವುದರ ಜೊತೆಗೆ ತಮ್ಮ ವಾರ್ಡ್‍ಗಳಲ್ಲಿ ಹೊಸಮುಖಗಳು ಕಂಡುಬಂದರೆ ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಪೋಲೀಸರಿಗೆ ತಿಳಿಸುವ ಮೂಲಕ ಸಹಕಾರ ನೀಡಿದಲ್ಲಿ ಕಳ್ಳರ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದರು.
ಕೇವಲ ಪುರಿ ಅಂಗಡಿಗೆ ಕನ್ನ ಹಾಕುವ ಕಳ್ಳರು ಇನ್ನು ದೊಡ್ಡದೊಡ್ಡ ಅಂಗಡಿಗಳನ್ನು ನುಗ್ಗದೆ ಬಿಡುತ್ತಾರೆಯೇ ಎಂಬ ಭಯ ನಾಗರೀಕರನ್ನು ಬೆಚ್ಚಿ ಬೀಳಿಸಿದ್ದು ಆದಷ್ಟು ಬೇಗ ಪೋಲೀಸರು ಕಳ್ಳರನ್ನು ಹಿಡಿದು ಪಟ್ಟಣದ ಜನತೆಯ ಆತಂಕ ದೂರಮಾಡಲಿ ಎಂಬುದು ನಾಗರೀಕರ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ