ತುರುವೇಕೆರೆ : ಕೂಲಿ-ಕಾರ್ಮಿಕರ ಬದುಕು ಪ್ರಪಾತಕ್ಕೆ!!

 ತುರುವೇಕೆರೆ :  

      ಕರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದು ಆರ್ಥಿಕ ಸಂಕಷ್ಷದಲ್ಲಿರುವವರು ಕೊಡುಗೈ ದಾನಿಗಳ ನಿರೀಕ್ಷೆಯಲ್ಲಿ ಜಾತಕ ಪಕ್ಷಿಗಳಂತೆ ಅವರ ಬರುವನ್ನೇ ಎದಿರುನೋಡುತ್ತಿರುವುದು ಅವರ ದುರ್ಧೈವವೇ ಸರಿ?.

      ದೇಶ ಸಹಜ ಪರಿಸ್ಥಿತಿಯಲ್ಲಿದ್ದಾಗಲೇ ಬಡಜನರು, ಕೂಲಿಕಾರ್ಮಿಕರ ಬದುಕು ಕ್ಲಿಷ್ಟಕರವಾಗಿದ್ದು ಇದೀಗ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವಂತಹ ಈ ಸಂಧರ್ಭದಲ್ಲಿ ಬಡವರ್ಗದವರ, ಅಶಕ್ತರ ಹಾಗೂ ಕೂಲಿಕಾರ್ಮಿಕರ ಬದುಕು ಪ್ರಪಾತಕ್ಕೆ ಸಿಲುಕಿ ಅತಂತ್ರವಾಗಿದೆ. ಇತ್ತ ದುಡಿಯಲು ಹೊರಬರುವ ಹಾಗಿಲ್ಲ. ಕುಟುಂಬ ನಿರ್ವಹಣೆಗೆ ಕೂಡಿಟ್ಟಿದ್ದ ದವಸ ಧಾನ್ಯಗಳೆಲ್ಲಾ ಖಾಲಿಯಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಎರಡು ಕಾಸು ಮಾಡಿಕೊಂಡು ಹೋಗೋಣವೆಂದು ದೂರದೂರುಗಳಿಂದ ಬಂದಂತಹವರ ಸ್ಥಿತಿಯಂತೂ ಹೇಳುವ ಹಾಗೆ ಇಲ್ಲಾ. ಲಾಕ್‍ಡೌನ್ ಇಂದು ಮುಗಿಯಬಹುದು, ನಾಳೆ ತೆರವುಗೊಳಿಸಬಹುದೆಂದು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದು ಅವರಲ್ಲಿ ಆತಂಕದ ಛಾಯೆ ಮೂಡಿದೆ. ಇಂತಹ ಸಂಧರ್ಬದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಮಂದಿ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕಿದೆ.

      ಹಿಂದಿನ ವರ್ಷ ಕೊರೋನಾ ಪ್ರಾರಂಭವಾಗಿ ಲಾಕ್ ಡೌನ್ ಘೋಷಣೆಯಾದ ಸಂದರ್ಬದಲ್ಲಿ ಹೆಚ್ಚು ಕೊರೋನಾ ಸೋಂಕು ತಾಲ್ಲೂಕಿನಲ್ಲಿಲ್ಲದಿದ್ದರೂ ಸಹಾ ಹಲವಾರು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರುಗಳು, ಜನಪ್ರತಿನಿಧಿಗಳು, ಸಮಾಜಸೇವಾಕರ್ತರು ನಾಮುಂದು ತಾಮುಂದು ಎಂಬಂತೆ ಊಟ, ಮಾಸ್ಕ್, ಸ್ಯಾನಿಟೈಸರ್, ಆಹಾರದ ಕಿಟ್ ಸೇರಿದಂತೆ ಅನೇಕ ಮೂಲಬೂತ ಸೌಕರ್ಯ ಒದಗಿಸಿಕೊಡುವಲ್ಲಿ ಮುಂದಾಗಿದ್ದವು. ರಾಮೇಗೌಡ ಅಭಿಮಾನಿ ಬಳಗ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ವೀರಶೈವ ಹಾಗು ಒಕ್ಕಲಿಗರ ಸಂಘಗಳು ಒಗ್ಗೂಡಿ ಪಟ್ಟಣದಾದ್ಯಂತ ಬಡಕೂಲಿ ಕಾರ್ಮಿಕರು, ನಿರ್ಗತಿಕರು ಸೇರಿದಂತೆ ಹಸಿವಿನಿಂದ ಬಳಲುವವರಿಗೆ ಊಟ ನೀಡಿ ಹಸಿವನ್ನು ತಣಿಸಿದ್ದವು.

      ಆದರೆ ಕೊರೋನಾ 2ನೇ ಅಲೆಯಿಂದ ಹೆಚ್ಚು ಕೊರೋನಾ ಸೋಂಕು ಹೆಚ್ಚಿದ್ದು ಜನರು ಇದೀಗ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿಯಿದ್ದು ಬಟ್ಟೆ ಅಂಗಡಿ, ಚಪ್ಪಲಿ, ಫ್ಯಾನ್ಸಿ ಅಂಗಡಿಗಳಂತ ಮಾಲೀಕರುಗಳ ಪಾಡೇನು. ಅವರ ಅಂಗಡಿಗಳಲ್ಲಿ ಕೆಲಸ ಮಾಡುವವರ ಕಷ್ಟ ಕೇಳುವವರಾರು. ಬಾಡಿಗೆ ವಾಹನ ಹಾಗೂ ಆಟೋ ನಂಬಿ ಜೀವನ ಸಾಗಿಸುವ ಮಾಲೀಕರು ಹಾಗೂ ಚಾಲಕರು ಅತಂತ್ರರಾಗಿ ಯಾರಾದರೂ ತಮ್ಮ ಆಸರೆಗೆ ಬರಬಹುದೇನೋ ಎಂದು ಎದುರು ನೋಡುವಂತಾಗಿದೆ.

      ಶಾಸಕ ಮಸಾಲ ಜಯರಾಮ್ ಕೊರೋನಾ ಸಂಕಷ್ಟದಿಂದ ಕ್ಷೇತ್ರದ ಜನತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ, ಆರೋಗ್ಯಾಧಿಕಾರಿಗಳೊಂದಿಗೆ ಶತಾಯ ಗತಾಯ ಶ್ರಮಿಸುತ್ತಿರುವುದಲ್ಲದೆ ಆಸ್ಪತ್ರೆಗೆ ಹೆಚ್ಚು ಬೇಡಿಕೆಯಿರುವ ಆಮ್ಲಜನಕ, ಇಂಜೆಕ್ಷನ್, ಮಾತ್ರೆಗಳು, ಸ್ಯಾನಿಟೈಸರ್, ಮಾಸ್ಕ್, ಬೆಡ್‍ಕವರ್ಸ್ ಹಾಗೂ ಬೆಂಗಳೂರಿಗೆ ಹೋಗಿ ಮಾತ್ರೆ ತರಲು ಆಗದಂತ ರೋಗಿಗಳಿಗೆ ತಾವೇ ಖುದ್ದು ಖರೀದಿಸಿ ತಂದು ಉಚಿತವಾಗಿ ವಿತರಿಸುವ ಮೂಲಕ ವೈಯಕ್ತಿಕವಾಗಿ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಶಾಸಕರೊಬ್ಬರಿಂದಲೇ ಆಗುವಂತಹ ಕೆಲಸವಲ್ಲ. ತಾಲ್ಲೂಕಿನಲ್ಲಿ ಹಾಲಿ ಎಂಎಲ್‍ಸಿ ಸೇರಿದಂತೆ ನಾಲ್ಕು ಮಂದಿ ಮಾಜಿ ಶಾಸಕರಿದ್ದಾರೆ. ರಾಜಕೀಯ ಭವಿಷ್ಯತ್ತಿನ ಆಕಾಂಕ್ಷಿಗಳಿದ್ದಾರೆ. ಇವರೆಲ್ಲಾ ಇಂತಹ ಸಂಧರ್ಬದಲ್ಲಿ ತಾಲ್ಲೂಕಿನ ಜನತೆಗೆ ಹೆಚ್ಚಿನ ಆಸರೆಯಾಗಬೇಕಾಗಿದೆ. ಈಗಾಗಲೇ ಲಯನ್ಸ್, ರೋಟರಿ, ಸುರಭಿಯಂತಹ ಸಂಘ ಸಂಸ್ಥೆಗಳು ಅಷ್ಟಿಷ್ಟು ಸೇವಾ ಕೈಕಂರ್ಯಗಳನ್ನು ಕೈಗೊಳ್ಳುತ್ತಿದ್ದುತ್ತಿದ್ದು ಮುಂದಿನ ದಿನಗಳಲ್ಲಿ ಖಾಸಗಿಯಾಗಿ ಕೋವಿಡ್ ಸೆಂಟರ್‍ಗಳನ್ನು ಪಟ್ಟಣದಲ್ಲಿ ಪ್ರಾರಂಭಿಸುವಂತ ಕೆಲಸಗಳನ್ನು ಮಾಡಬೇಕಿದೆ. ರೈತಸಂಘ, ಜಯಕರ್ನಾಟಕ, ರಕ್ಷಣಾ ವೇದಿಕೆ ಯಂತಹ ಅನೇಕ ಜನಪರ ಸಂಘಟನೆಗಳೂ ಸಹಾ ಇಂತಹ ಸಂಧರ್ಭದಲ್ಲಿ ತಮ್ಮ ಕೈಲಾದ ಸಹಾಯ ಮಾಡಲು ಮುಂದೆ ಬರಬೇಕಿದೆ.

      ಈಗಾಗಲೇ ಪಟ್ಟಣದ ಜೆ.ಬಾಯ್ಸ್ ತಂಡದ ಜಾಫರ್, ಅಯ್ಯಜ್ ಸೈಕ್, ವಿಶ್ವನಾಥ್, ಅರುಣ್ ಸಾಗರ್, ಹರ್ಷ, ಕಮಲೇಶ್, ಶಸಾಂಕ್, ಸಾಧಿಕ್, ವಿರೇಶ್, ಶಿವು, ಯಶು, ಹೃಥಿಕ್ ಸೇರಿದಂತೆ ಯುವಕರ ತಂಡ ಹಸಿವಿನಿಂದ ಬಳಲುವವರ ನೆರವಿಗೆ ಮುಂದೆ ಬಂದಿದ್ದು ಮೂರ್ನಾಲ್ಕು ದಿನಗಳಿಂದ ಕಾರ್ಯಪ್ರವೃತ್ತವಾಗಿದೆ. ಪಟ್ಟಣದಲ್ಲಿರುವ ಭಿಕ್ಷುಕರು, ಗುಡಾರದಲ್ಲಿ ವಾಸಿಸುವವರು, ರಸ್ತೆ ಬದಿ ವಾಸಿಸುವವರು ಹಾಗೂ ರಸ್ತೆಯಲ್ಲಿ ಸಾಗುವ ಲಾರಿ ಚಾಲಕರುಗಳಿಗೆ ಊಟದ ಪ್ಯಾಕೆಟ್, ಕುಡಿಯಲು ನೀರನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಿಸಿಲಿನಲ್ಲಿ ನಿಂತು ಕೆಲಸ ಮಾಡುವ ಪೋಲೀಸರಿಗೆ ಕುಡಿಯಲು ನೀರು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

       ಸೋಂಕು ನಿಯಂತ್ರಣ ಕೇವಲ ಸರ್ಕಾರದ ಕೆಲಸವಲ್ಲದೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು ನಾನು ನೀನು ಎನ್ನದೆ ಜಾತ್ಯಾತೀತವಾಗಿ ಎಲ್ಲರೂ ರಾಜಕೀಯ ಬದಿಗಿಟ್ಟು ಒಟ್ಟಾಗಿ ಕೈಜೋಡಿಸಿದಾಗ ಮಾತ್ರವೇ ಕೊರೋನ ನಿಯಂತ್ರಣದ ಜೊತೆಗೆ ತಾಲ್ಲೂಕಿನ ಜನತೆಗೆ ನೆಮ್ಮದಿ ಮೂಡಿಸಲು ಸಾದ್ಯವಾಗಲಿದೆ ಎಂದರೂ ತಪ್ಪಾಗಲಾರದು.

ಮಲ್ಲಿಕಾರ್ಜುನ ದುಂಡ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link