ತುರುವೇಕೆರೆ : ಹಳ್ಳಿಹಳ್ಳಿಗಳಲ್ಲೂ ಗ್ರಾಮ ಪಂಚಾಯ್ತಿ ಚುನಾವಣೆ ಸಡಗರ

 ತುರುವೇಕೆರೆ  :

      ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾದ ಬೆನ್ನಲೇ ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಚುನಾವಣೆಯ ಬಿರುಸು ಹೆಚ್ಚಾಗಿ ಹಳ್ಳಿ ರಾಜಕೀಯದ ಬಿಸಿ ಏರುತ್ತಿದೆ.

      ರಾಜ್ಯದಲ್ಲಿ ಡಿ.22 ಹಾಗೂ ಡಿ.27 ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ತಾಲೂಕಿನಲ್ಲಿ ಎರಡನೇ ಹಂತದ ಚುನಾವಣೆಯ ಮತದಾನ ಡಿ. 27 ರಂದು ನಡೆಯಲಿದ್ದು, ಡಿ.11 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ಡಿ.16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿ 17 ನಾಮಪತ್ರ ಪರಿಶೀಲನೆ. ಡಿ 19 ನಾಮಪತ್ರ ವಾಪಸ್ ಪಡೆಯಬಹುದಾಗಿದೆ. ಕಣದಲ್ಲಿ ಉಳಿದ ಅಭ್ಯರ್ಥಿಗಳು ಚುನಾವಣೆ ಎದುರಿಸಬಹುದಾಗಿದೆ.

      ಮತದಾರರ ಓಲೈಕೆಯಲ್ಲಿ ಅಭ್ಯರ್ಥಿಗಳು: 

     ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಈಗಾಗಲೇ ಮತದಾರರ ಓಲೈಕೆ ಮುಂದಾಗಿದ್ದು ಹಳ್ಳಿಗಳಲ್ಲಿ ವಿವಿಧ ರೀತಿಯ ಪ್ರಚಾರ ಕಾರ್ಯಕ್ರಮ ಶುರುಮಾಡಿದ್ದಾರೆ. ಗ್ರಾಮದ ಮುಖಂಡರು ಹಾಗೂ ಯುವಕರನ್ನು ಹೋಟಲ್, ಬಾರ್, ಡಾಬಾಗಳಲ್ಲಿ ಸೇರಿಸಿ ತಮ್ಮ ಪರವಾಗಿ ಪ್ರಚಾರ ಮಾಡುವಂತೆ ಓಲೈಕೆ ಮಾಡುತ್ತಿದ್ದಾರೆ. ಹಲವು ತಂಡಗಳನ್ನು ರಚಿಸಿ ಪ್ರವಾಸ ಕಳಿಸುವುದು, ಸ್ತ್ರೀ ಸಂಘಗಳಿಗೆ ನೆರವು ನೀಡುವುದು ಸೇರಿದಂತೆ ಅವರ ಓಲೈಕೆಗೆ ಕಸರತ್ತು ನಡೆದಿದೆ. ಕೆಲ ಗ್ರಾಮಗಳಲ್ಲಿ ಅವಿರೋಧ ಆಯ್ಕೆ ಹಿನ್ನೆಲೆಯಲ್ಲ್ಲಿ ಹರಾಜು ನಡೆದಿವೆಯೇ ಎಂಬ ಅನುಮಾನ ಕೇಳಿಬರುತ್ತಿವೆ.

      ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ತಾಲೂಕಿನಲ್ಲಿ ತಮ್ಮ ಹೆಚ್ಚು ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಬೇಕೆಂದು ಸೂಕ್ತ ಅಭ್ಯರ್ಥಿಗಳನ್ನು ಸೂಚಿಸುವ ಜೊತೆಗೆ, ಹಲವು ರೀತಿಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ನೆರವು ನೀಡಿ ಚುನಾವಣೆಯಲ್ಲಿ ಕಾರ್ಯತಂತ್ರವನ್ನು ಎಣಿಯುತ್ತಿದ್ದಾರೆ.

   ಮತದಾರರ ಸಂಖ್ಯೆ:

     ತಾಲೂಕಿನಲ್ಲಿ 27 ಗ್ರಾಮ ಪಂಚಾಯ್ತಿಗಳಿಂದ 401 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪುರುಷರು 69024, ಮಹಿಳೆಯರು 66887 ಸೇರಿ ಒಟ್ಟು 135915 ಮತದಾರಿದ್ದಾರೆ. ಬಾಣಸಂದ್ರ ಗ್ರಾಮ ಪಂಚಾಯ್ತಿ ಅತೀ ಹೆಚ್ಚು 18 ಸದಸ್ಯರನ್ನು ಹೊಂದಿದ್ದರೆ, ಅಮ್ಮಸಂದ್ರ ರೂರಲ್ ಅತೀ ಕಡಿಮೆ 11 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ಜೆಡಿಎಸ್ ಬೆಂಬಲಿಗರು ಹೆಚ್ಚು ಸ್ಥಾನ ಗೆದ್ದಿದ್ದರು, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ನಂತರದ ಸ್ಥಾನ ಪಡೆದಿದ್ದರು.

     ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಎದುರಿಸಲು ಈಗಾಗಲೇ ಬಿಜೆಪಿ ಪಕ್ಷದ ವತಿಯಿಂದ ತಿಪಟೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ತಾಲೂಕಿನಲ್ಲಿ ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು ಪಕ್ಷದ ಬೆಂಬಲಿಗರ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ. ಎಲ್ಲ ಪಂಚಾಯ್ತಿ ಕಾರ್ಯಕರ್ತರನ್ನು ಸಭೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚು ಗ್ರಾಮ ಪಂಚಾಯ್ತಿಗಳ ಅಧಿಕಾರ ಹಿಡಿಯಬೇಕೆಂಬ ನಿಟ್ಟಿನಲ್ಲಿ ಶಾಸಕ ಮಸಾಲ ಜಯರಾಂ ನಿರೀಕ್ಷೆಯಲ್ಲಿದ್ದಾರೆ.

      ರಾಜ್ಯ ಹಾಗೂ ಜಿಲ್ಲಾ ಕಾಂಗ್ರೇಸ್ ಸಮಿತಿ ಮಾರ್ಗದರ್ಶನದಲ್ಲಿ ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಲು ಸಿದ್ದರಾಗಿದ್ದು ಈಗಾಗಲೇ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಯ ರೂಪರೇಷೆಗಳ ಬಗ್ಗೆ ಚರ್ಚೆ ಮಾಡಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಹಿರಿಯ ಮುಖಂಡ ಚೌದ್ರಿ ಟಿ. ರಂಗಪ್ಪ ಹಾಗೂ ಮುಖಂಡರುಗಳು ಉತ್ಸುಕರಾಗಿದ್ದಾರೆ.

      ಕಳೆದ ಬಾರಿಯ ಪಂಚಾಯ್ತಿ ಚುನಾವಣೆಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಜೆಡಿಎಸ್ ಬೆಂಬಲಿಗರು ಆಯ್ಕೆಯಾಗಿ 27 ಪಂಚಾಯ್ತಿಗಳ ಪೈಕಿ 23 ಪಂಚಾಯ್ತಿ ಅಧಿಕಾರ ಪಡೆದಿದ್ದರು. ಈ ಬಾರಿಯೂ ತಾಲೂಕಿನಲ್ಲಿ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಳ್ಳಲು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮತದಾನದ ಸಿದ್ದತೆ:

     ತಾಲ್ಲೂಕಿನ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27ರಂದು ನಡೆಯಲಿದ್ದು ತಾಲ್ಲೂಕಿನ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು 178 ಮೂಲ ಮತಗಟ್ಟೆಗಳು ಹಾಗು ಹೆಚ್ಚುವರಿಯಾಗಿ 22 ಸೇರಿ ಒಟ್ಟು 200 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸ ಬಯಸುವವರು ಡಿ.11ರಿಂದ 16ರವರೆಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ತೆರೆದಿರುವ ಚುನಾವಣಾ ಕಚೇರಿಯಲ್ಲೇ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು.ನಾಮ ಪತ್ರ ಸಲ್ಲಿಸುವ ಅಭ್ಯರ್ಥಿ ಕೋವಿಡ್ ಮಾರ್ಗಸೂಚಿಯಂತೆ ತನ್ನ ಜೊತೆ ಒಬ್ಬ ಸೂಚಕ ಮಾತ್ರ ಚುನಾವಣಾಧಿಕಾರಿಗಳ ಕಚೇರಿಗೆ ಪ್ರವೇಶಿಸತಕ್ಕದ್ದು. ಹಾಗು ಕೋವಿಡ್ ಸೋಂಕಿತ ಅಭ್ಯರ್ಥಿ ತಾನು ನಾಮಪತ್ರ ಸಲ್ಲಿಸಲು ಇಚ್ಛಿಸಿದಲ್ಲಿ ಸೂಚಕನ ಮೂಲಕ ನಾಮಪತ್ರ ಸಲ್ಲಿಸಬಹುದು. ಡಿ.17ರಂದು ಆಯಾ ಗ್ರಾಮ ಪಂಚಾಯಿತಿ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ನಡೆಸಲಾಗುವುದು.

     ನಾಮ ಪತ್ರ ಹಿಂಪಡೆಯಲು ಡಿ.19 ಕೊನೆಯ ದಿನವಾಗಿದ್ದು ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ 5 ಜನ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರದೊಂದಿಗೆ ಮನೆಮನೆ ಭೇಟಿ ನೀಡಿ ಪ್ರಚಾರ ನಡೆಸಬಹುದಾಗಿದೆ. ಚುನಾವಣೆಗೆ ಸ್ಪರ್ಧಿಸಲು ಬೇಕಾದ ಬಿಸಿಎ ಮತ್ತು ಬಿಸಿಬಿ ದೃಢೀಕರಣ ಪತ್ರವನ್ನು ತಾಲ್ಲೂಕು ಕಚೇರಿಯಿಂದ ಪಡೆಯಬಹುದಾಗಿದ್ದು ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08139287325 ಸಂಪರ್ಕಿಸಲು ತಹಶೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದ್ದಾರೆ.

      ಛಾಪಾ ಕಾಗದಕ್ಕಾಗಿ ನೂಕುನುಗ್ಗಲು:

      ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸ್ವಯಂಘೋಷಣಾ ಪತ್ರಕ್ಕಾಗಿ ಇ ಸ್ಟಾಂಪ್ ಛಾಪಾಕಾಗದ ಪಡೆಯಲು ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಹಾಗೂ ಸೌಹಾರ್ದ ಪತ್ತಿನ ಬ್ಯಾಂಕ್ ಎದುರು ನೂರಾರು ಜನರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಸ್ವಯಂಘೋಷಣಾ ಪತ್ರವನ್ನು ಇ ಸ್ಟಾಂಪ್‍ನಲ್ಲಿ ನೀಡಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡಾ ತಲಾ ಎರಡು ಇ ಸ್ಟಾಂಪ್ ಛಾಪಾ ಕಾಗದಗಳನ್ನು ಕೊಳ್ಳಬೇಕಾಗಿದೆ. ಆದ್ದರಿಂದ ಕಳೆದ ಮೂರು ದಿನಗಳಿಂದ ಅಭ್ಯರ್ಥಿಗಳು ಹಾಗು ಅವರ ಬೆಂಬಲಿಗರು ಇಲ್ಲಿನ ಪಿಎಲ್‍ಡಿ ಬ್ಯಾಂಕ್ ಹಾಗು ಕಾಲಭೈರವ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಈ ಸ್ಟಾಂಪ್‍ಗಾಗಿ ಮುಂಜಾನೆ 3 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಪಡೆಯುವಂತಾಗಿದೆ. ಇದೇ ರೀತಿ, ತಾಲ್ಲೂಕು ಕಚೇರಿ ಪಕ್ಕದ ಕಂಪ್ಯೂಟರ್ ಸೆಂಟರ್, ಟೈಪಿಂಗ್ ಹಾಗು ಜೆರಾಕ್ಸ್ ಅಂಗಡಿಗಳ ಮುಂದೆ ಅಭ್ಯರ್ಥಿಗಳು ಹಾಗು ಅವರ ಬೆಂಬಲಿಗರು ನಾಮ ಪತ್ರ ಸಲ್ಲಿಕೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಮಾಡಿಸಲು ದುಂಬಾಲು ಬೀಳುತ್ತಿದ್ದಾರೆ ಹಾಗು ಅಫಿಡೆವಿಟ್ ಮಾಡಿಸಲು ನೋಟರಿ ವಕೀಲರ ಕಛೇರಿಗೆ ಎಡತಾಕುಂತಾಗಿದೆ.

       ಸರ್ವರ್ ಪ್ರಾಬ್ಲಂ: ಒಬ್ಬರಿಗೆ ಎರಡು ಇ ಸ್ಟಾಂಪ್ ಛಾಪಕಾಗದ ಬೇಕು ಎಂದು ತಹಶೀಲ್ದಾರ್ ಚುನಾವಣಾ ನೋಟಿಸ್‍ನಲ್ಲಿ ತಿಳಿಸಿದ್ದು ಅದರಂತೆ ಛಾಪಾ ಕಾಗದ ಪಡೆಯಲು ಬೆಳಗಿನಿಂದ ಬಂದು ನಿಂತಿದ್ದೇನೆ. ಇ ಸ್ಟಾಂಪ್ ಕೊಡುವವರು ಒಂದು ಸಲ ಟೋಕನ್ ಕೊಡುತ್ತೇವೆ ಎನ್ನುತ್ತಾರೆ. ಮತ್ತೊಂದು ಸಲ ಕ್ಯೂನಲ್ಲಿ ನಿಂತು ಅರ್ಜಿ ತುಂಬಿ ತನ್ನಿ ಅಂತಾರೆ. ಇನ್ನೇನು ಇ ಸ್ಟಾಂಪ್ ಸಿಗ್ತು ಅನ್ನೋವಷ್ಟರಲ್ಲಿ ಸರ್ವರ್ ನಿಧಾನವಾಗಿದೆ ಆಮೇಲೆ ಬನ್ನಿ ಅಂತಾರೆ. ತುರುವೇಕೆರೆಯಲ್ಲಿ ಕೇವಲ ಎರಡೇ ಕಡೆ ಮಾತ್ರ ಇ ಸ್ಟಾಂಪ್ ಸಿಗಲಿದೆ ಇದೇ ರೀತಿ ಆದರೇ ನಾಮಪತ್ರ ಸಲ್ಲಿಸುವುದು ಯಾವಾಗ ಎಂಬ ಪ್ರಶ್ನೆ ಅಭ್ಯರ್ಥಿಗಳನ್ನು ಕಾಡುತ್ತಿದೆ.

     ಕೊರೋನಾದಿಂದ ವ್ಯಾಪಾರವಿಲ್ಲದೆ ನೊಂದಿದ್ದ ಅದೆಷ್ಟೋ ವ್ಯಾಪಾರಿಗಳಿಗೀಗ ಬಂಪರ್ ಬಂದಂತಾಗಿದ್ದು ಅಭ್ಯರ್ಥಿಗಳು ಗೆಲ್ಲಲಿ ಬಿಡಲಿ ನಮಗೀಗ ಕೈತುಂಬ ಕೆಲಸ ಸಿಕ್ಕಿದೆಯೆಂಬ ಹುರುಪಿನಿಂದ ಕೆಲಸ ಮಾಡಿಕೊಡಲು ಉತ್ಸುಕರಾಗಿರುವುದಂತು ಸತ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link