ತುರುವೇಕೆರೆ :

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಕ್ಕನ್ನು ಕಸಿಯುವ ಮೂಲಕ ರೈತರ ಬೆನ್ನೆಲುಬನ್ನೇ ಮುರಿಯುವ ಹುನ್ನಾರ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಮುನಿಯೂರು ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ರೈತ ಸಂಘದ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನನ್ನು ಎಲ್ಲಾ ಸರ್ಕಾರಗಳು ಬಹಳ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಸ್ವಾತಂತ್ರ್ಯ ಬಂದು 70 ವರ್ಷ ಗತಿಸಿದರೂ ಇಂದಿಗೂ ರೈತರಿಗೆ ಮೂಲಭೂತ ಸೌಲಭ್ಯಗಳು ಎಂಬುದು ಮರೀಚಿಕೆಯಾಗಿದೆ. ಆ ನಿಟ್ಟಿನಲ್ಲಿ ಇಂದಿನ ದಿನಗಳಲ್ಲಿ ರೈತ ಸಂಘಟನೆಗಳು ಅನಿವಾರ್ಯವಾಗಿದ್ದು ಎಲ್ಲಾ ಹಳ್ಳಿ ಗ್ರಾಮಗಳಲ್ಲಿ ರೈತಸಂಘಟನೆಗಳನ್ನು ಕಟ್ಟುವ ಮೂಲಕ ಅನ್ಯಾಯದ ವಿರುದ್ದ ಹೋರಾಟ ನಡೆಸಬೇಕಾಗಿದೆ ಎಂದರು.
ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಮಾತನಾಡಿ, ತಾಲ್ಲೂಕು ಕಛೇರಿ ಸೇರಿದಂತೆ ವಿವಿದ ಇಲಾಖೆಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸದೆ ಕಾಲ ತಳ್ಳುವ ಕೆಲ ಅಧಿಕಾರಿಗಳು ಲಂಚಕ್ಕೆ ಕೈಚಾಚುತ್ತಿರುವುದು ದುರ್ದೈವದ ಸಂಗತಿಯಾಗಿದ್ದು ತಾಲ್ಲೂಕು ರೈತರನ್ನು ದಿವಾಳಿ ಮಾಡುತ್ತಿರುವ ಸರ್ಕಾರಕ್ಕೆ ತಕ್ಕ ಬುದ್ದಿ ಕಲಿಸಬೇಕು. ಎಂದರು.
ರೈತ ಸಂಘದ ತಾ.ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ನಮ್ಮ ಸಂಘ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಸಂಘಟನೆ ಮಾಡಿ ಅನ್ಯಾಯದ ವಿರುದ್ದ ಹೋರಾಡುವ ಮೂಲಕ ಅಶಕ್ತರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಮ್ಮದಾಗಿದೆ ಎಂದರು.
ಈ ಸಂಧರ್ಬದಲ್ಲಿ ಗುಬ್ಬಿ ತಾ. ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ನಾಗರಾಜು, ಗಿರಿಯಪ್ಪ, ಜಯರಾಮಪ್ಪ, ಕಾಳೇಗೌಡ, ಜ್ಯೋತಿ ಸೇರಿದಂತೆ ಗ್ರಾಮದ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








