ತುರುವೇಕೆರೆ :
ಗ್ರಾಮ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿರುವಂತೆ ಅಭ್ಯರ್ಥಿಗಳಲ್ಲಿ ತಳಮಳ ಹೆಚ್ಚಿದ್ದು ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಡಿ. 27ರಂದು ಚುನಾವಣೆ ನಡೆಯುಲಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಗೆಲವು ಸಾಧಿಸಬೇಕೆಂಬ ಹಠಕ್ಕೆ ಬಿದ್ದು ಮತದಾರರ ಓಲೈಕೆ ಮಾಡಿಕೊಳ್ಳಲು ನಾನಾ ಕಸರತ್ತುಗಳನ್ನು ಆರಂಭಿಸಿದ್ದಾರೆ. ಅಭ್ಯರ್ಥಿ ಕುಟುಂಬದವರು ಹಾಗೂ ಸಂಬಂಧಿಕರು ಪರಿಚಯಸ್ಥ ಮತದಾರರ ಮನೆಗೆ ಹಲವು ಸಲ ಎಡತಾಗುತ್ತಿದ್ದು, ಮಹಿಳೆಯರು ಹಾಗೂ ಯುವಕರನ್ನು ಟಾರ್ಗೇಟ್ ಮಾಡಿಕೊಂಡಿರುವುದು ಕಂಡು ಬಂದಿದೆ.
ಯುವಕರನ್ನು ಸಳೆಯಲು ಹೋಟಲ್, ಬಾರ್, ಡಾಬಾಗಳಲ್ಲಿ ಊಟದ ವ್ಯವಸ್ಥೆಗಳು ನಡೆಯುತ್ತಿರುವುದು ಗೊತ್ತಾಗಿದೆ. ಮಹಿಳೆಯರಿಗೆ ಸೀರೆ, ಬೆಳ್ಳಿ ಸಾಮಾನುಗಳು ಸೇರಿದಂತೆ ವಿಶೇಷ ರೀತಿಯ ವಸ್ತುಗಳನ್ನು ನೀಡುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕಗೊಳ್ಳುತ್ತಿವೆ.
ಚಿಕನ್‍ಗೆ ಡಿಮ್ಯಾಂಡ್:
ಚುನಾವಣೆ ಘೋಷಣೆಯಾದಂದಿನಿಂದ ಪಟ್ಟಣದಲ್ಲಿ ಸಾರಾಯಿ ಹಾಗೂ ಮಾಂಸದಂಗಡಿಗಳಲ್ಲಿ ಮಾರಾಟ ಬಹಳ ಭರ್ಜರಿಯಾಗಿ ನಡೆಯುತ್ತಿದೆ. ಅಭ್ಯರ್ಥಿಗಳು ಈಗಾಗಲೇ ಮಾಂಸಹಾರಿಗಳಿಗೆ ದಿನಕ್ಕೆ ಒಬ್ಬರಂತೆ ಕೋಳಿ, ಇಲ್ಲವೇ ರೆಡಿ ಚಿಕನ್ ಪ್ಯಾಕ್ ಮಾಡಿ ಅದರಲ್ಲಿ ಒಂದು ಮದ್ಯದ ಬಾಟಲ್ ಇಟ್ಟು ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೆಲವು ಅಭ್ಯರ್ಥಿಗಳು ರೆಡಿ ಬಿರಿಯಾನಿ ಪ್ಯಾಕ್ ಮಾಡಿ ಮತದಾರರ ಮನೆಗಳಿಗೆ ನೀಡುತ್ತಿದ್ದರೆ ಮತ್ತೆ ಕೆಲವು ಅಭ್ಯರ್ಥಿಗಳು ಪಟ್ಟಣದ ಸಮೀಪದ ಊರುಗಳಲ್ಲಿ ಟೋಕನ್ ನೀಡುವ ಮುಖಾಂತರ ಮತದಾರರಿಗೆ ಯುವಕರನ್ನು ಓಲೈಸುತ್ತಿದ್ದಾರೆ. ಟೋಕನ್ ಪಡೆದವರು ಬಾರ್, ಮಟನ್ ಹೋಟಲ್‍ಗಳಲ್ಲಿ ಊಟ ಮಾಡಬಹುದಾಗಿದೆ. ಸಸ್ಯಹಾರಿಗಳಿಗೂ ಸಹ ಹಣ್ಣು, ಹೋಳಿಗೆ ಊಟ ಮಾಡಿಕೊಳ್ಳಲು ಬೆಲ್ಲ, ಅಡುಗೆ ಎಣ್ಣೆ, ಬೇಳೆ, ಮೈದ ಸೇರಿದಂತೆ ಕಿಟ್‍ಗಳನ್ನು ತಯಾರಿಸಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣ ನೀಡುವುದೂ ಗೊತ್ತಾಗಿದೆ. ಇಷ್ಟೆಲ್ಲಾ ಮಧ್ಯೆ ಚುನಾವಣಾ ಹಿಂದಿನ ದಿನ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಹೆಚ್ಚು ಆಸಕ್ತರಾಗಿದ್ದಾರೆ.
ಗಿಡ ವಿತರಣೆ ಮೂಲಕ ಓಲೈಕೆ:
ತಾಲ್ಲೂಕಿನಲ್ಲಿ ಇಷ್ಟೆಲ್ಲಾ ಓಲೈಕೆಗಳು ನಡೆಯುತ್ತಿದ್ದರೆ ವಿಶೇಷವೆಂಬಂತೆ ಪರಿಸರ ಕಾಳಜಿ ಹೊಂದಿರುವ ಅಭ್ಯರ್ಥಿಯೊಬ್ಬ ತನ್ನ ಗ್ರಾಮದಲ್ಲಿ ಮನೆಮನೆಗೆ ತೆರಳಿ ಸಸಿ ವಿತರಣೆ ಮಾಡುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ದೆಬ್ಬೇಘಟ್ಟ ಹೋಬಳಿ ಮುತ್ತುಗದಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪಿಯ ಬೆಂಕಿಕೆರೆ ಅಭ್ಯರ್ಥಿ ಛಾಯಾಗ್ರಾಹಕ ಬಸವರಾಜು ಹೆಚ್.ಸಿ. ಇವರು ಕ್ಯಾಮೆರಾ ಚಿನ್ಹೆಯಡಿ ಸ್ಪರ್ಧಿಸಿದ್ದು ಪ್ರತಿ ಮನೆಗೆ ಸಪೋಟ ಗಿಡ ನೀಡುವ ಮೂಲಕ ಮತಯಾಚನೆಗೆ ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ