‘ಮೀಸಲಾತಿ ಸೌಲಭ್ಯ ರಾಜಕೀಯಗೊಳ್ಳುತ್ತಿದೆ’ ಹೆಚ್‍ಡಿಕೆ ವಿಷಾದ

ತುರುವೇಕೆರೆ : 

     ನಿಜವಾಗಿಯೂ ಸಾಮಾಜಿಕ ಶೋಷಿತ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ ಸಮಾನತೆ ನೀಡಲು ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮಾನದಂಡ ಬದಲಾಗಿ ರಾಜಕೀಯ ಸ್ಥಾನಮಾನಗಳಿಗೂ ಮೀಸಲಾತಿಯ ಹೋರಾಟಗಳು ಆರಂಭಗೊಂಡಿರುವುದು ಶೋಚನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

      ತಾಲ್ಲೂಕಿನ ಮಾಯಸಂದ್ರ ಹೋಬಳಿ ಶೆಟ್ಟಗೊಂಡನಹಳ್ಳಿಯಲ್ಲಿ ಹಳ್ಳಿಕಾರ್ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮತನಾಡಿದ ಅವರು, ಶೇಕಡ 15ರಷ್ಟು ಮೀಸಲಾತಿ 2ಎ ವರ್ಗಕ್ಕೆ ಚಾಲ್ತಿಯಲ್ಲಿದೆ. ಇದನ್ನು ಬಿಟ್ಟು ಶೇಕಡ 3 ಇರುವ ಎಸ್‍ಟಿ ಮೀಸಲಾತಿಯನ್ನು ರಾಜಕೀಯ ಸ್ಥಾನಮಾನಕ್ಕಾಗಿ ಆಗ್ರಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂದರು.

      ಐತಿಹಾಸಿಕ ಪರಂಪರೆಯುಳ್ಳ ಹಳ್ಳಿಕಾರ್ ಸಮುದಾಯ ಇದೇ ಮೊದಲ ಬಾರಿಗೆ ಸಂಘಟನೆಗೊಂಡು ಮಠದ ಸ್ಥಾಪನೆಯೊಂದಿಗೆ ಸಾಮಾಜಿಕ ನ್ಯಾಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಅಲ್ಪ ಸಂಖ್ಯಾತರೆಂಬ ಭಾವನೆಗಳು ನಿಮ್ಮಲ್ಲಿ ಬೇಡ. ಈ ಭಾಗದ ನಟ ವಜ್ರಮುನಿ, ಇದೇ ಸಮುದಾಯದ ಮಾಜಿ ಶಾಸಕರು, ಉಪಕುಲಪತಿಗಳೂ ಆದ ಡಾ.ಹೇಮಚಂದ್ರ ಸಾಗರ್ ಅವರು ಸಮಾಜ ನೆನಪಿಸುವಂತ ಕೊಡುಗೆಗಳನ್ನು ನೀಡಿದ್ದಾರೆ. ಭವಿಷ್ಯತ್ತಿನಲ್ಲಿ ಈ ಹಳ್ಳಿಕಾರ್ ಸಮುದಾಯ ಬಯಸುವ ಎಲ್ಲ ಸಹಕಾರವನ್ನು ನಾನು ನೀಡುವುದರೊಂದಿಗೆ ನಿಮ್ಮ ನೈತಿಕ ಸ್ಥೈರ್ಯಕ್ಕಿರುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಸಾಲ ಜಯರಾಂ ಮಾತನಾಡಿ, ತಮ್ಮ ಶಾಸಕರ ಅನುದಾನ ಹಾಗೂ ವೈಯಕ್ತಿಕವಾಗಿ ಮಠದ ಸ್ಥಾಪನೆಗೆ ಉದಾರ ದೇಣಿಗೆ ನೀಡುತ್ತೇನೆ. ಇದರೊಂದಿಗೆ ಮಠಕ್ಕೆ ಹೊಂದಿಕೊಂಡಿರುವಂತೆ ಮತ್ತಷ್ಟು ಸ್ಥಳವನ್ನು ಬಗರ್ ಹುಕ್ಕುಂ ಮೂಲಕ ದೊರಕಿಸಿಕೊಡಲಾಗುವುದು. ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

      ಸಮಾರಂಭದಲ್ಲಿ ಬೇಲಿ ಮಠದ ಶ್ರೀನಶಿವರುದ್ರಮಹಾಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ತಂದೆ ತಾಯಿಗಳು ಮಕ್ಕಳನ್ನು ಹತೋಟಿಯಲ್ಲಿಟ್ಟು ಸಂಸ್ಕಾರದೊಂದಿಗೆ ಬೆಳೆಸಿ, ದುಶ್ಚಟಗಳಿಂದ ದೂರವಿರಿಸಿ ಹಾಗೂ ಎಲ್ಲರ ಅಭಿವೃದ್ದಿ ಬಯಸಿ ದ್ವೇಷ ಅಸೂಯೆಗಳನ್ನು ತ್ಯಜಿಸಿ ಎಂದರು.

      ಟ್ರಸ್ಟ್ ಪದಾಧಿಕಾರಿ ದೊಡ್ಡೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟೆಮನೆ ಹಾಗೂ ಹಳ್ಳಿಕಾರ್ ಸಮುದಾಯದ ಇತಿಹಾಸ ಹಾಗೂ ಈ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಸಮುದಾಯದ ಎಲ್ಲರ ಸಹಕಾರವನ್ನು ಸ್ಮರಿಸಿದರು.

      ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಹತ್ತಾರು ರಾಸುಗಳ ಮೆರವಣಿಗೆ ಹಾಗೂ ಜಾನಪದ ಕಲ ಪ್ರಕಾರಗಳೊಂದಿಗೆ ಸ್ವಾಮೀಜಿಗಳು ಹಾಗೂ ಗಣ್ಯರುಗಳನ್ನು ವೇದಿಕೆಗೆ ಕರೆತರಲಾಯಿತು.

      ಕಾರ್ಯಕ್ರಮದಲ್ಲಿ ಎಂಎಲ್‍ಸಿ ಕಾಂತರಾಜ್, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕರುಗಳಾದ ಎಂ.ಡಿ.ಲಕ್ಷ್ಮೀನಾರಾಯಣ್, ಎಂ.ಟಿ.ಕೃಷ್ಣಪ್ಪ, ಡಾ.ಹೇಮಚಂದ್ರ ಸಾಗರ್, ಹಿರಿಯ ವಕೀಲರಾದ ಸಿ.ನಾಗಯ್ಯ, ತಾ.ಪಂ.ಸದಸ್ಯ ಮಹಲಿಂಗಯ್ಯ, ರಂಗನಟ ರಂಗಶ್ರೀ, ಮುಖಂಡರಾದ ದೊಡ್ಡಾಘಟ್ಟ ಚಂದ್ರೇಶ್, ಮಾಜಿ ಜಿ.ಪಂ.ಸದಸ್ಯ ಶ್ರೀನಿವಾಸ್, ರಾಜೀವ್, ಟ್ರಸ್ಟಿನ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಹಾಗೂ ವಿವಿದ ಭಾಗದ ಸಮುದಾಯದ ಮುಖಂಡರುಗಳು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೋಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap