ತುರುವೇಕೆರೆ :
ಪಟ್ಟಣದಲ್ಲಿ ನಿರ್ಮಾಣವಾಗಿರುವ ಒಳ ಚರಂಡಿ ವ್ಯವಸ್ಥೆ ನಿರುಪಯುಕ್ತವಾಗಿದ್ದು ಅತೀ ಶ್ರೀಘ್ರದಲ್ಲಿಯೇ ಹೊಸ ಒಳ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಬುಧವಾರ ಅಧ್ಯಕ್ಷ ಅಂಜನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಒಳ ಚರಂಡಿ ಕಾಮಗಾರಿ ಮುಕ್ತಾಯಗೊಂಡು 13 ವರ್ಷ ಕಳೆದರೂ ಪಟ್ಟಣ ಪಂಚಾಯಿತಿ ಸುಪರ್ದಿಗೆ ನೀಡದ ಗುತ್ತಿಗೆದಾರ ವಿರುದ್ದ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು. ಕೊಟ್ಯಾಂತರ ರೂ. ಸಾರ್ವಜನಿಕರ ಹಣ ವ್ಯರ್ಥವಾಗಿದೆ. ಪಟ್ಟಣ ಬೆಳೆದಂತೆ ಒಳ ಚರಂಡಿ ವ್ಯವಸ್ಥೆ ಅವಶ್ಯಕ ಅದ್ದರಿಂದ ಮತ್ತೆ ಒಳ ಚರಂಡಿ ಕಾಮಗಾರಿ ಮಾಡಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ್ ಮಹೇಶ್ ಶಾಸಕರ ಮಾತಿಗೆ ದ್ವನಿಗೂಡಿಸಿ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿಕೊಡುತ್ತೇವೆ ಎಂದರು.
2020-21ನೇ ಸಾಲಿನ ಸಂತೆ ಶುಲ್ಕ ಸ್ಥಿರೀಕರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯ ಎನ್.ಆರ್.ಸುರೇಶ್ ಮಾತನಾಡಿ, ಈ ಹಿಂದೆ ಸುಂಕ ವಸೂಲಿ ಗುತ್ತಿಗೆ ಪಡೆದಿದ್ದ ಇಬ್ಬರು 4 ಲಕ್ಷ ಹಣ ಪಟ್ಟಣ ಪಂಚಾಯಿತಿಗೆ ನೀಡಬೇಕಿದೆ, ಇವರಿಂದ ಹಣ ವಸೂಲಿ ಮಾಡಲು ಯಾವ ಕ್ರಮ ಕೈಗೊಂಡಿದ್ದಿರಾ ಅವರಿಂದ ಯಾವ ಭದ್ರತೆ ಮಾಡಿಕೊಂಡಿದ್ದಿರಾ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ, ಹಣ ವಸೂಲಿ ಮಾಡಲು ಈಗಾಗಲೇ ನೋಟೀಸ್ ನೀಡಿದ್ದು ಖುದ್ದು ಮನೆಗೆ ಹೋಗಿ ಮಾತನಾಡಿ ಬಂದಿದ್ದು ಹಣ ಕಟ್ಟುವ ಭರವಸೆ ನೀಡಿದ್ದಾರೆ ಎಂದರು.
ಸದಸ್ಯ ನದಿಂ ಮಾತನಾಡಿ, ಒಂದು ಎಲ್‍ಓ.ಸಿ ಕೊಡಿ ಎಂದರೆ 500 ರೂ. ಕಟ್ಟಿ ರಸೀದಿ ತನ್ನಿ ಎಂದು ಹೇಳುವ ನೀವು ಲಕ್ಷಾಂತರ ರೂ.ಗಳ ವ್ಯವಹಾರ ಮಾಡಲು ಯಾವ ಭದ್ರತೆ ಮಾಡದೇ ಪಟ್ಟಣ ಪಂಚಾಯಿತಿಗೆ ಮೋಸವಾಗುತ್ತಿದೆ ಎಂದರು. ಕಾನೂನು ಕ್ರಮ ಕೈಗೊಂಡು ಹಣವನ್ನು ವಸೂಲಿ ಮಾಡಿ ಎಂದು ಅಧ್ಯಕ್ಷರು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಕೋಳಿ ಕಸದ ಹಣ ಎಲ್ಲಿ?: ಪಟ್ಟಣದಲ್ಲಿ ಸುಮಾರು 20ಕ್ಕೂ ಹೆಚ್ಚು ಕೋಳಿ ಅಂಗಡಿಗಳಿದ್ದು ಕೋಳಿಯ ತ್ಯಾಜ್ಯ ವಿಲೇವಾರಿಗೇ ಪಟ್ಟಣ ಪಂಚಾಯಿತಿ ವಾಹನ ತೆರಳುತ್ತಿದ್ದು ಪ್ರತಿ ಕೋಳಿ ಅಂಗಡಿಯಿಂದ ತಿಂಗಳಿಗೆ ಇಷ್ಟು ಹಣ ನೀಡಬೇಕು ಎಂದು ಅನಧಿಕೃತವಾಗಿ ನಿಗಧಿ ಮಾಡಿದ್ದಾರಂತೆ. ಪಟ್ಟಣ ಪಂಚಾಯ್ತಿಗೆ ತಿಂಗಳಿಗೆ ಸುಮಾರು 30ರಿಂದ 40 ಸಾವಿರ ರೂಗಳು ನಷ್ಟವಾಗುತ್ತಿದೆ ಕಳೆದ 2 ವರ್ಷಗಳಿಂದ ಲಕ್ಷಾಂತರ ರೂಗಳು ಆದಾಯ ಖೋತಾವಾಗಿದೆ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮುಖ್ಯಾಧಿಕಾರಿ ಹೇಳಿದರು.
ಸಭೆಯಲ್ಲಿ ಚಿದಾನಂದ, ರವಿ, ಆಶಾರಾಣಿ, ಮಧು, ಟಿ.ಕೆ.ಪ್ರಭಾಕರ್, ಸೌಭಾಗ್ಯ, ಶೀಲಾ, ಸ್ವಪ್ನ, ಮೇಘನಾ, ಜಯಮ್ಮ, ಇಂಜಿನಿಯರ್ ಸತ್ಯನಾರಾಯಣ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ