ಲಾಕ್‍ಡೌನ್ ಹಿನ್ನೆಲೆ ಹಳ್ಳಿಗಳಲ್ಲಿ ತರಕಾರಿಯೇ ಸಿಗುತ್ತಿಲ್ಲ..!

 ತುರುವೇಕೆರೆ : 

      ತಾಲ್ಲೂಕಿನಲ್ಲಿ ಕೋವಿಡ್-19 ಪ್ರಯುಕ್ತ ಸರ್ಕಾರ ಲಾಕ್‍ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತರಕಾರಿಗಳು ಸಿಗುತ್ತಿಲ್ಲ ಎಂಬ ಮಾತುಗಳು ಗ್ರಾಮೀಣ ಜನರಲ್ಲಿ ಹೆಚ್ಚು ಕೇಳಿಬರುತ್ತಿದೆ.

      ಸರ್ಕಾರದ ಮಾರ್ಗಸೂಚಿಯಂತೆ ತಾಲ್ಲೂಕು ಆಡಳಿತ ತಾಲ್ಲೂಕಿನಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದು ಬೆಳಿಗ್ಗೆ 6 ರಿಂದ 10 ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದೆ. ಅದರಂತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಬೈಕು, ಇತರೆ ವಾಹನಗಳನ್ನು ಹೊರತುಪಡಿಸಿ ಕಾಲ್ನಡಿಗೆಯಲ್ಲಿ ಬಂದು ವಸ್ತುಗಳನ್ನು ಕೊಳ್ಳುವಂತೆ ಆದೇಶಿಸಿರುವುದು ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ತೊಂದರೆಯಾಗಿದೆ. ಗ್ರಾಮೀಣ ಪ್ರದೇಶದಿಂದ ಕಾಲ್ನಡಿಗೆಯಲ್ಲಿ ಬಂದು 10 ಗಂಟೆಯ ಒಳಗೆಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳುವುದು ಕಷ್ಟಸಾಧ್ಯ. ಜೊತೆಗೆ ಬಸ್‍ಗಳ ಓಡಾಟವಿಲ್ಲ. ತಾಲ್ಲೂಕಿನ ಗಡಿಭಾಗದಿಂದ ಸುಮಾರು 25-30 ಕಿ.ಮೀ.ನಿಂದ ಪಟ್ಟಣಕ್ಕೆ ನಡೆದು ಬಂದು ತರಕಾರಿ ಕೊಂಡು ವಾಪಸ್ ಹೋಗಲು ಸಾಧ್ಯವಾಗದ ಮಾತು. ಕೇವಲ ಪಟ್ಟಣಗಳಲ್ಲಿ ಮಾತ್ರ ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳು ಗ್ರಾಮೀಣ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ. ಕಾರಣ 10 ಗಂಟೆಯ ವೇಳೆಗೆಲ್ಲ ವ್ಯಾಪಾರ ಮುಗಿಸಬೇಕಾದ್ದರಿಂದ ದೂರದ ಗ್ರಾಮಗಳಿಗೆ ತಳ್ಳೊ ಗಾಡಿಯಲ್ಲಿ ಹೊಗಿ ಮಾರಾಟ ಮಾಡುವ ವೇಳೆಗೆ ಸಮಯ ಮೀರುವುದರಿಂದ ತರಕಾರಿ ಮಾರಾಟ ಮಾಡುವವರು ಹಳ್ಳಿಗಳ ಕಡೆ ಸುಳಿಯುತ್ತಿಲ್ಲ. ಹಳ್ಳಿಗಳಲ್ಲಿ ಕೆಲ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಅಷ್ಟೋ ಇಷ್ಟೋ ತರಕಾರಿಗಳನ್ನು ಕೊಂಡು ದಿನ ದೂಡುವಂತಾಗಿದೆ. ತಮಗೆ ಬೇಕಾದ ತರಕಾರಿ ಖರೀದಿಸಲು ಅವಕಾಶವಿಲ್ಲದಂತಾಗಿದೆ. ಗ್ರಾಮೀಣ ಪ್ರದೇಶಗಳ ಜನತೆಗೆ ಅಗತ್ಯ ತರಕಾರಿ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಪಿಎಂಸಿ ಸದಸ್ಯ ಮಾಚೇನಹಳ್ಳಿ ಲೋಕೇಶ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

      ತರಕಾರಿ ಮಾರಲು ಹಳ್ಳಿಗಳಿಗೆ ಹೋದಲ್ಲಿ ಅಲ್ಲಿಯ ಜನ ಗ್ರಾಮಗಳಿಗೆ ಬರಬೇಡಿರೆಂದು ಗಲಾಟೆ ಮಾಡುತ್ತಾರೆ. ಜೊತೆಗೆ ಪೊಲೀಸರ ಭಯಕ್ಕೆ ಹೆದರಿ ಪಟ್ಟಣದಲ್ಲಿಯೇ ಮಾರಾಟ ಮಾಡುವುದಾಗಿ ತರಕಾರಿ ವ್ಯಾಪಾರಿ ಲಕ್ಷ್ಮಣ್ ಅವರು ತಮ್ಮ ನೋವನ್ನು ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಕೊರೋನಾ ಲಾಕ್‍ಡೌನ್‍ನಿಂದ ಗ್ರಾಮೀಣ ಜನತೆಗೆ ಹೆಚ್ಚು ತೊಂದರೆಯಾಗಿದ್ದು ಎಂದಿಗೆ ಈ ಪೀಡೆ ತೊಲಗಿತೊ ಎಂಬ ನಿರೀಕ್ಷೆಯಲ್ಲಿ ಜನ ಕಾಲ ದೂಡುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap