ತುರುವೇಕೆರೆ :
ಕೊರೋನಾ ಸೋಂಕು ಹಿನ್ನಲೆಯಲ್ಲಿ ಸರ್ಕಾರ ವಿಧಿಸಿರುವ ಜನತಾ ಕಫ್ರ್ಯೂವಿನಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದ್ದು ತಾಲ್ಲೂಕಿನ ರೈತರಲ್ಲಿ ಆತಂಕದ ಛಾಯೆ ಮೂಡಿದಂತಿದೆ.
ತಾಲ್ಲೂಕಿನಲ್ಲಿ ಅಶ್ವಿನಿ, ಭರಣಿಮಳೆ, ಉತ್ತಮವಾಗಿ ಬಿದ್ದಿದ್ದರೂ ಅದಕೋ ರೈತರಲ್ಲಿ ಅಷ್ಟಾಗಿ ಕೃಷಿ ಬಗ್ಗೆ ಉತ್ಸುಕತೆ ಕಾಣುತ್ತಿಲ್ಲ. ಕೊರೋನಾ 2ನೇ ಅಲೆ ತಾಲ್ಲೂಕಿನಲ್ಲಿ ಹರಡುವ ಪ್ರಮಾಣ ಹೆಚ್ಚಿದೆಯಲ್ಲದೆ ಹಳ್ಳಿಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದೆ ಕೃಷಿ ಹಿನ್ನಡೆಗೆ ಕಾರಣವೆಂದರೂ ತಪ್ಪಾಗಲಾರದು. ಈಗಾಗಲೆ ತಾಲ್ಲೂಕಿನಾದ್ಯಂತ ಒಳ್ಳೆಯ ಮಳೆಯಾಗಿದೆ. ಸಕಾಲಕ್ಕೆ ಪೂರ್ವ ಮುಂಗಾರು ಬಿತ್ತನೆ ಮಾಡಲು ಇದು ಸಕಾಲ ವಾಗಿದ್ದರೂ ಸಹಾ ರೈತರು ಭೂಮಿ ಹದ ಮಾಡಿಕೊಳ್ಳುವಲ್ಲಿ ಮೀನಾ ಮೇಷ ಎಣಿಸುತ್ತಿರುವಂತಿದೆ.
ಕೃಷಿ ವಸ್ತುಗಳಿಗೆ ಕಾಲ ಅವಕಾಶ ನೀಡಿ:
ತಾಲ್ಲೂಕಿನಲ್ಲಿ ಬೆಳಿಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳಿಗೆ ಮಾತ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. 10 ರ ನಂತರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗುವುದರಿಂದ ಕೃಷಿ ಉಪಕರಣಗಳನ್ನು ಕೊಳ್ಳಲು ತಾಲ್ಲೂಕಿನ ಗಡಿಬಾಗದಿಂದ ಬರುವ ರೈತರಿಗೆ ತೊಂದರೆ ಯಾಗುತ್ತಿದೆ. ಕೃಷಿ ಸಲಕರಣೆಗಳು ರೈತನಿಗೆ ಒಂದು ರೀತಿಯ ವರ್ತುಲ (ಸರಪಳಿ)ಯಿದ್ದಂತೆ. ಒಂದನ್ನೊಂದು ಅವಲಂಬಿತ ವಾಗಿರುತ್ತವೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ರಸಗೊಬ್ಬರ, ಭಿತ್ತನೆ ಬೀಜ ಹಾಗೂ ಕೃಷಿ ಸಲಕರಣೆಗಳನ್ನು ತಾಲ್ಲೂಕಿನ ರೈತರು ಕೊಳ್ಳುವುದಾಗಲಿ ಅಥವಾ ಬೋರ್‍ವೆಲ್‍ನ ಮೋಟರು ಪಂಪ್, ಗೆಯ್ಮೆಗೆ ಟ್ರಾಕ್ಟರ್, ನೇಗಿಲು ಇತ್ಯಾದಿ ರಿಪೇರಿಗೆಂದು ತಂದವರು ಕೇವಲ 10 ಗಂಟೆಯೊಳಗೆ ಕೆಲಸ ಮುಗಿಸಿ ವಾಪಸ್ ಹೋಗಲು ಸಾದ್ಯಾ ವಾಗುವುದಿಲ್ಲ. ಪ್ರತಿದಿನ ಮೆಕ್ಯಾನಿಕ್‍ಗಳು ಇಲ್ಲ ಸಲ್ಲದ ಸಬೂಬು ಹೇಳುತ್ತಾ ಕಾಲ ತಳ್ಳುವುದರಿಂದ ಅಲೆದು ಅಲೆದು ಸುಸ್ತಾಗುತ್ತಾರೆ. ಇಂತಹ ಸಂದರ್ಭದಲ್ಲಿ ಲಾಕ್ ಡೌನ್ ನಿಂದ ಕೆಲಸ ಆಗಲಾರದೆಂದು ಹೆದರಿ ಹಿಂದೆ ಸರಿಯುವುದರಿಂದ ಕೃಷಿಗೆ ಹಿನ್ನಡೆಯಾಗಲಿದೆ ಎಂದರೂ ತಪ್ಪಾಗಲಾರದು.
ಉತ್ತಮ ಮಳೆ :
ಈಗಾಗಲೆ ತಾಲ್ಲೂಕಿನಾದ್ಯಂತ ಒಳ್ಳೆಯ ಮಳೆಯಾಗಿದೆ ಕೆಲವೆ ರೈತರು ಮಾತ್ರ ಭೂಮಿ ಹದ ಮಾಡಿಕೊಂಡಿದ್ದಾರೆ. ಸಕಾಲಕ್ಕೆ ಪೂರ್ವ ಮುಂಗಾರು ಭಿತ್ತನೆ ಮಾಡಲು ಹೆಸರು, ಉದ್ದು, ಎಳ್ಳು, ಮೇವಿನ ಬೀಜ, ಜೋಳ, ಅಲಸಂಡೆ, ಸಜ್ಜೆ, ತೋಗರಿ ಇತ್ಯಾದಿ, ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ಕೊಳ್ಳಲು ರೈತರು ತಾಲ್ಲೂಕಿನ ಮೂಲೆ ಮೂಲೆಯಿಂದ ಪಟ್ಟಣಕ್ಕೆ ಬರುತ್ತಾರೆ. ಕ್ಯೂ ನಲ್ಲಿ ನಿಂತು ಖರೀದಿಸುವ ಸಂದರ್ಭದಲ್ಲಿ 10 ಗಂಟೆ ಅವಧಿ ಮುಗಿಯುವುದರಿಂದ ಹೆಚ್ಚು ಜನರಿದ್ದ ಸಂದರ್ಭದಲ್ಲಿ ಸಲಕರಣೆ ಕೊಳ್ಳಲು ಸಾದ್ಯಾ ವಾಗದೆ ವಾಪಸ್ ಮರಳ ಬೇಕಾಗುತ್ತದೆ. ಸಮಯ ಮೀರಿತೆಂದರೆ ಪೊಲೀಸರ ಲಾಠಿ ರುಚಿ ನೋಡಬೇಕಾಗಬಹುದೆನೋ ಎಂಬ ಆತಂಕ ದಿಂದ ಹಿಂದೆ ಸರಿಯುವ ಸಂಭವವೆ ಹೆಚ್ಚಿದೆ. ಇನ್ನೂ ಲಾಕ್ ಡೌನ್ ನಿಂದ ಬಸ್ ಹಾಗೂ ವಾಹನ ಸಂಚಾರ ಇಲ್ಲದಿರುವುದರಿಂದ ರೈತರು ತಮ್ಮ ಊರುಗಳಿಂದ ಪಟ್ಟಣಕ್ಕೆ ಬರುವುದೆ 10 ಗಂಟೆ ಯಾಗುತ್ತದೆ. ಆಮೇಲೆ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಪೊಲೀಸರು ಕಟ್ಟು ನಿಟ್ಟಾಗಿ ಕ್ರಮ ಕೈಗೊಂಡಿರುವುದರಿಂದ ಅಷ್ಟು ದೂರದಿಂದ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬಂದ ರೈತರಿಗೆ ಗೊಬ್ಬರ, ಬೀಜ, ಸಿಗದಿದ್ದರೆ ನಿರಾಶರಾಗಿ ಹಿಂದಿರುಗಬೇಕಾಗುತ್ತದೆ. ಇದೂ ಸಹಾ ಕೃಷಿಗೆ ಹಿನ್ನಡೆಯೆಂದರೂ ತಪ್ಪಾಗಲಾರದು. ಇಷ್ಟೆಲ್ಲಾ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕ ರೈತ ಕೃಷಿ ಚಟುವಟಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೊಳ್ಳಲಾಗದೆ ಹಿಂದೆ ಸರಿಯುವ ಲಕ್ಷಣಗಳೆ ಜಾಸ್ತಿಯಿದೆ.
ಅಶ್ವಿನಿ, ಭರಣಿ ಮಳೆ ಚನ್ನಾಗಿ ಬೀಳುತ್ತಿದೆ. ಈ ಸಮಯಕ್ಕೆ ಪೂರ್ವ ಮುಂಗಾರು ಭಿತ್ತನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸರಿಯಾದ ಬೆಳೆ ಬರೋದಿಲ್ಲ ರೈತ ನಷ್ಟ ಹೊಂದುತ್ತಾನೆ. ಇಂತಹ ರೈತರ ಸಂಕಷ್ಟಗಳನ್ನು ಅರಿತು 10 ರ ಬದಲಿಗೆ 2 ಗಂಟೆಯ ವರೆವಿಗೆ ಕೃಷಿ ಚಟುವಟಿಕೆಗೆ ಸಂಬಂದಿಸಿದ ಅಂಗಡಿಗಳನ್ನು ತೆರೆಯುವ ಅವಕಾಶ ನೀಡಿ. ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಕೃಷಿಗೆ ಸಂಬಂಧಿಸಿದ ಅಂಗಡಿ ಮುಚ್ಚಲು ಮಧ್ಯಾಹ್ನ ದವರೆಗೆ ಅವಕಾಶ ನೀಡಿದ್ದಾರೆ. ಅದೇ ರೀತಿ ತುರುವೇಕೆರೆ ತಾಲ್ಲೂಕಿಗೂ ಅವಕಾಶ ನೀಡಲಿ. ಎಂಬುದು ರೈತರ ಆಶಯವಾಗಿದೆ.
ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಅಂಗಡಿಗಳು ಮುಚ್ಚುವ ವಿನಾಯಿತಿಗೆ ಸಂಬಂಧಿಸಿದಂತೆ ಹಲವು ರೈತ ಮುಖಂಡರುಗಳು ತಹಸಿಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದು, ತಾಲ್ಲೂಕಿನಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಎಲ್ಲರೂ ನಡೆದು ಕೊಳ್ಳಬೇಕಿದೆ. ಕೃಷಿ ಚಟುವಟಿಕೆಗಳಿಗೆ ಪೂರಕ ವಾಗಿರುವ ಅಂಗಡಿಗಳು ಮುಚ್ಚುವ ವಿನಾಯಿತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ತಹಸಿಲ್ದಾರ್ ಆರ್.ನಯೀಂ ಉನ್ನೀಸಾ ಕೃಷಿಗೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಕೊರೋನಾ ಮಹಾಮಾರಿಯ ಕ್ರೂರ ದೃಷ್ಟಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದ್ದು ಕೃಷಿ ಕ್ಷೇತ್ರಕ್ಕೆ ಈ ಬಾರಿ ಹಿನ್ನಡೆಯಾಗಲಿದೆ ಎಂದರೂ ತಪ್ಪಾಗಲಾರದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ