ತುರುವೇಕೆರೆ :
ಜೆಡಿಎಸ್ ಪಕ್ಷಕ್ಕೆ ಬರುವವರಿಗೂ ಹೋಗುವವರಿಗೂ ಜೆಡಿಎಸ್ ಪಕ್ಷದ ಬಾಗಿಲು ಸದಾ ತೆರೆದಿದೆ. ನನ್ನ ಕಾರ್ಯಕರ್ತರು ಪಕ್ಷ ಬೆಳೆಸಿದ್ದಾರೆ. ನಾನು ಪಕ್ಷಕ್ಕೆ ಬರುವ ಮುಂಚೆಯೆ ಕಾರ್ಯಕರ್ತರು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಪಕ್ಷ ಉಳಿಸಿರುವುದು ಕಾರ್ಯಕರ್ತರು, ಮುಖಂಡರಲ್ಲ. ಜೆಡಿಎಸ್‍ನಿಂದ ಹೋಗುವರು ಹೋಗಬಹುದು ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಕರ್ನಾಟಕ ರಾಜ್ಯ ಮುಖ್ಯೋಪಾಧ್ಯಾಯ ಹಾಗೂ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಎನ್.ಚಂದ್ರೇಗೌಡ ಅವರ ನೂತನ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಶುಕ್ರವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು.
ಜೆಡಿಎಸ್ ಪಕ್ಷಕ್ಕೆ ಯಾರೂ ಸಹ ಶಾಕ್ ಕೊಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಇನ್ನೂ ಬದುಕಿದೆ. ಕಾರ್ಯಕರ್ತರು ಇರುವವರೆವಿಗೂ ಜೆಡಿಎಸ್ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿ ತಿಳಿಸಿದರು.
ಜೆಡಿಎಸ್ ಪಕ್ಷ ಉಳಿಸಿ ಬೆಳೆಸಿರುವುದು ಸಾವಿರಾರು ಕಾರ್ಯಕರ್ತರು, ಪಕ್ಷದಲ್ಲಿ ಅಧಿಕಾರ ಅನುಭವಿಸಿ ಜೆಡಿಎಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುವಂತಹ ವ್ಯಕ್ತಿಗಳಿಗೆ ಕಾರ್ಯಕರ್ತರು ಪ್ರೋತ್ಸಾಹ ನೀಡಬೇಡಿ. ಪಕ್ಷದಿಂದ ಶಾಸಕ, ಎಂಎಲ್‍ಸಿಗಳಾಗಿ ಬೇರೆ ಪಕ್ಷಗಳ ಕದ ತಟ್ಟುತ್ತಿರುವ, ಪಕ್ಷ ನಿರ್ನಾಮ ಮಾಡುವಂತಹ ವ್ಯಕ್ತಿಗಳನ್ನು ತಿರಸ್ಕಾರ ಮಾಡುವಂತೆ ಕಾರ್ಯಕರ್ತರು ತೀರ್ಮಾನ ಮಾಡಿ ಎಂದು ಕರೆ ನೀಡಿದರು.
ದೇವೇಗೌಡರ ಬಗ್ಗೆ ನೀರಿನ ವಿಚಾರದಲ್ಲಿ ಅಪಪ್ರಚಾರ ಮಾಡಿದ್ದರು. ಈಗ ಏನು ನಡೆಯುತ್ತಿದೆ ಎಂದು ಎಲ್ಲವನ್ನು ಗಮನಿಸುತ್ತಿದ್ದೇನೆ. ದೇವೇಗೌಡರು ಇಲ್ಲದಿದ್ದರೆ ಕಾವೇರಿ ಉಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು. ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಅಪಾರ ಜೆಡಿಎಸ್ ಕಾರ್ಯಕರ್ತರು ಪಠಾಕಿ ಸಿಡಿಸಿ ಜೈಕಾರ ಹಾಕಿ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡರು. ಶಾಲು, ಹಾರ ಹಾಕಿ ಸನ್ಮಾನಿಸಿದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮುಖಂಡರು, ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ