ತುರುವೇಕೆರೆ :
ಪಟ್ಟಣದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಜೆಸಿ ಕ್ರೀಡಾಂಗಣಕ್ಕೆ ಭಾನುವಾರ ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿದ ಶಾಸಕ ಮಸಾಲ ಜಯರಾಂ ಮುಂಜಾನೆ ಗೆಳೆಯರ ಬಳಗದ ಸದಸ್ಯರ ಜೊತೆ ಕ್ರೀಡಾಂಗಣದ ಅಭಿವೃದ್ದಿ ಬಗ್ಗೆ ಸಮಾಲೋಚನೆ ನಡೆಸಿದರು.
ಪಟ್ಟಣದಲ್ಲಿ ಇರುವ ಏಕೈಕ ಕ್ರೀಡಾಂಗಣ ಇದಾಗಿದ್ದು, ಪ್ರತಿದಿನ ಮುಂಜಾನೆ ಹಾಗೂ ಸಂಜೆ ನೂರಾರು ನಾಗರಿಕರು ವಾಯು ವಿಹಾರಕ್ಕೆ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಕ್ರಿಕೆಟ್, ಕಬಡ್ಡಿ, ಸೆಟಲ್‍ಕಾಕ್, ಕುದುರೆ ಸವಾರಿ, ಬೈಕ್ ಕಲಿಕೆ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ಮಕ್ಕಳಾದಿಯಾಗಿ ಯುವಕರುಗಳಿಂದ ಪ್ರತಿದಿನ ಆಟೋಟಗಳು ನಡೆಯುತ್ತಿರುತ್ತವೆ. ಆದರೆ 2019 ರಲ್ಲಿ ಸ್ಪೋಟ್ರ್ಸ್ ಆ್ಯಂಡ್ ಕಲ್ಚರಲ್ ಆಕ್ಟಿವಿಟೀಸ್ ವತಿಯಿಂದ ಕ್ರೀಡಾಂಗಣದಲ್ಲಿ 200 ಮೀಟರ್ ಟ್ರ್ಯಾಕ್ ಫಾರ್ಮೇಶನ್‍ನ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದರಿಂದ ನಾಗರಿಕರಿಗೆ ಅನುಕೂಲಕ್ಕಿಂತ ಅನನುಕೂಲವೆ ಹೆಚ್ಚಾಗಿತ್ತು. ಟ್ರ್ಯಾಕ್ ಸುತ್ತಲೂ ನಿರ್ಮಿಸಿರುವ ಚರಂಡಿ ನೀರು ಹೊರಹೋಗಲು ವ್ಯವಸ್ಥೆಯಿಲ್ಲದ್ದರಿಂದ ಟ್ರ್ಯಾಕ್ನ ಒಳ ಹಾಗೂ ಹೊರ ಭಾಗದಲ್ಲಿ ನೀರು ನಿಂತು ನಾಗರಿಕರಿಗೆ ಓಡಾಡಲು ತೊಂದರೆಯಾಗಿತ್ತು. ಜೊತೆಗೆ ಟ್ರ್ಯಾಕ್ ಫಾರ್ಮೇಶನ್ ಮಾಡಿದಂದಿನಿಂದ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳ ಆಚರಣೆಗಳಿಗೆ ತೊಂದರೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಂಜಾನೆ ಗೆಳೆಯರ ಬಳಗದ ಸದಸ್ಯರು ಅನೇಕ ಬಾರಿ ಸಂಬಂದಪಟ್ಟವರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.
ಮಳೆಗಾಲದಲ್ಲಿ ಕ್ರೀಡಾಂಗಣದ ತುಂಬಾ ನೀರು ನಿಲ್ಲುವುದರಿಂದ ಕ್ರೀಡಾಂಗಣದ ಸುತ್ತ ಫುಟ್ಪಾತ್ ನಿರ್ಮಿಸಿ ವಾಯುವಿಹಾರಿಗಳಿಗೆ ಅನುವು ಮಾಡಿಕೊಡಬೇಕೆಂದು ಶಾಸಕರಲ್ಲಿ ಮುಂಜಾನೆ ಗೆಳೆಯರ ಬಳಗದ ಸದಸ್ಯರುಗಳು ಹಾಗೂ ಕ್ರೀಡಾಪಟುಗಳು ವಿನಂತಿಸಿಕೊಂಡಿದ್ದರು.
ಇದಕ್ಕೆ ಸ್ಪಂದಿಸಿದ ಶಾಸಕರು ಮುಂಜಾನೆ ಕ್ರೀಡಾಂಗಣಕ್ಕೆ ಭೇಟಿಯಿತ್ತು ನಡಿಗೆದಾರರೊಂದಿಗೆ ಹೆಜ್ಜೆ ಹಾಕುತ್ತಾ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚಿಸಿ ಸಮಾಲೋಚನೆ ನಡೆಸಿದರು. ಪ್ರಸ್ತುತ ಕ್ರೀಡಾಂಗಣಕ್ಕೆ ವಾಕಿಂಗ್ ಟ್ರ್ಯಾಕ್, ಕುಡಿಯುವ ನೀರು, ಪಬ್ಲಿಕ್ ಜಿಮ್, ಶೌಚಾಲಯ ಹಾಗೂ ಬೆಳಕಿನ ವ್ಯವಸ್ಥೆಯ ಕುರಿತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 50 ಲಕ್ಷ ಮಂಜೂರಾಗಿದ್ದು, ಜರೂರಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬಹು ದೊಡ್ಡ ನೀಲಗಿರಿ ಮರಗಳು ಕ್ರೀಡಾಂಗಣದೊಳಗಡೆ ವಾಲಿದ್ದು ಬೀಳುವ ಸ್ಥಿತಿಯಲ್ಲಿರುವುದರಿಂದ ಕ್ರೀಡಾಂಗಣದಲ್ಲಿ ಓಡಾಡುವ ನಾಗರಿಕರಿಗೆ ತೊಂದರೆಯಾಗಬಹುದೆಂಬ ನಿಟ್ಟಿನಲ್ಲಿ ಅಂತಹ ಮರಗಳನ್ನು ತೆರವುಗೊಳಿಸಲು ಸಂಬಂಧಿಸಿದವರಿಗೆ ಆದೇಶಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ಕಾಮಗಾರಿ ಮುಗಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದರಲ್ಲದೆ, ವಾಯುವಿಹಾರಿಗಳು ಹಾಗೂ ಕ್ರೀಡಾಪಟುಗಳೊಂದಿಗೆ ಜೊತೆಯಲ್ಲಿಯೇ ಉಪಹಾರ ಸೇವಿಸಿದರು.
ಇಂಜಿನಿಯರ್ ರಾಮಚಂದ್ರ ಮಾತನಾಡಿ, ಶಾಸಕರ ಆದೇಶದಂತೆ ವಾಯುವಿಹಾರಿಗಳಿಗಾಗಿ ಕ್ರೀಡಾಂಗಣದ ಸುತ್ತ 10 ಅಡಿ ಇಂಟರ್ ಲಾಕಿಂಗ್‍ವೇವರ್ಸ್ ಹಾಗೂ ಸಿಸಿ ಡ್ರೈನೇಜ್ ಅಳವಡಿಸುವುದು, ಕ್ರೀಡಾಂಗಣದ ಪೂರ್ತಿ ಗ್ರಾವೆಲ್ ಕೇಸಿಂಗ್, ಶೌಚಾಲಯದ ವ್ಯವಸ್ಥೆ ಹಾಗೂ ಈ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಕ್ರೀಡಾಂಗಣದೊಳಗೆ ಕೊರೆದ ಬೋರ್‍ವೆಲ್‍ನಲ್ಲಿ ನೀರು ಬಾರದ್ದರಿಂದ ಪಟ್ಟಣ ಪಂಚಾಯಿತಿಯಿಂದ ಪೈಪ್ ಲೈನ್ ಮುಖಾಂತರ ನೀರಿನ ಸೌಲಭ್ಯ ಪಡೆಯಬಹುದಾಗಿದೆ. ಬೋರ್ ಕೊರೆಸಲು ಮೀಸಲಿಟ್ಟಿದ್ದ 5 ಲಕ್ಷ ಒಟ್ಟು 55 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ದಿಗೊಳಿಸಬಹುದಾಗಿದೆ ಎಂದರು.
ನಾಗರಿಕರ ಮನವಿಗೆ ಸ್ಪಂದಿಸಿ ಕ್ರೀಡಾಂಗಣ ನವೀಕರಣಕ್ಕೆ ಅನುವು ಮಾಡಿಕೊಟ್ಟ ಶಾಸಕ ಮಸಾಲ ಜಯರಾಮ್ ಅವರನ್ನು ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಅಂಜನ್‍ಕುಮಾರ್, ಸದಸ್ಯರಾದ ಚಿದಾನಂದ್, ರವಿ, ಮಾಜಿ ಅಧ್ಯಕ್ಷೆ ನವ್ಯಪ್ರಕಾಶ್, ಮಾಜಿ ಉಪಾಧ್ಯಕ್ಷ ಪರಶುರಾಮಯ್ಯ, ಗೆಳೆಯರ ಬಳಗದ ಅಧ್ಯಕ್ಷ ಸತೀಶ್, ಭಜರಂಗದಳದ ನವೀನ್ ಬಾಬು, ರೋ.ಅಧ್ಯಕ್ಷ ರಾಜಣ್ಣ, ಚಿತ್ರಕಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ್, ರಂಗಸ್ವಾಮಿ, ಜಗದೀಶ್, ರೇವಣ್ಣ, ಸತೀಶ್ ಸೇರಿದಂತೆ ಮುಂಜಾನೆ ಗೆಳೆಯರ ಬಳಗದ ಸದಸ್ಯರು, ವಿವಿಧ ಸಂಘದ ಸದಸ್ಯರುಗಳು ಕ್ರೀಡಾಪಟುಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
